ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸ್ವಾವಲಂಬಿ ಬದುಕಿನ ‘ಶಿಲ್ಪಿ’

ವೃತ್ತಿ ಬದುಕು ಕಟ್ಟಿಕೊಟ್ಟ ಕಸೂತಿ ಕವೃತ್ತಿ ಬದುಕು ಕಟ್ಟಿಕೊಟ್ಟ ಕಸೂತಿ ಕಲೆಯ ಬಗೆಗಿನ ಆಸಕ್ತಿಲೆಯ ಬಗೆಗಿನ ಆಸಕ್ತಿ
Last Updated 11 ಜೂನ್ 2018, 9:06 IST
ಅಕ್ಷರ ಗಾತ್ರ

ಹನೂರು: ಗ್ರಾಮೀಣ ಭಾಗದಲ್ಲಿ ದೇಶಿ ಕಲೆಗಳಿಗೆ ಸರಿ ಸಮನಾದದ್ದು ಯಾವುದೂ ಇಲ್ಲ. ಇಲ್ಲಿ ಹಿರಿಯರಿಂದ ಕಲಿತ ಕಲೆಗಳು ಇಂದಿನ ತಲೆಮಾರಿಗೆ ಬಳುವಳಿಯಾಗಿ ಬಂದಿವೆ. ಗ್ರಾಮೀಣ ಭಾಗದಲ್ಲೇ ಉಳಿದು ಕೆಲವರು ಆ ಕಲೆಯನ್ನು ಜೀವನೋಪಾಯಕ್ಕಾಗಿ ಬಳಸಿಕೊಂಡರೆ ಮತ್ತೆ ಕೆಲವರಿಗೆ ಹವ್ಯಾಸವಾಗಿ ಬದಲಾಗಿದೆ. ಇಂತಹ ಕಲೆಗಳಲ್ಲಿ ಕಸೂತಿ ಕಲೆಯೂ ಒಂದು.

ತಾಲ್ಲೂಕಿನ ರಾಮಾಪುರ ಗ್ರಾಮದ ಎಚ್‌.ಎಂ.ಶಿಲ್ಪಾ ಅವರು ಕಸೂತಿ ಕಲೆಯಲ್ಲಿ ಪರಿಣತಿ ಸಾಧಿಸಿದವರು. ಒಂದೂವರೆ ದಶಕದಿಂದ ಇದರಿಂದಲೇ ತಮ್ಮ ಜೀವನ ರೂಪಿಸಿಕೊಂಡಿರುವ ಇವರು, ಈಗ ಮಲೆಮಹದೇಶ್ವರ ಬೆಟ್ಟದಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಉಪಕೇಂದ್ರದಲ್ಲಿ ಕಸೂತಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುತೂಹಲಕ್ಕಾಗಿ ಕಲಿತ ಕಲೆ ಇಂದು ಅವರಿಗೆ ಬದುಕನ್ನು ನೀಡಿದೆ. ತಾವು ಕಲಿತ ಕಲೆಯನ್ನು ಮತ್ತಷ್ಟು ಜನರಿಗೆ ತಿಳಿಸಿಕೊಡುವ ಮೂಲಕ ಇವರು ಒಂದರ್ಥದಲ್ಲಿ ಕಸೂತಿ ರಾಯಭಾರಿಯಾಗಿದ್ದಾರೆ.

‘ಕಸೂತಿ ಕಲೆ ಕಲಿಯಲು ನನಗೆ ಅಮ್ಮ ಪ್ರೇರಣೆ. ಅಮ್ಮ ಹಾಗೂ ಚಿಕ್ಕಮ್ಮ ಟೈಲರಿಂಗ್ ವೃತ್ತಿ ಮಾಡುತ್ತಿದ್ದು, ಈ ಸಮಯದಲ್ಲಿ ಸೀರೆಗಳು ಹಾಗೂ ರವಿಕೆಗಳಲ್ಲಿ ಅವರು ಮೂಡಿಸುತ್ತಿದ್ದ ವಿವಿಧ ಬಗೆಯ ವಿನ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ದಿನ ಕಳೆದಂತೆ ಅದರ ಬಗ್ಗೆ ಆಸಕ್ತಿ ಬೆಳೆಯಿತು. ಅದೇ ಸಮಯಕ್ಕೆ ಮೈಸೂರಿನಿಂದ ಕಸೂತಿ ತರಬೆತಿ ನೀಡಲು ಬಂದಿದ್ದ ಸ್ನೇಹ ಸಂಸ್ಥೆಯಿಂದ 6 ತಿಂಗಳ ತರಬೇತಿ ಪಡೆದು ನನ್ನಾಸೆ ಈಡೇರಿಸಿಕೊಂಡೆ. 19ನೇ ವಯಸ್ಸಿನಲ್ಲಿ ಕಸೂತಿ ಕಲಿಯಲು ಪ್ರಾರಂಭಿಸಿದೆ. ಈಗ ನನಗೆ 35 ವರ್ಷ. ಆದರೆ, ಅಂದು ಕಲಿಯುವುದರ ಬಗ್ಗೆ ಇದ್ದ ತುಡಿತ ಇಂದಿಗೂ ಹಾಗೇ ಇದೆ. ಕಲಿತದ್ದನ್ನು ಮತ್ತೊಬ್ಬರಿಗೆ ಹೇಳಿಕೊಡುವ ಮೂಲಕ ಮತ್ತಷ್ಟು ಕಲಿಯುತ್ತಿದ್ದೇನೆ’ ಎಂದು ಶಿಲ್ಪಾ ತಮ್ಮ ಸಾಧನೆಯ ಗುಟ್ಟನ್ನು ಬಿಚ್ಚಿಟ್ಟರು.

ಜಾನಪದ ವಿಶ್ವವಿದ್ಯಾಲಯ ವಿಸ್ತರಣಾ ಕೇಂದ್ರದಲ್ಲಿ 5 ವರ್ಷಗಳಿಂದ ಕಸೂತಿ ಶಿಕ್ಷಕರಾಗಿರುವ ಇವರು ಬಿಡುವಿನ ವೇಳೆಯಲ್ಲಿ ತಮ್ಮ ಗ್ರಾಮದ ಹೆಣ್ಣು ಮಕ್ಕಳಿಗೂ ಈ ಕಲೆಯನ್ನು ಕಲಿಸುತ್ತಿದ್ದಾರೆ.

‘ಇದೇ ವೃತ್ತಿಯನ್ನು ನನ್ನ ಸ್ನೇಹಿತೆಯರಿಬ್ಬರು ಮಾಡುತ್ತಿದ್ದರು. ಆದರೆ, ನಾನು ಕಲಿಯಲು ಹೋದರೆ ಹೇಳಿಕೊಡಲಿಲ್ಲ. ಆದ್ದರಿಂದ ಗ್ರಾಮೀಣ ಭಾಗದಲ್ಲಿನ ಹೆಣ್ಣು ಮಕ್ಕಳಿಗೆ ಇದನ್ನು ಹೇಳಿಕೊಡುತ್ತಿದ್ದೇನೆ. ಇದನ್ನು ಕಲಿತು ಸ್ವಾವಲಂಬಿಗಳಾದರೆ ಕಲಿಸಿದ್ದಕ್ಕೂ ಸಾರ್ಥಕ’ ಎನ್ನುತ್ತಾರೆ ಇವರು.

ತಮ್ಮ ಕಸುಬನ್ನು ಮತ್ತೊಬ್ಬರಿಗೆ ಹೇಳಿಕೊಟ್ಟರೆ ಮುಂದೆ ಅವರೇ ಸ್ಪರ್ಧಿಗಳಾಗಬಹುದು ಎನ್ನುವ ಮನೋಭಾವ ಹೊಂದಿರುವವರೇ ಇರುವ ಈಗಿನ ಸನ್ನಿವೇಶದಲ್ಲಿ ತಮಗೆ ಗೊತ್ತಿರುವ ಕಲೆಯನ್ನು ಮತ್ತೊಬ್ಬರಿಗೆ ಧಾರೆ ಎರೆಯುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಶಿಲ್ಪಾ ಆಸರೆಯಾಗುತ್ತಿದ್ದಾರೆ.

ಕೌಟುಂಬಿಕ ಸಮಸ್ಯೆಗೆ ಪರಿಹಾರ

‘ಕಾಡಂಚಿನ ಪ್ರದೇಶ ದಿಂದಲೇ ಆವೃತ್ತವಾಗಿರುವ ಈ ಭಾಗದಲ್ಲಿ ಮಹಿಳೆಯರಿಗೆ ಜೀವನ ನಿರ್ವಹಣೆ ಅತ್ಯಂತ ಕಷ್ಟಕರ. ಅದರಲ್ಲೂ ಕೌಟುಂಬಿಕ ಜವಾಬ್ದಾರಿ ಹೊತ್ತ ಹೆಣ್ಣುಮಕ್ಕಳ ಗೋಳಂತೂ ಹೇಳತೀರದು. ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ ತಮಿಳುನಾಡಿನ ಕಡೆಗೆ ವಲಸೆ ಹೋಗುವ ಪರಿಸ್ಥಿತಿ ಇಲ್ಲಿನವರಿಗಿದೆ. ಕಸೂತಿ ಕಲೆ ಕಲಿತರೆ ಕೌಟುಂಬಿಕ ಆರ್ಥಿಕ ಸಮಸ್ಯೆವನ್ನು ಕೊಂಚ ಮಟ್ಟಿಗಾದರೂ ಸುಧಾರಿಸಬಹುದು’ ಎಂಬುದು ಶಿಲ್ಪಾ ಅವರ ಅಭಿಪ್ರಾಯ.

–ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT