ಕರಿವರದರಾಜನ ಬೆಟ್ಟದಲ್ಲಿ ಒಂದು ಹೊತ್ತು...

7
ಚಾರಣಿಗರಿಗೆ, ವಾಯುವಿಹಾರಿಗಳ ನೆಚ್ಚಿನ ತಾಣ, ಅರಣ್ಯ ಇಲಾಖೆಯ ನಿರ್ವಹಣೆ

ಕರಿವರದರಾಜನ ಬೆಟ್ಟದಲ್ಲಿ ಒಂದು ಹೊತ್ತು...

Published:
Updated:
ಕರಿವರದರಾಜನ ಬೆಟ್ಟದಲ್ಲಿ ಒಂದು ಹೊತ್ತು...

ಚಾಮರಾಜನಗರ: ಹಸಿರಿನಿಂದ ಕಂಗೊಳಿಸುವ ಗಿಡಮರಗಳು, ತೊನೆದಾಡುವ ಬಳ್ಳಿಗಳು, ಮನಸ್ಸಿಗೆ ಮುದ ನೀಡುವ ತಂಪಾದ ಗಾಳಿ, ಹಕ್ಕಿಗಳ ಚಿಲಿಪಿಲಿ ನಾದ, ಮತ್ತೆ ಮತ್ತೆ ಅನುಭವಿಸಬೇಕು ಎಂದು ತೋರುವ ಆಹ್ಲಾದಕರ ವಾತಾವರಣ...

–ಮುಂಗಾರು ಪ್ರವೇಶಿಸಿರುವ ಈ ಹೊತ್ತಿನಲ್ಲಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಕರಿವರದರಾಜನ ಬೆಟ್ಟದ ಸಂಕ್ಷಿಪ್ತ ಚಿತ್ರಣ ಇದು. ಜನಜಂಗುಳಿ, ವಾಹನಗಳ ಸದ್ದುಗದ್ದಲದಿಂದ ದೂರ ಉಳಿದು ಒಂದಷ್ಟು ಹೊತ್ತು ಪ್ರಕೃತಿಯೊಂದಿಗೆ ಬೆರೆಯಬೇಕು ಎಂದು ಕೊಳ್ಳುವವರಿಗೆ ಈ ಬೆಟ್ಟ ಹೇಳಿ ಮಾಡಿಸಿದಂತಹ ಸ್ಥಳ.

ಪಟ್ಟಣದ ಗಾಳಿಪುರಕ್ಕೆ ಸಮೀಪವಿರುವ ಈ ಬೆಟ್ಟವನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಬೆಟ್ಟವನ್ನು 2014ರಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ಇಲಾಖೆಯು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಬೆಟ್ಟಕ್ಕೆ ಒಂದು ರೂಪ ನೀಡಿದೆ.

ಬೆಟ್ಟದ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಸುತ್ತಲೂ ಬೇಲಿ ಹಾಕಿ ಬಂದೋಬಸ್ತ್‌ ಮಾಡಲಾಗಿದೆ.

ಅದಕ್ಕೂ ಮೊದಲು ಈ ಬೆಟ್ಟ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಜೂಜಾಟ, ಮದ್ಯಪಾನದಂತಹ ಕೆಟ್ಟ ಕೆಲಸಗಳೇ ಇಲ್ಲಿ ನಡೆಯುತ್ತಿದ್ದವು. ಈಗ ಎಲ್ಲವೂ ನಿಂತಿದೆ ಎಂದು ಹೇಳುತ್ತಾರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿ.

ವಾಯುವಿಹಾರಿಗಳ ತಾಣ: ಶ್ರೀಗಂಧ, ನೀಲಗಿರಿ ಸೇರಿದಂತೆ ವಿವಿಧ ಜಾತಿಯ ಗಿಡಮರಗಳು ಈ ಬೆಟ್ಟದಲ್ಲಿವೆ. ಹಾಗಾಗಿ, ಈ ಬೆಟ್ಟಕ್ಕೆ ವರದರಾಜನ ವೃಕ್ಷವನ ಎಂಬ ಹೆಸರನ್ನೇ ಇಡಲಾಗಿದೆ.

ವಾಯುವಿಹಾರಕ್ಕೆ ಬೇಕಾದ ಸಕಲ ವ್ಯವಸ್ಥೆ ಇಲ್ಲಿದೆ. ಬೆಟ್ಟದ ತುದಿವರೆಗೆ ರಸ್ತೆ ಇದೆ. ಆದರೆ ವಾಹನಗಳ ಪ್ರವೇಶಕ್ಕೆ ಅವಕಾಶ ಇಲ್ಲ. ರಸ್ತೆಯಲ್ಲಿ 1.6 ಕಿ.ಮೀ ಏರುಮುಖವಾಗಿ ಸಾಗಿದರೆ ಬೆಟ್ಟದ ತುದಿ ತಲುಪುತ್ತದೆ. ವಾಯು ವಿಹಾರಿಗಳಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ  ಅಲ್ಲಲ್ಲಿ ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದೆ. ಯೋಗ ಆಸಕ್ತರಿಗಾಗಿ ಬೆಟ್ಟದ ತುದಿಯಲ್ಲಿ

ಯೋಗ ಕೇಂದ್ರ (ವೇದಿಕೆಯಂತಹ ಕಟ್ಟೆಯ ರಚನೆ ಇದೆ) ಇದೆ. ತುತ್ತತುದಿಯಲ್ಲಿ ನಿಂತು ಚಾಮರಾಜನ‌ಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸೌಂದರ್ಯ ಸವಿಯಲು ವೀಕ್ಷಣಾ ಗೋಪುರವನ್ನೂ ನಿರ್ಮಿಸಲಾಗಿದೆ.

ಇಲ್ಲಿಗೆ ಪ್ರತಿ ದಿನ ವಾಯುವಿಹಾರಕ್ಕೆ ಬರುವವರೂ ಇದ್ದಾರೆ. ಬೆಟ್ಟದ ತುದಿಯಲ್ಲಿ ಕರಿವರದರಾಜಸ್ವಾಮಿ ದೇವಾಲಯ ಮತ್ತು ಆಂಜನೇಯ ಗುಡಿ ಇರುವುದರಿಂದ ದೇವಸ್ಥಾನಕ್ಕೆ ಭೇಟಿ ನೀಡುವವರೂ ಇದ್ದಾರೆ.‌

‘ಪ್ರತಿ ದಿನ ಬೆಟ್ಟಕ್ಕೆ 150ರಿಂದ 200 ಜನ ಭೇಟಿ ನೀಡುತ್ತಾರೆ. ಬೆಳಿಗ್ಗೆ ವಾಯುವಿಹಾರಕ್ಕೆ 50ರಿಂದ 75ರಷ್ಟು ಜನರು ಬರುತ್ತಾರೆ. ಸಂಜೆ ಹೊತ್ತಿನಲ್ಲಿ ಈ ಸಂಖ್ಯೆ ಸ್ವಲ್ಪ ಕಡಿಮೆ’ ಎಂದು ಅಲ್ಲಿನ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ವಾತಾವರಣ ಅತ್ಯುತ್ತಮವಾಗಿದೆ. ನೆಚ್ಚಿನ ತಾಣಗಳಲ್ಲಿ ಇದೂ ಒಂದು. ಹೀಗಾಗಿ, ದಿನಬಿಟ್ಟು ದಿನ ವಾಯುವಿಹಾರಕ್ಕೆ ಬರುತ್ತೇವೆ’ ಎಂದು ಸ್ಥಳೀಯ ನಿವಾಸಿ ಜ್ಯೋತಿ ಹೇಳಿದರು.

ವಾರಕ್ಕೊಮ್ಮೆ ಪೂಜೆ: ಬೆಟ್ಟದಲ್ಲಿನ ವರದರಾಜಸ್ವಾಮಿ ದೇವರಿಗೆ ಶನಿವಾರದ ದಿನ ಬೆಳಿಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಆ ದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.

ಶ್ರಾವಣ ವಿಶೇಷ: ‘ಶ್ರಾವಣ ಮಾಸದಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಧನುರ್ಮಾಸದಲ್ಲಿ ವರದರಾಜಸ್ವಾಮಿಗೆ ಪ್ರತಿ ದಿನವೂ ಪೂಜೆ ನಡೆಯುತ್ತದೆ’ ಎಂದು ಅರ್ಚಕ ಪುರುಷೋತ್ತಮ ತಿಳಿಸಿದರು.

ಚಾರಣ ಪ್ರಿಯರ ಸ್ವರ್ಗ: ಚಾರಣ ಮಾಡಲು ಬಯಸುವವರಿಗೆ ಈ ಬೆಟ್ಟ ಅನೂಹ್ಯ ಅನುಭವ ನೀಡುವುದರಲ್ಲಿ ಸಂಶಯ ಇಲ್ಲ. ಇಡೀ ಪಟ್ಟಣದ ವಿಹಂಗಮ ನೋಟ ಕಾಣುವುದು ಈ ಬೆಟ್ಟದಿಂದ ಮಾತ್ರ. ಇಲ್ಲಿಂದ ಕಾಣುವ ಸೂರ್ಯೋದಯ ಮತ್ತು ಸೂರ್ಯಸ್ತದ ಸೌಂದರ್ಯದ ಸವಿಯನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ.

ಬೆಟ್ಟ ಹತ್ತಲು ಪ್ರಯಾಸ

ಬೆಟ್ಟಕ್ಕೆ ಹತ್ತಲು ಸರಿಯಾದ ಮೆಟ್ಟಿಲಿನ ಸೌಲಭ್ಯ ಇಲ್ಲದಿರುವುದು ಇಲ್ಲಿನ ಬಹುದೊಡ್ಡ ಕೊರತೆ. ಪ್ರವಾಸೋದ್ಯಮ ಇಲಾಖೆಯು ₹1 ಕೋಟಿ ವೆಚ್ಚದಲ್ಲಿ ಹೊಸ ಮೆಟ್ಟಿಲು ನಿರ್ಮಿಸುವ ಕಾರ್ಯವನ್ನು ಮೂರು ವರ್ಷಗಳ ಹಿಂದೆ ಆರಂಭಿಸಿತ್ತು. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಹಿಂದೆ ಬೆಟ್ಟದ ತುದಿ ತಲುಪಲು 580 ಮೆಟ್ಟಿಲುಗಳನ್ನು ಏರಬೇಕಿತ್ತು. ಅದನ್ನು 800 ಮೆಟ್ಟಿಲುಗಳಿಗೆ ಹೆಚ್ಚಿಸಲು ಪ್ರವಾಸೋದ್ಯಮ ಇಲಾಖೆಯು ನಿರ್ಧರಿಸಿತ್ತು.

ಮೆಟ್ಟಿಲುಗಳಿಗೆ ಗ್ರಾನೈಟ್‌ ಕಲ್ಲುಗಳನ್ನು ಅಳವಡಿಸಲಾಗುತ್ತಿದ್ದು, ಸದ್ಯ 373 ಮೆಟ್ಟಿಲುಗಳನ್ನು ಮಾತ್ರ ನಿರ್ಮಿಸಲಾಗಿದೆ.

ಮೆಟ್ಟಿಲುಗಳು ಸರಿ ಇಲ್ಲದಿರುವುದರಿಂದ ಬೆಟ್ಟದ ತುದಿಗೆ ಹೋಗಲು, ಭಕ್ತರು ಮತ್ತು ಚಾರಣಿಗರು ರಸ್ತೆಯನ್ನೇ ಬಳಸಬೇಕಾದ ಸ್ಥಿತಿಯಿದೆ. ಪ್ರವಾಸೋದ್ಯಮ ಇಲಾಖೆಯು ಕೈಗೆತ್ತಿಕೊಂಡಿರುವ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ವಾಯುವಿಹಾರಿಗಳು ಒತ್ತಾಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry