ಸಮಗ್ರ ಕೃಷಿ ನೀತಿ ಜಾರಿಗೆ ಬದ್ಧ

7
ಅಭಿನಂದನಾ ಸಮಾರಂಭ: ರೈತರ ಸಾಲಮನ್ನಾಕ್ಕೆ ಸರ್ಕಾರ ಮಟ್ಟದಲ್ಲಿ ಚಿಂತನೆ– ಕೃಷಿ ಸಚಿವ ಶಿವಶಂಕರರೆಡ್ಡಿ

ಸಮಗ್ರ ಕೃಷಿ ನೀತಿ ಜಾರಿಗೆ ಬದ್ಧ

Published:
Updated:

ಗೌರಿಬಿದನೂರು: 'ಅಕಾಲಿಕ ಮಳೆ, ಬೆಳೆ ಸಿಗದೆ ರಾಜ್ಯದ ರೈತರ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಸೂಚಿಸುವ ಶಾಶ್ವತ ಯೋಜನೆಗಳ ಅನಿವಾರ್ಯತೆ ಇದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಆಚಾರ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ರೈತರ ಸಂಕಷ್ಟ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ರಾಜ್ಯದ ಬಹುತೇಕ ಕಡೆ ಒಣಬೇಸಾಯ ಪದ್ಧತಿ ಇದೆ. ಮಳೆ ನಂಬಿ ಕೃಷಿ ಮಾಡುತ್ತಿರುವ ರೈತರು ಹವಾಮಾನ ವೈಪರಿತ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಕ್ಷೇತ್ರ ಸಂಕೀರ್ಣವಾಗಿದ್ದು, ರೈತರಿಗೆ ಬೆಳೆ ರಕ್ಷಣೆ, ನೀರಾವರಿ ಸೌಲಭ್ಯ ಮತ್ತು ಉತ್ಪನ್ನಗಳ ಮಾರಾಟಕ್ಕೆ ವೈಜ್ಞಾನಿಕ ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ. ಸಮಗ್ರ ಕೃಷಿ ನೀತಿ ಜಾರಿಗೊಳಿಸುವ ಅನಿವಾರ್ಯ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಲವಾರು ಪಕ್ಷಗಳು ಆಡಳಿತ ನಡೆಸಿವೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಯೂ ಹಿತ ಕಾಪಾಡಲು ವಿಫಲರಾದರು. ಕೇವಲ ಭಾಷಣದಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ. ರೈತರ ಏಳ್ಗೆಗೆ ರೂಪಿಸುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕು ಎಂದರು.

ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಯಾವುದೇ ಗೊಂದಲಗಳಿಲ್ಲದೆ ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸವಿದೆ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌. ಕೇಶವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತೆರೆದ ವಾಹನದಲ್ಲಿ ಆಚಾರ್ಯ ಕಾಲೇಜಿನ ವರೆಗೂ ಮೆರವಣಿಗೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಕೇಶವರೆಡ್ಡಿ, ಗೀತಾ ಜಯಂದರ್, ಎನ್.ಟಿ. ಮದನಗೋಪಾಲರೆಡ್ಡಿ, ಎನ್. ಚಿಕ್ಕೇಗೌಡ, ಬೊಮ್ಮಣ್ಣ, ಎಂ. ನರಸಿಂಹಮೂರ್ತಿ, ಕಲೀಂ ಉಲ್ಲಾ, ಬಿ.ಪಿ. ಅಶ್ವತ್ಥನಾರಾಯಣಗೌಡ, ಜಿ.ಬಾಲಾಜಿ, ಎಚ್.ಎಸ್.ಸೋಮೇಶ್, ಪ್ರಕಾಶ್ ರೆಡ್ಡಿ, ಮಂಜುನಾಥ್, ಅಬ್ದುಲ್ಲಾ, ವೇದಲವೇಣಿ ವೇಣು, ವೆಂಕಟರವಣ ಇದ್ದರು.

‘ಕ್ಷೇತ್ರದ ಜನರಿಗೆ ಆಭಾರಿ’

'ತಾಲ್ಲೂಕಿನಲ್ಲಿ ಸತತ ಐದು ಬಾರಿ ಶಾಸಕರನ್ನಾಗಿ ಮಾಡಿದ ಜನರಿಗೆ ಸದಾ ಆಭಾರಿಯಾಗಿರುತ್ತೇನೆ. ನನಗೆ ದೊರೆತ ಸಚಿವ ಸ್ಥಾನ ಕ್ಷೇತ್ರದ ಜನರು ನೀಡಿದ ಕೊಡುಗೆಯಾಗಿದೆ' ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.

‘1999ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ನನಗೆ ಮತ ನೀಡಿ ಶಾಸಕರನ್ನಾಗಿ ಮಾಡಿ, ಇದುವರೆಗೆ ಗೆಲ್ಲಿಸಿಕೊಂಡು ಬಂದಿದ್ದಾರೆ. ಅವರ ಆಶೀರ್ವಾದ ಸಚಿವ ಸ್ಥಾನಕ್ಕಿಂತ ಮೇಲು. ಕಳೆದ ಬಾರಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸಚಿವ ಸ್ಥಾನ ತಾನಾಗಿಯೇ ಬಂದಿದೆ’ ಎಂದು ತಿಳಿಸಿದರು.

'ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎಷ್ಟೇ ಏರುಪೇರುಗಳಿದ್ದರೂ ಕಾಂಗ್ರೆಸ್‌ ಪಕ್ಷದ ವರಿಷ್ಠರು ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿದ್ದಾರೆ. ಇದರಿಂದ ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ಜನ ಮೆಚ್ಚುವ ರೀತಿ ಭಾಷಣ ಮಾಡಿದರೆ ರೈತರ ಸಮಸ್ಯೆಗೆ ಪರಿಹಾರ ಸಿಗಲ್ಲ. ಸಮಸ್ಯೆ ಮೂಲ ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯ

- ಎನ್‌.ಎಚ್‌. ಶಿವಶಂಕರರೆಡ್ಡಿ, ಕೃಷಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry