ಹೊಸ ಸಚಿವರ ಮೇಲೆ ಬೆಟ್ಟದಷ್ಟು ನಿರೀಕ್ಷೆ

7
14 ವರ್ಷದ ಬಳಿಕ ಜಿಲ್ಲೆಗೆ ದಕ್ಕಿದ ಮಂತ್ರಿಗಿರಿ

ಹೊಸ ಸಚಿವರ ಮೇಲೆ ಬೆಟ್ಟದಷ್ಟು ನಿರೀಕ್ಷೆ

Published:
Updated:
ಹೊಸ ಸಚಿವರ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾದ ನಂತರ ಶಾಸಕರೊಬ್ಬರಿಗೆ ಸಂಪುಟದಲ್ಲಿ ಸಚಿವ ಸ್ಥಾನ ದೊರೆತದ್ದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಸಂತಸ ಇಮ್ಮಡಿಗೊಳಿಸಿದೆ. 14 ವರ್ಷಗಳ ನಂತರ ಈ ಭಾಗದವರೊಬ್ಬರು ಸಚಿವರಾಗುತ್ತಿದ್ದಂತೆ ನಿರೀಕ್ಷೆಗಳು ಗರಿಗೆದರಿವೆ.

ಮೈತ್ರಿ ಸರ್ಕಾರದಲ್ಲಿ ನೂತನ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರಿಗೆ ನಿರೀಕ್ಷೆಯಂತೆ ಕೃಷಿ ಖಾತೆ ನೀಡಲಾಗಿದೆ. ಅವರೇ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗುತ್ತಾರೆ ಎನ್ನುವ ಆಶಾ ಭಾವನೆ ಜನರಲ್ಲಿದೆ. ಹೀಗಾಗಿ ಬಿಕ್ಕಟ್ಟಿನಲ್ಲಿರುವ ಬಯಲು ಸೀಮೆ ರೈತರಲ್ಲಿ ಆಸೆ ಹುಟ್ಟಿಸಿದೆ. ‘ನಮ್ಮವರು ನಮ್ಮ ಒಳಿತಿಗೇನಾದರೂ ಮಾಡಿಯಾರು’ ಎಂಬ ಆಸೆಯಿಂದ ಜನರು ಎದುರು ನೋಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಎಂಟು ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಸತತವಾಗಿ ಬರದಿಂದ ತತ್ತರಿಸುವಂತೆ ಮಾಡಿದೆ. ಕೃಷಿಗೆ ಮೂಲಾಧಾರವಾಗಿರುವ ನೀರು ಇಲ್ಲ. ಪರಿಣಾಮ ಕೃಷಿಯನ್ನೇ ಅವಲಂಬಿಸಿದ ಶೇ 75ರಷ್ಟು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಕಾರ್ಮಿಕರು, ಕೂಲಿಗಾರರು ಗುಳೆ ಹೋಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಹೊಸ ಸಚಿವರು ಪರಿಹಾರ ಕಂಡುಕೊಳ್ಳುವರೇ ಎಂಬುದು ಎಲ್ಲರ ನಿರೀಕ್ಷೆ.

ನೀರು ಮತ್ತು ಕೃಷಿ ಜನಜೀವನದ ಬದುಕಿಗೆ ಎರಡು ಕಣ್ಣುಗಳಿದ್ದಂತೆ. ನೀರಿಲ್ಲದೆ ಕೃಷಿ ಕೃಶವಾಗುತ್ತಿರುವ ಈ ಹೊತ್ತಿನಲ್ಲಿ ಜಲಮೂಲಗಳ ಪುನಶ್ಚೇತನದತ್ತ ವಿಶೇಷ ಕಾಳಜಿ ವಹಿಸಬೇಕಾಗಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳು ಮತ್ತು ನಿಸರ್ಗ ನಿರ್ಮಿತ ಕಾಲುವೆಗಳ ಜಾಲ ಹೊಂದಿರುವ ಪ್ರದೇಶದ ಭಾಗವಾಗಿರುವ ಜಿಲ್ಲೆಯಲ್ಲಿ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಸಡ್ಡೆಯಿಂದ ಕೆರೆ, ಕುಂಟೆಗಳು ಹಾಸಿಗೆ ಹಿಡಿದ ರೋಗಿಯಂತಾಗಿವೆ ಎನ್ನುವುದು ಪ್ರಜ್ಞಾವಂತರ ಅಳಲು.

ಜಿಲ್ಲೆಯಲ್ಲಿ 1,841 ಕೆರೆಗಳಿವೆ. ಆದರೆ ಕುಡಿಯುವ ಶುದ್ಧ ನೀರಿಗಾಗಿ ಹಾಹಾಕಾರ ನಿಂತಿಲ್ಲ. ಮಳೆಗಾಲದಲ್ಲಿ ಜಿಲ್ಲೆ  ವ್ಯಾಪ್ತಿಯಲ್ಲೇ 11 ಟಿಎಂಸಿ ಅಡಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಎಲ್ಲ ಕೆರೆಗಳು ಮತ್ತು ರಾಜಕಾಲುವೆಗಳ ದುರಸ್ತಿ ಮಾಡಿ ಪುನಶ್ಚೇತನಗೊಳಿಸಿ ಆ ನೀರು ಸಂಗ್ರಹಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಜತೆಗೆ ನೀರಿನ ಸಮಸ್ಯೆ ಸಹ ತಹಬದಿಗೆ ತರಲಿ ಎನ್ನುವುದು ಇಲ್ಲಿಯ ನಿವಾಸಿ ವೆಂಕಟರಮಣಪ್ಪ ಅವರ ಸಲಹೆ.

ಇರುವ ಅಲ್ಪ ಸ್ವಲ್ಪ ನೀರಿನ ಮೂಲಗಳನ್ನೇ ಆಶ್ರಯಿಸಿರುವ ಜನರು ಹೈನುಗಾರಿಕೆ ಮತ್ತು ರೇಷ್ಮೆ, ಹೂವು, ಹಣ್ಣು, ತರಕಾರಿ ಮತ್ತು ದ್ರಾಕ್ಷಿ ಪ್ರಮುಖವಾಗಿ ಬೆಳೆಯುವರು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಇರುವುದರಿಂದ ಪುಷ್ಪೋದ್ಯಮಕ್ಕೆ ಮಹತ್ವ ನೀಡಿ ರೈತರಿಗೆ ಸಂಬಂಧಿಸಿದ ಇಲಾಖೆಯಿಂದ ತರಬೇತಿ ಮತ್ತು ಮಾಹಿತಿ ಕೊಡಿಸುವ ಕೆಲಸ ಮಾಡಿದರೆ ಬೆಳೆಗಾರರಿಗೆ ಮಾಡುವ ಮಹದುಪಕಾರ ಆಗುತ್ತದೆ ಎಂದು ರೈತರು ಸಚಿವರಿಗೆ ಸಲಹೆ ನೀಡಿದ್ದಾರೆ.

ಹೂ ಮತ್ತು ದ್ರಾಕ್ಷಿ ಬೆಳೆಯಲು ಈ ಭಾಗದ ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಸಲಕರಣೆಗಳು ಜನರಿಗೆ ಅಗ್ಗದ ದರದಲ್ಲಿ ಸಿಗುವಂತಾಗಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾದ ಕನಿಷ್ಠ ಬೆಂಬಲ ದೊರೆಯುವಂತೆ ಸಚಿವರು ಶ್ರಮಿಸಲಿ ಎನ್ನುವುದು ಬೆಳೆಗಾರರ ಒತ್ತಾಯವಾಗಿದೆ.

‘ನೀರಾವರಿ ಯೋಜನೆಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ ಪಂಜಾಬ್ ನಮಗೆ ಉತ್ತಮ ಉದಾಹರಣೆ. ಅದರಂತೆ ಬಯಲು ಸೀಮೆಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿ, ವೈಜ್ಞಾನಿಕ ಕೃಷಿ ಪದ್ಧತಿ ಪರಿಚಯಿಸಬೇಕು. ರೈತರಿಗೆ ಉತ್ತಮ ತರಬೇತಿ ಕೊಡಿಸುವ ಜತೆಗೆ ಅವರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಕೆಲಸ ಸಚಿವರು ಮಾಡಿದರೆ ಸಾಕು. ಅದೇ ಈ ಭಾಗಕ್ಕೆ ನೀಡುವ ದೊಡ್ಡ ಕೊಡುಗೆಯಾಗುತ್ತದೆ’ ಎನ್ನುತ್ತಾರೆ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ.

ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆ ಇರುವುದರಿಂದ ಯಂತ್ರೋಪಕರಣ ರೈತರಿಗೆ ನೇರವಾಗಿ, ಸುಲಭವಾಗಿ ಸಿಗುವಂತಾಗಬೇಕು. ಬಿತ್ತನೆ ಬೀಜ, ರಸಗೊಬ್ಬರ ದುಬಾರಿಯಾಗಿವೆ. ಅವು ರೈತರಿಗೆ ಕೈಗೆಟುಕುವ ದರದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಶೈತ್ಯಾಗಾರದತ್ತ ಕಣ್ಣು ಹಾಯಿಸಲಿ

‘ಚಿಕ್ಕಬಳ್ಳಾಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ನಿರ್ಮಿಸಿರುವ ಶೈತ್ಯಾಗಾರ ಉದ್ಘಾಟನೆಗೊಂಡು 16 ವರ್ಷ ಕಳೆದರೂ ಒಂದೇ ಒಂದು ದಿನ ರೈತರ ಉಪಯೋಗಕ್ಕೆ ಬಳಕೆಯಾಗಿಲ್ಲ.

ರೈತರ ಅನುಕೂಲಕ್ಕಾಗಿ ಎಪಿಎಂಸಿಗಳಲ್ಲಿ ಶೈತ್ಯಾಗಾರ ನಿರ್ಮಿಸಿ ಎಂದು ಆಗಾಗ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಆದರೆ ಇಲ್ಲಿ ರೈತರಿಗೆ ಸೌಲಭ್ಯ ದೊರಕಿಸಿ ಕೊಡಬೇಕಾದ ಅಧಿಕಾರಿಗಳೇ ಶೈತ್ಯಾಗಾರದ ಹೆಸರಿನಲ್ಲಿ ಲೂಟಿ ಹೊಡೆಯಲು ವ್ಯವಸ್ಥಿತ ಹುನ್ನಾರ ನಡೆಸಿ, ದ್ರೋಹ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಸಚಿವರು ತನಿಖೆಗೆ ಆದೇಶಿಸಬೇಕು’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಒತ್ತಾಯಿಸಿದರು.

‘ನೀಲನಕ್ಷೆ’ ಸಿದ್ಧಪಡಿಸಿ

‘ಆದ್ಯತೆ ಮೆರೆಗೆ ಬಯಲು ಸೀಮೆಗೆ ನೀರು ತರದಿದ್ದರೆ ನಾವು ಮುಂದೆಯೂ ಭ್ರಮೆಯಲ್ಲೇ ಕಾಲ ಕಳೆಯಬೇಕಾಗುತ್ತದೆ. ಆದ್ದರಿಂದ ಸಚಿವರು ಮೊದಲು ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆಯವರನ್ನು ಬಯಲು ಸೀಮೆಗೆ ಕರೆತಂದು ಕೂಡಿಸಬೇಕು. ಅಂತರ್ಜಲ ಅಭಿವೃದ್ಧಿಗೆ ಮತ್ತು ನೀರಿ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಪರ್ಯಾಯ ಜಲಮೂಲಗಳನ್ನು ಹುಡುಕಿಸುವ ಕೆಲಸ ಮಾಡಿಸಬೇಕು.

ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಕಳೆದ ಒಂದು ದಶಕಗಳಿಂದ ವಿಜ್ಞಾನಿಗಳು, ತಜ್ಞರು ನೀಡಿದ ವರದಿಗಳ ಸಮಗ್ರ ಅಧ್ಯಯನ ಮಾಡಿಸಿ, ಈ ಭಾಗದ ನೀರಿನ ಬೇಡಿಕೆ ಏನು? ನೀರು ತರಲು ಇರುವ ಅವಕಾಶಗಳೇನು? ಜಲಮೂಲ ರಕ್ಷಣೆಗೆ ಏನು ಮಾಡಬೇಕು? ಈ ಕುರಿತು ಚರ್ಚಿಸಿ ಒಂದು ಸಮಗ್ರವಾದ ‘ನೀಲನಕ್ಷೆ’ ಸಿದ್ಧಪಡಿಸಿ ಅದನ್ನು ಮೂರು ಹಂತಗಳಲ್ಲಿ ಅನುಷ್ಟಾನಕ್ಕೆ ತರುವ ಕೆಲಸ ಮಾಡಬೇಕು’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಹೇಳಿದರು.

ರೈತರಿಗೆ ಶಕ್ತಿ ತುಂಬಲಿ

ರೈತರ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಯಾದರೆ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಸಚಿವರು ಮೊದಲು ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಆದ್ಯತೆ ಮೆರೆಗೆ ಮಾಡಬೇಕು. ಉಳಿದೆಲ್ಲ ಕೆಲಸಗಳನ್ನು ಬದಿಗೊತ್ತಿ ಮೊದಲು ರೈತರ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ಮಾದರಿಯಾಗಿ ಕೆಲಸ ನಿರ್ವಹಿಸಬೇಕಿದೆ

– ಇಂದ್ರಮ್ಮ, ಚಿಕ್ಕಬಳ್ಳಾಪುರ ನಿವಾಸಿ

ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ

ಶಿವಶಂಕರರೆಡ್ಡಿ ಅವರ ಸತತ ಎರಡು ದಶಕಗಳ ರಾಜಕೀಯ ಹೋರಾಟಕ್ಕೆ ಫಲ ದೊರಕಿರುವುದು ಸಂತಸ ತಂದಿದೆ. ಆದರೆ ಸಚಿವರು ಜಿಲ್ಲೆಯಲ್ಲಿ ಜೀವಂತವಾಗಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಶ್ರಮಿಸಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ ಅತ್ತಲೂ ಗಮನ ಹರಿಸಬೇಕು

– ಜೆ.ಮಂಜುನಾಥ್, ಗೌರಿಬಿದನೂರು ನಿವಾಸಿ

ಬೇಗ ನೀರು ತರಲಿ

ಜಿಲ್ಲೆಯಲ್ಲಿ ನೀರಿನ ಹಾಹಾಕಾರದತ್ತ ಸಚಿವರು ಮೊದಲು ಗಮನ ಹರಿಸಲಿ. ಅಂತರ್ಜಲ ಕಲುಷಿತಗೊಂಡು, ಫ್ಲೋರೈಡ್ ಮಿಶ್ರಿತ ನೀರು ಸೇವಿಸಿ ಜನರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಶಾಶ್ವತ ನೀರಾವರಿ ಹೋರಾಟಕ್ಕೆ ಆದ್ಯತೆ ನೀಡಿ ಬಯಲು ಸೀಮೆಗೆ ಆದಷ್ಟು ಬೇಗ ನೀರು ತರಲಿ

– ಎಂ.ಸುಲೋಚನಾ ಚಿಂತಾಮಣಿ ನಿವಾಸಿ

ಮಾರುಕಟ್ಟೆಯತ್ತ ಗಮನ ಹರಿಸಲಿ

ಶಿಡ್ಲಘಟ್ಟದ ರೇಷ್ಮೆಗೂಡಿನ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದು. ಇಲ್ಲಿ ಅತಿ ಹೆಚ್ಚಿನ ರೇಷ್ಮೆ ಗೂಡು ವಹಿವಾಟು ನಡೆಯುತ್ತದೆ. ಈವರೆಗೆ ಅನೇಕ ಶಾಸಕರು ಮಾರುಕಟ್ಟೆಗೆ ಹೈಟೆಕ್‌ ಸ್ಪರ್ಶ ನೀಡುವ ಭರವಸೆ ನೀಡುತ್ತಲೇ ಬಂದಿದ್ದಾರೆ. ಅದು ಈವರೆಗೆ ನನಸಾಗಿಲ್ಲ. ಕೋಟ್ಯಂತರ ವ್ಯವಹಾರ ನಡೆಸುವ ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಹಾಗೂ ಸ್ವಚ್ಛತೆ ಇಲ್ಲದಿರುವುದು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ. ಇನ್ನಾದರೂ ನಮ್ಮವರೇ ಆದ ಸಚಿವರು ಇತ್ತ ಗಮನ ಹರಿಸಲಿ

ಶ್ರೀಕರ ವಿಶ್ವಕರ್ಮ, ಶಿಡ್ಲಘಟ್ಟ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry