ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಹೂವಿನ ಕರಗ ಮಹೋತ್ಸವ

ನಗರದ ಕಂದವಾರ ಬಾಗಿಲ ಸಿ.ಸಿ ಸರ್ಕಲ್ ಬಳಿಯ ಕಾಳಿಕಾಂಬಾ ಕಮಠೇಶ್ವರ ಸ್ವಾಮಿ ದೇವಾಲಯದ ಐದನೇ ವರ್ಷದ ಕರಗ
Last Updated 11 ಜೂನ್ 2018, 9:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಕಂದವಾರ ಬಾಗಿಲ ಸಿ.ಸಿ ಸರ್ಕಲ್ ಬಳಿಯ ಕಾಳಿಕಾಂಬಾ ಕಮಠೇಶ್ವರ ಸ್ವಾಮಿ ದೇವಾಲಯದ ಐದನೇ ವರ್ಷದ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.

ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಶನಿವಾರ ರಾತ್ರಿ ಕರಗದ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಅರಿಷಿಣ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ಕೋಲಾರದ ಬಾಲರಾಜು ಕಾಕಿನತ್ತ ಹೂವಿನ ಕರಗ ಹೊತ್ತು ರಾತ್ರಿ 10ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ಮಲ್ಲಿಗೆ, ಕನಕಾಂಬರ ಹೂವುಗಳಿಂದ ಆಕರ್ಷಕವಾಗಿ ಕಂಗೋಳಿಸುತ್ತಿದ್ದ ‘ಕರಗ’ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ಕರಗದ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮನೆ ಮಾಡಿತ್ತು. ನಗರದ ವಿವಿಧೆಡೆ ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.

ದೇವಾಲಯದ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ನಡೆದ ಕರಗದ ಪೂಜಾರಿ ನೃತ್ಯವನ್ನು ಅಪಾರ ಪ್ರಮಾಣದ ಭಕ್ತರು ಕಣ್ತುಂಬಿಕೊಳ್ಳುವ ಜತೆಗೆ ಅನೇಕರು ತಮ್ಮ ಮೊಬೈಲ್‌ಗಳಲ್ಲಿ ಮುಗಿಬಿದ್ದು ಚಿತ್ರೀಕರಿಸಿದರು. ವಿವಿಧ ಜನಪದ ಕಲಾ ತಂಡಗಳು ಕರಗಕ್ಕೆ ಮೆರಗು ತುಂಬಿದವು. ಕರಗದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ದೇವಾಲಯದ ಟ್ರಸ್ಟ್ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ನಗರಸಭೆ ಸದಸ್ಯರಾದ ನಿರ್ಮಲಾ ಪ್ರಭು, ದೇವರಾಜು, ಮುಖಂಡರಾದ ಮಂಜುನಾಥ್, ಮಹೇಶ್ ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT