ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಸ್ವರೂಪಕ್ಕೆ ತಿರುಗಿದ ರಾಜಕಾಲುವೆ

ಬಡಾವಣೆ, ಮನೆಗಳಿಗೂ ನುಗ್ಗುತ್ತಿದೆ ಮಳೆ ನೀರು
Last Updated 11 ಜೂನ್ 2018, 9:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿದ್ದ ಮಳೆನೀರು ಇಳಿಮುಖವಾಗಿ ಹರಿದು ಮಲ್ಲಾಪುರ ಕೆರೆ ತಲುಪಲು ನಗರದಲ್ಲಿ ನಿರ್ಮಿಸಿದ್ದ ರಾಜಕಾಲುವೆಗಳು ಚರಂಡಿಯ ಸ್ವರೂಪಕ್ಕೆ ತಿರುಗಿವೆ. ಇದರಿಂದ ರಾಜಕಾಲುವೆ ಅಕ್ಕಪಕ್ಕದ ಬಡಾವಣೆಗಳಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವುದು ಸಾಮಾನ್ಯವಾಗಿದೆ.

ಬಹುತೇಕ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದ್ದರಿಂದ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ. ರಾಜಕಾಲುವೆಗಳಲ್ಲಿ ಹರಿಯುವುದಕ್ಕಿಂತ ಹೆಚ್ಚು ನೀರು ಮನೆಗಳಿಗೆ ನುಗ್ಗುತ್ತಿದೆ.

ಚಂದ್ರವಳ್ಳಿಯಿಂದ ಮಲ್ಲಾಪುರ ಕೆರೆಗೆ ಸಂಪರ್ಕ ಕಲ್ಪಿಸಿದ ರಾಜಕಾಲುವೆ ಅಲ್ಲಲ್ಲಿ ಚರಂಡಿಯಂತಾಗಿದೆ. ಸುಮಾರು 15 ಅಡಿ ಅಗಲ ಹಾಗೂ 10 ಅಡಿ ಆಳದ ಕಾಲುವೆ ನಗರ ಪ್ರವೇಶಿಸಿದಂತೆ ಕಿರಿದಾಗುತ್ತ ಸಾಗುತ್ತದೆ. ಬಡಾವಣೆಯ ಪ್ರದೇಶದ ಅಲ್ಲಲ್ಲಿ ಕಾಲುವೆಯೇ ಮಾಯವಾಗಿದೆ.

‘ಹಿಂದೆ ಮಳೆ ಸುರಿದಾಗ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ನಿರ್ವಹಣೆ ಕೊರತೆಯಿಂದಾಗಿ ರಾಜಕಾಲುವೆ ಕಿರಿದಾಗಿದೆ. ಹೂಳು ತುಂಬಿಕೊಂಡಿದ್ದು, ತ್ಯಾಜ್ಯವೂ ಕಟ್ಟಿಕೊಳ್ಳುತ್ತದೆ. ಹೀಗಾಗಿ, ಪಿಎನ್‌ಟಿ ಕ್ವಾಟ್ರರ್ಸ್‌ಗೆ ನೀರು ನುಗ್ಗುತ್ತದೆ’ ಎನ್ನುತ್ತಾರೆ ಹಳೆ ಹೌಸಿಂಗ್‌ ಬೋರ್ಡ್‌ ಬಡಾವಣೆಯಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಎಸ್‌.ಜಿ.ಚಂದ್ರಪ್ಪ.

ಹೊಳಲ್ಕೆರೆ ರಸ್ತೆಯ ಕನಕ ವೃತ್ತ ದಾಟಿದ ಬಳಿಕ ರಾಜಕಾಲುವೆ ಸಂಪೂರ್ಣ ಹಾಳಾಗಿದೆ. ಮನೆ, ಕಟ್ಟಡಗಳು ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ. ಸ್ಲ್ಯಾಬ್‌ ಹಾಕಿ ಕೆಲವರು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಪಿಎನ್‌ಟಿ ಕ್ವಾಟ್ರರ್ಸ್‌ನ ಗಣಪತಿ ದೇಗುಲದ ಸಮೀಪ ಮಾತ್ರ ಕಾಲುವೆಯನ್ನು ನೋಡಲು ಸಾಧ್ಯ. ಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಜ್ಞಾನವಿಕಾಸ ಶಾಲೆಯ ಕಟ್ಟಡವನ್ನು ವರ್ಷದ ಹಿಂದೆ ತೆರವುಗೊಳಿಸಲಾಗಿದೆ.

ಕಾಲುವೆಯ ಅಲ್ಲಲ್ಲಿ ಗಿಡಗಳು ಬೆಳೆದುಕೊಂಡಿದ್ದು, ಮಳೆನೀರು ಸರಾಗವಾಗಿ ಹರಿಯಲು ತಡೆಯೊಡ್ಡುತ್ತಿವೆ. ಒಂದು ಗಂಟೆ ಮಳೆ ಸುರಿದರೆ ಕಾಲುವೆ ತುಂಬಿ ಬಡಾವಣೆಗೂ ನೀರು ನುಗ್ಗತ್ತದೆ. ಎಪಿಎಂಸಿ ಸಮೀಪದ ಗುಮಾಸ್ತರ ಕಾಲೊನಿ, ದಾವಣಗೆರೆ ರಸ್ತೆ ಜಲಾವೃತವಾಗುತ್ತವೆ.

ನಗರದ ಬಹುತೇಕ ರಾಜಕಾಲುವೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಜೋಗಿಮಟ್ಟಿ ರಸ್ತೆಯಿಂದ ಕೆಳಗೋಟೆ ಮಾರ್ಗವಾಗಿ ಮಲ್ಲಾಪುರ ಕೆರೆಯನ್ನು ಸಂರ್ಪಕಿಸಿದ ರಾಜಕಾಲುವೆಯೂ ಹಾಳಾಗಿದೆ. ಜೋಗಿಮಟ್ಟಿ ರಸ್ತೆಯ ಆಸುಪಾಸಿನ ಬಡಾವಣೆಯಲ್ಲಿ ಬಿದ್ದ ಮಳೆ ನೀರು ಈ ಕಾಲುವೆ ಮೂಲಕ ಹರಿಯುತ್ತಿತ್ತು. ಇತ್ತೀಚಿಗೆ ಮಳೆನೀರು ಈ ಕಾಲುವೆಯಲ್ಲಿ ಹರಿದು ಹೋಗುವುದು ಕಡಿಮೆಯಾಗಿದೆ. ಬಿ.ಡಿ. ರಸ್ತೆಯನ್ನು ಸಂಪರ್ಕಿಸುವುದಕ್ಕೂ ಮುನ್ನ ಇದು ಒತ್ತುವರಿಯಾಗಿದೆ. ಹೋಟೆಲ್‌, ವಾಣಿಜ್ಯ ಮಳಿಗೆಗಳು ಇದರ ಮೇಲೆ ಎದ್ದುನಿಂತಿವೆ.

ಖಾಜಿ ಮೊಹಲ್ಲಾದ ರಾಜಕಾಲುವೆ ಮೇಲೆ ಕಟ್ಟಡಗಳು ತಲೆಯತ್ತಿವೆ. ಕೋಮಲ ನರ್ಸಿಂಗ್‌ ಹೋಂ ರಸ್ತೆಯಲ್ಲಿ ಮಾತ್ರ ರಾಜಕಾಲುವೆ ನೋಡಲು ಸಾಧ್ಯವಾಗುತ್ತದೆ. ಉಳಿದೆಡೆ ಇದರ ಮೇಲೆ ಸ್ಲ್ಯಾಬ್‌ ಹಾಕಿ ಕಟ್ಟಡಗಳನ್ನು ಕಟ್ಟಲಾಗಿದೆ. ಚರಂಡಿಯ ಸ್ವರೂಪಕ್ಕೆ ತಿರುಗಿದ ಕಾಲುವೆಯಲ್ಲಿ ಮಳೆನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ದೊಡ್ಡಪೇಟೆ ಭಾಗದಿಂದ ಹರಿದು ಬರುವ ನೀರು ಕೆಳಭಾಗದ ಬಡಾವಣೆಗಳಿಗೆ ನುಗ್ಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ–4ಕ್ಕೆ ನೂತನವಾಗಿ ನಿರ್ಮಿಸಿದ ಬೈಪಾಸ್‌ ರಸ್ತೆ, ಮಳೆನೀರು ಹರಿಯುವ ಪಥವನ್ನು ಬದಲಿಸಿದೆ. ಇದರಿಂದ ತುರುವನೂರು ಹಾಗೂ ಮೆದೆಹಳ್ಳಿ ಮಾರ್ಗದ ಸೇತುವೆ ಸಮೀಪ ನೀರು ನಿಲ್ಲುತ್ತಿದೆ. ಸುತ್ತಲಿನ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ನಗರಸಭೆ ಪತ್ರವ್ಯವಹಾರ ನಡೆಸಿದರೂ ಪ್ರಯೋಜನವಾಗಿಲ್ಲ.

ದುರಸ್ತಿ ಹಾಗೂ ಒತ್ತುವರಿ ತೆರವುಗೊಳಿಸಲು ರಾಜಕಾಲುವೆಯಲ್ಲಿ ನೀರಿಗಿಂತಲೂ ಹಣದ ಹೊಳೆಯೇ ಹೆಚ್ಚು ಹರಿದಿದೆ ಎಂದು ಆರೋಪಿಸುತ್ತಾರೆ ನೆಹರೂ ನಗರದ ನಿವಾಸಿಗಳು.

ಅಮೃತ್‌ ನಗರ ಯೋಜನೆಯಡಿ ಸುಮಾರು ₹18 ಕೋಟಿ ಅನುದಾನದಲ್ಲಿ ರಾಜಕಾಲುವೆ, ಚರಂಡಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಮಸ್ಯೆ ಇರುವ ರಾಜಕಾಲುವೆ, ಚರಂಡಿಗಳನ್ನು ಬಿಟ್ಟು ಉಳಿದೆಡೆ ಅನುದಾನ ಹಂಚಿಕೆ ಮಾಡಲಾಗಿದೆ. ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಥಳೀಯರ ಅಳಲು.

ಬಡಾವಣೆ ಬೆಳೆದಂತೆ ಮಳೆನೀರು ಚರಂಡಿಗಳಿಗೆ ಧಕ್ಕೆ ಉಂಟಾಗಿದೆ. ಇವುಗಳ ಸಂರಕ್ಷಣೆಗೂ ಒತ್ತು ನೀಡಬೇಕು
ಎಸ್‌.ಜಿ.ಚಂದ್ರಪ್ಪ, ಹಳೆ ಹೌಸಿಂಗ್‌ ಬೋರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT