ವೀರಾಪುರದಲ್ಲಿ ಉಲ್ಬಣಿಸಿದ ಜ್ವರ, ಕೀಲು ನೋವು

7

ವೀರಾಪುರದಲ್ಲಿ ಉಲ್ಬಣಿಸಿದ ಜ್ವರ, ಕೀಲು ನೋವು

Published:
Updated:

ಗಜೇಂದ್ರಗಡ: ಸಮೀಪದ ವೀರಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ 25ಕ್ಕೂ ಹೆಚ್ಚು ಜನರಲ್ಲಿ ತೀವ್ರ ಜ್ವರ ಮತ್ತು ಕೀಲು ನೋವು ಕಾಣಿಸಿಕೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಗ್ಯ ಇಲಾಖೆಯ ವೈದ್ಯರ ತಂಡ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ‘ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಗಟಾರಗಳನ್ನು ಸ್ವಚ್ಛಗೊಳಿಸದ ಕಾರಣ ಅವು ತುಂಬಿ ಹರಿಯುತ್ತಿವೆ. ಕುಡಿಯುವ ನೀರಿನ ಓವರ್ ಹೆಡ್ ನೀರಿನ ಟ್ಯಾಂಕಿನ ಕೆಳಗಿರುವ ವಾಲ್ವ್‌ಗೆ ಕೊಳಚೆ ನೀರು ನುಗ್ಗಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಗ್ರಾಮ ಪಂಚಾಯ್ತಿಯವರು ಔಷಧಿ ಸಿಂಪಡಿಸದೇ ಇರುವುದು ರೋಗ ಉಲ್ಬಣಿಸಲು ಕಾರಣ’ ಎಂದು ಗ್ರಾಮಸ್ಥರು ಗ್ರಾಮ ಪಂಚಾಯ್ತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಅಂಗನವಾಡಿಯಲ್ಲಿ ತಾತ್ಕಾಲಿಕ ಒಪಿಡಿ ಕೇಂದ್ರ ತೆರೆಯಲಾಗಿದ್ದು, ಒಬ್ಬ ಕಿರಿಯ ಆರೋಗ್ಯ ಸಹಾಯಕ ಮತ್ತು ಒಬ್ಬ ಆಶಾ ಕಾರ್ಯಕರ್ತೆಯನ್ನು ಒಳಗೊಂಡ 8 ತಂಡಗಳನ್ನು ರಚಿಸಿ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ರೋಗಿಯ ರಕ್ತದ ಮಾದರಿ ತೆಗೆದುಕೊಂಡು, ಲಾರ್ವಾ ಸಮಿಕ್ಷೆ ನಡೆಸುತ್ತಿದ್ದಾರೆ. ತುರ್ತು ಆರೋಗ್ಯ ಸೇವೆ ಒದಗಿಸಲು ಗ್ರಾಮದಲ್ಲಿ ಒಂದು ತುರ್ತು ಚಿಕಿತ್ಸಾ ವಾಹನ ನಿಯೋಜನೆ ಮಾಡಲಾಗಿದೆ.

ಈ ಕುರಿತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಹಲವು ಬಾರಿ ಸಂಪರ್ಕಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

‘ಗ್ರಾಮದಲ್ಲಿ ಸ್ವಚ್ಚತೆ ಇಲ್ಲದಿರುವುದರಿಂದ ಜ್ವರ, ಮೈಕೈ ನೋವು ಕಾಣಿಸಿಕೊಂಡಿದ್ದು, ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮದಲ್ಲಿ ಓಪಿಡಿ ಪ್ರಾರಂಭಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರಿಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಳಕೇಶ ಹಾದಿಮನಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry