ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಮುಕ್ತ ಬಿಂಕದಕಟ್ಟಿ ಮೃಗಾಲಯ

ಮೈಸೂರು ಮೃಗಾಲಯದ ಮಾದರಿಯಲ್ಲಿ ಅಳವಡಿಕೆ; ಪರಿಸರ ಜಾಗೃತಿ ಆದ್ಯತೆ
Last Updated 11 ಜೂನ್ 2018, 9:52 IST
ಅಕ್ಷರ ಗಾತ್ರ

ಗದಗ: ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ ಬಿಂಕದಕಟ್ಟಿ ಮೃಗಾಲಯದ ಆವರಣವನ್ನು ಪ್ಲಾಸ್ಟಿಕ್‌ ರಹಿತ ತಾಣವನ್ನಾಗಿ ಮಾಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ.

ಪರಿಸರ ದಿನಾಚರಣೆ ದಿನವೇ ಈ ಸಂಕಲ್ಪ ಮಾಡಲಾಗಿದ್ದು, ಈಗಾಗಲೇ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮೊಂದಿಗೆ ತರುವ ನೀರಿನ ಬಾಟಲಿ, ಕುರುಕಲು ತಿಂಡಿಗಳ ಪೊಟ್ಟಣಗಳನ್ನು ಎಲ್ಲಿ ಬೇಕೆಂದರಲ್ಲಿ ಎಸೆದು ಹೋಗುವುದನ್ನು ತಡೆಯುವುದು ‘ಪ್ಲಾಸ್ಟಿಕ್‌ ರಕ್ಷಿತ ವಲಯ’ ಯೋಜನೆಯ ಪ್ರಮುಖ ಉದ್ದೇಶ.

ನಾಲ್ಕು ದಶಕ ಪೂರೈಸಿರುವ ಈ ಮೃಗಾಲಯಕ್ಕೆ 6 ತಿಂಗಳ ಹಿಂದಷ್ಟೇ ಕಿರು ಮೃಗಾಲಯದಿಂದ ಸಣ್ಣ ಮೃಗಾಲಯಕ್ಕೆ ಬಡ್ತಿ ಸಿಕ್ಕಿದೆ. ಬಡ್ತಿ ಸಿಕ್ಕಿದ ಬೆನ್ನಲ್ಲೇ, ಇಲ್ಲಿಗೆ ಮೈಸೂರು ಮೃಗಾಲಯದಿಂದ ಹುಲಿಗಳನ್ನೂ ತರಲಾಗಿದ್ದು, ಅವುಗಳನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

ಸದ್ಯ ಮೃಗಾಲಯದಲ್ಲಿ 280ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ. ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆವೆು, ಹೆಬ್ಬಾವು ಮತ್ತು ಚಿರತೆಗಳು ಪ್ರಮುಖ ಆಕರ್ಷಣೆ. ಇದರ ಜತೆಗೆ ಇತ್ತೀಚೆಗೆ ಮೈಸೂರು ಮೃಗಾಲಯದಿಂದ ವಿವಿಧ ಜಾತಿಯ 90 ಪಕ್ಷಿಗಳನ್ನು ಇಲ್ಲಿಗೆ ತರಲಾಗಿದೆ. ಇದರಲ್ಲಿ ಕರಿ ಹಂಸ, ಲೇಡಿ ಅಮೆರ್ಸ್ಟ್‌ ಪೆಸೆಂಟ್, ನೈಟ್‌ ಹೆರಾನ್‌, ಬಡ್ಜ್‌ರಿಗರ್‌, ರೋಸ್‌ ರಿಂಗ್ಡ್‌ ಪ್ಯಾರಾಕೀಟ್‌, ಜವಾ ಸ್ಪಾರೋ, ಫಿಂಚಸ್‌, ಬಣ್ಣದ ಕೊಕ್ಕರೆ, ರೆಡ್‌ಜಂಗಲ್‌ ಪೌಲ್‌, ರೋಸ್‌ ಪೆಲಿಕನ್‌ ಪಕ್ಷಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಬೆನ್ನಲ್ಲೇ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಪ್ರತಿ ದಿನ ಸರಾಸರಿ 200ರಿಂದ 250 ಪ್ರವಾಸಿಗರು ಭೇಟಿ ನಿಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 400ರಿಂದ 450 ದಾಟುತ್ತದೆ. ಪ್ರಾಣಿಗಳ ವೀಕ್ಷಣೆಗೆ ಬರುವವರು ತಮ್ಮೊಂದಿಗೆ ಕುಡಿಯುವ ನೀರಿನ ಬಾಟಲಿ, ಮತ್ತು ಚಿಪ್ಸ್‌ ಪೊಟ್ಟಣಗಳನ್ನು ಹಿಡಿದುಕೊಂಡು ಬರುತ್ತಾರೆ. ಮೃಗಾಲಯದಲ್ಲಿ ಪ್ರಾಣಿಗಳ ದರ್ಶನ ಪಡೆದು, ವಿಶ್ರಾಂತಿ ಪಡೆಯುವ ಅವರು ಆಹಾರ ಸೇವಿಸಿದ ಬಳಿಕ, ಬಾಟಲಿ, ಪ್ಲಾಸ್ಟಿಕ್‌ ಚೀಲಗಳನ್ನು ಅಲ್ಲೇ ಎಸೆದು ಹೋಗುತ್ತಾರೆ. ‘ಇದಕ್ಕೆ ಕಡಿವಾಣ ಹಾಕಲು ವಿಶ್ವ ಪರಿಸರ ದಿನದಿಂದ (ಜೂನ್‌.5) ಮೃಗಾಲಯದ ಆವರಣವನ್ನು ಪ್ಲಾಸ್ಟಿಕ್ ರಕ್ಷಿತ ವಲಯ ಎಂದು ಘೋಷಿಸಲಾಗಿದೆ’ ಎಂದು ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಮೃಗಾಲಯಕ್ಕೆ ಭೇಟಿ ನೀಡುವ ಸಾರ್ವಜನಿಕರು, ತಮ್ಮೊಂದಿಗೆ ತರುವ ಕುಡಿಯುವ ನೀರಿನ ಬಾಟಲಿಗೆ ₹10- ಪಾವತಿಸಿ, ಸ್ಟಿಕ್ಕರ್‌ ಪಡೆದು ಬಾಟಲಿಗೆ ಅಂಟಿಸಿಕೊಳ್ಳಬೇಕು. ಮೃಗಾಲಯದ ಆವರಣದಿಂದ ಮರಳುವಾಗ, ಸ್ಟಿಕ್ಕರ್‌ ಅಂಟಿಸಿದ ಬಾಟಲಿ ತೋರಿಸಿ, ₹10 ಮರಳಿ ಪಡೆಯಬಹುದು. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಅದೇ ಮಾದರಿಯಲ್ಲಿ ಬಿಂಕದಕಟ್ಟಿ ಮೃಗಾಲಯದಲ್ಲೂ ಯೋಜನೆ ಜಾರಿಗೊಳಿಸಿದ್ದೇವೆ. ಇದಕ್ಕೆ ಪ್ರತ್ಯೇಕ ನೋಂದಣಿ ಪುಸ್ತಕವನ್ನೂ ಮಾಡಿದ್ದೇವೆ. ಪ್ರವಾಸಿಗರಿಂದಲೂ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

‘ಮೊದಲು ಪ್ರತಿ ನಿತ್ಯ ಸರಾಸರಿ 50ರಿಂದ 60 ಪ್ಲಾಸ್ಟಿಕ್‌ ಬಾಟಲಿಗಳು ಮೃಗಾಲಯದ ಆವರಣದಲ್ಲಿ ಲಭಿಸುತ್ತಿದ್ದವು. ಈ ಯೋಜನೆ ಜಾರಿಯಾದ ನಂತರ ಪ್ಲಾಸ್ಟಿಕ್‌ ಬಾಟಲಿ ಎಸೆಯುವ ಪ್ರಮಾಣ ಶೂನ್ಯಮಟ್ಟಕ್ಕೆ ತಗ್ಗಿದೆ’ ಎಂದು ಅವರು ವಿವರಣೆ ನೀಡಿದರು.

ಇತ್ತೀಚೆಗೆ ಉತ್ತಮ ಮಳೆಯಾಗಿರುವುದರಿಂದ ಇಡೀ ಮೃಗಾಲಯದ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಇಲ್ಲಿರುವ ಕೆರೆಗಳು ಮಳೆ ನೀರಿನಿಂದ ಭರ್ತಿಯಾಗಿವೆ. ಅಂತರ್ಜಲ ಮಟ್ಟ ಹೆಚ್ಚಿದ್ದು, ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಲಭಿಸುತ್ತಿದೆ. ಬಿಂಕದಕಟ್ಟಿ ಮೃಗಾಲಯ ಪ್ರಾಣಿ ಪಕ್ಷಿಗಳಿಗೆ ನೈಸರ್ಗಿಕ ಆವಾಸ ಸ್ಥಾನದಂತೆ ಬದಲಾಗಿದೆ.

ಜೂನ್‌ 5ರಿಂದ ಮೃಗಾಲಯದ ಆವರಣವನ್ನು ಪ್ಲಾಸ್ಟಿಕ್ ರಕ್ಷಿತ ವಲಯ ಎಂದು ಘೋಷಿಸಲಾಗಿದೆ. ಪ್ಲಾಸ್ಟಿಕ್‌ ಬಾಟಲಿ ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪುಸುವುದು ಇದರ ಮುಖ್ಯ ಉದ್ದೇಶ
- ಮಹಾಂತೇಶ ಪೆಟ್ಲೂರ, ಬಿಂಕದಕಟ್ಟಿ ಮೃಗಾಲಯದ ಆರ್‍ಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT