ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವು ನೀಡದ ಮೃಗಶಿರಾ ಮಳೆ

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ; ಮಧ್ಯಾಹ್ನ ಸೂರ್ಯನ ದರ್ಶನ; ಬಿತ್ತನೆಗೆ ಅಡ್ಡಿ
Last Updated 11 ಜೂನ್ 2018, 9:54 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರ ಜಿಟಿ ಜಿಟಿ ಮಳೆ ಮುಂದುವರಿದಿದೆ. ಒಂದೇ ಸಮನೆ ಮಳೆಯಿಂದಾಗಿ ವಾತಾವರಣದಲ್ಲೂ ದಿಢೀರ್‌ ಬದಲಾವಣೆಯಾಗಿದೆ.

ಕಳೆದೆರಡು ದಿನಗಳಿಂದ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ನಂತರ ಸೂರ್ಯನ ದರ್ಶನವಾಗುತ್ತಿದೆ. ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ಗೆ ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದರಿಂದ ವಿಪರೀತ ಚಳಿಯ ಅನುಭವವಾಗುತ್ತಿದೆ.

ಚಳಿಯಿಂದ ರಕ್ಷಿಸಿಕೊಳ್ಳಲು ಮಕ್ಕಳು ಸ್ವೆಟರ್‌ ಧರಿಸಿ, ತಲೆಗೆ ಉಣ್ಣೆಯ ಟೋಪಿ ಹಾಕಿಕೊಂಡು ಶಾಲೆಗೆ ಹೋಗುವ ದೃಶ್ಯಗಳು ಸಾಮಾನ್ಯವಾಗಿದೆ.

ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ರಸ್ತೆ ಕೆಸರು ಗದ್ದೆಯಂತಾಗಿದೆ. ಭಾನುವಾರ ಗದಗ, ಗಜೇಂದ್ರಗಡ, ನರೇಗಲ್‌,ನರಗುಂದ, ರೋಣದಲ್ಲಿ ಮಳೆ ಸುರಿಯಿತು.

ಮುಂಡರಗಿ ತಾಲ್ಲೂಕಿನಾದ್ಯಂತ ಭಾರಿ ಮಳೆ

ಮುಂಡರಗಿ: ಮುಂಡರಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಾನುವಾರ ಭಾರಿ ಮಳೆ ಸುರಿಯಿತು. ಬೆಳಿಗ್ಗೆ 9ಗಂಟೆಗೆ ಪ್ರಾರಂಭವಾದ ಮಳೆಯು ದಿನವಿಡೀ ಬಿಟ್ಟು ಬಿಟ್ಟು ಸುರಿಯಿತು.ತಾಲ್ಲೂಕಿನ ಹೆಸರೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಸಿಂಗಟಾಲೂರ, ಹಮ್ಮಿಗಿ, ಬೀಡನಾಳ ಮೊದಲಾದ ಗ್ರಾಮಗಳಲ್ಲಿ ಬಿರುಸಾದ ಮಳೆಯಾಗಿದೆ.

ಧಾರಾಕಾರ ಮಳೆಯಿಂದ ಚರಂಡಿಗಳು ತುಂಬಿ ಹರಿದವು.ನೀರು ರಭಸದಿಂದ ಹರಿದಿದ್ದರಿಂದ ಚರಂಡಿ ತ್ಯಾಜ್ಯ ಕೊಚ್ಚಿ ರಸ್ತೆಗೆ ಹರಿಯಿತು. ಪಟ್ಟಣದ ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದವು.

ಗ್ರಾಮೀಣ ಭಾಗದ ಜಮೀನುಗಳ ಬದುಗಳು ಮಳೆ ಆರ್ಭಟಕ್ಕೆ ನಾಶವಾಗಿವೆ. ಕೆಲವೆಡೆ ಮೊಳಕೆ ಒಡೆದಿದ್ದ ಸಸಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದವು. ಜಮೀನಿನಲ್ಲಿ ನಿರ್ಮಿಸಿದ್ದ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿದ್ದು, ಕೆಲವೆಡೆ ಕೃಷಿ ಹೊಂಡಗಳ ಒಡ್ಡುಗಳು ಒಡೆದು ಹೋಗಿ, ಸಂಗ್ರಹವಾಗಿದ್ದ ನೀರು ಹರಿದು ಹೋಗಿದೆ.

ಪಟ್ಟಣದ ಕೋಟೆ ಭಾಗ, ಕಡ್ಲಿಪೇಟೆ, ಅಂಬೇಡ್ಕರ್ ನಗರ ಮೊದಲಾದ ಭಾಗಗಳಲ್ಲಿ ಕೆಲವು ಮನೆಗಳು ಭಾರಿ ಮಳೆಯಿಂದ ಜಖಂಗೊಂಡಿವೆ. ತಗ್ಗು ಪ್ರದೇಶಗಳಲ್ಲಿದ್ದ ಮನೆಗಳಿಗೆ ಮಳೆನೀರು ನುಗ್ಗಿದೆ.

ತಾಲ್ಲೂಕಿನ ಹಿರೇಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ಹಿರೇಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ದಂಡೆಯ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT