ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭಗೊಳ್ಳದ ಶುದ್ಧ ನೀರಿನ ಘಟಕ

ಹುಲಿಕಟ್ಟಿ: ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ
Last Updated 11 ಜೂನ್ 2018, 10:06 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಇಲ್ಲಿಗೆ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ನಾಲ್ಕು ತಿಂಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಕಾಮ ಗಾರಿ ಆರಂಭಗೊಂಡಿದ್ದು, ಇನ್ನೂ ಪೂರ್ಣ ಗೊಂಡಿಲ್ಲ. ಉತ್ತಮ ಮುಂಗಾರು ಹಾಗೂ ಪಕ್ಕದಲ್ಲೇ ತುಂಗಾಭದ್ರಾ ನದಿ ಇದ್ದರೂ, ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕೊಳವೆಬಾವಿ ಕೊರೆಯಿಸಿ, ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಆದರೆ, ಯಂತ್ರಗಳನ್ನು ಅಳವಡಿಸಬೇಕಾಗಿದೆ ಎಂದು ಗ್ರಾಮದ ನಿಂಗಪ್ಪ ಉಜ್ಜೇರ ಮಾಹಿತಿ ನೀಡಿದರು.

‘ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಸಮೀಪದ ಖಂಡೇರಾಯನಹಳ್ಳಿಯಲ್ಲಿ ನೀರು ಶುದ್ಧೀಕರಣ ಘಟಕ ಇದೆ. ಆದರೆ, ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೇ, ನದಿಯ ನೀರು ಮಣ್ಣು ಮಿಶ್ರಿತ ವಾಗಿದ್ದು, ಕುಡಿಯಲು ಅಸಾಧ್ಯವಾಗಿದೆ. ಹೀಗಾಗಿ ಶುದ್ಧ ಕುಡಿಯವ ನೀರಿನ ಘಟಕ ಅಗತ್ಯವಾಗಿ ಬೇಕಾಗಿದೆ’ ಎನ್ನುತ್ತಾರೆ ಶಿಕ್ಷಕ ರವಿ ಮುದಿಗೌಡ್ರ.

‘ಹಿಂದಿನ ಸರ್ಕಾರ ಆರಂಭಿಸಿದ ಈ ಯೋಜನೆಯಿಂದಾಗಿ, ಇತರ ಗ್ರಾಮಗಳ ಜನತೆ ಶುದ್ಧ ಕುಡಿಯುವ ನೀರು ಕುಡಿಯುತ್ತಿದ್ದಾರೆ. ನಮಗೂ ಆ ಭಾಗ್ಯ ಬರಲಿ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ’ ಎಂದು ಗ್ರಾಮಸ್ಥ ಸಿದ್ದಲಿಂಗಪ್ಪ ಕೋಲಕಾರ ಹೇಳಿದರು.

‘ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನೆಪ ಹೇಳಿಕೊಂಡು ಕಾಲಹರಣ ಮಾಡಬಾರದು. ತಕ್ಷಣವೇ ಯಂತ್ರ ಜೋಡಣೆ ಮಾಡಿ, ಜನರಿಗೆ ಶುದ್ಧ ನೀರು ನೀಡಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಭೀಮೇಶ್ ಕುಡಪಲಿ ಒತ್ತಾಯಿಸಿದರು.

ಮಳೆಗಾಲ ಆರಂಭಗೊಂಡಿದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಇದೆ. ಇಂತಹ ಸಂದರ್ಭದಲ್ಲಿ ಕುಡಿಯುವ ಶುದ್ಧ ನೀರು ಪೂರೈಸದಿದ್ದರೆ, ಅಪಾಯವೇ ಹೆಚ್ಚು. ಹೀಗಾಗಿ, ಜಿಲ್ಲಾ ಪಂಚಾಯ್ತಿ ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

‘ಬದಲಾದ ಗ್ರಾಮ ಪಂಚಾಯ್ತಿ’

ಈ ಮೊದಲು ಹುಲಿಕಟ್ಟಿ ಗ್ರಾಮವು ಕವಲೆತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಟ್ಟಿತ್ತು ಆದರೆ, ಈಗ ನದಿಹರಳಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದೆ. ಗ್ರಾಮದಲ್ಲಿ 2,500 ಜನಸಂಖ್ಯೆಯಿದ್ದು, ಗ್ರಾಮ ಪಂಚಾಯ್ತಿ ಸದಸ್ಯರು ನಾಲ್ವರು ಇದ್ದಾರೆ.

ಸೂರಲಿಂಗಯ್ಯ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT