ನದಿಯಂಥ ರಸ್ತೆಯಲ್ಲಿ ನಿತ್ಯ ಸಂಚಾರ

7
ಪದ್ಮನಾಭ ನಗರದ ನಿವಾಸಿಗಳಿಗೆ ಮಳೆಗಾಲದಲ್ಲಿ ಗೋಳು

ನದಿಯಂಥ ರಸ್ತೆಯಲ್ಲಿ ನಿತ್ಯ ಸಂಚಾರ

Published:
Updated:
ನದಿಯಂಥ ರಸ್ತೆಯಲ್ಲಿ ನಿತ್ಯ ಸಂಚಾರ

ಕಾರವಾರ: ಮಳೆಗಾಲ ಬಂತೆಂದರೆ ಎಷ್ಟು ಸಂತಸವೋ ನಗರದ ಪದ್ಮನಾಭ ನಗರದ ನಿವಾಸಿಗಳಿಗೆ ಅಷ್ಟೇ ಆತಂಕವೂ ಕೂಡ. ಜೋರು ಮಳೆಯಾಗಿ ತಮ್ಮ ದೈನಂದಿನ ಓಡಾಟದ ರಸ್ತೆಯೇ ಎಲ್ಲಿ ಕಳೆದುಹೋಗುತ್ತದೋ ಎಂಬ ಚಿಂತೆ ಸ್ಥಳೀಯರದ್ದು.

ನಗರಸಭೆಯ ವಾರ್ಡ್ ಸಂಖ್ಯೆ 20ರಲ್ಲಿರುವ ಈ ಬಡಾವಣೆಯ ಆರನೇ ಅಡ್ಡರಸ್ತೆಯ ನಿವಾಸಿಗಳು ತಮ್ಮನ್ನು ಈ ಸಂಕಟದಿಂದ ಪಾರು ಮಾಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಅದೆಷ್ಟು ಬಾರಿ ಬೇಡಿಕೊಂಡರೋ ಗೊತ್ತಿಲ್ಲ. ಆದರೆ, ಫಲ ಮಾತ್ರ ಶೂನ್ಯ. ಮುಂಗಾರು ಮಳೆ ರಚ್ಚೆಹಿಡಿದು ದಿನವಿಡೀ ಹೊಯ್ದರೆ ಈ ರಸ್ತೆಯಿಡೀ ಸೊಂಟದೆತ್ತರಕ್ಕೆ ನೀರು ನಿಲ್ಲುತ್ತದೆ. ನಂತರ ನೀರು ಹರಿದು ಹೋಗುವವರೆಗೆ ಸ್ಥಳೀಯರು ಕೆಸರು ನೀರಿನಲ್ಲೇ ಓಡಾಡಬೇಕಾದ ಅನಿವಾರ್ಯತೆಯಿದೆ.

‘ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಇದುವೇ ಸಮಸ್ಯೆಯ ಮೂಲ ಕಾರಣವಾಗಿದೆ. ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ನಿವೇಶನಗಳ, ಮನೆಗಳ ಆವರಣ ಗೋಡೆಗಳಿವೆ. ಅವುಗಳ ಸಮೀಪ ಚರಂಡಿ ನಿರ್ಮಿಸಬೇಕಿತ್ತು. ರಸ್ತೆಯಿಂದ ಚರಂಡಿಗೆ ನೀರು ಸೇರುವ ಜಾಗದಲ್ಲಿ ವಿದ್ಯುತ್ ಕಂಬ ನೆಡಲಾಗಿದೆ. ಇದ್ದ ಒಂದೂವರೆ– ಎರಡು ಅಡಿ ಜಾಗದಲ್ಲಿ ಬಹುಪಾಲನ್ನು ಅದು ಕಬಳಿಸಿದೆ. ಅಲ್ಲಿ ಪ್ಲಾಸ್ಟಿಕ್, ಕಸ ಕಡ್ಡಿಗಳು ಸಿಲುಕಿಕೊಂಡು ನೀರು ಇಳಿದುಹೋಗುವುದಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ ನಾಯ್ಕ.

‘ರಸ್ತೆಯಲ್ಲಿ ನೀರು ಎಷ್ಟಿದೆ, ಹೊಂಡ ಎಲ್ಲಿದೆ, ಕಲ್ಲು, ಬಾಟಲಿ ಏನಾದರೂ ಇದೆಯಾ ಎಂದೂ ತಿಳಿಯುವುದಿಲ್ಲ. ಇದರಿಂದ ದ್ವಿಚಕ್ರ ವಾಹನ ಸವಾರರು ಪಡಬಾರದ ಪಾಡು ಅನುಭವಿಸುತ್ತಿದ್ದಾರೆ. ಮಳೆ ಜೋರಾದಾಗ ನಮ್ಮ ಮನೆಗಳ ಮೆಟ್ಟಿಲಿವರೆಗೂ ಪ್ರವಾಹದ ರೀತಿಯಲ್ಲಿ ಮಳೆ ನೀರು ಬಂದಿರುವ ಉದಾಹರಣೆಗಳಿವೆ. ಇದನ್ಯಾಕೆ ಸರಿಪಡಿಸುತ್ತಿಲ್ಲ ಎಂದು ತಿಳಿಯುತ್ತಿಲ್ಲ’ ಎನ್ನುವುದು ಮತ್ತೊಬ್ಬ ಸ್ಥಳೀಯ ಶಿವಾನಂದ ನಾಯ್ಕ ಅವರದ್ದು.

‘ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯರು ಇಲ್ಲಿ ನಡೆದುಕೊಂಡು ಹೋಗಲೂ ಕಷ್ಟವಾಗುವಂತಹ ಪರಿಸ್ಥಿತಿಯಿದೆ. ಮಳೆಗಾಲ ಆರಂಭಕ್ಕೂ ಮೊದಲೇ ಇದನ್ನು ಸರಿಪಡಿಸಿ ಅನುಕೂಲ ಮಾಡಿಕೊಡಬೇಕಿತ್ತು. ಆದರೆ, ಇನ್ನೂ ಅದೇ ಸ್ಥಿತಿಯಿದೆ. ಹೀಗಾದರೆ ನಾವು ನೀಡಿದ ಮನವಿಗಳು, ಕಟ್ಟುವ ತೆರಿಗೆಗೆ ಬೆಲೆಯೇ ಇಲ್ಲವೇ’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry