ಜಲಾವೃತವಾದವು ಹೊಲ ಗದ್ದೆಗಳು

5
ನಾಪೋಕ್ಲು: ಮಳೆ ಬಿರುಸು: ಇಪ್ಪತ್ತೈದು ವಿದ್ಯುತ್‌ ಕಂಬಗಳು ಜಖಂ

ಜಲಾವೃತವಾದವು ಹೊಲ ಗದ್ದೆಗಳು

Published:
Updated:

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಅಪರಾಹ್ನ ಮಳೆ ಬಿರುಸು ಪಡೆದುಕೊಂಡಿತು. ಬಿಡುವು ಕೊಟ್ಟು ಮಳೆ ರಭಸದಿಂದ ಸುರಿಯಿತು. ಹೆಚ್ಚಿದ ಮಳೆಯಿಂದಾಗಿ ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ.

ಕಾವೇರಿ ನದಿ ಹರಿಯುತ್ತಿರುವ ಕೊಟ್ಟಮುಡಿ ಹಾಗೂ ಬೊಳಿಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕಕ್ಕಬ್ಬೆ ನದಿಯ ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡುಬಂದಿದೆ. ನಾಲಡಿ ಗ್ರಾಮದ ಅಂಬಲಪೊಳೆಯಲ್ಲಿ ಪ್ರವಾಹ ಹೆಚ್ಚಾದ ಕಾರಣ ಎರಡೂ ಸೇತುವೆಗಳು ಜಲಾವೃತಗೊಂಡಿವೆ.

ಮಳೆಯು ಮುಂದುವರಿದಲ್ಲಿ ಕಕ್ಕಬ್ಬೆಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಪ್ರವಾಹ ಉಂಟಾಗಲಿದೆ. ನಾಪೋಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿಯೂ ಕಾವೇರಿ ನದಿ ಪ್ರವಾಹ ಭೀತಿ ಉಂಟಾಗಿದೆ. ಮಳೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಗಾಳಿ ಮಳೆಯಿಂದಾಗಿ ಕಾಫಿಯ ತೋಟ ಗಳಲ್ಲಿ ಮರದ ರೆಂಬೆಗಳು ಮುರಿದು ಬೀಳುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುವಂತಾಗಿದೆ. ಇದಕ್ಕೆ ಸೆಸ್ಕ್‌ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

‘ಬೇಸಿಗೆಯಲ್ಲಿ ವಿದ್ಯುತ್ ತಂತಿಗಳ ಬಳಿಯಿರುವ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯ ಕೈಗೊಳ್ಳದಿರುವುದರಿಂದ ಈ ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್‌ ಕಡಿತವುಂಟಾಗುತ್ತಿದೆ. ಇತ್ತೀಚಿಗೆ ವಿದ್ಯುತ್ ಕಂಬಗಳ ಒಳಗೆ ಅಳವಡಿಸಿರುವ ತಂತಿಗಳು ಅತೀ ಸಣ್ಣ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಸಣ್ಣ ಮರದ ರೆಂಬೆಗಳು ಬಿದ್ದರೂ ಕಂಬಗಳು ಮುರಿದು ಬೀಳುತ್ತವೆ. ಇದಕ್ಕೆ ವಿದ್ಯುತ್ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಭಸದ ಗಾಳಿ ಮಳೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಇಪ್ಪತೈದು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಪಾಲೂರು ಗ್ರಾಮದಲ್ಲಿ ಮೂರು ವಿದ್ಯುತ್‌ ಕಂಬಗಳು ಮುರಿದಿವೆ. ‘ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲು ಶ್ರಮಿಸುತ್ತಿದ್ದೇವೆ. ಕೆಲವೆಡೆ ವಿದ್ಯುತ್‌ ವ್ಯತ್ಯಯದ ಕಾರಣಗಳನ್ನೂ ಪತ್ತೆಹಚ್ಚಬೇಕಿದೆ’ ಎಂದು ಸೆಸ್ಕ್‌ ಇಲಾಖಾ ಸಿಬ್ಬಂದಿ ತಿಳಿಸಿದರು. ಭಾನುವಾರ ದಿನ ಪೂರ್ತಿ ಕೆಲಸ ನಿರ್ವಹಿಸಿ ಹಲವು ಭಾಗಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry