ಊರ ಹೊರಗೆ ಚಿಟ್ಟೆ ಮೇಳ!

7
ಹಿಂಡು ಹಿಂಡಾಗಿ ಬಂದು ಹೂಗಳನ್ನು ಜೀಕುತ್ತ, ಎಲೆಗಳನ್ನು ತಾಕುತ್ತ ಆಟ

ಊರ ಹೊರಗೆ ಚಿಟ್ಟೆ ಮೇಳ!

Published:
Updated:
ಊರ ಹೊರಗೆ ಚಿಟ್ಟೆ ಮೇಳ!

ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ಉನಿಕಿಲಿ ಗ್ರಾಮದ ಕೆರೆಯಂಗಳದಲ್ಲಿ ಭಾನುವಾರ ಬೆಳಿಗ್ಗೆ ಹಿಂಡು ಹಿಂಡಾಗಿ ಹಾರಾಡುತ್ತಿದ್ದ ಚಿಟ್ಟೆಗಳು ನೋಡುಗರಿಗೆ ಖುಷಿ ಉಂಟು ಮಾಡಿದವು.

ಬೆಳಿಗ್ಗೆ ಚುಮು ಚುಮು ಬಿಸಿಲಲ್ಲಿ ಕೆರೆ ಅಂಚಿನ ಮಾವಿನ ತೋಟಗಳ ಕಡೆ ಹೆಜ್ಜೆಹಾಕಿದ್ದ ಗ್ರಾಮಸ್ಥರನ್ನು ಬಣ್ಣದ ಚಿಟ್ಟೆಗಳು ಸ್ವಾಗತಿಸಿದವು. ಇಷ್ಟೊಂದು ಚಿಟ್ಟೆಗಳು ಎಲ್ಲಿಂದ ಬಂದವು ಎಂಬ ಪ್ರಶ್ನೆ ನೋಡುಗರನ್ನು ಕಾಡುತ್ತಿತ್ತು. ಮಾವಿನ ತೋಟಗಳಿಂದ ಹೊರಗೆ ಹಾರಿಬರುತ್ತಿದ್ದ ಚಿಟ್ಟೆಗಳು ಕೆರೆಯಲ್ಲಿ ಬೆಳೆದಿದ್ದ ಉತ್ತರಾಣಿ ಮತ್ತಿತರ ಗಿಡಗಳ ಮೇಲೆ ಗುಂಪು ಗುಂಪಾಗಿ ಕುಳಿತುಕೊಳ್ಳುತ್ತಿದ್ದವು. ಹೂಗಳನ್ನು ಜೀಕುತ್ತ, ಎಲೆಗಳನ್ನು ತಾಕುತ್ತ ಆಟವಾಡುತ್ತಿದ್ದವು. ಹಿರಿಯರ ಹಿಂದೆ ಹೆಜ್ಜೆ ಹಾಕಿದ್ದ ಮಕ್ಕಳಂತೂ ಚಿಟ್ಟೆಗಳನ್ನು ಕಂಡು ಖುಷಿ ಪಟ್ಟರು. ಕೆಲವರು ಅವುಗಳನ್ನು ಹಿಡಿಯುವ ವಿಫಲ ಯತ್ನ ನಡೆಸುತ್ತಿದ್ದರು.

ಚಿಟ್ಟೆಗಳು ನೋಡಲು ಸುಂದರವಾಗಿ ಕಾಣುತ್ತವೆ. ಆದರೆ ಅವು ಮಾಡುವ ಅನಾಹುತ ದೊಡ್ಡದು. ಹಣ್ಣು ಹಾಗೂ ತರಕಾರಿ ಗಿಡಗಳ ಎಲೆ ಹಿಂದೆ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಗೆ ಬರುವ ಹುಳುಗಳು ಬೆಳೆಯನ್ನು ತಿಂದು ಹಾಳು ಮಾಡುತ್ತವೆ. ಬೆಳೆ ರಕ್ಷಣೆಗೆ ಅಧಿಕ ಮೊತ್ತದ ಔಷಧ ಸಿಂಪರಣೆ ಮಾಡಬೇಕಾಗುತ್ತದೆ ಎಂದು ಪನಸಮಾಕನಹಳ್ಳಿ ಗ್ರಾಮದ ರೈತ ಎನ್‌.ನಾರಾಯಣಸ್ವಾಮಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಆಗಾಗ ಈ ಚಿಟ್ಟೆ ಗುಂಪುಗಳು ಕಾಣಿಸಿಕೊಳ್ಳುತ್ತಿವೆ. ಬೆಳೆ ನಷ್ಟ ಉಂಟು ಮಾಡುವ ಮೂಲಕ ಆರ್ಥಿಕ ಸಂಕಷ್ಟ ತಂದೊಡ್ಡುತ್ತವೆ. ಚಿಟ್ಟೆಗಳನ್ನು ಸುಂದರ ಮುಖದ ವಿಶಕನ್ಯೆಗೆ ಹೋಲಿಸುತ್ತಾರೆ. ಬಣ್ಣ ಬಣ್ಣದ ಚಿಟ್ಟೆಗಳು ನೋಡಲು ಸುಂದರವಾಗಿ ಕಂಡರೂ, ಕೃಷಿ ಕೇತ್ರಕ್ಕೆ ಹೆಚ್ಚು ನಷ್ಟ ಉಂಟು ಮಾಡುತ್ತವೆ ಎಂದು ರೈತ ನಾರೆಪ್ಪ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry