ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ತೋಟಕ್ಕೆ ಲಗ್ಗೆ!

Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

‘ಮಾವಿನ ಹಣ್ಣಿನಲ್ಲಿ ಇಷ್ಟೊಂದು ವೆರೈಟಿ ಇದೆಯಾ, ಗೊತ್ತೇ ಇರಲಿಲ್ಲ..’ – ಮರದಿಂದ ಮಾವಿನ ಕಾಯಿಗಳನ್ನು ಕೊಯ್ಯುತ್ತಿದ್ದ ಬೆಂಗಳೂರಿನ ಲಕ್ಷ್ಮಿ, ಬಗೆ ಬಗೆಯ ಮಾವು ತಳಿಗಳ ಮಾಹಿತಿ ಕೇಳಿ ಉದ್ಗಾರ ತೆಗೆದರು. ಹೀಗೆ ಮಾತನಾಡುತ್ತಲೇ, ಮಾವಿನ ಕಾಯಿಗಳನ್ನು ಕೊಯ್ದು ಚೀಲಕ್ಕೆ ತುಂಬಿಸಿಕೊಂಡರು. ಅವರೊಂದಿಗೆ ಬಂದಿದ್ದ ಮತ್ತಷ್ಟು ಮಂದಿ, ಹಣ್ಣುಗಳನ್ನು ಕೊಯ್ದು ಚೀಲದಲ್ಲಿ ತುಂಬಿಸಿಕೊಳ್ಳುತ್ತಿದ್ದರು.

‘ಎಲ್ಲಿ ತೂಕ ಹಾಕಿಸಬೇಕು’– ಮಾವು ತುಂಬಿದ ಚೀಲ ಹಿಡಿದವರು ಕೇಳುತ್ತಿದ್ದರೆ, ತೂಕ ಮಾಡಿಸಲು ಹೋಗುತ್ತಿದ್ದವರು, ‘ಬನ್ನಿ, ಆ ಕಡೆ ಹೋಗೋಣ, ಅಲ್ಲಿ ತೂಕ ಮಾಡ್ತಾರೆ’ ಎನ್ನುತ್ತ ಕರೆದೊಯ್ಯುತ್ತಿದ್ದರು. ಹೀಗೆ ಪರಸ್ಪರ ಮಾತನಾಡುತ್ತಾ, ಮರದಿಂದ ಮಾವಿನ ಕಾಯಿಗಳನ್ನು ಕೊಯ್ದು ರೈತರಿಗೆ ಹಣ ನೀಡಿ, ಚೀಲದಲ್ಲಿ ತುಂಬಿಸಿಕೊಂಡು ಬಸ್ ಏರಿದರು.

ಮಾವು ಅಭಿವೃದ್ಧಿ ಮಂಡಳಿ ಇತ್ತೀಚೆಗೆ ಗೌರಿಬಿದನೂರು ತಾಲ್ಲೂಕು ಆನೋಡಿಯ ಕೆ.ಜನಾರ್ದನ ನಾಯ್ಡು ಅವರ 75 ಎಕರೆಯ ಮಾವಿನ ತೋಟದಲ್ಲಿ ಆಯೋಜಿಸಿದ್ದ ‘ಮ್ಯಾಂಗೊ ಪಿಕ್ಕಿಂಗ್ ಟೂರ್’ ನಲ್ಲಿ ಕಂಡು ಬಂದ ದೃಶ್ಯಗಳಿವು. ‘ಗ್ರಾಹಕರಿಗೆ ತಾಜಾ ಮಾವಿನ ಹಣ್ಣುಗಳ ರುಚಿ ಸಿಗಬೇಕು, ರೈತರ ತೋಟದ ಬಳಿಗೆ ಮಾರುಕಟ್ಟೆ ಬರಬೇಕು’ – ಈ ಉದ್ದೇಶದೊಂದಿಗೆ ಮಂಡಳಿ ಮೂರು ವರ್ಷಗಳಿಂದ ಈ ಪ್ರವಾಸವನ್ನು ಆಯೋಜಿಸುತ್ತಿದೆ.

ವೆರೈಟಿ ಕಂಡು ಬೆರಗಾದವರು: ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟ 50 ಮಂದಿ ಗ್ರಾಹಕರು, ಗೌರಿಬಿದನೂರು ಸಮೀಪದ ನಾಯ್ಡು ಅವರ ಮಾವಿನ ತೋಟದಲ್ಲಿ ಇಳಿದರು. ತೋಟದಲ್ಲಿದ್ದ ನೂರಾರು ಮಾವಿನ ಮರಗಳನ್ನು ಕಂಡು ಅಚ್ಚರಿಪಟ್ಟರು. ಕೆಲವರಂತೂ ಮಾವಿನ ತಳಿಗಳನ್ನು ಕಂಡು ಬೆರಗಾದರು. ತೋಟಗಾರಿಕೆ ಇಲಾಖೆ ನಿವೃತ್ತ ಅಧಿಕಾರಿ ಹಾಗೂ ಮಾವು ಬೆಳೆ ತಜ್ಞ ಡಾ. ಎಸ್.ವಿ. ಹಿತ್ತಲಮನಿ ಪ್ರವಾಸಿಗರಿಗೆ ಮಾವಿನ ತಳಿಗಳನ್ನು, ವಿಭಿನ್ನ ರುಚಿಯ ಮಾವುಗಳನ್ನು ಪರಿಚಯಿಸಿದರು. ಅವರ ಮಾತು ಮುಗಿಯುವಷ್ಟರಲ್ಲಿ, ಆಲ್ಫಾನ್ಸೊ (ಬಾದಾಮಿ) ಮಾವಿನ ತಳಿಯ ಘಮಲು, ಪ್ರವಾಸಿಗರನ್ನು ಆಕರ್ಷಿಸಿತು. ಮಾತು ಕೇಳಿಸಿಕೊಳ್ಳುತ್ತಲೇ ಮಾವಿನ ತೋಪಿನತ್ತ ಹೊರಳಿದರು. ಮರಗಳಿಂದ ಮಾವಿನ ಹಣ್ಣು, ಬಲಿತ ಕಾಯಿಗಳನ್ನು ಕೊಯ್ಯಲಾರಂಭಿಸಿದರು.

ಆಲ್ಫಾನ್ಸೊ ಜತೆಗೆ, ತೋಟದಲ್ಲಿ ಬೇರೆ ಬೇರೆ ತಳಿಗಳಿದ್ದವು. ತಳಿಗಳನ್ನು ಪರಿಚಯಿಸುತ್ತಿದ್ದ ಹಿತ್ತಲಮನಿ ಅವರಿಗೆ ‘ಇದು ಯಾವ ತಳಿ? ರುಚಿ ಹೇಗಿರುತ್ತದೆ? ಎಷ್ಟು ಇಳುವರಿ ಸಿಗುತ್ತದೆ?’ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದರು. ಹಿತ್ತಲಮನಿಯವರು, ಮಾವಿನ ಹಣ್ಣುಗಳನ್ನು ಕೊಯ್ಯುತ್ತಾ, ಅವುಗಳ ರುಚಿಯನ್ನು ಪರಿಚಯಿಸುತ್ತಲೇ, ಅವರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಬೆಳೆಯುವ ವಿಧಾನ, ಕೊಯ್ಲು ಮಾಡುವ ತಂತ್ರಗಾರಿಗೆ, ಮಾವಿನ ಬೆಳೆಗಾರರ ಸಂಕಷ್ಟ, ಮಾರುಕಟ್ಟೆಯಲ್ಲಾಗುವ ಏರುಪೇರುಗಳನ್ನೂ ಮಾತಿಗೆ ಪೋಣಿಸುತ್ತಿದ್ದರು.

ಮಕ್ಕಳಿಗೂ ಸಂತಸ, ಖುಷಿಯಾದ ರೈತರು: ಪ್ರವಾಸದಲ್ಲಿ ಮಕ್ಕಳು ಹೆಚ್ಚು ಸಂತಸಪಟ್ಟರು. ಮಾವಿನ ಮರಗಳಲ್ಲಿ ಹಣ್ಣು ಸಿಗದಿದ್ದಾಗ, ಜಿಗಿದು ಜಿಗಿದು ಕಾಯಿ ಹಿಡಿಯಲು ಪ್ರಯತ್ನಿಸುತ್ತಾ, ಕೊನೆಗೊಮ್ಮೆ ಯಶಸ್ವಿಯಾದಾಗ ಅವರ ಸಂಭ್ರಮ ನೋಡುವುದೇ ಚಂದ. ಒಂದು ಕಡೆ ಮಕ್ಕಳು ಹೀಗೆ ಹಣ್ಣು ತಿನ್ನುತ್ತಾ ಸಂತಸಪಡುತ್ತಿದ್ದಾಗ, ತೋಟದ ಮಾಲೀಕ ಜನಾರ್ದನ ನಾಯ್ಡು, ‘ಮೂರು ವರ್ಷಗಳಿಂದ ನಮ್ಮ ತೋಟಕ್ಕೆ ಪ್ರವಾಸ ಬರುತ್ತಿದ್ದಾರೆ. ವ್ಯಾಪಾರ ಉತ್ತಮವಾಗಿದೆ. ಗ್ರಾಹಕರೂ ಸಂತೋಷಪಡುತ್ತಾರೆ’ ಎಂದು ಹಣ್ಣುಂಡವರ ಸಂತಸದ ಜತೆಯಲ್ಲೇ, ತಮ್ಮ ಸಂಭ್ರಮವನ್ನೂ ಬೆರೆಸಿದರು.

‘ಮರದಿಂದ ಹಣ್ಣು ಕಿತ್ತು, ಕೊಯ್ದು ತಿನ್ನುವುದೇ ಒಂದು ಅದ್ಭುತ ಅನುಭವ. ಇಂಥ ಪರಿಕಲ್ಪನೆ ಹೇಗೆ ಬಂತೋ ಗೊತ್ತಿಲ್ಲ. ಆದರೆ, ‘ಮ್ಯಾಂಗೊ ಪಿಕ್ಕಿಂಗ್ ಟೂರ್’ ಮಾತ್ರ, ವಿಶಿಷ್ಟವಾಗಿದೆ’ ಎಂದರು ಬೆಂಗಳೂರಿನ ನಿವಾಸಿ ಲಕ್ಷ್ಮಿ. ‘ಸ್ವಾಭಾವಿಕವಾಗಿ ಹಣ್ಣಾದ ಮಾವಿನ ರುಚಿ ಜತೆಗೆ, ಬೆಳೆವಣಿಗೆ, ತಳಿ ಕುರಿತ ಮಾಹಿತಿಯೂ ಉತ್ತಮವಾಗಿತ್ತು. ತಿನ್ನುವ ಹಣ್ಣಿನ ಹಿಂದಿನ ಕಷ್ಟದ ಬದುಕನ್ನು ಅರಿಯಲು ಸಾಧ್ಯವಾಯಿತು’ ಎಂದು ಪ್ರವಾಸಕ್ಕೆ ಬಂದಿದ್ದ ಗಜೇಂದ್ರ ಅಭಿಪ್ರಾಯಪಟ್ಟರು.

ಹಣ್ಣು ಕೊಯ್ದಕೊಂಡವರು ಹಣ ನೀಡದೇ ಮುಂದೆ ಹೋಗುತ್ತಿರಲಿಲ್ಲ. ಯಾರೋ ಒಬ್ಬರು ಒಂದೆರಡು ಹಣ್ಣುಗಳನ್ನು ಬ್ಯಾಗ್‌ನಲ್ಲಿ ತೂರಿಸುತ್ತಿದ್ದಾಗ, ಪಕ್ಕದಲ್ಲಿದ್ದ ಸಂಬಂಧಿಕರು, ಅವರ ಕೈಹಿಡಿದು, ‘ನೋಡಿ, ಇದು ರೈತರ ದುಡಿಮೆಯ ಫಲ. ಹಾಗೆಲ್ಲಾ ಮಾಡಬಾರದು’ ಎಂದು ಹೇಳಿ ಆ ಹಣ್ಣುಗಳನ್ನು ತೂಕಕ್ಕೆ ಹಾಕಿದರು. ಅಲ್ಲಿಯೇ ನಿಂತಿದ್ದ ತೋಟದ ಕೆಲಸಗಾರ ಇದನ್ನು ನೋಡಿ ನಸುನಕ್ಕ.

ವಿವಿಧ ಕಡೆ ‘ಪಿಕ್ಕಿಂಗ್ ಟೂರ್’: ‘ಮ್ಯಾಂಗೊ ಪಿಕ್ಕಿಂಗ್ ಟೂರ್’ – ಗ್ರಾಹಕನೇ ರೈತರ ತೋಟಕ್ಕೆ ನೇರವಾಗಿ ಭೇಟಿ ನೀಡಿ ಹಣ್ಣು ಖರೀದಿಸುವ ವ್ಯವಸ್ಥೆ. ಇಲ್ಲಿ ರೈತ ಮತ್ತು ಗ್ರಾಹಕ ನಡುವೆ ಮಧ್ಯವರ್ತಿ ಇರುವುದಿಲ್ಲ. ಈ ವ್ಯವಸ್ಥೆಯಿಂದ ರೈತರಿಗೆ ತಮ್ಮ ಉತ್ಪನ್ನಕ್ಕೆ ನಿಖರ ಬೆಲೆ ಸಿಕ್ಕ ಖುಷಿಯಾದರೆ, ಗ್ರಾಹಕರಿಗೆ ಕಡಿಮೆ ದರದಲ್ಲಿ ತಾಜಾ ಹಾಗೂ ತಮಗೆ ಬೇಕಾದ ಗುಣಮಟ್ಟದ ಹಣ್ಣು ಖರೀದಿಸಿದ ಸಂತಸ.

ಮಾವು ಅಭಿವೃದ್ಧಿ ಮಂಡಳಿ, ಬೆಂಗಳೂರು ವ್ಯಾಪ್ತಿಯಲ್ಲಿ ಮಾವಿನ ತೋಟಗಳಲ್ಲಿ ಈ ಪ್ರವಾಸ ಆಯೋಜಿಸುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ವರ್ಷವೂ ಗೌರಿಬಿದನೂರು ಸೇರಿದಂತೆ, ರಾಮನಗರ, ಕನಕಪುರ, ಶ್ರೀನಿವಾಸಪುರ ಸೇರಿದಂತೆ ಬೆಂಗಳೂರಿನ ಸುತ್ತಲಿನ ಹತ್ತಾರು ತೋಟಗಳಿಗೆ ಪ್ರವಾಸ ಕರೆದೊಯ್ದಿದ್ದಾರೆ. ಪ್ರವಾಸದಲ್ಲಿ ಶ್ರೀನಿವಾಸಪುರದಲ್ಲಿ 1,050 ಕೆ.ಜಿ, ಗೌರಿಬಿದನೂರಿನಲ್ಲಿ 1,200 ಕೆ.ಜಿ, ಕನಕಪುರದಲ್ಲಿ 645 ಕೆ.ಜಿ ಮಾವಿನ ಹಣ್ಣುಗಳ ವ್ಯಾಪಾರವಾಗಿದೆ. ಈ ಪ್ರವಾಸ ಜೂನ್‌ ತಿಂಗಳಿನ ನಾಲ್ಕು ವಾರ ನಡೆಯುತ್ತದೆ. ಮೊದಲೇ ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಆದ್ಯತೆ. 

ಹೆಚ್ಚಿನ ಮಾಹಿತಿಗೆ: 080 22236837

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT