3

ಉಪ ಆದಾಯದ ಅಂತರಬೆಳೆ ಬೇಸಾಯ

Published:
Updated:
ಉಪ ಆದಾಯದ ಅಂತರಬೆಳೆ ಬೇಸಾಯ

ಮಲೆನಾಡಿನಲ್ಲಿ ಮಳೆ ಏರುಪೇರಾಗುತ್ತಿದೆ. ನೀರಾವರಿ ವ್ಯವಸ್ಥೆಯಲ್ಲೂ ವ್ಯತ್ಯಾಸವಾಗುತ್ತಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಅಂತರ ಬೆಳೆ, ಮಿಶ್ರಬೆಳೆ ಪದ್ಧತಿಯಂತಹ ಪರ್ಯಾಯ ಪದ್ಧತಿಗಳತ್ತ ಹೊರಳುತ್ತಿದ್ದಾರೆ. ಕೆಲವರು ಈಗಾಗಲೇ ಅಂಥ ಪದ್ಧತಿಗಳನ್ನು ಅಳವಡಿಸಿಕೊಂಡು, ಉಪ ಆದಾಯ ಪಡೆಯುತ್ತಿದ್ದಾರೆ.

ಸಾಗರ ತಾಲ್ಲೂಕು ಆನಂದಪುರದ ಕೃಷಿಕ ಟಿ.ನಿಂಗಪ್ಪ, ರಬ್ಬರ್ ತೋಟದಲ್ಲಿ ಮರಗೆಣಸನ್ನು ಅಂತರಬೆಳೆಯಾಗಿ ಬೆಳೆಯುತ್ತಿದ್ದಾರೆ. ಮುಂಬಾಳು ಗ್ರಾಮದ ಎರಡು ಎಕರೆಯಲ್ಲಿರುವ ರಬ್ಬರ್ ತೋಟದಲ್ಲಿ ಮರಗೆಣಸು ಜತೆಗೆ, ಶುಂಠಿ, ಸುವರ್ಣಗೆಡ್ಡೆ, ಚೀನಿಕಾಯಿ, ಸೌತೆಕಾಯಿ, ತೊಗರಿ ಸೇರಿದಂತೆ ಹಲವು ತರಕಾರಿಗಳನ್ನು ಬೆಳೆದು ಉಪ ಆದಾಯ ಪಡೆಯುತ್ತಿದ್ದಾರೆ.

ರಬ್ಬರ್ ನಡುವೆ ಮರಗೆಣಸು: ‘ರಬ್ಬರ್ ಗಿಡಗಳನ್ನು ನಾಟಿ ಮಾಡಿ, ಫಸಲು ಪಡೆಯಲು ಏಳೆಂಟು ವರ್ಷಗಳು ಬೇಕು. ಅಲ್ಲಿವರೆಗೂ ಗಿಡಗಳ ನಡುವಿನ ಖಾಲಿ ಜಾಗ ಏಕೆ ವ್ಯರ್ಥವಾಗಿ ಬಿಡಬೇಕು ?’ ಎಂದು ಯೋಚಿಸಿದ ಕೃಷಿಕ ನಿಂಗಪ್ಪ, ಒಂದು ಎಕರೆಯಲ್ಲಿ ರಬ್ಬರ್ ಗಿಡಗಳ ನಡುವೆ ಮರಗೆಣಸು ನಾಟಿ ಮಾಡಿದರು.

2011ರಲ್ಲಿ ಎರಡು ಎಕರೆಯಲ್ಲಿ 15 ಅಡಿ ಅಂತರದಂತೆ (ಸಾಲಿನಿಂದ ಸಾಲು ಮತ್ತು ಗಿಡದಿಂದ ಗಿಡಕ್ಕೆ) 400 ರಬ್ಬರ್ ಗಿಡಗಳನ್ನು ನಾಟಿ ಮಾಡಿದ್ದರು. ಆರು ವರ್ಷಗಳ ನಂತರ (ಕಳೆದ ವರ್ಷ), ಮುಂಗಾರು ಮಳೆಗಾಲದ ನಂತರ ರಬ್ಬರ್ ಗಿಡದ ನಡುವೆ ಮರಗೆಣಸನ್ನು ನಾಟಿ ಮಾಡಿದರು.

ಪ್ರತಿ ಸಾಲಿನಲ್ಲಿರುವ ರಬ್ಬರ್ ಗಿಡಗಳ ನಡುವೆ ಮೂರು ಅಡಿ ಅಂತರಕ್ಕೆ ಗುಂಡಿ ತೆಗೆಸಿ, ಸೆಗಣಿ ಗೊಬ್ಬರ ಮತ್ತು ತರಗೆಲೆಗಳನ್ನು ತುಂಬಿಸಿ, ಪ್ರತಿ ಗುಂಡಿಯಲ್ಲಿ ಒಂದೂವರೆ ಅಡಿ ಉದ್ದದ ಮರಗೆಣಸಿನ ಗಿಡದ ಕಾಂಡ ನಾಟಿ ಮಾಡಿಸಿದರು.

ನಾಟಿ ಮಾಡಿದ 25 ದಿನಗಳನಂತರ ಕಾಂಡ ಚಿಗುರುತ್ತಿದ್ದಂತೆ ಪ್ರತಿ ಗಿಡಕ್ಕೆ 50 ಗ್ರಾಂ ಯೂರಿಯಾ ಗೊಬ್ಬರ ಮತ್ತು ಒಂದು ತಿಂಗಳ ನಂತರ ಸರಾಸರಿ 50 ಗ್ರಾಂ ಪೊಟ್ಯಾಷ್ ಗೊಬ್ಬರ ಹಾಕಿಸಿದರು. ಗಿಡಗಳ ಬುಡಕ್ಕೆ ಮಣ್ಣು ಏರಿಸಿದರು.

‘ಆರಂಭದಲ್ಲಿ ಇಷ್ಟು ಆರೈಕೆ ಮಾಡಿದೆ. ನಂತರ ಮರಗೆಣಸಿಗೆ ರೋಗಬಾಧೆ, ಕೀಟಬಾದೆ ಬರಲಿಲ್ಲ. ಅಕ್ಟೋಬರ್ ತಿಂಗಳಲ್ಲಿ ಉತ್ತಮ ಮಳೆಯಾದ ಕಾರಣ, ಹೊಲದ ನೆಲ ಹದವಾಯಿತು. ಈ ಮರಗೆಣಸು ಸೊಂಪಾಗಿ ಬರಲಾರಂಭಿಸಿತು’ ಎಂದು ನಿಂಗಪ್ಪ ಹೇಳುತ್ತಾರೆ.

ಉತ್ತಮ ಫಸಲು, ಸಮರ್ಪಕ ಬೆಲೆ: ಪ್ರತಿ ಗಿಡದಲ್ಲಿ 3 ಕೆ.ಜಿ ಮರಗೆಣಸು ಫಸಲು ಸಿಕ್ಕಿದೆ. ಹಂತ ಹಂತವಾಗಿ ಗೆಣಸು ಕತ್ತರಿಸಿ, ಮಾರಾಟ ಮಾಡಲಾಗುತ್ತಿದೆ. ಇದೇ ಫೆಬ್ರುವರಿ ವೇಳೆಗೆ, ಹೊಲದಲ್ಲಿ 2 ಸಾವಿರ ಗಿಡಗಳನ್ನು ಕಟಾವು ಮಾಡಿದಾಗ, 60 ಕ್ವಿಂಟಲ್ ನಷ್ಟು ಮರಗೆಣಸು ಸಿಕ್ಕಿದೆ. ಕೇರಳದ ವ್ಯಾಪಾರಸ್ಥರು ಜಮೀನಿಗೆ ಬಂದು ಕ್ವಿಂಟಲ್‌ಗೆ ₹1,500 ರಂತೆ ಬೆಲೆ ಕೊಟ್ಟು ಗೆಣಸು ಖರೀದಿಸಿದ್ದಾರೆ. ಈ ವರ್ಷ ₹90 ಸಾವಿರ ಆದಾಯ ಬಂದಿದೆ ಎನ್ನುತ್ತಾರೆ ನಿಂಗಪ್ಪ. ‘ಬೀಜ, ಗೊಬ್ಬರಕ್ಕೆ ಎಂದು ₹ 60 ಸಾವಿರ ಖರ್ಚು ಮಾಡಿದ್ದೂ. ₹30 ಸಾವಿರದಷ್ಟು ಆದಾಯ ಬಂದಿದೆ’ ಎನ್ನುತ್ತಾರೆ ಅವರು. ಇದು ಪ್ರತ್ಯಕ್ಷ ಆರ್ಥಿಕ ಲಾಭವಾದರೆ, ಮರಗೆಣಿಸಿನ ಗಿಡಗಳಿಗೆ ಪೂರೈಕೆ ಮಾಡಿದ ಗೊಬ್ಬರ ಪರೋಕ್ಷವಾಗಿ ರಬ್ಬರ್ ಗಿಡಗಳಿಗೂ ದೊರೆತಿದೆ. ಇದು ಪರೋಕ್ಷ ಲಾಭವಾಗಿದೆ ಎಂದು ನಿಂಗಪ್ಪ ಅನುಕೂಲಗಳನ್ನು ಪಟ್ಟಿ ಮಾಡುತ್ತಾರೆ.

ಇನ್ನಷ್ಟು ಅಂತರ ಬೆಳೆಗಳು: ಒಂದು ಎಕರೆಯಲ್ಲಿ ಅಂತರ ಬೆಳೆಯಾಗಿ ಮರಗೆಣಸು ಹಾಕಿದ ನಿಂಗಪ್ಪ, ಉಳಿದ ಜಾಗದಲ್ಲಿ ಶುಂಠಿ ನಾಟಿ ಮಾಡಿದ್ದಾರೆ. ಸುಮಾರು 110 ಕ್ವಿಂಟಲ್ ಶುಂಠಿ ಫಸಲು ಬಂದಿದೆ. ತೋಟದಲ್ಲಿ ಬೆಳೆಗಳ ನಡುವೆ ಸೌತೆ ಬಳ್ಳಿ ಹಾಕಿದ್ದಾರೆ. ಬಳ್ಳಿ, ಸೌತೆ ಬಳಸಿ ಸೇರಿದಂತೆ ಹಲವು ವೈವಿಧ್ಯಮಯ ತರಕಾರಿಗಳನ್ನು ಬೆಳೆದಿದ್ದಾರೆ. ಈ ಎಲ್ಲ ತರಕಾರಿಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಐದಾರು ವರ್ಷಗಳಿಂದ ರಬ್ಬರ್ ತೋಟದ ನಡುವೆ ನಿಂಗಪ್ಪ ಅವರ ಅಂತರ ಬೆಳೆ ಬೇಸಾಯ ಯಶಸ್ವಿಯಾಗಿ ನಡೆಯುತ್ತಿದೆ. ಅಂತರ ಬೆಳೆ ಬೇಸಾಯದ ಮಾಹಿತಿಗಾಗಿ ನಿಂಗಪ್ಪ ಅವರ ಸಂಪರ್ಕ ಸಂಖ್ಯೆ: 9481404942. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry