ರಂಗಿನ ರಮ್ಜಾನ್‌ ಬಜಾರ್‌...

7

ರಂಗಿನ ರಮ್ಜಾನ್‌ ಬಜಾರ್‌...

Published:
Updated:
ರಂಗಿನ ರಮ್ಜಾನ್‌ ಬಜಾರ್‌...

ತುಂಬಿದ ಆಣೆಕಟ್ಟೆಯ ಎಲ್ಲ ಗೇಟ್‌ಗಳನ್ನು ಒಮ್ಮೆಲೆ ತೆರೆದಂತೆ, ಗಲಿಬಿಲಿಗೊಂಡ ಇರುವೆಗಳೆಲ್ಲ ಹುತ್ತದಿಂದ ದಿಗ್ಗನೆ ಹೊರಬಂದಂತೆ, ಕತ್ತಲಾಗುವುದೇ ತಡ, ಹುಬ್ಬಳ್ಳಿಯ ಶಹಾ ಬಜಾರ್‌ ಬೀದಿಯಲ್ಲಿ ಜನವೋ ಜನ. ಸಂಜೆವರೆಗೆ ಅಷ್ಟೇನು ಗಡಿಬಿಡಿ ಕಾಣದಿದ್ದ ಈ ಬೀದಿಯಲ್ಲಿ ಇದ್ದಕ್ಕಿದ್ದಂತೆ ಅವರೆಲ್ಲ ಬಂದಿದ್ದಾದರೂ ಎಲ್ಲಿಂದ? ಸೂರ್ಯಾಸ್ತದ ಬಳಿಕ ಹರಿಯುವ ಬೆಳಕಿನ ಹೊಳೆಯಲ್ಲಿ ಮಿಂದೇಳುವ ಅವರು ಮಾಡುವುದಾದರೂ ಏನನ್ನು?

ಹೌದು ಸಾಹೇಬ್ರ, ಇದು ರಮ್ಜಾನ್‌ ಬಜಾರ್. ಇತರ ವ್ಯಾಪಾರಿ ತಾಣಗಳಂತಲ್ಲ ಈ ಬಜಾರ್‌, ಇದರ ಖದರ್‍ರೇ ಬೇರೆ. ಕಳೆದೊಂದು ವಾರದಿಂದ ಇಲ್ಲಿಯ ಶಹಾ ಬಜಾರ್‌ನ ರಮ್ಜಾನ್‌ ಪೇಟೆ ಕಳೆಕಟ್ಟಿದೆ. ಶಹಾ ಬಜಾರ್‌ ಮುಂದೆ ವಾಹನಗಳ ಸಂಚಾರ ಅಕ್ಷರಶಃ ಸ್ತಬ್ಧವಾಗಿದೆ. ಅಂಗಡಿಗಳೆಲ್ಲ ರಸ್ತೆಗಿಳಿದಿವೆ. ಜನರು ತೇಲಿಕೊಂಡು ಹೆಜ್ಜೆ ಕಿತ್ತಿಡಬೇಕಷ್ಟೆ. ಬ್ರಾಡ್‌ವೇದಿಂದ ದುರ್ಗದಬೈಲ್‌, ಅಲ್ಲಿಂದ ಶಹಾ ಬಜಾರ್‌ ದಾಟಿ ಸಿಬಿಟಿ ವರೆಗಿನ ರಸ್ತೆಗಳಲ್ಲೆಲ್ಲ ಜನಸಾಗರವೋ ಸಾಗರ.

ವಿವಿಧ ವಸ್ತುಗಳನ್ನು ರಸ್ತೆ ಮಧ್ಯೆಯೇ ರಾಶಿ ಹಾಕಿಕೊಳ್ಳುವ ಹಿರಿ ಕಿರಿಯ ವ್ಯಾಪಾರಿಗಳು ‘ಬರಿ ಐವತ್ತ್ ಬರಿ ಐವತ್ತ್’, ‘ನೂರಕ್ಕೆರಡು ನೂರಕ್ಕೆರಡು’, ‘ನೂರೈವತ್ತ್‌ ನೂರೈವತ್ತ್‌....’ ಎಂದು ಗಂಟಲು ಬಿರಿಯುವಂತೆ ಗ್ರಾಹಕರನ್ನು ಕೂಗಿ ಸೆಳೆಯುತ್ತಾರೆ. ಹುಬ್ಬಳ್ಳಿಯಲ್ಲಿ ರಮ್ಜಾನ್‌ ಮಾರ್ಕೆಟ್‌ ಎಂದರೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಕುದುರಿಸುವ ಹಬ್ಬ. ಈ ಮೇಳ ತಿಂಗಳಿದ್ದರೂ ವ್ಯಾಪಾರ ವೇಗ ಪಡೆಯೋದು ಹಬ್ಬಕ್ಕೆ ಎರಡು ವಾರಗಳಿರುವಾಗಲೇ. ಈಗೆಲ್ಲ ರಸ್ತೆಯಲ್ಲಿ ನಡೆಯೋದೇ ಬೇಡ, ನಿಂತರೆ ಸಾಕು; ಜನರೇ ದೂಡಿಕೊಂಡೇ ಹೋಗುತ್ತಾರೆ! ದೀಪಾವಳಿ ಹಿಂದೂಗಳಿಗೆ ದೊಡ್ಡ ಹಬ್ಬವಾದರೂ ಆಗ ಮುಸ್ಲಿಮರೇ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಾಗಿರುತ್ತಾರೆ. ಅಂತೆಯೇ ರಮ್ಜಾನ್‌ನಲ್ಲಿ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳೂ ಖರೀದಿ ಮೇಲೆ ಖರೀದಿ ಮಾಡುತ್ತಾರೆ. ಮುಂಬೈ, ಅಹಮದಾಬಾದ್‌, ಹೈದರಾಬಾದ್‌, ದೆಹಲಿ, ಅಷ್ಟೇ ಏಕೆ, ದೂರದ ದುಬೈನಿಂದಲೂ ಮಾಲನ್ನು ತರಿಸಿ ಮಾರಾಟ ಮಾಡುವ ಕಾರಣ ಜನರು ಈ ದಿನಗಳಿಗಾಗಿ ಕಾಯುತ್ತಿರುತ್ತಾರೆ ಇಲ್ಲಿ. ಬಟ್ಟೆ, ಸುಗಂಧ ದ್ರವ್ಯ, ಚಪ್ಪಲಿ, ಡ್ರೈಪ್ರೂಟ್ಸ್‌, ಶಾವಿಗೆ, ಬ್ಯಾಗ್‌, ಪರ್ಸ್‌, ಎಲ್ಲವೂ ಸಸ್ತಾ ಸಸ್ತಾ. ವೈವಿಧ್ಯಮಯ ಆಭರಣಗಳು, ಬಗೆಬಗೆಯ ಬಳೆಗಳು ಮಾರುಕಟ್ಟೆಯನ್ನೇ ಝಗಮಗಿಸಲಿವೆ. ವಿಶೇಷವಾಗಿ ಮಧ್ಯಮ ವರ್ಗದವರೆಲ್ಲರಿಗೂ ಈ ಮಾರ್ಕೆಟ್‌ ಅಕ್ಷರಶಃ ಜಾತ್ರೆಯೇ ಆಗಿರುತ್ತದೆ.

ಒಬ್ಬ ವ್ಯಕ್ತಿಗೆ, ಕುಟುಂಬಕ್ಕೆ ಏನೇನು ಬೇಕೋ ಅವೆಲ್ಲವೂ ಒಂದೇ ಕಡೆ ಸಿಗುವಾಗ ಜನಜಾತ್ರೆ ಸೇರಲು ಇಷ್ಟು ಸಾಕಲ್ಲ. ಐದು ರೂಪಾಯಿ ಕರವಸ್ತ್ರದಿಂದ ಹಿಡಿದು ₹ 10 ಸಾವಿರ ಬೆಲೆಯ ದಿರಿಸುಗಳು ಈ ಮಾರ್ಕೆಟ್‌ನಲ್ಲಿ ಲಭ್ಯ. ಎಷ್ಟೇ ಬಡವರೆಂದರೂ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಮಾಡುವುದು ಮುಸ್ಲಿಮರಲ್ಲಿ ರೂಢಿ. ಚಪ್ಪಲಿ, ಬಟ್ಟೆ, ಪಾತ್ರೆ, ಬ್ಯಾಗ್‌, ಬಳೆ, ಆಭರಣ, ಮೆಹಂದಿ, ಸಾಂಬಾರ ಪದಾರ್ಥ, ಸ್ಟೀಲ್‌ ಪಾತ್ರೆ, ಪ್ಲಾಸ್ಟಿಕ್‌ ಡಬ್ಬ, ಮಕ್ಕಳ ಆಟಿಕೆ ಎಲ್ಲವೂ ಕೊಂಚ ಅಗ್ಗವಾಗುವುದರಿಂದ ಎಲ್ಲ ವರ್ಗದ ಜನರೂ ಮುಗಿಬಿದ್ದು ಖರೀದಿಸುತ್ತಾರೆ. ಹುಬ್ಬಳ್ಳಿ ಮಾತ್ರವಲ್ಲದೆ ಹೊರಗಿನಿಂದಲೂ ಬಂದು ಖರೀದಿಸುವುದು ವಿಶೇಷ.

ನೂರಕ್ಕೆ ಮೂರು ಸೀರೆ, ಸಲ್ವಾರ್‌ ಕಮೀಜ್‌ ಮಾರಾಟ ಮಾಡುವಾತ ‘ಇಡ್ಲಿ, ಸಾಂಬಾರ, ವಡೇ... ಬರೇ ನೂರ್‌ ರೂಪಾಯಿ..’ ಎಂದು ಅರಚುತ್ತಿದ್ದರೆ ಎಲ್ಲಿದೆಯಪ್ಪ ಇಡ್ಲಿ ಸಾಂಬಾರ್‌ ಎಂದರೆ, ಚೂಡಿದಾರ ಸೆಟ್‌, ಸೀರೆ ರಾಶಿ ತೋರಿಸಿ ನಗುತ್ತಾನೆ. ಬೆಲೆ ಅಷ್ಟು ಅಗ್ಗ ಇರುವುದರಿಂದ ಮಾರಾಟಗಾರರು ಅದಕ್ಕೆ ಇಡ್ಲಿ, ಸಾಂಬಾರ್‌ ವಡಾ ಎಂದು ಹೆಸರು ಇಟ್ಟಿದ್ದಾರೆ!

ಮುಸ್ಲಿಮರಿಗೆ ಅತಿ ವಿಶೇಷವೆನಿಸುವ ಸಿರ್‌ಕುರ್ಮಾಕ್ಕೆ ಬೇಕಾಗುವ ಶಾವಿಗೆಯನ್ನು ಸೈಯದ್‌ ಮೆಹಬೂಬ್‌ ರಂಜಾನ್‌ಗೆಂದೇ ದೂರದ ಹೈದ್ರಾಬಾದಿನಿಂದ ತರಿಸುತ್ತಾರೆ. ಸ್ಥಳೀಯವಾಗಿ ಸಾಕಷ್ಟು ಬಗೆಯ ಶಾವಿಗೆ ಲಭ್ಯವಿದ್ದರೂ ಇವರು ಹೈದ್ರಾಬಾದಿನಿಂದ ತರಿಸುವ ಶಾವಿಗೆಗೆ ವಿಶೇಷ ಬೇಡಿಕೆ. ಈ ಹಬ್ಬಕ್ಕೆ ಬರೋಬ್ಬರಿ 4,500 ಕೆಜಿ ಶಾವಿಗೆ ತರಿಸಿ ದಾಸ್ತಾನು ಇಟ್ಟಿದ್ದಾರೆ. ಸೈಯದ್‌ ಸುಲೇಮಾನ್ ಅವರು ಖರ್ಜೂರ, ಡ್ರೈಪ್ರೂಟ್ಸ್‌, ಶಾವಿಗೆಯನ್ನು ಕಳೆದ 22 ವರ್ಷಗಳಿಂದ ಬಾಂಬೆಯಿಂದ ತರಿಸುತ್ತಿದ್ದು ವರ್ಷದಿಂದ ವರ್ಷಕ್ಕೆ ವ್ಯಾಪಾರ ಹೆಚ್ಚುತ್ತಲೇ ಸಾಗಿದೆ ಎನ್ನುತ್ತಾರೆ.

ದೆಹಲಿಯಿಂದ ತರಿಸಲಾದ ಪಾಕಿಸ್ತಾನಿ ಟೋಪಿಗಳನ್ನು ರಸ್ತೆ ಬದಿ ರಾಶಿ ಹಾಕಲಾಗಿದೆ. ಮುಸ್ಲಿಂ ಮಕ್ಕಳನ್ನು ವಿಶೇಷವಾಗಿ ಸೆಳೆಯುತ್ತಿರುವ ಈ ಟೋಪಿಯೊಂದರ ಬೆಲೆ 100 ರೂಪಾಯಿ. ಪಾಕಿಸ್ತಾನದಲ್ಲಿ ತಯಾರಾಗುವ ಟೋಪಿಗಳನ್ನು ಸಾವಿರ ಸಂಖ್ಯೆಯಲ್ಲಿ ತರಿಸಿಕೊಂಡು ಮಾರುತ್ತೇನೆ ಎನ್ನುತ್ತಾರೆ ವ್ಯಾಪಾರಿ ಮೆಹಮೂದ್‌.

ಬಾಂಬೆ, ಅಹಮದಾಬಾದ್‌ನಿಂದ ಮಹಿಳೆಯರ ಡ್ರೆಸ್‌ ತಂದು ಮಾರುವ ಜಾವೇದ್‌ ಈ ಹಬ್ಬದಲ್ಲಿ ₹ 20 ಲಕ್ಷ ಮೌಲ್ಯದ ಡ್ರೆಸ್‌ಗಳ ವ್ಯಾಪಾರ ಮಾಡುವುದಾಗಿ ಹೇಳುತ್ತಾರೆ. ‘ಪ್ರಧಾನಿ ಮೋದಿ ಹಾಕಿದ ಶೇ 12 ಜಿಎಸ್‌ಟಿ ನಮ್ಮ ವ್ಯಾಪಾರದ ಮೇಲೆ ಬರೆ ಎಳೆದಿದೆ’ ಎಂದು ಹೇಳಲು ಮರೆಯಲಿಲ್ಲ ಅವರು.

ಮಾರುಕಟ್ಟೆಯಲ್ಲಿ ಮಹಿಳೆಯರದೇ ಖರೀದಿ ಭರಾಟೆ ಜೋರು. ಮಧ್ಯಾಹ್ನದ ನಂತರ ನಿಧಾನವಾಗಿ ಮಕ್ಕಳೊಡಗೂಡಿ ಮಾರುಕಟ್ಟೆಯತ್ತ ದಾಪುಗಾಲಿಡುವ ಮಹಿಳೆಯರು, ಬಟ್ಟೆ, ಚಪ್ಪಲಿ, ಮೆಹಂದಿ, ಬಳೆ, ಆಭರಣ, ಮನೆಗೆ ಬೇಕಾಗುವ ಸಾಮಾನುಗಳನ್ನು ಗುಂಪುಗುಂಪಾಗಿ ಖರೀದಿಸುವಲ್ಲಿ ಮಗ್ನ. ಅವರೆಲ್ಲ ಖರೀದಿಸುವುದನ್ನೇ ಬೆಕ್ಕಸಬೆರಗಾಗಿ ನೋಡುತ್ತಿದ್ದ ನಮ್ಮನ್ನ ನೋಡಿ ನಕ್ಕು ಮಾತಿಗಿಳಿದ ಶಹಾ ಬಜಾರ್‌ ಕಮಿಟಿಯ ಸದಸ್ಯ ಮುಸ್ತಾಕ್‌ ಅಹಮ್ಮದ್‌ ಬ್ಯಾಳಿ, ಶಹಾ ಬಜಾರ್‌ನಲ್ಲಿ ಎ ಟು ಜಡ್‌ ಎಲ್ಲ ಸಿಗೋದ್ರಿಂದ ‘ಚೌಪಾಡಿ’ ಎಂಬ ಅಡ್ಡ ಹೆಸರಿದೆ ಎಂದರು. ವರ್ಷದಿಂದ ವರ್ಷಕ್ಕೆ ಶಹಾ ಬಜಾರ್‌ನ ರಂಜಾನ್‌ ಮಾರುಕಟ್ಟೆಯಲ್ಲಿ ವ್ಯಾಪಾರ ಏರುತ್ತಲೇ ಸಾಗಿರುವುದನ್ನು ಹೇಳಿದ ಅವರು ಅಲ್ಲಿನ ವಿಶೇಷತೆಯನ್ನು ಬಿಚ್ಚಿಟ್ಟರು.

ಒಟ್ಟು 230 ಅಂಗಡಿಗಳು ರಂಜಾನ್‌ ಹಬ್ಬಕ್ಕೆಂದೆ ವಿಶೇಷ ವ್ಯಾಪಾರ ನಡೆಸುತ್ತವೆ. ಬಳೆ ಅಂಗಡಿ, ಸೀರೆ, ಡ್ರೆಸ್‌ ಅಂಗಡಿಗಳಲ್ಲಿ ಪುರುಷ ಗ್ರಾಹಕರಿಗೆ ಪ್ರವೇಶ ನಿರ್ಬಂಧ ಮಾಡಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಪೊಲೀಸ್‌ ಇಲಾಖೆಯವರೂ ಹಬ್ಬದಲ್ಲಿ ಉತ್ತಮ ಸಹಕಾರ ನೀಡುತ್ತಿದ್ದು, ಇದೇ ಮೊದಲ ಬಾರಿಗೆ ಸುರಕ್ಷತೆಯ ದೃಷ್ಟಿಯಿಂದ ಶಹಾ ಬಾಜರ್‌ನ ಒಟ್ಟು 16 ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಹಾಕಿದ್ದು, ರಸ್ತೆ ಬದಿಯಲ್ಲೇ ದೊಡ್ಡ ಸ್ಕ್ರೀನ್‌ ಅಳವಡಿಸಲಾಗಿದೆ ಎಂದರು.

ಸಂಜೆ ನಂತರ ವಿದ್ಯುದ್ದೀಪಗಳ ಬೆಳಕಿನಲ್ಲಿ ಶಹಾ ಬಜಾರ್‌ ಇನ್ನಷ್ಟು ಜಗಮಗಿಸಲಿದೆ. ಹಬ್ಬಕ್ಕೆ ಒಂದು ವಾರವಿರುವಾಗ ಹುಬ್ಬಳ್ಳಿ–ಧಾರವಾಡ ಮಾತ್ರವಲ್ಲದೆ, ಪಕ್ಕದ ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗಳಿಂದಲೂ ಜನರು ತಮಡೋಪತಂಡವಾಗಿ ಬಂದು ಮಾರುಕಟ್ಟೆಯ ಝಲಕ್‌ಅನ್ನು ಹೆಚ್ಚಿಸುತ್ತಾರೆ. ರಾತ್ರಿ ಪೂರ್ತಿ ಖರೀದಿ ನಡೆಯುತ್ತಲೇ ಇರುತ್ತದೆ. ಶಹಾ ಬಜಾರ್‌ ಮಾತ್ರವಲ್ಲ; ಹುಬ್ಬಳ್ಳಿಯ ಎಲ್ಲ ಮಾಲ್‌ಗಳು ರಮ್ಜಾನ್‌ಗಾಗಿ ಸಜ್ಜುಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry