‘ಕುಲುಮೆ ಉರಿದಷ್ಟು ದಿನ ನಮ್ಮ ಹೊಟ್ಟೆ ತುಂಬುತೈತೆ’

7

‘ಕುಲುಮೆ ಉರಿದಷ್ಟು ದಿನ ನಮ್ಮ ಹೊಟ್ಟೆ ತುಂಬುತೈತೆ’

Published:
Updated:
‘ಕುಲುಮೆ ಉರಿದಷ್ಟು ದಿನ ನಮ್ಮ ಹೊಟ್ಟೆ ತುಂಬುತೈತೆ’

ಹೆಸ್ರು ಪ್ರಸನ್ನ ಆಚಾರಿ ಅಂತ. ನನ್ನ ಮೂಲ ಇಲ್ಲೆ ಹೊಸಕೋಟೆ ತಾಲ್ಲೂಕಿನ ಸಮೇತಹಳ್ಳಿ. ನಮ್ದು ವಿಶ್ವಕರ್ಮ ಸಮುದಾಯ. ಹಾಗಾಗಿ ಈ ಕುಲುಮೆ ಕೆಲಸ ಹಿರಿಯರಿಂದ ನನ್ನ ಕೈಗೆ ಬಂತು. ಮೊದಲು ಊರಲ್ಲೆ ಈ ಕೆಲ್ಸಾ ಮಾಡ್ತಿದ್ದೆ. ಎರಡು ವರ್ಷದಿಂದ ಚನ್ನಸಂದ್ರದ ತಿರುಮಶೆಟ್ಟಿಹಳ್ಳಿ ಕ್ರಾಸ್‌ನಲ್ಲಿ ಕುಲುಮೆ ನಡೆಸ್ತಾ ಇದಿನಿ.

ನಮ್‌ ಹಿರೀಕರದು ಅಷ್ಟೇನು ಜಮೀನು ಇರಲಿಲ್ಲ. ಈ ಕುಲವೃತ್ತಿಯಿಂದಲೇ ಜೀವನ ನಡೆಸುತ್ತಿದ್ರು. ಜತೆಗೆ ಬೇರೆಯವರ ಜಮೀನನ್ನ ಗುತ್ತಿಗೆ ಪಡೆದು, ಮನೆಗೆ ಒಂದಿಷ್ಟು ರಾಗಿ, ಭತ್ತ ಬೆಳೆದುಕೊಳ್ಳುತ್ತಿದ್ರು. ನಾನು ಆರನೇ ಕ್ಲಾಸ್‌ವರೆಗೂ ಸ್ಕೂಲ್ಗೆ ಹೋದೆ. ಆಮೇಲೆ ಬಿಟ್ಟು, ಅಪ್ಪನ ಜತೆ ಹೊಲ, ಕುಲುಮೆ ಕೆಲ್ಸಾ ಕಲಿಯಲು ಶುರು ಮಾಡ್ದೆ. ಇಪ್ಪತ್ತು– ಇಪ್ಪತೈದು ವರ್ಷದವನಾಗುವ ಹೊತ್ತಿಗೆ ಕುಲುಮೆ ಕೆಲಸದಲ್ಲಿ ನನ್ನ ಕೈಗಳು ಸ್ವಲ್ಪ ಪಳಗಿದವು. ನಮ್ಮ ತಂದೆಯವರು ಕುಲುಮೆಯಿಂದ ದೂರಾದ ನಂತರ ಈ ಕೆಲ್ಸಾ ನನಗೆ ಕಾಯಂ ಆಯಿತು.

ಮೊದ್ಲು ವ್ಯವಸಾಯಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಒಂದು ಮನೆಗೆ ಮಾಡಿಕೊಟ್ಟರೆ ವರ್ಷಕ್ಕೆ ಮೂವತ್ತು ಸೇರು ರಾಗಿ ಹಾಕ್ತಿದ್ರು. ಜತೆಗೆ ತರಕಾರಿ, ಕಾಳುಗಳನ್ನು ನೀಡ್ತಿದ್ರು. ಈ ಸಿಟಿ ಬೆಳದಂಗೆ ವ್ಯವಸಾಯ ಮಾಡೋರು ಕಡಿಮೆ ಆದ್ರು. ಕ್ರಮೇಣ ಈ ಪದ್ಧತಿಯೇ ನಿಂತು ಹೋಯ್ತು. ಮೊದ್ಲು ಗಾಳಿ ಊದಿ, ಇದ್ಲು ಉರಿಸಿ, ಕಬ್ಬಿಣ ಕಾಯಿಸಲು ‘ತಿತಿ’ ಅಂತ ಟ್ಯೂಬ್‌ಮೆಷಿನ್ ಇತ್ತು. ನಮ್‌ ರಾಜ್‌ಕುಮಾರ್‌ ಅವರ ‘ದೂರದ ಬೆಟ್ಟ’ ಸಿನಿಮಾದ ಹಾಡಿನ್ಯಾಗೆ ಐತೆ ನೋಡಿ ಹಳೇಕಾಲದ ಆ ಟ್ಯೂಬ್‌ಮೆಷಿನ್‌. ಅದು ಹೋಗಿ ಕೈಯಿಂದ ತಿರುಗಿಸೊ ಚರಕ ಬಂತು. ಈಗಂತೂ ಚರಕದ ಜಾಗಕ್ಕೆ ಕರೆಂಟಿನಿಂದ ಓಡೊ ಏರ್‌ ಕಂಪ್ರೈಸರ್‌ ಕೂಡಿಸಿದ್ದೀನಿ. ಕರೆಂಟ್‌ ಇಲ್ಲಂದ್ರೆ ಚರಕದಿಂದಲೇ ಕೆಲಸ ನಡಸ್ತೇನೆ.

ವ್ಯವಸಾಯಕ್ಕೆ ಬೇಕಾದ ಎಲ್ಲ ಉಪಕರಣಗಳನ್ನು ರೆಡಿ ಮಾಡ್ತೇನೆ. ಕುಡುಗೋಲು, ಮಚ್ಚು, ಕೊಡಲಿ, ಅಗೆಯೊ ಗುದ್ದಲಿ, ಪಿಕಾಸಿ, ಗಡಾರಿ, ಸಲಿಕೆ, ಬಾಚಿ, ಉಳಿಗಳು, ನೇಗಿಲು ಚಿಪ್ಪುಗಳು, ಕಳೆ ತೆಗೆಯೊ ಬರವಾರೆಗಳನ್ನು ಸಿದ್ಧಪಡಿಸ್ತೇನೆ .

ಮೊದಲೆಲ್ಲಾ ಎತ್ತಿನ ಗಾಡಿಗೆ ಕಟ್ಟಿಗೆಯ ಚಕ್ರಗಳು ಇರೋವು. ಅವುಗಳ ಸುತ್ತ ಇರುವ ಕಬ್ಬಿಣದ ಹಳಿ ಬಿಚ್ಚಿದರೆ, ಪಟ್ಟಾ ಕಟ್ಟಿಕೊಡುತ್ತಿದ್ದೆ. ಆ ಗಾಡಿಗಳು ಈಗಿಲ್ಲ ಬಿಡಿ.

ಮಾಂಸ ಕತ್ತರಿಸುವ ಚೂರಿಗಳನ್ನು, ಸಿಲಿಂಗ್‌ ಚಿಪ್ಪಿಂಗ್‌ ಮಾಡುವ ಉಳಿಗಳನ್ನು ಶಾರ್ಪ್‌ ಮಾಡಿಕೊಳ್ಳಲು ಗಿರಾಕಿಗಳು ಬರ್ತಾರೆ.  ಕುಡುಗೋಲು ತಟ್ಟಿ ಕೊಡೋದಿದ್ರೆ ಹತ್ತು ರೂಪಾಯಿ ತಗೊತೆನೆ. ದೊಡ್ಡ ಐಟಂ ಇದ್ರೆ ಜಾಸ್ತಿ ರೇಟು ಹೇಳ್ತೆನೆ.

ಬೆಳಿಗ್ಗೆ ಎಂಟೂವರೆ ಹೊತ್ತಿಗೆ ಕೆಲ್ಸಾ ಶುರು ಮಾಡ್ತೇನೆ. ಗಿರಾಕಿಗಳು ಬಂದ್ರೆ ಸಂಜೆ ಆರು ಗಂಟೆವರೆಗೂ ನನ್ನ ಕುಲುಮೆ ಕೆಲ್ಸಾ ನಡೆಯುತ್ತೆ. ಈ ಕುಲುಮೆ ಹಾಕಿರೊ ಜಾಗಾನೂ ನಂದಲ್ಲ. ಪಟೇಲ್‌ ಮುನಿಶಾಮಪ್ಪನವರು ದೊಡ್‌ಮನಸ್‌ ಮಾಡಿ ಈ ಒಂದು ಗುಂಟೆ ಜಾಗಾನಾ ಕುಲುಮೆಗೆಂದು ಟೆಂಪ್ರುವರಿಗೆ ಕೊಟ್ಟವ್ರೆ.

ಕೆಲ್ಸಕ್ಕೆ ಬಳಸೊ ಚರಕ, ಇಕ್ಕಳ, ಸುತ್ತಿಗೆ, ಶಮಟಿಗೆ, ಅಡಗಲ್‌, ಅರಗಳಿಗೆ ಡ್ಯಾಮೆಜ್ ಆದ್ರೆ, ಅವುಗಳನ್ನ ಸರಿಪಡಿಸೊಕೆ ಖರ್ಚು ಆಗುತ್ತೆ. ಈಗಂತೂ ಒಂದು ಗೋಣಿಚೀಲ ಇದ್ಲುಗೆ ಎಂಟುನೂರು ರೂಪಾಯಿ ಆಗೈತೆ.

ಈ ಕೆಲ್ಸಾ ಮಾಡಕಾಲಕ್ಕೆ ಆಗಿರುವ ಸಣ್ಣಪುಟ್ಟ ಸುಟ್ಟ ಗಾಯಗಳಿಗೆ ಲೆಕ್ಕಾನೇ ಇಲ್ಲ. ಅವು ಒಂದೆರಡು ವಾರಗಳಲ್ಲೇ ವಾಸಿಯಾಗುತ್ತವೆ. ಕೆಲವರು ಈ ರೈಲ್ವೆಯ ಕಬ್ಬಿಣ ಕದ್ದು ತಂದು ಮೆಟೆರಿಯಲ್‌ ಮಾಡಿ ಕೊಡು ಅಂತ ಕೇಳಿದ್ದು ಉಂಟು. ನಾನಂತೂ ಕದ್ದ ಮಾಲ್‌ನ ತಟ್ಟೊ ಕೆಲ್ಸಾ ಈವರೆಗೂ ಮಾಡಿಲ್ಲ. ಬಂದೊರ್ಗೆ ಬುದ್ಧಿ ಹೇಳಿ ವಾಪಸ್‌ ಕಳಿಸಿದ್ದೇನೆ.

ಹೊಟ್ಟೆಬಟ್ಟೆಗಾಗಿ ಈ ಕೆಲ್ಸ ಕಲೀದೆ ಬೇರೆ ದಾರಿಯೇ ಇರಲಿಲ್ಲ. ಹಂಗಾಗಿ ಆಸಕ್ತಿಯಿಂದ ಕಲಿತು ಜೀವನಕ್ಕೊಂದು ದಾರಿ ಮಾಡಿಕೊಂಡೆ. ಸುಮಾರು ಇಪ್ಪತೈದ್ನೆ ವಯಸ್ಸಿಗೆನೆ ಮದುವೆ ಆಯ್ತು. ಹೆಂಡತಿ ನಾಗರತ್ನಮ್ಮ ಜತೆ ಸಂಸಾರ ಸಾಗಿಸ್ತಾ ಮೂರು ಗಂಡು ಮಕ್ಳು ಆದರು. ಅವರು ಒಂದಿಷ್ಟು ಓದಿಕೊಂಡರು. ಇಬ್ರು ಪ್ರಾವೆಟ್‌ ಕಂಪನಿಲಿ ಕೆಲ್ಸಾ ಮಾಡ್ತವ್ರೆ. ಒಬ್ಬ ಡೈವರ್‌ ಆಗವ್ನೆ.

ಕಾಳಕಾದೇವಿ ಆಗಿರೊ ಈ ಕುಲುಮೆ ಮತ್ತು ಹತ್ತು ಗುಂಟೆಯಲ್ಲಿ ಬೆಳೆದಿರೊ ನೀಲಗಿರಿ ನನಗಿರುವ ಆಸ್ತಿ. ಈ ಕುಲುಮೆಲಿ ಬೆಂಕಿ ಉರಿದಷ್ಟು ದಿನ, ನಮ್ಮ ಮನೆ ಮಂದಿಯ ಹೊಟ್ಟೆ ತುಂಬೈತೆ. ನನ್‌ ಮೈ–ಕೈನೂ ಗಟ್‌ಮುಟ್ಟಾಗವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry