‘ವಿದೇಶ ಪ್ರವಾಸದಿಂದ ಭಾರತ ಬಲಿಷ್ಠವಾಗದು’

7
ನಿರೀಕ್ಷೆ ಹುಸಿಯಾಗಿಸಿದ ಕೇಂದ್ರ: ಜೈನಮುನಿ ಚಿನ್ಮಯಸಾಗರ ಮಹಾರಾಜ

‘ವಿದೇಶ ಪ್ರವಾಸದಿಂದ ಭಾರತ ಬಲಿಷ್ಠವಾಗದು’

Published:
Updated:
‘ವಿದೇಶ ಪ್ರವಾಸದಿಂದ ಭಾರತ ಬಲಿಷ್ಠವಾಗದು’

ಬಾಗಲಕೋಟೆ: ‘ಪ್ರಧಾನಿ ನರೇಂದ್ರ ಮೋದಿ, ವಿದೇಶ ಪ್ರವಾಸದಿಂದ ಭಾರತ ಬಲಿಷ್ಠವಾಗುತ್ತದೆ ಎನ್ನುವ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ, ಗ್ರಾಮೀಣ ಭಾರತದ ದರ್ಶನ ಮಾಡದ ಹೊರತು ದೇಶದ ಆರ್ಥಿಕ ಸುಧಾರಣೆ ಅಸಾಧ್ಯ’ ಎಂದು ಜೈನಮುನಿ ಚಿನ್ಮಯಸಾಗರ ಮಹಾರಾಜ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ವಿಕಾಸ ಮತ್ತು ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇವೆರಡನ್ನೂ ಸರಿಯಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

‘ದೇಶದ ಜನ ಅವರ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡಿದ್ದರು. ಸದ್ಯದ ಸ್ಥಿತಿ ನೋಡಿದರೆ ಜನ ಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಆರ್ಥಿಕ ಸುಧಾರಣೆ- ಹಾಗೂ ಸದೃಢತೆಗಾಗಿ ದೇಶದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಬದಲಾಗಿ ವಿದೇಶ ನೀತಿ ಅನುಸರಿಸಿದರು’ ಎಂದು ಕುಟುಕಿದರು.

‘ಕೇಂದ್ರ ಸರ್ಕಾರದ ಮೇಲೆ ಅಪಾರ ನಿರೀಕ್ಷೆ ಇತ್ತು. ಆದರೆ ಕಳೆದ ನಾಲ್ಕು ವರ್ಷದ ಅವರ ಆಡಳಿತ ತೃಪ್ತಿ ತಂದಿಲ್ಲ. ದೇಶವಾಸಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಕಾಣುತ್ತಿಲ್ಲ. ಎಲ್ಲ ಸರ್ಕಾರಗಳಂತೆ ಇದು ಕೂಡ ಗಾಂಭೀರ್ಯವಿಲ್ಲದೇ ಹೆಜ್ಜೆ ಹಾಕುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ದೇಶದ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ನಂತರ ಜನರು ಮೋದಿ ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಅವರು ಅದನ್ನು ಹುಸಿಗೊಳಿಸಿದ್ದಾರೆ’ ಎಂದರು.

‘ಯಾವ ಉದ್ದೇಶದೊಂದಿಗೆ ಇವರು ದೇಶ ಮುನ್ನಡೆಸುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಜಿಎಸ್‌ಟಿ, ನೋಟ್‌ಬ್ಯಾನ್‌ನಿಂದ ಮುಂದೆ ಏನಾಗುತ್ತದೆ ಎಂಬುದನ್ನು ಬಿಡಿಸಿ ಹೇಳುತ್ತಿಲ್ಲ. ಅಧಿಕಾರ ಹಾಗೂ ಹಣದ ಹಿಂದೆ ಬಿದ್ದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಳಗಿನ ಸತ್ಯ ಕೂಡ ಬಹಿರಂಗಗೊಳ್ಳುತ್ತಿಲ್ಲ. ಜನರ ತಾಳ್ಮೆ, ಸಹಿಷ್ಣುತೆ ನಿಜಕ್ಕೂ ಮೆಚ್ಚುವಂಥದ್ದು. ಎಷ್ಟೇ ಕಷ್ಟವಾದರೂ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ’ ಎಂದ ಚಿನ್ಮಯಸಾಗರ ಮುನಿಗಳು, ರಾಜನೀತಿ ನೇತಾರರು ಈ ಬಗ್ಗೆ ಗಮನ ಹರಿಸಬೇಕು ಎಂದರು.

‘ಪ್ರತ್ಯೇಕ ಧರ್ಮದ ಅವಶ್ಯಕತೆ ಇರಲಿಲ್ಲ’

‘ಸದ್ಯದ ಸ್ಥಿತಿಗತಿಗಳನ್ನು ನೋಡಿದರೆ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಅವಶ್ಯಕತೆ ಇರಲಿಲ್ಲ ಎನಿಸುತ್ತದೆ’ ಎಂದು ಚಿನ್ಮಯ ಸಾಗರ ಮಹಾರಾಜರು ಅಭಿಪ್ರಾಯಪಟ್ಟರು.

‘ಕೆಲವರು ತಮ್ಮ ಸ್ವಾರ್ಥ ಹಾಗೂ ಸ್ವಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗುತ್ತಿದೆ. ಹೋರಾಟಕ್ಕೆ ಇಳಿದವರು ತಮ್ಮ ನಿಲುವಿನಿಂದ ಮರಳಿ ಬರುತ್ತಿದ್ದಾರೆ. ಬೇಡಿಕೆ, ಹೋರಾಟದಲ್ಲಿ ಬದ್ಧತೆ ಇಲ್ಲದೇ ಹೋದಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry