7
‘ಪ್ರಭಾವಿ ಒತ್ತುವರಿದಾರರ ಜಾತಕ ನನ್ನ ಬಳಿ ಇದೆ’ ಎಂದು ಗುಡುಗಿದ್ದ ಎಚ್‌ಡಿಕೆ * ಭೂಗಳ್ಳರನ್ನು ಶಿಕ್ಷಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದ ಕಾಂಗ್ರೆಸ್ ಸರ್ಕಾರ

ಭೂಗಳ್ಳರ ಮೇಲೆ ಕ್ರಮ–ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆ

Published:
Updated:
ಭೂಗಳ್ಳರ ಮೇಲೆ ಕ್ರಮ–ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆ

ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದ ಎರಡು ವರದಿಗಳ ಮೇಲೆ ವರ್ಷಗಳಿಂದ ಕೂತಿರುವ ದೂಳು ಕೊಡವಿ ಭೂಗಳ್ಳ

ರನ್ನು ಶಿಕ್ಷಿಸುವ ಕೆಲಸಕ್ಕೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಮುಂದಾಗಲಿದೆಯೇ? ಹಾವಿನ ಹುತ್ತಕ್ಕೆ ‘ಕೈ’ ಹಾಕಲಿರುವ ಕೆಲಸ ಮಾಡಲಿದೆಯೇ?

ಇಂತಹದೊಂದು ಪ್ರಶ್ನೆ ಈಗ ಎದುರಾಗಿದೆ. ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಕುರಿತು ಎ.ಟಿ.ರಾಮಸ್ವಾಮಿ ನೇತೃತ್ವದ ವಿಧಾನಮಂಡಲದ ಜಂಟಿ ಸದನ ಸಮಿತಿ 2007ರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇಡೀ ರಾಜ್ಯದಲ್ಲಿನ ಸರ್ಕಾರಿ ಜಮೀನು ಒತ್ತುವರಿ ಪತ್ತೆ ಸಲುವಾಗಿ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ನೇತೃತ್ವದಲ್ಲಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ರಚಿಸ

ಲಾಗಿತ್ತು. ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೂ ಮೊದಲೇ ಅದು ಬಹಿರಂಗವಾದ ಕಾರಣಕ್ಕೆ ಸರ್ಕಾರ ಅದನ್ನು ಅಧಿಕೃತವಾಗಿ ಸ್ವೀಕರಿಸಿರಲಿಲ್ಲ.

ರಾಜಧಾನಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಒಟ್ಟು 33,877 ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ ಎಂಬುದನ್ನು ರಾಮಸ್ವಾಮಿ ನೇತೃತ್ವದ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿತ್ತು. ರಾಜ್ಯದಲ್ಲಿ ₹ 1.95 ಲಕ್ಷ ಕೋಟಿ ಮೊತ್ತದ 11 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಬಾಲಸುಬ್ರಮಣಿಯನ್ ನೇತೃತ್ವದ ಸಮಿತಿಯು ವರದಿಯಲ್ಲಿ ತಿಳಿಸಿತ್ತು. 15 ಲಕ್ಷ ಭೂಕಬಳಿಕೆದಾರರನ್ನು ಸಮಿತಿ ಗುರುತಿಸಿತ್ತು. ಈ ಎರಡೂ ವರದಿಗಳನ್ನು ಅನುಷ್ಠಾನಗೊಳಿಸಿದರೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರಲಿದೆ. ಆದರೆ, ಈಗಿನ ಸನ್ನಿವೇಶದಲ್ಲಿ ಇದು ಕಾರ್ಯಸಾಧ್ಯವೇ?

ರಾಜ್ಯದಲ್ಲಿ ಒಂದು ಗುಂಟೆ ಒತ್ತುವರಿ ಮಾಡಿದವರೂ ಇದ್ದಾರೆ. ನೂರಾರು ಎಕರೆ ನುಂಗಿ ನೀರು ಕುಡಿದ ಪ್ರಭಾವಿಗಳೂ  ಇದ್ದಾರೆ. ಬಡವರು ಸೂರಿಗಾಗಿ ಸರ್ಕಾರಿ ಭೂಮಿಗೆ ಬೇಲಿ ಹಾಕಿದ್ದರೆ, ಬಲಾಢ್ಯರು ‘ಸಾಮ್ರಾಜ್ಯ’ ವಿಸ್ತರಣೆಗಾಗಿ ಸರ್ಕಾರಿ ಭೂಮಿ ಮೇಲೆ ಕಾಕದೃಷ್ಟಿ ಬೀರಿದ್ದಾರೆ. ಭೂಕಬಳಿಕೆ ಮಾಡಿರುವ ರಾಜಕಾರಣಿಗಳ ಸಂಖ್ಯೆಯೂ ಕಡಿಮೆ ಇಲ್ಲ. ಜನಪ್ರತಿನಿಧಿಗಳ ಎಡಬಲಗಳಲ್ಲಿ ಕಾಣಿಸಿಕೊಳ್ಳುವವರು, ಹಿಂಬಾಲಕರು ಈ ವಿಷಯದಲ್ಲಿ ಪ್ರಚಂಡರು. ರಾಜಕೀಯ ಪಕ್ಷಗಳಿಗೆ ಸಂಪನ್ಮೂಲದ ಮೂಲಗಳಾಗಿರುವ ಅನೇಕ ವ್ಯಕ್ತಿಗಳ ಹೆಸರು ಈ ವಿಷಯದಲ್ಲಿ ತಳಕು ಹಾಕಿಕೊಂಡಿದೆ. ಹಲವು ರಿಯಲ್‌ ಎಸ್ಟೇಟ್‌ ಕುಳಗಳು ಈಗ ಶಾಸನ ಸಭೆಯಲ್ಲೇ ಇದ್ದಾರೆ. ‘ತೆನೆ ಹೊತ್ತ ಮಹಿಳೆ’, ‘ಕಮಲ ಹಿಡಿದವರು’ ಹಾಗೂ ‘ಕೈ’ ಪಾಳಯದ ಕೆಲವು ನಾಯಕರು ಈ ಹಿನ್ನೆಲೆಯಿಂದ ಬಂದವರೇ ಎಂಬ ಆರೋಪಗಳೂ ಇವೆ. ಆದರೆ, ‘ದೋಸ್ತಿ’ಗಳು ಈಗ ಹಾವಿನ ಹೆಡೆಯಡಿ ಕುಳಿತು ಸರ್ಕಾರ ನಡೆಸುತ್ತಿದ್ದಾರೆ!

ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಕಾಂಗ್ರೆಸ್‌ ನಾಯಕರು ಹಾಗೂ ಕುಮಾರಸ್ವಾಮಿ ಅವರು ಹಲವು ಸಲ ಬಹಿರಂಗವಾಗಿ ಕಚ್ಚಾಡಿಕೊಂಡಿದ್ದರು. ‘ಪ್ರಭಾವಿ ಒತ್ತುವರಿದಾರರ ಜಾತಕ ನನ್ನ ಬಳಿ ಇದೆ’ ಎಂದು ಕುಮಾರಸ್ವಾಮಿ ಗುಡುಗಿದ್ದರು. ಆಗ ಹಾವು– ಮುಂಗುಸಿಗಳಂತೆ ಜಗಳವಾಡಿದ್ದವರು ಈಗ ಒಟ್ಟಾಗಿದ್ದಾರೆ. ದೋಸ್ತಿ ಸರ್ಕಾರದಲ್ಲಿರುವ ಬಲಾಢ್ಯ ಸಚಿವರು ಇದಕ್ಕೆ ಅವಕಾಶ ನೀಡುವರೇ? ಸಚಿವ ಸಂಪುಟದ ಸಹೋದ್ಯೋಗಿಗಳನ್ನೇ ಎದುರು ಹಾಕಿಕೊಂಡು ಭೂಗಳ್ಳರ ಮೇಲೆ ಚಾಟಿ ಬೀಸುವಂತಹ ಛಾತಿಯನ್ನು ಕುಮಾರಸ್ವಾಮಿ ತೋರುವರೇ ಎಂಬುದು ಯಕ್ಷ ಪ್ರಶ್ನೆ.

ಬೆಂಗಳೂರಿನ ಒತ್ತುವರಿ ಬಗ್ಗೆ ಇಂಚಿಂಚು ಅಧ್ಯಯನ ಮಾಡಿ ಯಾವುದೇ ಮುಲಾಜಿಗೆ ಬಗ್ಗದೇ ವರದಿ ಕೊಟ್ಟ ರಾಮಸ್ವಾಮಿ ಮತ್ತೆ ಶಾಸನ ಸಭೆಗೆ ಬಂದಿದ್ದಾರೆ. ‘ಈ ಸದನದಲ್ಲಿ ನಾನು ಸಾಕಷ್ಟು ಮಾತನಾಡಲು ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರ ಮಾತಿಗೆ ಕಿವಿಗೊಟ್ಟು ಮುನ್ನಡೆಯುವರೇ? 

ಬಾಲಸುಬ್ರಮಣಿಯನ್‌ ವರದಿ ಜಾರಿಗೆ ಆಗ್ರಹಿಸಿ ಹಲವು ಹೋರಾಟಗಳು ನಡೆದಿವೆ. ಆದರೆ, ಇದನ್ನು ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ. ಒಂದು ವೇಳೆ ಗಂಭೀರವಾಗಿ ಪರಿಗಣಿಸಿದರೆ ಮತ ಬುಟ್ಟಿಗೆ ಕೊಡಲಿಯೇಟು ಬೀಳುತ್ತದೆ ಎಂಬ ಭಯ. ‘ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸೇರಿದ ಲಕ್ಷಾಂತರ ಎಕರೆ ಜಮೀನು ಒತ್ತುವರಿಯಾಗಿದೆ. ನಗರ ಪ್ರದೇಶದಲ್ಲಿ ಐಟಿ ಪಾರ್ಕ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲಾಗುತ್ತಿದೆ. ಒತ್ತುವರಿಯಲ್ಲಿ ಪಾಲುದಾರರಾದ ಪ್ರತಿಯೊಬ್ಬರ ಕುರಿತು ವಿವರಗಳು ವರದಿಯಲ್ಲಿವೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿ ಸಮಾಜ ಪರಿವರ್ತನ ಟ್ರಸ್ಟ್‌ನ ಎಸ್‌.ಆರ್.ಹಿರೇಮಠ ಅವರು 2013ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ‘ಇದು ಕರ್ನಾಟಕಕ್ಕೆ ಸೀಮಿತವಾದ ಪ್ರಕರಣ. ಇದನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಿ’ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆ ಬಳಿಕ ಹಿರೇಮಠ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿ 2017ರ ವರೆಗೆ ವಿಚಾರಣೆ ನಡೆದಿತ್ತು. ಆ ಬಳಿಕ ಅದನ್ನು ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು. ಅಲ್ಲಿ ವಿಚಾರಣೆ ಮುಂದುವರಿದಿದೆ.

ಕಂದಾಯ ಇಲಾಖೆಯ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಕಾರ್ಯಾಚರಣೆ ನಡೆಸುತ್ತಾರೆ. ಆಗ ಅವರ ಕಣ್ಣಿಗೆ ಬೀಳುವುದು ಸಣ್ಣಪುಟ್ಟ ಒತ್ತುವರಿದಾರರು. ತೆರವುಗೊಳಿಸಿದ ಜಾಗದಲ್ಲಿ ತಂತಿ ಬೇಲಿ ಹಾಕುತ್ತಾರೆ ಹಾಗೂ ಸರ್ಕಾರಿ ಭೂಮಿ ಎಂಬ ಫಲಕ ಹಾಕುತ್ತಾರೆ. ನಾಲ್ಕು ಮಳೆಗೆ ಈ ಫಲಕ ಬಿದ್ದು ಹೋಗುತ್ತದೆ. ಆರು ತಿಂಗಳಲ್ಲಿ ಈ ಬೇಲಿಯನ್ನು ಜನರು ಕಿತ್ತುಕೊಂಡು ಹೋಗುತ್ತಾರೆ. ಮತ್ತೆ ಆ ಜಾಗ ಒತ್ತುವರಿಯಾಗುತ್ತದೆ. ಸರ್ಕಾರಿ ಕಡತಗಳಲ್ಲಿ ‘ಒತ್ತುವರಿ ತೆರವು ಮಾಡಲಾಗಿದೆ’ ಎಂಬ ಟಿಪ್ಪಣಿ ಇರುತ್ತದೆ ಅಷ್ಟೇ!

ಕೆಲವು ಅಧಿಕಾರಿಗಳು ಧೈರ್ಯ ತೋರಿ ಪ್ರಭಾವಿಗಳ ಮೇಲೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದುಂಟು. ಅಂತಹ ಸಂದರ್ಭಗಳಲ್ಲಿ ಅವರ ಉತ್ಸಾಹ ಉಡುಗಿಸುವ ಅನೇಕ ವಿದ್ಯಮಾನಗಳು ಸಂಭವಿಸಿವೆ. ಒಂದೋ ಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರಿಂದ ಒತ್ತಡ ಬಂದಿರುತ್ತದೆ, ಇಲ್ಲವೇ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿರುತ್ತದೆ.

ಭೂಗಳ್ಳರನ್ನು ಶಿಕ್ಷಿಸಲು ಕಾಂಗ್ರೆಸ್‌ ಸರ್ಕಾರ 2016ರಲ್ಲಿ ಭೂಕಬಳಿಕೆ ವಿಶೇಷ ನ್ಯಾಯಾಲಯ ಸ್ಥಾಪಿಸಿತು. ಭೂಕಬಳಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ ಪ್ರಕರಣಗಳನ್ನು ವರ್ಗಾಯಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಮೊದಲ ಆರು ತಿಂಗಳಲ್ಲಿ ನ್ಯಾಯಾಲಯಕ್ಕೆ ಏಳು ಪ್ರಕರಣಗಳಷ್ಟೇ ವರ್ಗವಾಗಿದ್ದವು. ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೋರ್ಟ್‌ ವಾರಂಟ್‌ ನೀಡಿತು. ಆ ಬಳಿಕ ಅಧಿಕಾರಿಗಳು ಸ್ವಲ್ಪ ಚುರುಕಾದರು. ಈಗ ನ್ಯಾಯಾಲಯದಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆದರೆ, ಅಲ್ಲಿರುವುದು ಬೆರಳೆಣಿಕೆಯ ಸಿಬ್ಬಂದಿ. ಅಲ್ಲಿನ ನೌಕರರಿಗೆ ಹಲವು ಸಲ ಸರಿಯಾಗಿ ವೇತನವೂ ಪಾವತಿಯಾಗಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಅವರು ನಿರಂತರ ಕಾರ್ಯಾಚರಣೆಗಳನ್ನು ನಡೆಸಿದ್ದರು. 4 ವರ್ಷಗಳಲ್ಲೇ 16 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು.

ರಾಮಸ್ವಾಮಿ ವರದಿಯಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಜಾಗ ಒತ್ತುವರಿ ತೆರವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪ್ರಶಂಸೆ ವ್ಯಕ್ತಪಡಿಸಿದ್ದರು. ‘ಶಂಕರ್‌ ಅವರು ಒತ್ತುವರಿ ತೆರವು ಮಾಡಿದ್ದು ನಿಜ. ಆದರೆ, ನಾನು ಹೇಳಿದ್ದು ಒಂದು, ಅವರು ಮಾಡಿದ್ದು ಇನ್ನೊಂದು. ಪ್ರಭಾವಿಗಳ ಒತ್ತುವರಿ ತೆರವಿಗೆ ಜಾಣ ಮೌನ ತೋರಿದ್ದರು’ ಎಂದು ಎ.ಟಿ.ರಾಮಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಲಸುಬ್ರಮಣಿಯನ್‌ ವರದಿ ಪ್ರಕಾರ ಈಗಾಗಲೇ 2.5 ಲಕ್ಷ ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಸರ್ಕಾರಿ ಜಮೀನಿನಲ್ಲಿ ಯಾವುದೇ ವ್ಯಕ್ತಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರೆ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94 ಎ ಪ್ರಕಾರ ನಮೂನೆ 50ರಲ್ಲಿ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ಇದೆ. ಇಂತಹ ಪ್ರಕರಣಗಳು 7.5 ಲಕ್ಷ ಇವೆ. ಉಳಿದ ಒತ್ತುವರಿ ತೆರವು ಮಾಡಬೇಕಿದೆ’ ಎಂಬುದು ಕಂದಾಯ ಇಲಾಖೆ ಅಧಿಕಾರಿಗಳ ಉತ್ತರ.

ವಿಭಾಗವಾರು ಒತ್ತುವರಿ ಪ್ರಮಾಣ

ವಿಭಾಗ; ಒತ್ತುವರಿ (ಎಕರೆಗಳಲ್ಲಿ) ;ಕಂದಾಯ; ಅರಣ್ಯ

ಬೆಂಗಳೂರು; 3,01,708; 54,696

ಮೈಸೂರು; 4,47,352; 56,032

ಬೆಳಗಾವಿ; 49,835; 40,966

ಕಲಬುರ್ಗಿ; 1,24,886; 14,202

*ಮೂಲ: ಬಾಲಸುಬ್ರಮಣಿಯನ್‌ ವರದಿ

ಅಂದು ದಾಖಲೆ ಮಾತು–ಇಂದು?

‘ನನ್ನ ತಾಕತ್ತನ್ನೇ ಪ್ರಶ್ನೆ ಮಾಡ್ತೀರಾ, ನಿಮ್ಮ ದಾಖಲೆಯನ್ನೇ ತರ್ತೀನಿ ಇರಿ’

‘ಓಹ್‌, ಅದು ಏನೇನ್‌ ತೆಗೆದುಕೊಂಡು ಬರ್ತೀರೋ ಬರ್ರಿ, ನಾನು ಎಲ್ಲದಕ್ಕೂ ರೆಡಿ’

–ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನಡುವೆ 2015ರ ಏಪ್ರಿಲ್‌ 20ರಂದು ವಿಶೇಷ ಅಧಿವೇಶನದಲ್ಲಿ ನಡೆದಿದ್ದ ಮಾತಿನ ಸಮರದ ಝಲಕ್‌ ಇದು.

ಬಿಬಿಎಂಪಿ ವಿಭಜನೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ, ‘ಸಾರಕ್ಕಿ ಕೆರೆಯಲ್ಲಿ ಬಡವರು ಕಟ್ಟಿಕೊಂಡ ಮನೆಗಳನ್ನು ನಿರ್ದಯವಾಗಿ ಕೆಡವಿದ ಸರ್ಕಾರಕ್ಕೆ ಒತ್ತುವರಿ ಜಾಗದಲ್ಲಿರುವ ಮಂತ್ರಿಗಳು ಹಾಗೂ ಐಎಎಸ್‌ ಅಧಿಕಾರಿಗಳ ಮನೆ ಮುಟ್ಟುವ ಧೈರ್ಯ ಇದೆಯೇ’ ಎಂದು ಪ್ರಶ್ನಿಸಿದ್ದರು.

ಇದರಿಂದ ಸಿಟ್ಟಿಗೆದ್ದಿದ್ದ ಶಿವಕುಮಾರ್‌, ‘ತಾಕತ್ತಿದ್ದರೆ ಹೆಸರು ಹೇಳಿ, ದಾಖಲೆಯನ್ನೂ ಕೊಡಿ. ಉಡಾಫೆಯಾಗಿ ಮಾತನಾಡಬೇಡಿ’ ಎಂದು ಕಿಡಿಕಾರಿದ್ದರು. ‘ನನ್ನ ತಾಕತ್ತಿನ ಪ್ರಶ್ನೆ ಮಾಡ್ತೀರಾ, ನಾನು ತರುವ ಮುಂದಿನ ದಾಖಲೆ ನಿಮ್ಮದೇ’ ಎಂದು ಕುಮಾರಸ್ವಾಮಿ ಮಾರುತ್ತರ ನೀಡಿದ್ದರು.

‘ಸದನ ಸಮಿತಿಯಲ್ಲಿ ವಿಚಾರಣೆ ನಡೆಸುವಾಗ ದಾಖಲೆಗಳನ್ನು ಕೇಳಿದರೆ ಒದಗಿಸುವ ಯೋಗ್ಯತೆ ಇಲ್ಲದವರು ನೀವು. ದಲಿತರ ಜಮೀನನ್ನೂ ನುಂಗಿದವರು’ ಎಂದು ಕೆಣಕಿದ್ದರು.

‘ನೋಡ್ತಾ ಇರಿ, ಶಿವಕುಮಾರ್‌ ಜೈಲಿನಲ್ಲಿ ಇರ್ತಾನೆ ಎಂದೆಲ್ಲ ಈ ಹಿಂದೆ ಹೇಳ್ತಾ ಇದ್ದರು. ಯಾರಿಗೂ ಏನೂ ... ಆಗ್ಲಿಲ್ಲ. ನಾನು ಜೈಲಿಗೂ ಹೋಗ್ಲಿಲ್ಲ. ನಿಮ್ಮ ಯಾವ ಬೆದರಿಕೆಗೂ ನಾನು ಬಗ್ಗುವುದಿಲ್ಲ’ ಎಂದು ಶಿವಕುಮಾರ್‌ ಏರಿದ ಧ್ವನಿಯಲ್ಲಿ ಹೇಳಿದ್ದರು.

‘ನನ್ನ ಹಣೆಬರಹವನ್ನೂ ಬದಲಾಯಿಸ್ತೀನಿ ಅಂದಿದ್ದರು. ಈಗೇನಾಗಿದೆ ಎನ್ನುವುದನ್ನು ಹೇಳಿದವರೇ ವಿವರಿಸಬೇಕು’ ಎಂದು ಕುಮಾರಸ್ವಾಮಿ ಕೋಪದಿಂದಲೇ ಪ್ರತಿಕ್ರಿಯಿಸಿದ್ದರು. ಆಗ ರೋಷಾವೇಶದಿಂದ ಕಿತ್ತಾಡಿದ್ದ ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್‌ ಈಗ ‘ಆತ್ಮೀಯ ಗೆಳೆಯರು‘!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry