‘ನನಗೆ ಅನ್ಯಾಯವಾಗಿದೆ; ವಾರ ಕಾಯುತ್ತೇನೆ’

7
ಬೇರೆಯವರಿಗೊಂದು–ನನಗೊಂದು ನಿಯಮ, ನಾನು ಬಲಿಪಶು: ಎಂ.ಬಿ.ಪಾಟೀಲ ಅಳಲು

‘ನನಗೆ ಅನ್ಯಾಯವಾಗಿದೆ; ವಾರ ಕಾಯುತ್ತೇನೆ’

Published:
Updated:
‘ನನಗೆ ಅನ್ಯಾಯವಾಗಿದೆ; ವಾರ ಕಾಯುತ್ತೇನೆ’

ಬೆಂಗಳೂರು: ‘ಹಿರಿಯ ಶಾಸಕ ಎಂ.ಬಿ. ಪಾಟೀಲರಿಗೆ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ತಪ್ಪಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಣ. . .’

‘ಜನತಾದಳ ಪರಿವಾರದ ತಮ್ಮ ಹಳೆಯ ‘ದೋಸ್ತಿ’ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರನ್ನು ಮಂತ್ರಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಮಾತು ಕೊಟ್ಟಿದ್ದರು. ಅದಕ್ಕೆ, ಆ ಕಾರಣಕ್ಕೆ ಪಾಟೀಲರಿಗೆ ಸಚಿವ ಸ್ಥಾನ ಕೈತಪ್ಪಿದೆ’ ಎಂದೂ ಎಂ.ಬಿ. ಪಾಟೀಲರ ಆಪ್ತರು ಪ್ರತಿಪಾದಿಸಿದ್ದಾರೆ.

ಈ ಕುರಿತು ಪಾಟೀಲರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ಹೌದು; ನಾನು ಬಲಿಪಶು. ಆದರೆ ನಾನು ಯಾವತ್ತೂ ಕಾಂಗ್ರೆಸ್ಸಿಗ, 1991ರಿಂದ ಪಕ್ಷ ಕಟ್ಟಿದ್ದೇನೆ. ನನಗೆ ಅನ್ಯಾಯವಾಗಿದೆ. ನನ್ನ ಸ್ವಾಭಿಮಾನ, ಸ್ವಪ್ರತಿಷ್ಠೆಗೆ ಧಕ್ಕೆಯಾಗಿದೆ. ಶೇ 99ರಷ್ಟು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಆದರೆ, ಶೇ 1ರಷ್ಟು ಏನು ಬೇಕಾದರೂ ಮಾಡಬಹುದು’ ಎಂದು ಹೇಳಿದರು. ಆ ಮೂಲಕ, ಮುಂದಿನ ನಡೆಯ ಬಗ್ಗೆ ಸೂಚ್ಯವಾಗಿ ಹಂಚಿಕೊಂಡರು.

‘ಪಕ್ಷದ ಅಧ್ಯಕ್ಷ ರಾಹುಲ್ ಅವರನ್ನು ಭೇಟಿಯಾಗಿ ಎಲ್ಲವನ್ನೂ ಹೇಳಿ ಬಂದಿದ್ದೇನೆ. ಒಂದು ವಾರ ನೋಡುತ್ತೇನೆ. ಇದೇ 14 ಅಥವಾ 15ರಂದು ಜೊತೆಗಿರುವ ಶಾಸಕ ಮಿತ್ರರ ಜೊತೆ ಚರ್ಚೆ ಮಾಡುತ್ತೇನೆ. ಇನ್ನೂ ಆಶಾವಾದದಲ್ಲಿ ಇದ್ದೇನೆ’ ಎಂದೂ ಹೇಳಿದರು.

‘ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸ ಇತ್ತು. ಸಿದ್ದರಾಮಯ್ಯ ನನ್ನನ್ನು ಕೈಬಿಡುವುದಿಲ್ಲ ಎಂದೂ ನಂಬಿದ್ದೆ’ ಎಂದು ಬೇಸರಿಸಿದರು.

‘2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಮಯದಲ್ಲಿ ಅಂದು ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಧುಸೂದನ ಮಿಸ್ತ್ರಿ ಪ್ರಬಲವಾದ ಜಲಸಂಪನ್ಮೂಲ ಖಾತೆ ಕೊಟ್ಟಿದ್ದರು. ಐದು ವರ್ಷ ಖಾತೆಯನ್ನು ಸಮರ್ಥ

ವಾಗಿ ನಿಭಾಯಿಸಿದ್ದೇನೆ. ಯಾರೂ ಮಾಡದಷ್ಟು ಕೆಲಸ ಮಾಡಿದ್ದೇನೆ. ಆದರೂ ನನಗೆ ಅನ್ಯಾಯವಾಗಿದೆ’ ಎಂದರು.

‘ಹಿಂದಿನ ವರ್ಷ ಐದು ವರ್ಷ ಸಚಿವರಾಗಿದ್ದವರಿಗೆ ಈ ಬಾರಿ ಅವಕಾಶ ಕೊಡುವುದಿಲ್ಲ ಎಂದಾದರೆ, ಆರ್‌.ವಿ. ದೇಶಪಾಂಡೆ, ಕೃಷ್ಣೇ ಬೈರೇಗೌಡ, ಕೆ.ಜೆ. ಜಾರ್ಜ್‌, ಯು.ಟಿ. ಖಾದರ್‌ ಅವರನ್ನು ಮತ್ತೆ ಯಾಕೆ ಸಂಪುಟಕ್ಕೆ ಸೇರಿಸಿಕೊಂಡರು. ಅವರಿಗೊಂದು ನಿಯಮ, ನನಗೊಂದು ನಿಯಮವೇ’ ಎಂದೂ ಪ್ರಶ್ನಿಸಿದರು.

‘ಫಲಿತಾಂಶ ಬರುವ ಹಿಂದಿನ ದಿನ ಅತಂತ್ರ ವಿದಾನಸಭೆ ನಿರ್ಮಾಣವಾದರೆ ಮೈತ್ರಿ ಸರ್ಕಾರಕ್ಕೆ ಅವಕಾಶ ದೊರೆತರೆ ಏನೇನು ಮಾಡಬಹುದು, ಕೋರ್ಟ್‌ ಮೆಟ್ಟಿಲು ತುಳಿಯಬಹುದಾದ ಸಂದರ್ಭ ಬಂದರೆ ಏನೆಲ್ಲಾ ಮಾಡಬೇಕಾದೀತು ಎಂಬುದನ್ನೂ ವಕೀಲರೊಂದಿಗೆ ಚರ್ಚಿಸಿ ಲೆಕ್ಕ ಹಾಕಿಕೊಂಡಿದ್ದೆ. ಆದರೆ, ನನ್ನಂಥವನನ್ನೇ ಕಡೆಗಣಿಸಲಾಗಿದೆ. ನನ್ನಂತೆ ವಂಚಿತರಾದವರಿಗೆ ನಾನೇನು ಮಾಡಲು ಸಾಧ್ಯ ಎಂಬುದನ್ನು ಯೋಚಿಸುತ್ತಿದ್ದೇನೆ’ ಎಂದರು.

‘ರಾಹುಲ್ ಗಾಂಧಿ ಜೊತೆ ಒಂದು ಗಂಟೆ ರಾಜ್ಯದ ಪರಿಸ್ಥಿತಿ ವಿವರಿಸಿದ್ದೇನೆ.‌ ನಾನು ಮಾತುಗಳನ್ನು ಕೇಳಿ ಅವರು ದಂಗಾದರು. ನೀವು ನಿಮ್ಮ ಹೃದಯದಿಂದ ಮಾತನಾಡುತ್ತಿದ್ದೀರಿ. ಲಿಂಗಾಯತರ ವಿಷಯದ ಬಗ್ಗೆ ನನಗೆ ಯಾರೂ ಈ ವಿವರಣೆ ನೀಡಿರಲೇ ಇಲ್ಲ ಎಂದು ಹೇಳಿ ಎಲ್ಲವನ್ನೂ ಆಲಿಸಿದರು’ ಎಂದೂ ಪಾಟೀಲ ಹೇಳಿದರು.

‘ಸಮ್ಮಿಶ್ರ ಸರ್ಕಾರದ ರೂವಾರಿ ನಾನೇ’

‘ನಾನು ಅಲ್ಲದಿದ್ದರೆ ಈ ಸಮ್ಮಿಶ್ರ ಸರ್ಕಾರ ರಚನೆ ಕಷ್ಟವಾಗುತ್ತಿತ್ತು. ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು, 15 ದಿನ ಕಾಲಾವಕಾಶ ನೀಡಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಪೂರ್ಣ ತಯಾರಿ ಮಾಡಿಸಿದೆ. ಆವತ್ತು ವಕಾಲತ್ತಿಗೆ ಶಾಂಗ್ರಿಲಾ ಹೋಟೆಲ್‌ನಲ್ಲಿ ಪರಮೇಶ್ವರ ಅವರ ಸಹಿ ಮಾಡಿಸಿದ್ದೇ ನಾನು. ದೆಹಲಿಯಲ್ಲಿ ವಕೀಲರನ್ನು ನಿಯೋಜಿಸಿದ್ದೇ ನಾನು. ರಾತ್ರೋರಾತ್ರಿ ಸುಪ್ರೀಂ ಕೋರ್ಟ್‌ ಕದ ತಟ್ಟುವಂತೆ ರಿಜಿಸ್ಟ್ರಾರ್ ಜನರಲ್‌ ಅವರ ಬಳಿ ಹೋದ ಈ ವಕೀಲರ ತಂಡ ಮೈತ್ರಿ ಸರ್ಕಾರದ ಉಗಮಕ್ಕೆ ಕಾರಣವಾಯಿತು’ ಎಂದರು.‌

‘ಇಷ್ಟೆಲ್ಲಾ ಕಷ್ಟಗಳನ್ನು ಮೈಮೇಲೆ ಎಳೆದುಕೊಂಡೆ. ಆದರೆ, ಯಾವತ್ತೂ ನಾನು ಮಾಡಿದ್ದೇನೆ ಎಂಬ ಹಮ್ಮಿನಲ್ಲಿ ಪಕ್ಷದ ವರಿಷ್ಠರಿಗೆ ಮಾಧ್ಯಮಗಳ ಮುಂದೆ ಫೋಸ್‌ ಕೊಡಲಿಲ್ಲ. ಆದರೆ, ಇವತ್ತು ನನ್ನನ್ನು ಹೊರಗಿಡಲಾಗಿದೆ. ಈ ಪರಿಸ್ಥಿತಿಯಿಂದ ನಾನು ಖಂಡಿತವಾಗಿಯೂ ಮೇಲೆದ್ದು ಬರುತ್ತೇನೆ’ ಎಂದೂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry