ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಪ್ರಬುದ್ಧ, ಪರಿಪೂರ್ಣ ಬ್ಯಾಟ್ಸ್‌ಮನ್‌’

ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗಿರುವ ಕರ್ನಾಟಕದ ಕರುಣ್‌ ನಾಯರ್‌ ಅಭಿಮತ
Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದಿನದೆಲ್ಲ ಮರೆತು ಬಿಡಿ. ನಾನು ಈಗ ಪ್ರಬುದ್ಧ ಮತ್ತು ಪರಿಪೂರ್ಣ ಬ್ಯಾಟ್ಸ್‌ಮನ್ ಆಗಿದ್ದೇನೆ. ನನ್ನ ಬ್ಯಾಟಿಂಗ್‌ ಸಾಮರ್ಥ್ಯಕ್ಕೆ ಸಾಕಷ್ಟು ಸಾಣೆ ಹಿಡಿದಿದ್ದು ದೇಶಿ ಕ್ರಿಕೆಟ್‌ನಲ್ಲಿ ಅದು ಪ್ರತಿಫಲನಗೊಂಡಿದೆ...’

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 14ರಂದು ಆರಂಭವಾಗಲಿರುವ ಅಫ್ಗಾನಿಸ್ತಾನ ತಂಡದ ಎದುರಿನ ಐತಿಹಾಸಿಕ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಬ್ಯಾಟ್ಸ್‌ಮನ್ ಕರುಣ್‌ ನಾಯರ್ ಅವರ ಅಭಿಪ್ರಾಯ ಇದು. ಸೋಮವಾರ ಭಾರತ ತಂಡದ ಅಭ್ಯಾಸದ ನಡುವೆ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.

‘ಒಂದೂವರೆ ವರ್ಷದಿಂದ ಭಾರತ ತಂಡದಲ್ಲಿ ಅವಕಾಶ ಪಡೆದಿಲ್ಲ. ಈ ಸಂದರ್ಭದಲ್ಲಿ ಸಾಮರ್ಥ್ಯ ವೃದ್ಧಿಸಲು ನಾನು ಪ್ರಯತ್ನಿಸುತ್ತಿದ್ದೆ. ಬ್ಯಾಟಿಂಗ್ ಮತ್ತು ಫಿಟ್‌ನೆಸ್ ಕಡೆಗೆ ಸಾಕಷ್ಟು ಗಮನ ನೀಡಿದ್ದೇನೆ. ಇದರ ಪರಿಣಾಮವಾಗಿ ದೇಶಿ ಕ್ರಿಕೆಟ್‌ನಲ್ಲಿ ರನ್‌ ಗಳಿಸಲು ಸಾಧ್ಯವಾಗಿದೆ. ಈಗ ನನ್ನ ಭರವಸೆ ಹೆಚ್ಚಿದೆ. ಆದ್ದರಿಂದ ಎರಡು ವರ್ಷಗಳ ಹಿಂದಿಗಿಂತ ಉತ್ತಮ ಬ್ಯಾಟ್ಸ್‌ಮನ್‌ ಆಗಿ ಬೆಳೆದಿದ್ದೇನೆ ಎಂದು ಎದೆ ತಟ್ಟಿ ಹೇಳಬಲ್ಲೆ’ ಎಂದು ಕರುಣ್‌ ನುಡಿದರು.

2016ರ ನವೆಂಬರ್‌ನಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ಎದುರು ಚೊಚ್ಚಲ ಟೆಸ್ಟ್ ಪಂದ್ಯ ಆಡಿದ ಕರುಣ್‌ ನಾಯರ್‌ ಈ ವರೆಗೆ ಆರು ಪಂದ್ಯಗಳಲ್ಲಿ ಆಡಿದ್ದು ಏಳು ಇನಿಂಗ್ಸ್‌ಗಳಲ್ಲಿ ಕ್ರೀಸ್‌ಗೆ ಇಳಿದಿದ್ದಾರೆ. 2016ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 303 ರನ್‌ ಗಳಿಸಿ ಗಮನ ಸೆಳೆದಿದ್ದರು. ಆದರೆ ನಂತರ ನಾಲ್ಕು ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡಿದ್ದರು. ಹೀಗಾಗಿ ನಿರಂತರ ಅವಕಾಶ ವಂಚಿತರಾಗಿದ್ದರು.

ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯಲು ಸಾಧ್ಯವಾದರೆ ಅದು ಅವರಿಗೆ ಕ್ರಿಕೆಟ್ ಜೀವನದಲ್ಲಿ ಮರುಜೀವ ಪಡೆಯಲು ಒದಗುವ ಅವಕಾಶ ಆಗಲಿದೆ. ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಗಳಿಸುವುದಕ್ಕೂ ಹಾದಿಯಾಗಲಿದೆ.

ಇಂಗ್ಲೆಂಡ್ ಪ್ರವಾಸದ ಕುರಿತು ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರುಣ್ ನಾಯರ್‌ ‘ಬೆಂಗಳೂರು ಟೆಸ್ಟ್‌ನಲ್ಲಿ ಅವಕಾಶ ಗಳಿಸಿದರೆ ಚೆನ್ನಾಗಿ ಆಡುವುದರ ಕಡೆಗೆ ನಾನು ಸದ್ಯ ಗಮನ ನೀಡಿದ್ದೇನೆ. ಹೀಗಾಗಿ ಮುಂದಿನ ಸರಣಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್ ನಂತರ ‘ಎ’ ತಂಡವನ್ನು ಮುನ್ನಡೆಸಬೇಕಾಗಿದೆ. ಅದಕ್ಕೂ ಸಿದ್ಧತೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಅಫ್ಗಾನ್‌ ತಂಡದ ನಾಯಕನಿಗೆ ತಿರುಗೇಟು: ಭಾರತದ ಸ್ಪಿನ್ನರ್‌ಗಳಿಗಿಂತ ಅಫ್ಗಾನಿಸ್ತಾನ ತಂಡದ ಸ್ಪಿನ್ನರ್‌ಗಳು ಸಮರ್ಥರಾಗಿದ್ದಾರೆ ಎಂಬ ಆ ತಂಡದನಾಯಕ ಅಸ್ಗರ್‌ ಸ್ಟಾನಿಕ್‌ಜೈ ಅವರ ಅಭಿಪ್ರಾಯಕ್ಕೆ ಕರುಣ್ ತಿರುಗೇಟು ನೀಡಿದರು.

‘ಅಫ್ಗಾನ್ ಚೊಚ್ಚಲ ಟೆಸ್ಟ್ ಪಂದ್ಯ ಆಡಲು ಸಜ್ಜಾಗುತ್ತಿದೆಯಷ್ಟೇ. ಇಂಥ ಸ್ಥಿತಿಯಲ್ಲಿ ತಂಡದ ನಾಯಕ ಈ ರೀತಿ ಹೇಳಿರುವುದನ್ನು ಅತಿರೇಕದ ಮಾತು ಎಂದೇ ಹೇಳಬೇಕು. ಮುಜೀಬ್ ಉರ್‌ ರಹಮಾನ್ ಮತ್ತು ರಶೀದ್ ಖಾನ್‌ ಅವರು ಭಿನ್ನವಾದ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ ಎಂಬುದನ್ನು ಮರೆಯಬಾರದು’ ಎಂದು ಅವರು ಹೇಳಿದರು.

**

ಬೆಂಗಳೂರು ಟೆಸ್ಟ್‌ಗೆ ಶಮಿ ಇಲ್ಲ

ನವದೆಹಲಿ (ಎಎಫ್‌ಪಿ): ಫಿಟ್‌ನೆಸ್ ಟೆಸ್ಟ್‌ನಲ್ಲಿ ವಿಫಲರಾಗಿರುವ ವೇಗದ ಬೌಲರ್‌ ಮೊಹಮ್ಮದ್ ಶಮಿ ಬೆಂಗಳೂರು ಟೆಸ್ಟ್‌ನಲ್ಲಿ ಆಡಲು ಅರ್ಹತೆ ಗಳಿಸಿಲ್ಲ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಪರೀಕ್ಷೆಯಲ್ಲಿ ಅರು ವಿಫಲರಾಗಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಕಟಣೆ ತಿಳಿಸಿದೆ. ಅವರ ಬದಲಿಗೆ ದೆಹಲಿಯ ವೇಗಿ ನವದೀಪ್‌ ಸೈನಿ ಸ್ಥಾನ ಗಳಿಸಿದ್ದಾರೆ. ಸೈನಿ ಈ ವರೆಗೆ ಟೆಸ್ಟ್ ಪಂದ್ಯ ಆಡಲಿಲ್ಲ.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ಇಲೆವನ್‌ ತಂಡದಲ್ಲಿ ಅವರು ಆಡಬೇಕಾಗಿತ್ತು. ಆದರೆ ಗಾಯದ ಸಮಸ್ಯೆ ಮತ್ತು ಪತ್ನಿ ಹಾಕಿದ ದೌರ್ಜನ್ಯ ಪ್ರರಕಣದ ವಿಚಾರಣೆ ಇದ್ದುದರಿಂದ ಅವರು ಇಂಗ್ಲೆಂಡ್‌ಗೆ ತೆರಳಿರಲಿಲ್ಲ.

ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಅವರಿಗೆ ಕಣಕ್ಕೆ ಇಳಿಯಲು ಆಗಿರಲಿಲ್ಲ. ಭಾರತದ ಪರ ಒಟ್ಟು 30 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 110 ವಿಕೆಟ್ ಕಬಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT