ಅಣ್ವಸ್ತ್ರ ತ್ಯಜಿಸಿದರೆ ‘ವಿಶಿಷ್ಟ’ ಭದ್ರತೆ

7
ಉತ್ತರ ಕೊರಿಯಾಕ್ಕೆ ಅಮೆರಿಕ ಭರವಸೆ: ಟ್ರಂಪ್‌–ಕಿಮ್‌ ಮಾತುಕತೆ ಇಂದು

ಅಣ್ವಸ್ತ್ರ ತ್ಯಜಿಸಿದರೆ ‘ವಿಶಿಷ್ಟ’ ಭದ್ರತೆ

Published:
Updated:
ಅಣ್ವಸ್ತ್ರ ತ್ಯಜಿಸಿದರೆ ‘ವಿಶಿಷ್ಟ’ ಭದ್ರತೆ

ಲಾ ಮಲ್ಬೈ(ಸಿಂಗಪುರ): ಉತ್ತರ ಕೊರಿಯಾ ಸಂಪೂರ್ಣವಾಗಿ ಅಣ್ವಸ್ತ್ರ ಬಳಕೆ ತ್ಯಜಿಸಲು ಒಪ್ಪಿದರೆ ಅದಕ್ಕೆ ನಿಶ್ಚಿತವಾಗಿ ‘ವಿಶಿಷ್ಟ’ ಭದ್ರತೆ ಒದಗಿಸಲು ಸಿದ್ಧ ಎಂದು ಅಮೆರಿಕ ಭರವಸೆ ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಮುಖ್ಯಸ್ಥ ಕಿಮ್‌ ಜಾಂಗ್‌ ಉನ್‌ ನಡುವೆ ಸಿಂಗಪುರದಲ್ಲಿ ನಡೆಯಲಿರುವ ಮಾತುಕತೆಯ ಮುನ್ನಾ ದಿನವಾದ ಸೋಮವಾರ ಅಮೆರಿಕ ಈ ಭರವಸೆ ನೀಡಿದೆ.

ಸಿಂಗಪುರದ ಸೆಂತೋಸಾ ದ್ವೀಪದಲ್ಲಿರುವ ಕೆಪೆಲ್ಲಾ ಹೋಟೆಲ್‌ನಲ್ಲಿ ಮಂಗಳವಾರ ಈ ವಿಷಯ ಕುರಿತು ಇಬ್ಬರೂ ನಾಯಕರ ನಡುವೆ ಇದೇ ಮೊದಲ ಬಾರಿಗೆ ಮಾತುಕತೆ ನಡೆಯಲಿದೆ.

ಅಮೆರಿಕ ಕಾರ್ಯದರ್ಶಿ ಮೈಕ್‌ ಪಾಂಪೆ, ‘ಐತಿಹಾಸಿಕ ಮಾತುಕತೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಟ್ರಂಪ್‌ ಮತ್ತು ಕಿಮ್‌ ಮಂಗಳವಾರ ಬೆಳಿಗ್ಗೆ 9ಕ್ಕೆ (ಭಾರತೀಯ ಕಾಲಮಾನ ಬೆಳಿಗ್ಗೆ 6.30) ಮಾತುಕತೆ ಆರಂಭಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಉತ್ತರ ಕೊರಿಯಾ ಅಣ್ವಸ್ತ್ರ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಒಪ್ಪಿದರೆ ಆ ದೇಶಕ್ಕೆ ಸಾಕಷ್ಟು ಭದ್ರತೆ ಒದಗಿಸಲಾಗುವುದು. ಅಲ್ಲದೆ, ಈಗ ನೀಡಲಾಗುತ್ತಿರುವ ಎಲ್ಲ ನೆರವು ಮೊದಲಿನಂತೆಯೇ ಮುಂದುವರಿಯುವುದು. ದೇಶದ ಶಾಂತಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕಿಮ್‌ ಜಾಂಗ್‌ ಉನ್‌ ಈ ಪ್ರಸ್ತಾವ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ’ ಎಂಬುದಾಗಿ ಪಾಂಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ರಾಬರ್ಟ್‌ ಪಲ್ಲಾಡಿನೊ, ‘ಕಿಮ್ ಜೊತೆಗೆ ಮಾತುಕತೆಗೆ ಟ್ರಂಪ್‌ ಉತ್ಸುಕರಾಗಿದ್ದಾರೆ. ಉಭಯ ದೇಶಗಳ ಅಧಿಕಾರಿಗಳು ತೆರೆಮರೆಯಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದು, ಎರಡೂ ದೇಶಗಳ ನಡುವಣ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ 1950–53ರಲ್ಲಿ ಮಾಡಿಕೊಳ್ಳಲಾದ ಶಾಂತಿ ಒಪ್ಪಂದದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ಶಾಂತಿ ಒಪ್ಪಂದ ಉಲ್ಲಂಘನೆಯಾಗಿದ್ದು, ಉಭಯ ದೇಶಗಳ ನಡುವೆ ಸತತವಾಗಿ ಘರ್ಷಣೆ ನಡೆಯುತ್ತಿದೆ.

ಟ್ರಂಪ್‌ ಮತ್ತು ಕಿಮ್‌ ಇಬ್ಬರೂ ಸಿಂಗಪುರ ಪ್ರಧಾನಮಂತ್ರಿ ಲೀ ಸೇನ್ ಲೂಂಗ್‌ರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಸಭೆಯ ಆತಿಥ್ಯ ವಹಿಸಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.

ಈ ಸಭೆಗೆ ತಗಲುವ ವೆಚ್ಚವನ್ನು ಸಿಂಗಪುರ ಭರಿಸಲಿದೆ.

ಅಮೆರಿಕ ಮತ್ತು ಉತ್ತರ ಕೊರಿಯಾ ಎರಡರ ಜತೆಯೂ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಸಿಂಗಪುರ ಕೂಡ ಒಂದು.

**

ಇಬ್ಬರು ಸಚಿವರ ಮಹತ್ವದ ಪಾತ್ರ

ಭಾರತ ಮೂಲದ ಸಿಂಗಪುರದ ಇಬ್ಬರು ಸಚಿವರು ಸಭೆಯ ಯಶಸ್ಸಿಗೆ ಟೊಂಕಕಟ್ಟಿ ನಿಂತಿದ್ದಾರೆ. ಸಿಂಗಪುರದ ವಿದೇಶಾಂಗ ಸಚಿವ ಬಾಲಕೃಷ್ಣನ್ ಹಾಗೂ ಗೃಹಸಚಿವ ಷಣ್ಮುಗಂ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ.

ವಾಷಿಂಗ್ಟನ್‌, ಪ್ಯಾಂಗ್‌ಯಾಂಗ್‌ ಹಾಗೂ ಬೀಜಿಂಗ್‌ಗೆ ಭೇಟಿ ನೀಡಿದ್ದ ಬಾಲಕೃಷ್ಣನ್‌ ಸಭೆಯ ಕುರಿತು ಅಲ್ಲಿನ ಅಧಿಕಾರಿಗಳು, ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಸಭೆಯಲ್ಲಿ ಯಾವುದೇ ಗೊಂದಲ ಮತ್ತು ಅಡ್ಡಿ ಎದುರಾಗದಂತೆ ಇಬ್ಬರೂ ಸಚಿವರು ಮುಂಜಾಗ್ರತೆ ವಹಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

**

ಮೂರು ಸಾವಿರ ಪತ್ರಕರ್ತರು

ಐತಿಹಾಸಿಕವಾಗಿ ಮಹತ್ವ ಪಡೆದಿರುವ ಈ ಸಭೆಯ ವರದಿ ಮಾಡಲು ವಿಶ್ವದ 3 ಸಾವಿರ ಪತ್ರಕರ್ತರು ಹಾಜರಿರಲಿದ್ದಾರೆ. ಏಷ್ಯಾದಲ್ಲಿ ನಡೆಯುತ್ತಿರುವ ಸಭೆಯೊಂದರಲ್ಲಿ ಇಷ್ಟು ಸಂಖ್ಯೆಯ ಪತ್ರಕರ್ತರು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಮಾತುಕತೆ ನಡೆಸಲಿರುವ ಇಬ್ಬರೂ ನಾಯಕರು ವಿಶಿಷ್ಟ ಹಾಗೂ ಆಸಕ್ತಿಕರ ವ್ಯಕ್ತಿತ್ವ ಹೊಂದಿದ್ದಾರೆ ಮತ್ತು ಅವರಿಗೆ ಏನು ಇಷ್ಟವೋ ಅದನ್ನೇ ನಿರ್ಭಯವಾಗಿ ಮಾತನಾಡುತ್ತಾರೆ. ದೂರದರ್ಶನಗಳಿಗೆ ಇದು ಉತ್ತಮ ಸುದ್ದಿಯಾಗಲಿದೆ’ ಎಂದು ತೈವಾನ್‌ ಮಾಧ್ಯಮ ಸಂಸ್ಥೆಯ ಪೀಟರ್‌ ವಾಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಶೈಲಿ ಖಾದ್ಯ: ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಸಭೆಯಲ್ಲಿ ಪಾಲ್ಗೊಳ್ಳುವ ಪತ್ರಕರ್ತರಿಗಾಗಿ ರೂಪಿಸಲಾಗಿರುವ ಊಟದ ಮೆನುವಿನಲ್ಲಿ ಭಾರತೀಯ ಶೈಲಿಯ ಖಾದ್ಯಗಳೂ ಸ್ಥಾನ ಪಡೆದಿವೆ. ಒಟ್ಟು 45 ಬಗೆಯ ಖಾದ್ಯಗಳಲ್ಲಿ ಭಾರತೀಯ ಶೈಲಿಯ ಪಲಾವ್‌, ಚಿಕನ್‌ ಕುರ್ಮಾ, ಫಿಶ್‌ ಕರಿ, ಚಿಕನ್‌ ಕರಿ, ದಾಲ್‌ ಹಾಗೂ ಪಾಪಡ್‌ ಅನ್ನೂ ಸೇರಿಸಲಾಗಿದೆ ಎಂದು 'ಸ್ಟ್ರೇಟ್‌ ಟೈಮ್ಸ್‌' ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry