ಕಲುಷಿತ ಕೆರೆ ಪ್ರದೇಶಗಳಿಗೆ ಡಿಸಿಎಂ ಭೇಟಿ

7
ಕಗ್ಗದಾಸಪುರ, ಬೆಳ್ಳಂದೂರು ಕೆರೆ ಪರಿಸ್ಥಿತಿ ಅವಲೋಕನ

ಕಲುಷಿತ ಕೆರೆ ಪ್ರದೇಶಗಳಿಗೆ ಡಿಸಿಎಂ ಭೇಟಿ

Published:
Updated:
ಕಲುಷಿತ ಕೆರೆ ಪ್ರದೇಶಗಳಿಗೆ ಡಿಸಿಎಂ ಭೇಟಿ

ಬೆಂಗಳೂರು: ಕಗ್ಗದಾಸಪುರ ಕೆರೆ ಹಾಗೂ ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಸೋಮವಾರ ಭೇಟಿ ನೀಡಿದರು.

ಕಗ್ಗದಾಸಪುರ ಕೆರೆಯಲ್ಲಿ ಬೆಳೆದಿರುವ ಕತ್ತೆ ಕಿವಿ ಸಸ್ಯ, ಜೊಂಡಿನ ಜತೆ ರಾಸಾಯನಿಕ ತ್ಯಾಜ್ಯ ಸೇರಿ ಕೆಟ್ಟ ವಾಸನೆ ಬರುತ್ತಿರುವುದನ್ನು ಅವರು ಗಮನಿಸಿದರು. ಇದೇ ವೇಳೆ ಕೆರೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ನಿವಾಸಿಗಳು ಕೆರೆ ಸ್ವಚ್ಛಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದರು.

ಕೆರೆಯ ಸ್ಥಿತಿಗತಿ ಕುರಿತು ‘ಕಗ್ಗದಾಸಪುರ ಕೆರೆ ಉಳಿಸಿ ವೇದಿಕೆ’ ಸದಸ್ಯರು ಮನವಿ ಸಲ್ಲಿಸಿದರು. ಆನಂತರ ಮಾತನಾಡಿದ ವೇದಿಕೆ ಸದಸ್ಯ ಆನಂದ್, ‘2018ರ ಜನವರಿಯಲ್ಲಿ ಈ ಕೆರೆಯನ್ನು ಬಿಬಿಎಂಪಿ ಸುಪರ್ದಿಗೆ ತೆಗೆದುಕೊಂಡಿದೆ. ಇದುವರೆಗೆ ಇಲ್ಲಿ ನಡಿಗೆ ಪಥ ನಿರ್ಮಿಸಿದವರು ಯಾರು ಎಂಬ ಮಾಹಿತಿ ಇಲ್ಲ. 48 ಎಕರೆ ಇದ್ದ ಕೆರೆ ಈಗ ಒತ್ತುವರಿಗೆ ಆಗಿದೆ. 37 ಎಕರೆ ಕೆರೆ ಪ್ರದೇಶ ಮಾತ್ರ ಉಳಿದಿದೆ. ಕಟ್ಟಡ ತ್ಯಾಜ್ಯವನ್ನೂ ತಂದು ಸುರಿಯಲಾಗುತ್ತಿದೆ. ಒಟ್ಟಿನಲ್ಲಿ ಕೆರೆ ಅಭಿವೃದ್ಧಿ ಆಗಬೇಕು. ಪಾರದರ್ಶಕವಾಗಿ ಟೆಂಡರ್‌ ಕರೆದು ಕಾಮಗಾರಿ ನಡೆಸಬೇಕು’ ಎಂದು ಒತ್ತಾಯಿಸಿದರು.

ಬೆಳ್ಳಂದೂರು ಕೆರೆ ಪರಿಸ್ಥಿತಿ ಭಿನ್ನವಾಗಿಲ್ಲ. ಪರಮೇಶ್ವರ ಮತ್ತು ಅವರ ತಂಡದವರು ಕೆರೆಯತ್ತ ದೃಷ್ಟಿ ಹಾಯಿಸುತ್ತಿದ್ದಂತೆಯೇ ನೊರೆಯ ಹನಿಗಳು ಗಾಳಿಯಲ್ಲಿ ತೇಲಿಕೊಂಡು ಬಂದು ಅವರ ಮೇಲೆ ಬಿದ್ದವು. ಎರಡು ಹಿಟಾಚಿ ಯಂತ್ರಗಳು ತೇಲುಜಟ್ಟಿಯ ಮೇಲೆ ಇದ್ದು ಪಾಚಿ ಗಿಡಗಳನ್ನು ತೆಗೆಯುತ್ತಿದ್ದವು. ಮತ್ತೆ ಎರಡು ದೊಡ್ಡ ಗಾತ್ರದ ಯಂತ್ರಗಳು ದಡದಲ್ಲಿ ನಿಂತು ತ್ಯಾಜ್ಯ ವಿಲೇ ಮಾಡುತ್ತಿದ್ದವು. ಕೆರೆಯ ಕೋಡಿ ಪ್ರದೇಶದಲ್ಲಿ ದಪ್ಷ ನೊರೆಯ ಹರಿವು ಹಾಗೇ ಇತ್ತು.

ಮಧ್ಯಾಹ್ನ 3ಕ್ಕೆ ಉಪ ಮುಖ್ಯಮಂತ್ರಿ ಬಿಬಿಎಂಪಿ ಕಚೇರಿಯಲ್ಲಿ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿದರು‌. ‘ಕಗ್ಗದಾಸಪುರ ಕೆರೆ ಅಭಿವೃದ್ಧಿಗೆ ಬಿಬಿಎಂಪಿ ರೂ 843.30 ಕೋಟಿಯ ಅಂದಾಜು ಯೋಜನೆ ರೂಪಿಸಿದೆ. ಅದರಲ್ಲಿ ಕೆರೆಯ ಹೂಳು ತೆಗೆಯುವುದು, ಸ್ವಚ್ಛತೆ, ಏರಿ, ಪಾದಚಾರಿ ಮಾರ್ಗ ಮತ್ತು ತಡೆಬೇಲಿ ಹಾಗೂ ಚರಂಡಿ ನೀರು ಹರಿದುಹೋಗಲು ತಿರುವುಗಾಲುವೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದರು. ‘ಎರಡೂ ಕೆರೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಬಿಬಿಎಂಪಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ’ ಎಂದು ಪರಮೇಶ್ವರ್‌ ಹೇಳಿದರು.  ಮೇಯರ್ ಆರ್‌.ಸಂಪತ್ ರಾಜ್ ಇದ್ದರು.

(ಬೆಳ್ಳಂದೂರು ಕೆರೆಯಲ್ಲಿ ಹಾವಸೆ ಸಸ್ಯ ತೆರವು ಮಾಡುವಲ್ಲಿ ನಿರತ ಯಂತ್ರಗಳು –ಪ್ರಜಾವಾಣಿ ಚಿತ್ರ)

ಗುತ್ತಿಗೆದಾರರು ನಮ್ಮ ಜತೆ ಚರ್ಚಿಸಲಿ

ಕಸ ವಿಲೇವಾರಿ ವಾಹನ ಮಾಲೀಕರಿಗೆ ಇಂದು (ಸೋಮವಾರ) ಅಥವಾ ನಾಳೆಯೊಳಗೆ ಬಾಕಿ ಹಣ ಪಾವತಿಸಲಾಗುವುದು. ಈಗಾಗಲೇ ಆ ಪ್ರಕ್ರಿಯೆ ಜಾರಿಯಲ್ಲಿದೆ. ಅವರ ಏನೇ ಸಮಸ್ಯೆಗಳಿದ್ದರೂ ಪಾಲಿಕೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಬೇಕು.ಅಥವಾ ಸರ್ಕಾರದ ಗಮನಕ್ಕೆ ತರಬೇಕು. ಅದೆಲ್ಲವನ್ನೂ ಬಿಟ್ಟು ಮಾಧ್ಯಮಗಳ ಮುಂದೆ ಹೋಗುವುದು ಸರಿಯಲ್ಲ. ಅವರಿಗೆ ಹಾಕಲಾದ ನಿಬಂಧನೆಗಳನ್ನು ಮೀರಿ ವರ್ತಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಖಡಕ್‌ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಗೌರವವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಹಣ ಪಾವತಿ ಸಮಸ್ಯೆ ಬಗೆಹರಿಸುತ್ತೇವೆ. ಅದಕ್ಕಾಗಿ ವಾಹನಗಳನ್ನು ಸ್ಥಗಿತಗೊಳಿಸುವುದು ಸರಿಯಲ್ಲ ಎಂದರು.

(ಬೆಳ್ಳಂದೂರು ಕೆರೆಯ ಕೋಡಿ ಹರಿಯುವ ಕಾಲುವೆಯಲ್ಲಿ ರಾಸಾಯನಿಕ ಮಿಶ್ರಿತ ನೊರೆ –ಪ್ರಜಾವಾಣಿ ಚಿತ್ರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry