ಮೂಲಸೌಕರ್ಯ ಸಾಲ ನಿಧಿ ಶೀಘ್ರ ಅಸ್ತಿತ್ವಕ್ಕೆ

7

ಮೂಲಸೌಕರ್ಯ ಸಾಲ ನಿಧಿ ಶೀಘ್ರ ಅಸ್ತಿತ್ವಕ್ಕೆ

Published:
Updated:

ಮುಂಬೈ: ಮೂಲಸೌಕರ್ಯಗಳ ಹೂಡಿಕೆಗೆ ನೆರವಾಗಲು ಸಾಲ ಹೆಚ್ಚಳ ನಿಧಿಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಸ್ಥಾಪಿಸಲಿದೆ.

ವಿಮೆ ಮತ್ತು ಪಿಂಚಣಿ ನಿಧಿಗಳ ನೆರವಿನಿಂದ ಆರಂಭಿಕ ₹ 500 ಕೋಟಿ ಹೂಡಿಕೆಯ ಈ ಸಾಲ ಹೆಚ್ಚಳ ನಿಧಿಯನ್ನು ಮುಂದಿನ ತಿಂಗಳು ಆರಂಭಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2016–17ನೇ ಸಾಲಿನ ಬಜೆಟ್‌ನಲ್ಲಿಯೇ ಈ ನಿಧಿ ಸ್ಥಾಪಿಸುವುದನ್ನು ಪ್ರಕಟಿಸಲಾಗಿತ್ತು.

‘ಮೂಲ ಸೌಕರ್ಯ ಯೋಜನೆಗಳಿಗೆ ಸಾಲ ಸೌಲಭ್ಯ ವಿಸ್ತರಿಸುವ ಉದ್ದೇಶಕ್ಕೆ ಮೀಸಲಾದ ನಿಧಿ ಸ್ಥಾಪಿಸಲಾಗುವುದು. ಇದರಿಂದ ಮೂಲ ಸೌಕರ್ಯ ಕಂಪನಿಗಳು ಬಿಡುಗಡೆ ಮಾಡುವ ಬಾಂಡ್‌ಗಳ  ಮಾನದಂಡ ಏರಿಕೆಯಾಗಲಿದೆ. ಪಿಂಚಣಿ ಮತ್ತು ವಿಮೆ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆ ಮಾಡುವ ಸೌಲಭ್ಯವನ್ನೂ ವಿಸ್ತರಿಸಲಿದೆ’ ಎಂದು ಹಣಕಾಸು ಸಚಿವಾಲಯದಲ್ಲಿನ ಮೂಲಸೌಕರ್ಯ ವಿಭಾಗದ ಜಂಟಿ ಕಾರ್ಯದರ್ಶಿ ಕುಮಾರ್‌ ವಿನಯ್‌ ಪ್ರತಾಪ್‌ ಅವರು ಹೇಳಿದ್ದಾರೆ.

ಸಂಪನ್ಮೂಲ ಸಂಗ್ರಹದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಕುರಿತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಈ ನಿಧಿಯ ಆರಂಭಿಕ ಮೊತ್ತ ₹ 500 ಕೋಟಿ ಇರಲಿದೆ. ಪ್ರವರ್ತಕ ಸಂಸ್ಥೆಯಾಗಿರುವ ಮೂಲಸೌಕರ್ಯ ಹಣಕಾಸು ಕಂಪನಿಯು (ಐಐಎಫ್‌ಸಿ) ಈ ಬಂಡವಾಳ ತೊಡಗಿಸಲಿದೆ. ಇದು ಬ್ಯಾಂಕೇತರ ಹಣಕಾಸು ಸಂಸ್ಥೆಯಂತೆ ಕಾರ್ಯನಿರ್ವಹಿಸಲಿದೆ.

ಮೂಲ ಸೌಕರ್ಯ ಹಣಕಾಸು ಸಂಸ್ಥೆಗಳು ಬಿಡುಗಡೆ ಮಾಡುವ ಬಾಂಡ್‌ಗಳಿಗೆ ಸಾಮಾನ್ಯವಾಗಿ ‘ಬಿಬಿಬಿ’ ಮಾನದಂಡ ನೀಡಲಾಗುತ್ತಿದೆ. ಪಿಂಚಣಿ ಮತ್ತು ವಿಮೆ ನಿಧಿಗಳು ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವ ನಿಧಿಗಳಿಗೆ ‘ಎಎ’ ರೇಟಿಂಗ್‌ ಇರುವುದು ಕಡ್ಡಾಯ ಎಂದು ನಿಯಂತ್ರಣ ಸಂಸ್ಥೆಗಳು ಪ್ರತಿಪಾದಿಸುತ್ತಿವೆ. ಹೀಗಾಗಿ ಈ ವಿಷಯದಲ್ಲಿ ಅಸಮಾನತೆ ಇದೆ. ಈ ನಿಧಿಯಲ್ಲಿ ₹ 5,000 ಕೋಟಿ ಬಂಡವಾಳ ತೊಡಗಿಸಲು ವಿಶ್ವಬ್ಯಾಂಕ್‌ ಆಸಕ್ತಿ ತೋರಿಸಿತ್ತು. ಆದರೆ, ಸರ್ಕಾರ ಈ ಪ್ರಸ್ತಾವವನ್ನು ತಳ್ಳಿ ಹಾಕಿತ್ತು.

ಬ್ಯಾಂಕ್‌ಗಳ ನೆರವು ಇಳಿಕೆ: ಸದ್ಯಕ್ಕೆ ಬ್ಯಾಂಕ್‌ಗಳು ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣಕಾಸು ನೆರವು ನೀಡುತ್ತಿವೆ. ಆದರೆ, ಈ ಹಣಕಾಸು ನೆರವಿನ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಭಾರಿ ಇಳಿಕೆ ಕಂಡಿದೆ. ಮೂಲಸೌಕರ್ಯ ವಲಯಗಳಿಗೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry