ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಗಳಿಗೂ ನೇರ ನೇಮಕ

7ನೇ ರಾಷ್ಟ್ರೀಯ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಹೇಳಿಕೆ
Last Updated 11 ಜೂನ್ 2018, 19:37 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ಹತ್ತು ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತ ವ್ಯಕ್ತಿಗಳನ್ನು ನೇರ ನೇಮಕ ಮಾಡುವ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದರೂ ಇನ್ನಷ್ಟು ಸಚಿವಾಲಯಗಳಿಗೆ ಈ ನೇಮಕಾತಿ ಯೋಜನೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ತ್ವರಿತಗತಿಯಲ್ಲಿ ಗುಣಮಟ್ಟದ ಸೇವೆ ಒದಗಿಸಲು ವಿವಿಧ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿಗಳ ಶ್ರೇಣಿಯ ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ನೇರ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೂ ಇದೇ ರೀತಿ ಖಾಸಗಿ ಕ್ಷೇತ್ರದಿಂದ ನೇಮಕ ಮಾಡಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ತಿಳಿಸಿದರು. ಪಿಎಚ್‌ಡಿ ಛೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿ ಆಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಣ ಮತ್ತು ಉದ್ಯಮ ಸಂಬಂಧದ 7ನೇ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಪ್ರತಿಭಾನ್ವಿತರು’ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸನ್ನದ್ಧರಾಗಿದ್ದಾರೆ. ಹಾಗಾಗಿ ಹಿರಿಯ ಶ್ರೇಣಿಯ ಅಧಿಕಾರಶಾಹಿ ಹುದ್ದೆಗಳಿಗೆ ಖಾಸಗಿ ವಲಯದಿಂದ ಅರ್ಹರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ವಿರೋಧ ಪಕ್ಷಗಳು ಈ ಕ್ರಮಮವನ್ನು ಪ್ರಶ್ನಿಸುತ್ತಿವೆ. ತನ್ನ ಬೆಂಬಲಿಗರನ್ನು ಆಡಳಿತಾತ್ಮಕ  ಹುದ್ದೆಗಳಲ್ಲಿ ಸೇರಿಸಿಕೊಳ್ಳುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಆರೋಪಿಸುತ್ತಿವೆ. ಆದರೆ, ಈ ನಿರ್ಧಾರದಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ’ ಎಂದು ತಿಳಿಸಿದರು.

**

ಎಂಜಿನಿಯರಿಂಗ್‌ಗೆ ಹೊಸ ಪಠ್ಯಕ್ರಮ

ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗುವಂತೆ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮದಲ್ಲಿ ಬದಲಾವಣೆ ತರಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸತ್ಯಪಾಲ್‌ ಸಿಂಗ್‌ ತಿಳಿಸಿದರು.

ಸಿಮೆಂಟ್‌ ತಂತ್ರಜ್ಞಾನ(ಎಂಜಿನಿಯರಿಂಗ್‌) ಮತ್ತು ವೃತ್ತಿಪರ ಶಿಕ್ಷಣಕ್ಕೆ ಹೊಸ ಪಠ್ಯಕ್ರಮ ವಿನ್ಯಾಸಗೊಳಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಹೊಸ ಪಠ್ಯಕ್ರಮ ಜಾರಿಗೆ ಬರಲಿದೆ ಎಂದರು.

**

ಶಿಕ್ಷಣ ಸಂಸ್ಥೆಗಳ ದಕ್ಷತೆ ಹೆಚ್ಚಿಸಲು ಈ ಯೋಜನೆ ರೂಪಿಸಲಾಗಿದೆ. ಇದನ್ನು ರಾಜಕೀಕರಣಗೊಳಿಸಬೇಡಿ

–ಸತ್ಯಪಾಲ್‌ ಸಿಂಗ್‌, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT