ಆರ್ಥಿಕತೆಯ ಟೈರ್‌ ಪಂಕ್ಚರ್‌!

7
ಎನ್‌ಡಿಎ ತಪ್ಪು ನೀತಿಯಿಂದ ಹದಗೆಟ್ಟ ಆರ್ಥಿಕ ವ್ಯವಸ್ಥೆ: ಚಿದಂಬರಂ ಆರೋಪ

ಆರ್ಥಿಕತೆಯ ಟೈರ್‌ ಪಂಕ್ಚರ್‌!

Published:
Updated:
ಆರ್ಥಿಕತೆಯ ಟೈರ್‌ ಪಂಕ್ಚರ್‌!

ನವದೆಹಲಿ: ‘ಭಾರತದ ಆರ್ಥಿಕ ವ್ಯವಸ್ಥೆಯ ಟೈರ್‌ಗಳು ಪಂಕ್ಚರ್‌ ಆಗಿವೆ’ ಎಂದು ಕಾಂಗ್ರೆಸ್‌ ಮುಖಂಡ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.

‘ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಲ್ಲ ನಿರೀಕ್ಷೆಗಳನ್ನೂ ಮೀರಿ ದೇಶದ ಆರ್ಥಿಕವ್ಯವಸ್ಥೆಯನ್ನು ಹದಗೆಡಿಸಿವೆ. ಆರ್ಥಿಕತೆಯ ನಾಲ್ಕು ಗಾಲಿಗಳ ಪೈಕಿ ಮೂರು ಗಾಲಿಗಳು ಪಂಕ್ಚರ್‌ ಆಗಿವೆ ಎಂದರು.

2015–16ರಲ್ಲಿ ಶೇ8.2ರಷ್ಟಿದ್ದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 2017–18ರಲ್ಲಿ ಶೇ 6.7ಕ್ಕೆ ಕುಸಿದಿದೆ. ಜಿಎಸ್‌ಟಿ ಈ ದೇಶದ ವರ್ತಕ ಸಮುದಾಯ ಮತ್ತು ವಹಿವಾಟು ಕ್ಷೇತ್ರದ ಕತ್ತು ಹಿಸುಕಿದೆ ಎಂದು ಚಿದಂಬರಂ ಟೀಕಿಸಿದ್ದಾರೆ.

ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ದೊರೆಯುತ್ತಿಲ್ಲ. ಇದರಿಂದ ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

**

ಉದ್ಯೋಗ ಸಮೀಕ್ಷೆ ಪ್ರಕಟಿಸಿ: ಸವಾಲು

2017ರ ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ದೇಶದಲ್ಲಿಯ ಉದ್ಯೋಗಾವಕಾಶದ ಕುರಿತು ನಡೆಸಿದ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಇದುವರೆಗೂ ಏಕೆ ಬಿಡುಗಡೆ ಮಾಡುವ ಧೈರ್ಯ ತೋರುತ್ತಿಲ್ಲ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ದೇಶದ ಜನರಿಗೆ ‘ಅಚ್ಛೇ ದಿನ್‌’ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಕುರಿತು ನೀಡಿದ್ದ ಭರವಸೆಯ ಕಥೆ ಏನಾಯಿತು ಎಂದು ಅವರು ಕೇಳಿದ್ದಾರೆ.

**

ಹಾದಿ ತಪ್ಪಿಸುವ ಹೇಳಿಕೆ: ಬಿಜೆಪಿ ತಿರುಗೇಟು

ದೇಶದ ಆರ್ಥಿಕ ವ್ಯವಸ್ಥೆ ಕುರಿತು ಚಿದಂಬರಂ ನೀಡಿರುವ ಹೇಳಿಕೆ ‘ಬೇಜವಾಬ್ದಾರಿ ಮತ್ತು ಹಾದಿ ತಪ್ಪಿಸುವಂತಹದ್ದು’ ಎಂದು ಬಿಜೆಪಿ ತಿರುಗೇಟು ನೀಡಿದೆ.

ಭಾರತದ ಆರ್ಥಿಕತೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಯುಪಿಎ ಅವಧಿಗಿಂತ ಇಂದಿನ ಆರ್ಥಿಕ ಪ್ರಗತಿ ಉತ್ತಮವಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಚಿದಂಬರಂ ಅವರು ಹಣದುಬ್ಬರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ವ್ಯಂಗ್ಯವಾಡಿದ್ದಾರೆ.

**

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ್ದು ಉದ್ಯೋಗ ಸೃಷ್ಟಿಸದ ಆರ್ಥಿಕ ಅಭಿವೃದ್ಧಿ.

-ಪಿ.ಚಿದಂಬರಂ, ಕಾಂಗ್ರೆಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry