ಜಯನಗರ ಕ್ಷೇತ್ರದಲ್ಲಿ ಶೇ 55ರಷ್ಟು ಮತದಾನ

7
ಬಿಜೆಪಿ ಅಭ್ಯರ್ಥಿ ವಿಜಯಕುಮಾರ್‌ ನಿಧನದಿಂದ ಮುಂದೂಡಿಕೆಯಾಗಿದ್ದ ಚುನಾವಣೆ

ಜಯನಗರ ಕ್ಷೇತ್ರದಲ್ಲಿ ಶೇ 55ರಷ್ಟು ಮತದಾನ

Published:
Updated:
ಜಯನಗರ ಕ್ಷೇತ್ರದಲ್ಲಿ ಶೇ 55ರಷ್ಟು ಮತದಾನ

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 55ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಇದೇ 13ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಬಿ.ಎನ್‌. ವಿಜಯಕುಮಾರ್‌ ನಿಧನದಿಂದಾಗಿ ಮೇ 12ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು  ಮುಂದೂಡ

ಲಾಗಿತ್ತು.  ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಎರಡು ತಾಸಿನಲ್ಲಿಯೇ ಶೇ 10ರಷ್ಟು ಮತದಾನವಾಗಿತ್ತು. ಕಳೆದ ಬಾರಿ ಶೇ 55.93ರಷ್ಟು ಮತ ಚಲಾವಣೆಯಾಗಿತ್ತು.

ಬಿಜೆಪಿಯಿಂದ ಪ್ರಹ್ಲಾದ್‌ ಬಾಬು, ಕಾಂಗ್ರೆಸ್‌ನಿಂದ ಸೌಮ್ಯಾರೆಡ್ಡಿ ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,03184 ಮತದಾರರಿದ್ದಾರೆ. 216 ಮತಗಟ್ಟೆಗಳಿದ್ದು, ಅದರಲ್ಲಿ 5 ಪಿಂಕ್‌ ಬೂತ್‌ಗಳಿದ್ದವು. 42 ಸೂಕ್ಷ್ಮ‌ ಮತಗಟ್ಟೆಗಳೆಂದು ಪರಿಗಣಿಸಿ ಹೆಚ್ಚಿನ ಭದ್ರತೆ ನೀಡಲಾಗಿತ್ತು.

ಜೆ.ಪಿ.ನಗರ ನಾಲ್ಕನೇ ಹಂತದಲ್ಲಿನ ಕ್ಲಾರೆನ್ಸ್‌ ಶಾಲೆಯ ಬೂತ್‌ ಸಂಖ್ಯೆ 216ರಲ್ಲಿ ಇವಿಎಂ ದೋಷದಿಂದಾಗಿ ಮತದಾನ ಒಂದು ತಾಸು ತಡವಾಯಿತು. ಅರ್ಧ ತಾಸು ಸರತಿ ಸಾಲಿನಲ್ಲಿ ನಿಂತಿದ್ದ ಅನೇಕರು ವಾಪಸ್‌ ಹೋದರು. ಮತ ಚಲಾಯಿಸಲು ಈ ಕೇಂದ್ರಕ್ಕೆ ಬಂದಿದ್ದ ‘ಮುಖ್ಯಮಂತ್ರಿ’ ಚಂದ್ರು ಈ ಬಗ್ಗೆ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾಗಿ ತಿಳಿಸಿದರು. ಯಂತ್ರ ಬದಲಾಯಿಸಿ, ಮತ್ತೆ ಮತದಾನಕ್ಕೆ ಅವಕಾಶ ನೀಡಲಾಯಿತು.

ಎರಡು ಮತಕೇಂದ್ರಗಳಲ್ಲಿ ಹೆಸರು ನಾಪತ್ತೆಯಾಗಿದ್ದ ಪ್ರಕರಣಗಳು ಕಂಡುಬಂದಿತು. ಜಯನಗರದ ಮತಗಟ್ಟೆ ಸಂಖ್ಯೆ 172ರಲ್ಲಿ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿ ಬಾಗೇಗೌಡ ಅವರ ಹೆಸರು ಮತದಾರರ ಪಟ್ಟಿಯಲ್ಲಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅವರು ‘ನನ್ನ ಕುಟುಂಬದ ಎಲ್ಲರ ಹೆಸರು ಇದೆ. ನನ್ನ ಹೆಸರು ಮಾತ್ರ ಇಲ್ಲದಿರುವುದು, ಬೇಕೆಂದೇ ಹೆಸರು ತೆಗೆದಿರುವ ಗುಮಾನಿಯನ್ನು ಹುಟ್ಟಿಸುತ್ತಿದೆ. ಯಾವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

ಇದೇ ರೀತಿ ಬಿಇಎಸ್‌ ಕಾಲೇಜಿನ ಬೂತ್‌ ಸಂಖ್ಯೆ 55ರಲ್ಲಿ ಯೋಗೇಶ್‌ ಎಂಬುವವರ ಹೆಸರೂ ಪಟ್ಟಿಯಲ್ಲಿರಲಿಲ್ಲ. ‘ಪತ್ನಿ, ತಾಯಿಯ ಹೆಸರು ಇದೆ. ನನ್ನ ಹೆಸರಿಲ್ಲ. ಒಂದೇ ಮನೆಯಲ್ಲಿ ವಾಸವಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ’ ಎಂದು ಚುನಾವಣಾ ಸಿಬ್ಬಂದಿ ವಿರುದ್ಧ ಅವರು ಹರಿಹಾಯ್ದರು. ‘ಮತದಾರರ ಚೀಟಿ ಇದೆ ಮತ ಚಲಾಯಿಸಲು ಅವಕಾಶ ನೀಡಿ’ ಎಂದು ಕೇಳಿಕೊಂಡರೂ ಅಧಿಕಾರಿಗಳು ಅನುವು ಮಾಡಿಕೊಡಲಿಲ್ಲ.

ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್‌ ಕಾರ್ಯಕರ್ತರು ಮಾರೇನಹಳ್ಳಿ ಶಾಲೆಯ ಮತಗಟ್ಟೆ ಸಂಖ್ಯೆ 161ರಲ್ಲಿ ಬಹಿರಂಗವಾಗಿ ಅಭ್ಯರ್ಥಿ ಸೌಮ್ಯಾರೆಡ್ಡಿ ಪರ ಪ್ರಚಾರ ನಡೆಸಿ, ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದರು. ನಂತರ ಪೊಲೀಸರು ಅವರನ್ನು ಮತಗಟ್ಟೆಯಿಂದ ಹೊರ ಕಳುಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry