ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಹಳ್ಳಿಯಲ್ಲಿ ಒಳಗಣ್ಣಿನ ಅಧಿಕಾರಿ; ಗ್ರಾಮಸ್ಥರ ಮೆಚ್ಚುಗೆ

ಒಂದೇ ತಿಂಗಳಲ್ಲಿ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ ಅಂಧ ಕಾರ್ಯದರ್ಶಿ
Last Updated 5 ಅಕ್ಟೋಬರ್ 2018, 19:27 IST
ಅಕ್ಷರ ಗಾತ್ರ

ಬೆಂಗಳೂರು:ಹೆಸರಘಟ್ಟ ಹೋಬಳಿ ಹುರುಳಿ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಸಿ. ಸಂಧ್ಯಾರಾಣಿ ಜನಮೆಚ್ಚುಗೆಗೆ
ಪಾತ್ರರಾಗಿದ್ದಾರೆ.

ಅದರಲ್ಲೇನು ವಿಶೇಷ ಅಂತೀರಾ? ಅವರು ಅಂಧರು. ಹೊರಗಣ್ಣು ಕಾಣಿಸದಿದ್ದರೂ ಒಳಗಣ್ಣು ತೆರೆದಿದೆ. ಕರ್ತವ್ಯಕ್ಕೆ ಹಾಜರಾದ ಒಂದೇ ತಿಂಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಣ್ಣಿಲ್ಲ ಎಂಬ ಕೊರತೆ ಕಾಡದಂತೆ ಕೆಲಸ ಮಾಡುತ್ತಿದ್ದಾರೆ. ಅಂಧರಾದ ಅವರನ್ನು ನೇಮಕ ಮಾಡಿದ್ದಕ್ಕೆ ಮೊದಲು ಗೊಣಗಿದ್ದ ಗ್ರಾಮಸ್ಥರು ಈಗ ಅಚ್ಚರಿ ಮತ್ತು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಸಂಧ್ಯಾರಾಣಿಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಕಾಮಾಕ್ಷಿಪಾಳ್ಯದಿಂದ ಹುರುಳಿ ಚಿಕ್ಕನಹಳ್ಳಿಗೆ ಪ್ರತಿದಿನ ಬಸ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಯಾರ ಸಹಾಯವಿಲ್ಲದೆ ಗ್ರಾಮ ಪಂಚಾಯಿತಿ ಕಚೇರಿಗೆ ನಡೆದುಕೊಂಡು ಬರುತ್ತಾರೆ.

ಕಂಪ್ಯೂಟರ್‌ನಲ್ಲಿ ಬ್ರೈಲ್‌ ಲಿಪಿ ಅಳವಡಿಸಿಕೊಂಡಿದ್ದಾರೆ. ಬ್ರೈಲ್‌ ಕೀ ಬೋರ್ಡ್‌ನಲ್ಲಿ ಟೈಪ್‌ ಮಾಡುವ ಅಕ್ಷರಗಳು ನುಡಿ ತಂತ್ರಾಂಶದ ಮೂಲಕ ಪರದೆಯ ಮೇಲೆ ಮೂಡುತ್ತವೆ. ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ ಟಿಪ್ಪಣಿ ಮಾಡಿ, ಇದೇ ರೀತಿ ಟೈಪ್‌ ಮಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೀಡುತ್ತಾರೆ.

ಸಂಧ್ಯಾರಾಣಿ ಅವರ ಕಾರ್ಯವೈಖರಿ ಬಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಹನುಮಯ್ಯ ಮಾತ್ರವಲ್ಲದೆ ಪಂಚಾಯಿತಿಯ ಎಲ್ಲ ಸದಸ್ಯರಿಗೂ ಮೆಚ್ಚುಗೆ. ಧ್ವನಿಯ ಮೂಲಕವೇ ಅವರು ಹಲವರನ್ನು ಗುರುತಿಸುತ್ತಾರೆ. ಗ್ರಾಮಸ್ಥರು ಏನೇ ಸಮಸ್ಯೆಗಳನ್ನು ಹೊತ್ತು ತಂದರೂ ಸಮಾಧಾನಪಡಿಸಿ ಕಳುಹಿಸುತ್ತಾರೆ. ಅವರ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ ಎಂದು ಪಂಚಾಯಿತಿ ಸಿಬ್ಬಂದಿ ಹೆಮ್ಮೆಯಿಂದ ಹೇಳುತ್ತಾರೆ.

ಎಲ್ಲ ಲೆಕ್ಕಾಚಾರ ಕಟ್ಟುನಿಟ್ಟು: ಪ್ರತಿದಿನದ ಕಂದಾಯ ವಸೂಲಿನ ಬಗ್ಗೆ ಮಾಹಿತಿ ಪಡೆಯುತ್ತಾರೆ, ಕರ ವಸೂಲುಗಾರರಿಗೆ ಹುರುಪು ತುಂಬುತ್ತಾರೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಮೂಲ ಸೌಲಭ್ಯ ಒದಗಿಸುವುದು ಇವರ ಆದ್ಯತೆ.

‘ಕೊಟ್ಟ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ನಾವು ಯಾವುದಾದರೂ ದಾಖಲೆಯನ್ನು ಕೊಟ್ಟಾಗ ಅದನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಿಕೊಂಡು ಕೇಳಿಸಿಕೊಳ್ಳುತ್ತಾರೆ. ಬಳಿಕ ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಅವ
ರಿಗೆ ವಿಶೇಷ ತರಬೇತಿಯನ್ನು ಇಲಾಖೆ ನೀಡಬೇಕಾಗಿದೆ. ಆ ತರಬೇತಿ ಮುಗಿದ ಬಳಿಕ ಅವರಿಂದ ಇನ್ನೂ ಹೆಚ್ಚಿನ ಕೆಲಸ ನಿರೀಕ್ಷೆ ಮಾಡಬಹುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಸ್ವಾಮಿ ಹೇಳುತ್ತಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ಸಿದ್ಧರಾಮಯ್ಯ ಪ್ರತಿಕ್ರಿಯಿಸಿ, ‘ಕೆಲಸ ಮಾಡಲು ಬೇಕಾಗಿರುವುದು ಶ್ರದ್ಧೆ. ಸಂಧ್ಯಾರಾಣಿ ಅವರಲ್ಲಿ ಶ್ರದ್ಧೆ ಇದೆ. ಕೆಲಸವನ್ನು ಮಾಡುವ ಆಸಕ್ತಿ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

**

ಕ್ಷೇತ್ರ ಭೇಟಿಗೆ ಹೋದಾಗ ಮಾತ್ರ ಸಹಾಯಕರ ನೆರವು ಬೇಕು. ಯಾವುದೇ ಕೆಲಸ ಕೊಟ್ಟರೂ ನಿಭಾಯಿಸುವ ವಿಶ್ವಾಸ ನನಗಿದೆ
- ಸಿ. ಸಂಧ್ಯಾರಾಣಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ

**

ಅವರು ಕೆಲಸ ಮಾಡುತ್ತಿದ್ದರೆ ಅವರಿಗೆ ಕಣ್ಣು ಇಲ್ಲ ಎನ್ನುವ ವಿಷಯವೇ ಮರೆತು ಹೋಗುತ್ತದೆ
- ಶಶಿಕಲಾ ಹನುಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT