‘ನನಗ್ಯಾಕೆ ಬೇಕು ಶಾಸಕರ ನಿಧಿ..’

7
ಸಿ.ವಿ ರಾಮನ್‌ ನಗರದ ಶಾಸಕ ಎಸ್‌.ರಘು ಮನದ ಮಾತು

‘ನನಗ್ಯಾಕೆ ಬೇಕು ಶಾಸಕರ ನಿಧಿ..’

Published:
Updated:
‘ನನಗ್ಯಾಕೆ ಬೇಕು ಶಾಸಕರ ನಿಧಿ..’

ಬೆಂಗಳೂರು: ಬಿಜೆಪಿಯ ಎಸ್‌.ರಘು ಅವರು ಸಿ.ವಿ.ರಾಮನ್‌ನಗರ ಕ್ಷೇತ್ರದಿಂದ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ‘ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರವಿರುವುದರಿಂದ ಕೆಲಸ ಮಾಡುವುದು ಕಷ್ಟ’ ಎಂದು ಹೇಳುವ ಅನೇಕ ಶಾಸಕರು ಬಿಜೆಪಿಯಲ್ಲಿದ್ದಾರೆ. ಇದಕ್ಕೆ ಅಪವಾದ ಎಂಬಂತೆ ರಘು ಅವರು, ‘ಸರ್ಕಾರ ಯಾವುದಿದ್ದರೆ ಏನು, ಕೆಲಸ ಮಾಡಲು ನಾವು ಹಿಂದೆ ಬೀಳುವುದಿಲ್ಲ’ ಎಂಬ ವಿಶ್ವಾಸದ ಮಾತುಗಳನ್ನು ಆಡುತ್ತಾರೆ. ’ಪ್ರಜಾವಾಣಿ’ಯೊಂದಿಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

*ಶಾಸಕರಾಗಿ ಮುಂದಿನ ಐದು ವರ್ಷಕ್ಕೆ ನಿಮ್ಮ ಯೋಜನೆಗಳು ಏನು?

ನಾನು ಯೋಜನೆಗಳನ್ನು ರೂಪಿಸಿ ಕೆಲಸ ಮಾಡುವವನಲ್ಲ. ಆದರೆ, ಸಮಸ್ಯೆಗಳನ್ನು ಬಗೆಹರಿಸಲು ಹಿಂದೆ ಬೀಳುವುದಿಲ್ಲ. ಉತ್ತಮ ರಸ್ತೆ, ಕುಡಿಯುವ ನೀರು, ಸರ್ಕಾರಿ ಆಸ್ಪತ್ರೆ, ಪರಿಸರ, ಈ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಗುರಿ ಇದೆ.

* ಕ್ಷೇತ್ರದಲ್ಲಿರುವ ಪ್ರಮುಖ ಸಮಸ್ಯೆಗಳು?

ಕಸ. ಈಗಿರುವ ದೊಡ್ಡ ಸಮಸ್ಯೆ ಎಂದರೆ ಇದೇ. ಪೌರಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟವರಿಗೆ ದೂರು ನೀಡಲಿದ್ದೇನೆ. ಕೆಲವೊಂದು ರಸ್ತೆಗಳು ಹಾಳಾಗಿವೆ. ಮಳೆ ಹೆಚ್ಚಾಗುವುದರೊಳಗೆ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು.

* ರಾಜಕೀಯ ಸವಾಲುಗಳೇನು?

ಕ್ಷೇತ್ರದಲ್ಲಿ ನನಗೆ ಅಂತಹ ದೊಡ್ಡ ರಾಜಕೀಯ ಸವಾಲುಗಳೇನು ಇಲ್ಲ. ಬಿಜೆಪಿ ಶಾಸಕನಾಗಿರುವುದರಿಂದ ಶಾಸಕರ ನಿಧಿ ಸಿಗುವಲ್ಲಿ ತಾರತಮ್ಯ ಎದುರಿಸುವ ಸಾಧ್ಯತೆ ಇದೆ. ಬೇರೆ ಪಕ್ಷದವರು ಕಾಲೆಳೆಯಲು ಪ್ರಯತ್ನಿಸುತ್ತಾರೆ. ಜನಬೆಂಬಲ ನನಗೆ ಇರುವುದರಿಂದ ಯಾವುದೇ ತೊಂದರೆ ಆಗಲು ಸಾಧ್ಯವಿಲ್ಲ.

* ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಮುಖ್ಯ ಕಾರಣಗಳೇನು?

ಸರ್ಕಾರಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದೇನೆ. 2012ರಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡವನ್ನು ಮೇಲ್ಡರ್ಜೆಗೆ ಏರಿಸಲಾಗಿದೆ. 500ಕ್ಕಿಂತ ಹೆಚ್ಚು ಬೆಡ್‌ಗಳು ಇಲ್ಲಿವೆ. ಉದ್ಯಾನಗಳ ಅಂದ ಹೆಚ್ಚಿಸಲಾಗಿದೆ. ಇವೇ ಕಾರಣ ಇರಬೇಕು.

* ಜನರ ಜೊತೆ ನಿಮ್ಮ ಸಂಬಂಧ ಹೇಗಿದೆ?

ಈ ಪ್ರಶ್ನೆಯನ್ನು ಕ್ಷೇತ್ರದ ಜನರಿಗೇ ಕೇಳಿದರೆ ಸರಿಯಾದ ಉತ್ತರ ಸಿಗಬಹುದು. ಈ ಕ್ಷೇತ್ರದೊಟ್ಟಿಗೆ ಅವಿನಾಭಾವ ಸಂಬಂಧ ಇದೆ. 1995–96ರಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದೆ. ಪಾಲಿಕೆ ಸದಸ್ಯನಾದೆ. ಒಳ್ಳೆ ಕೆಲಸಕ್ಕೆ ಬೆಲೆ ಸಿಕ್ಕಿದ್ದರಿಂದ ಶಾಸಕನೂ ಆದೆ. ಜನರು ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಎಂತಹ ಸಮಸ್ಯೆಯಾದರೂ ತಾಳ್ಮೆಯಿಂದ ಕೇಳಿ ಪರಿಹರಿಸುತ್ತೇನೆ.

*ಅಧಿವೇಶನದ ಹಾಜರಾತಿ ಹೇಗಿದೆ?

ಹಾಜರಾತಿ ಚೆನ್ನಾಗಿದೆ. ಆದರೆ, ಹಿಂದಿನ ಬಾರಿ ಸದನಕ್ಕೆ ಹೆಚ್ಚು ಹೋಗಲಿಲ್ಲ. ಕಾಂಗ್ರೆಸ್‌ ಸರ್ಕಾರ ಅನುದಾನ ಕೊಡುವಾಗ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ನೀತಿ ಅನುಸರಿಸಿತು. ಇದರಿಂದ ಸಾಕಷ್ಟು ನೋವಾಗಿತ್ತು. ಕುಮಾರಸ್ವಾಮಿ ಅವರು ಈ ರೀತಿ ಮಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಕಾದು ನೋಡಬೇಕು.

*ಅನುದಾನ ಸರಿಯಾಗಿ ಕೊಡದಿದ್ದರೆ ಅಧಿವೇಶನಕ್ಕೆ ಹೋಗುವುದಿಲ್ವಾ?

ಹಾಗಂತ ಇಲ್ಲ. ಶಾಸಕರಾಗಿ ಇದು ನಮ್ಮ ಕರ್ತವ್ಯ. ಹೋಗಲೇಬೇಕು. ಹಿಂದಿನ ಸರ್ಕಾರದ ನೀತಿ ಬೇಸರ ತರಿಸಿತ್ತು. ಕೇಂದ್ರ ಸರ್ಕಾರ ಈ ರೀತಿ ಮಾಡುವುದಿಲ್ಲ. ಮೋದಿ ಅವರು ತಾರತಮ್ಯ ಮಾಡದೆ ಆಡಳಿತ ಮಾಡುತ್ತಿದ್ದಾರೆ.

*ಬ್ರ್ಯಾಂಡ್ ಬೆಂಗಳೂರಿಗೆ ನಿಮ್ಮ ಕೊಡುಗೆ ಏನು?

ಎಲ್ಲಾ ಕ್ಷೇತ್ರಗಳನ್ನೂ ಒಂದೇ ರೀತಿ ನೋಡಿದರೆ ಬ್ರ್ಯಾಂಡ್ ಬೆಂಗಳೂರು ಕನಸು ಈಡೇರುತ್ತದೆ. ಸಮಗ್ರ ಬೆಂಗಳೂರಿನ ಕನಸು ಇದ್ದರೆ ಮಾತ್ರ ಇದು ಯಶಸ್ವಿಯಾಗುತ್ತದೆ. ಇನ್ನೊಂದು ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ಬೆಂಗಳೂರಿಗೆ ಬೇಕು. ಆಗ ಸಿಂಗಪುರ ಮಾದರಿಯಲ್ಲಿ ನಾವು ಬೆಂಗಳೂರನ್ನು ನೋಡಬಹುದು.

*ಬಿಜೆಪಿ ಅಧಿಕಾರಕ್ಕೆ ಬರದೇ ಇರಲು ಕಾರಣ ಏನಿರಬಹುದು. ನಿಮಗೆ ನಿರಾಸೆ ಆಗಿಲ್ವಾ?

ತುಂಬಾ ದೊಡ್ಡ ನಿರಾಸೆ ಆಗಿದೆ. ನನಗೆ ಅಧಿಕಾರದ ಆಸೆ ಇಲ್ಲ. ನಮ್ಮದೇ ಸರ್ಕಾರ ಇದ್ದಿದ್ದರೆ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡ

ಬಹುದಿತ್ತು. ಅಧಿಕಾರಕ್ಕೆ ಬರಲು ಇನ್ನೂ 9 ಕ್ಷೇತ್ರಗಳಲ್ಲಿ ಗೆಲ್ಲಬೇಕಿತ್ತು. ಪ್ರಯತ್ನ ನಡೆಯಿತು. ಆದರೆ, ಸಾಧ್ಯವಾಗಲಿಲ್ಲ. ‘ನಮ್ಮನ್ನು ಸೋಲಿಸುವವರು ಯಾರು’ ಎನ್ನುವ ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಯಿತು. ಅಧಿಕಾರ ಇಲ್ಲದಿದ್ದರೂ ಶಾಸಕನಾಗಿ ಕರ್ತವ್ಯ ಮುಂದುವರಿಸುತ್ತೇನೆ.

*ಈಗಿರುವ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ?

ಅವರು ಕೆಲಸವನ್ನೇ ಶುರುಮಾಡಿಲ್ಲ. ಈಗಲೇ ಏನು ಹೇಳಿದರೂ ತಪ್ಪಾಗುತ್ತದೆ. ಈ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ. ಸಚಿವರು ದಿನಕ್ಕೆ ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಕಾದು ನೋಡೋಣ..

*ನಿಮ್ಮ ರಾಜಕೀಯ ಭವಿಷ್ಯ?

ನನಗೆ ಸಿಕ್ಕಿರುವ ರಾಜಕೀಯ ಅವಕಾಶಗಳಿಗೆ ನಾನು ಆಭಾರಿಯಾಗಿದ್ದೇನೆ. 48 ವರ್ಷಕ್ಕೆ ನಾಲ್ಕು ಬಾರಿ ಶಾಸಕನಾಗುವ ಭಾಗ್ಯ ನನಗೆ ಸಿಕ್ಕಿದೆ. ರಾಜಕೀಯದಲ್ಲಿ ಮೇಲೆ ಬರುವುದಕ್ಕೂ ನಮಗೆ ಹಣೆಬರಹ ಇರಬೇಕು. ನಾನು ವಯಸ್ಸಾದ ಅಜ್ಜನಂತೆ ಮಾತಾಡುತ್ತಿಲ್ಲ. ಅದೇ ನಿಜ. ಮಾಡುತ್ತಿರುವ ಕೆಲಸಕ್ಕೆ ತೃಪ್ತಿ ಇದೆ. ಮನಸ್ಸಿನಿಂದ ಹೇಳುತ್ತೇನೆ, ಬೆಂಗಳೂರು ಚೆನ್ನಾಗಿ ಬೆಳೆಯಬೇಕು ಎನ್ನುವ ಆಸೆ, ಕನಸು ಎರಡೂ ಇದೆ.

*‘ಇಲ್ಲಿನ ಶಾಸಕರು ಭತ್ಯೆ ಪಡೆಯಲು ಮಾತ್ರ ಸೀಮಿತ' ಎಂದು ನಿಮ್ಮ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಆರೋಪ ಮಾಡಿದ್ದರಲ್ಲಾ?

ಹೀಗೆ ಹೇಳಿದ್ದ ಸಿದ್ದರಾಮಯ್ಯನವರು ಎಷ್ಟು ಮತಗಳ ಅಂತರದಿಂದ ಗೆದ್ದರು ಅನ್ನೋದು ನಿಮಗೆ ಗೊತ್ತಿಲ್ವಾ? ಈ ಮಾತು ನನಗೆ ಬಹಳ ನೋವು ತಂದಿತ್ತು. ಅದನ್ನು ಪದಗಳಿಂದ ಹೇಳೋದಕ್ಕೂ ಸಾಧ್ಯವಿಲ್ಲ. ಅವರು ದೊಡ್ಡವರು. ಅವರಿಗೆ ನಮ್ಮ ವಂಶದ ಬಗ್ಗೆ ಗೊತ್ತಾ? ನಮ್ಮ ಜೀವನಶೈಲಿ ಗೊತ್ತಾ? ನಾನು ಶಾಸಕರ ಭತ್ಯೆ ಇಟ್ಟುಕೊಂಡು ಜೀವನ ಮಾಡುತ್ತಿಲ್ಲ. ನಾನೆಷ್ಟು ಖರ್ಚು ಮಾಡುತ್ತೇನೆ ಅನ್ನೋದು ಅವರಿಗೆ ಗೊತ್ತಾ...? ತಾತ, ಮುತ್ತಾತನ ಕಾಲದಿಂದಲೂ ನಾವು ಶ್ರೀಮಂತರು. ನಾನು ಹುಟ್ಟುವ ಮೊದಲೇ ನಮ್ಮ ಮನೆಯಲ್ಲಿ ಅಂಬಾಸಿಡರ್‌ ಕಾರ್ ಇತ್ತು. ಈಗಲೂ ಇದೆ. ಅವರಿಗೆ ಸಂಸ್ಕಾರ ಇಲ್ಲ. ನಮ್ಮ ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಗೊತ್ತು. ನನಗ್ಯಾಕೆ ಬೇಕು ಶಾಸಕರ ನಿಧಿ..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry