ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಜಾತಕ ಕಥೆಗಳು

Last Updated 19 ಜೂನ್ 2018, 13:10 IST
ಅಕ್ಷರ ಗಾತ್ರ

ಹಿಂಸೆ, ಅನಾಚಾರ, ಭ್ರಷ್ಟಾಚಾರ, ಅನ್ಯಾಯಗಳೆಲ್ಲ ತಾಂಡವವಾಡುತ್ತಿರುವ ಜಗತ್ತಿಗೆ ಬುದ್ಧನ ದಯೆಯ, ಕರುಣೆಯ, ಪ್ರೇಮದ ಮಾತುಗಳು ತಂಗಾಳಿಯಂತೆ ತೋರುತ್ತವೆ. ಕ್ರಿ.ಪೂ. ಆರನೇ ಶತಮಾನದಲ್ಲಿದ್ದ ಬುದ್ಧನಿಂದ ಪ್ರಾರಂಭವಾದ ಬೌದ್ಧಧರ್ಮ ತಾಯ್ನಾಡಿನಿಂದ ಹೊರಹೋಗಿ ವಿಶ್ವಧರ್ಮವಾಯಿತು.

ಬುದ್ಧ ಗಯೆಯಲ್ಲಿ ಜ್ಞಾನೋದಯವನ್ನು ಪಡೆದ ಮೇಲೆ ಸುಮಾರು ನಲವತ್ತೈದು ವರ್ಷಗಳ ಕಾಲ ಊರಿಂದ ಊರಿಗೆ ಸಂಚರಿಸಿ ತನ್ನ ಜ್ಞಾನದ ಬೆಳಕನ್ನು ಹಂಚಿದ. ಅವನು ನೀಡಿದ ಉಪನ್ಯಾಸಗಳು, ನಡೆಸಿದ ಚರ್ಚೆಗಳು, ಸಂಭಾಷಣೆಗಳು ಅದೆಷ್ಟು ಲಕ್ಷ ಜನರ ಬದುಕನ್ನು ಹಸನುಮಾಡಿದವೋ! ಅವನ ಬೋಧನೆ ಇದ್ದದ್ದು ಪಾಲಿ ಭಾಷೆಯಲ್ಲಿ.

ಈ ಬೌದ್ಧ ಸಾಹಿತ್ಯವನ್ನು 'ತಿಪಿಟಕ' ಎಂದು ಕರೆಯುತ್ತಾರೆ. ಈ ತಿಪಿಟಕಗಳು ಮೂರು ವಿನಯಪಿಟಕ, ಅಭಿಧಮ್ಮಪಿಟಕ ಹಾಗೂ ಸುತ್ತಪಿಟಕ. ಕೊನೆಯದಾದ ಸುತ್ತಪಿಟಕದ ಒಂದು ವಿಭಾಗ, ಖುದ್ದನಿಕಾಯ. ಇದರ ಒಂದು ಉಪಗ್ರಂಥವೇ ಜಾತಕ. ಬುದ್ಧ ತನ್ನ ಹಿಂದಿನ ಜನ್ಮಗಳಲ್ಲಿ ಮಾಡಿದ ಕಾರ್ಯಗಳೇ ಜಾತಕಕಥೆಗಳು. ಈ ಕಥೆಗಳು ಸಾಮಾನ್ಯವಾಗಿ ವಾರಾಣಸಿಯ ಸುತ್ತಮುತ್ತ ಇಲ್ಲವೇ ಗಂಗಾ-ಯಮುನಾ ನದಿಗಳ ಪ್ರದೇಶಗಳಲ್ಲಿ ನಡೆದ ಪ್ರಸಂಗಗಳು.

ಈ ಕಥೆಗಳು ಬುದ್ಧನಷ್ಟೇ ಪುರಾತನವಾದವು. ಅಂದಿನಿಂದ ಅವು ಜನಮಾನಸವನ್ನು ತಟ್ಟಿದ ಪರಿ ಅನ್ಯಾದೃಶವಾದದ್ದು. ಕೆಲವರು ಹೇಳುವಂತೆ ಕಥಾಸರಿತ್ಸಾಗರದ ಹಾಗೂ ಪಂಚತಂತ್ರದ ಕಥೆಗಳು ಈ ಜಾತಕ ಕಥೆಗಳಿಂದ ಪ್ರೇರಿತವಾದವುಗಳು. ಅಂದರೆ ಜಾತಕಕಥೆಗಳು ಬಹುಶಃ ಪ್ರಪಂಚದ ಅತ್ಯಂತ ಪ್ರಾಚೀನವಾದ ಜಾನಪದ ಕಥೆಗಳ ಸಂಗ್ರಹ.

ಈ ಕಥೆಗಳ ಪ್ರಕಾರ ಬುದ್ಧ ಹಿಂದೆ ಐದು ನೂರಾ ನಲವತ್ತೇಳು ಜನ್ಮಗಳನ್ನು ಎತ್ತಿದ್ದ. ಪ್ರತಿಯೊಂದು ಜನ್ಮದ ಒಂದು ಸನ್ನಿವೇಶದ ವಿವರಣೆಯೇ ಜಾತಕಕಥೆ. ಹಾಗಾದರೆ ಬುದ್ಧನಿಗೆ ಹಿಂದಿನ ಎಲ್ಲ ಜನ್ಮಗಳ ಸ್ಮರಣೆ ಇತ್ತೇ? ಹೀಗೆ ಪುನರ್ಜನ್ಮಗಳನ್ನು ಗುರುತಿಸುವುದು ಭಾರತೀಯ ಪರಂಪರೆಯಲ್ಲಿ ಸಾಮಾನ್ಯ.

ನಾವು ನಮ್ಮ ಧರ್ಮಗಳ ಸ್ಥಾಪಕರು, ಸಂತರು, ಆಚಾರ್ಯರುಗಳ ಅವತಾರಗಳ ಸಾಲನ್ನೇ ಹೇಳುವುದಿಲ್ಲವೇ? ಇಂಥವರು ಮರುಜನ್ಮದಲ್ಲಿ ಈ ರೂಪದಲ್ಲಿ ಹುಟ್ಟಿದರು, ಅದರ ಮುಂದಿನ ಜನ್ಮದಲ್ಲಿ ಇಂಥ ಸಾಧನೆ ಮಾಡಿದರು – ಎಂದೆಲ್ಲ ಭಾವಿಸುತ್ತೇವೆ. ಇದು ಭಾರತೀಯ ಚಿಂತನೆಯ ಒಂದು ಭಾಗವೇ ಆಗಿರುವುದರಿಂದ ಬೌದ್ಧಧರ್ಮದ ಪುನರ್ಜನ್ಮತತ್ತ್ವ ನಮಗೆ ಅಚ್ಚರಿಯನ್ನುಂಟುಮಾಡುವುದಿಲ್ಲ.

ತತ್ತ್ವವನ್ನು ನೇರವಾಗಿ ಹೇಳಿದರೆ ನೀರಸವಾಗುತ್ತದೆ. ಅದನ್ನೇ ಕಥಾರೂಪದಲ್ಲಿ ಹೇಳಿದರೆ ಆಕರ್ಷಕವಾಗುತ್ತದೆ. ಆ ಕಥೆಯ ಮೂಲಕ ಜನರಲ್ಲಿ ಆಸಕ್ತಿಯನ್ನು ಕೆರಳಿಸಿ ಅದರಿಂದ ಮೌಲ್ಯಗಳನ್ನು, ಆದರ್ಶಗಳನ್ನು, ಶ್ರದ್ಧೆಯನ್ನು ಅವರ ಮನದಲ್ಲಿ ಮೂಡಿಸುವುದು ಸಾಧ್ಯವಾಗುತ್ತದೆ. ಇದು ಜಾತಕಕಥೆಗಳ ಉದ್ದೇಶ.

ನನಗಿರುವ ಉದ್ದೇಶವೂ ಅದೇ: ಎರಡು ಸಾವಿರದ ಆರು ನೂರು ವರ್ಷಗಳ ಹಿಂದಿನ ಕಥೆ ಇಂದಿಗೂ ಪ್ರಸ್ತುತವಾಗಬಹುದೇ? ಅಂದಿನ ಕಥೆಯ ಸನ್ನಿವೇಶ ಇಂದಿನದಕ್ಕೆ ಭಿನ್ನವಾಗಿದ್ದರೂ ಅದರ ಸಂದೇಶ ನಮ್ಮ ಬಾಳಿಗೆ ಬೆಳಕು ತೋರಬಹುದೇ? ಇವೆಲ್ಲಕ್ಕಿಂತ ಮಿಗಿಲಾಗಿ ಅಂದಿನಿಂದ ಇಂದಿನವರೆಗೂ ಶಾಶ್ವತ ಮೌಲ್ಯಗಳು, ಆದರ್ಶಗಳು ಹಾಗೆಯೇ ಉಳಿದಿವೆ. ಅವುಗಳನ್ನು ಪಾಲಿಸಿದವರು ಸಾಧಕರಾಗಿದ್ದಾರೆ, ಪಾಲಿಸದವರು ಬದುಕಿನಲ್ಲಿ ಸೋತಿದ್ದಾರೆ. ಇದು ನಮ್ಮ ತಲೆಮಾರಿಗೂ, ಮುಂದಿನ ತಲೆಮಾರಿಗೂ ಮಾರ್ಗದರ್ಶಿಯಾದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT