ಮತಗಟ್ಟೆಗಳಲ್ಲಿಯೂ ಕವಿದಿದ್ದ ಕಾರ್ಮೋಡ

7
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ

ಮತಗಟ್ಟೆಗಳಲ್ಲಿಯೂ ಕವಿದಿದ್ದ ಕಾರ್ಮೋಡ

Published:
Updated:
ಮತಗಟ್ಟೆಗಳಲ್ಲಿಯೂ ಕವಿದಿದ್ದ ಕಾರ್ಮೋಡ

ಬೆಂಗಳೂರು: ಕಾರ್ಮೋಡಗಳು ಆವರಿಸಿಕೊಂಡು ಸೂರ್ಯರಶ್ಮಿ ಬೀಳದೆ ವಾತಾವರಣದಲ್ಲಿ ತಣ್ಣನೆಯ ಗಾಳಿ ಸುಳಿದಾಡುತ್ತಿತ್ತು. ಮತದಾನದ ಮೇಲೂ ಇದರ ಛಾಯೆ ಆವರಿಸಿದ್ದು, ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಜನರಿಂದಾಗಿ ಮತಗಟ್ಟೆಗಳಲ್ಲಿ ಮೌನ ನೆಲೆಸಿತ್ತು.

ಕೋಲಿನ ನೆರವು ಪಡೆದು ನಿಧಾನವಾಗಿ ಬರುತ್ತಿದ್ದ ಅಜ್ಜಂದಿರು, ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನಗುಮೊಗದಲ್ಲೇ ಕಂಡ ಅಜ್ಜಿಯರು, ಮಕ್ಕಳನ್ನು ಎತ್ತಿಕೊಂಡು ಸರಸರನೆ ನಡೆದು ಬರುತ್ತಿದ್ದ ಅಮ್ಮಂದಿರು, ಮೊದಲ ಬಾರಿ ಮತ ಚಲಾಯಿಸುವ ಖುಷಿಯಲ್ಲಿ ದೌಡಾಯಿಸುತ್ತಿದ್ದ ಕೆಲವೇ ಕೆಲವು ಯುವ ಮತದಾರರು...ಇವಿಷ್ಟು ಸೋಮವಾರ ನಡೆದ ಜಯನಗರ ಕ್ಷೇತ್ರದ ಮತದಾನದ ಚಿತ್ರಣಗಳು.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 9ರ ಸುಮಾರಿಗೆ ಶೇ 10ರಷ್ಟು ಮತ ಚಲಾವಣೆಯಾಗಿತ್ತು. ಮತಕೇಂದ್ರಗಳಲ್ಲಿ ವೃದ್ಧರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದು, ಯುವ ಮತದಾರರ ಸಂಖ್ಯೆ ವಿರಳವಾಗಿತ್ತು.

ಮತಗಟ್ಟೆಗಳ ಸಮೀಪದಲ್ಲಿ ಮತದಾರರಿಗಿಂತ ಪಕ್ಷದ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಅಧಿಕ ಸಂಖ್ಯೆಯಲ್ಲಿ ಮತದಾರರು ಬರದ ಕಾರಣ ಕೆಲವು ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣ ಶಾಲೆಯ ಮತಗಟ್ಟೆಯಲ್ಲಿ ಸುಮಾರು 700 ಮತಗಳಿದ್ದು, ಬೆಳಿಗ್ಗೆ 11ರವರೆಗೆ ಮತದಾನ ಮಾಡಿದವರ ಸಂಖ್ಯೆ ನೂರನ್ನೂ ದಾಟಿರಲಿಲ್ಲ!

ಮಂಡಿ ನೋವು, ಆಯಾಸವಿದ್ದರೂ 95 ವರ್ಷದ ದೊರೆಸ್ವಾಮಿ ಎಂಬುವರು ಮತ ಹಾಕಿದರು. 'ನಡೆಯಲು ಕಷ್ಟ ಆಗುತ್ತದೆ. ನಮ್ಮ ಹಕ್ಕು ಚಲಾಯಿಸುವುದನ್ನು ಬಿಡಬಾರದು ಎಂಬ ಒಂದೇ ಉದ್ದೇಶದಿಂದ ಮತ ಚಲಾಯಿಸಿದ್ದೇನೆ. ಮತ ಚಲಾಯಿಸುವ ಬಗ್ಗೆ ಯುವಜನತೆ ಅಸಡ್ಡೆ ತೋರಬಾರದು' ಎಂದು ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌, ಸುಮಲತಾ ಅಂಬರೀಷ್‌, ಮೇಘನಾ ರಾಜ್‌, ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್, ತಾರಾ ಅನೂರಾಧಾ, ‘ಮುಖ್ಯಮಂತ್ರಿ’ ಚಂದ್ರು ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಬಿ.ಎನ್‌.ಪ್ರಹ್ಲಾದ್ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.

ಇಕ್ಕಟ್ಟಿನ ಮತಗಟ್ಟೆ: ಗುರಪ್ಪನಪಾಳ್ಯದ ಮತಗಟ್ಟೆ 88 ಅತ್ಯಂತ ಚಿಕ್ಕದ್ದಾಗಿದ್ದು, ಇಕ್ಕಟ್ಟಿನಲ್ಲಿಯೇ ಮತದಾನ ಪ್ರಕ್ರಿಯೆ ನಡೆಯುತ್ತಿತ್ತು. 10 ಅಡಿ ಉದ್ದ 8 ಅಡಿ ಅಗಲವಿದ್ದ ಕೊಠಡಿಯಲ್ಲಿ ಅಧಿಕಾರಿಗಳು ಪಕ್ಕಪಕ್ಕವೇ ಕುಳಿತು ಕೆಲಸ ನಿರ್ವಹಿಸುತ್ತಿದ್ದರು.

ಜಯನಗರದ 173 ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. 'ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಖಂಡಿತ ನಮಗೆ ಯಶಸ್ಸು ನೀಡುತ್ತಾರೆ. ಎಲ್ಲರೂ ಮತದಾನ ಮಾಡಬೇಕು ಎಂಬುದೇ ನಮ್ಮ ಮನವಿ' ಎಂದರು.

ಮತಗಟ್ಟೆ ಸಂಖ್ಯೆ 158ರಲ್ಲಿ ಅಂಗವಿಕಲ ಅನಿಲ್‌ಕುಮಾರ್‌ ಎಂಬುವರು ಗಾಲಿಕುರ್ಚಿಯಲ್ಲಿ ಬಂದು ಮತ ಚಲಾಯಿಸಿದರು. ಕೆಲವು ಕಡೆಗಳಲ್ಲಿ ಗಾಲಿಕುರ್ಚಿಗಳನ್ನು ತಳ್ಳಿಕೊಂಡು ಹೋಗುವುದಕ್ಕಾಗಿ ಸರಿಯಾಗಿ ವ್ಯವಸ್ಥೆ ಇಲ್ಲದೆ, ವೃದ್ಧರು ತೊಂದರೆ ಅನುಭವಿಸಿದರು.

ಗಮನ ಸೆಳೆದ ಮೈಸೂರು ಪೇಟಧಾರಿಗಳು

ಜೆ.ಪಿ.ನಗರ ನಾಲ್ಕನೇ ಹಂತದಲ್ಲಿನ ಕ್ಲಾರೆನ್ಸ್‌ ಶಾಲೆಗೆ ಪೇಟ ಧರಿಸಿ ಮತಚಲಾಯಿಸಲು ಬಂದಿದ್ದ ದತ್ತಾತ್ರೆಯ ಎಲ್ಲರ ಗಮನ ಸಳೆದರು. ‘ಬಿಜೆಪಿ ಅಭ್ಯರ್ಥಿ ಪರವಾಗಿ ಮತಚಲಾಯಿಸಲು ಬಂದಿದ್ದೇನೆ. ವಿಭಿನ್ನವಾಗಿ ಮತಚಲಾಯಿಸಬೇಕು ಎನ್ನುವ ಕಾರಣದಿಂದ ಮೈಸೂರು ಪೇಟ ಧರಿಸಿದ್ದೇನೆ’ ಎಂದು ಅವರು ಹೇಳಿದರು.

ಜೆ.ಪಿ ನಗರದ ವಿಇಟಿ ಕಾಲೇಜಿನಲ್ಲಿ  ಹಿರಿಯ ನಾಗರಿಕ ಮುನಿಯಪ್ಪ ಎಂಬುವರು ಮೈಸೂರು ಪೇಟ ಧರಿಸಿ ಮತ ಚಲಾಯಿಸಿದರು.

* ನಾನೂ ಸಂವಿಧಾನಿಕ ಹಕ್ಕು ಚಲಾಯಿಸಿದೆ ಎಂಬ ಖುಷಿ ಉಂಟಾಗುತ್ತಿದೆ. ಈಗ ನಾನೊಬ್ಬಳು ಪ್ರಜೆ ಎಂದು ಕರೆದುಕೊಳ್ಳಬಹುದು. ನಾನೇ ಯೋಚಿಸಿ ಮತ ಹಾಕಿದ್ದೇನೆ. ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆಯೂ ನಮ್ಮ ಮನೆಯಲ್ಲಿ ಮಾತುಕತೆಗಳು ನಡೆಯಲಿಲ್ಲ.

-ವಿ. ನಿಖಿತಾ

ಉತ್ತಮ ಅನುಭವ ಎನ್ನಬಹುದು. ನನ್ನ ಸ್ನೇಹಿತರೆಲ್ಲರೂ ತಾವು ಮತದಾನ ಮಾಡಿದ್ದರ ಬಗ್ಗೆ ಹೇಳಿದ್ದರು. ಗೊಂದಲಗಳಿದ್ದವು, ನನಗೇ ಅನುಭವಾದಾಗ ಖುಷಿ ಎನಿಸಿತು. ಮತದಾರರ ಚೀಟಿ ಸಿಕ್ಕ ತಕ್ಷಣವೇ ಮತದಾನಕ್ಕೆ ಅವಕಾಶ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ.

-ಶಿವಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry