‘ಮತಕ್ಕಾಗಿ ಭಿಕ್ಷೆ ಬೇಡುವವರಿಂದ’ ಇಫ್ತಾರ್ ಕೂಟ: ಬಿಜೆಪಿ ಶಾಸಕ

7

‘ಮತಕ್ಕಾಗಿ ಭಿಕ್ಷೆ ಬೇಡುವವರಿಂದ’ ಇಫ್ತಾರ್ ಕೂಟ: ಬಿಜೆಪಿ ಶಾಸಕ

Published:
Updated:
‘ಮತಕ್ಕಾಗಿ ಭಿಕ್ಷೆ ಬೇಡುವವರಿಂದ’ ಇಫ್ತಾರ್ ಕೂಟ: ಬಿಜೆಪಿ ಶಾಸಕ

ಹೈದರಾಬಾದ್: ‘ಮತಕ್ಕಾಗಿ ಭಿಕ್ಷೆ ಬೇಡುವವರು’ ಮಾತ್ರ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಾರೆ’ ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಲೋಧ್ ಹೇಳಿದ್ದಾರೆ.

‘ಈಚೆಗೆ ತೆಲಂಗಾಣದ ಹಲವು ಶಾಸಕರು ಇಫ್ತಾರ್ ಕೂಟಗಳನ್ನು ಆಯೋಜಿಸುವುದು, ಮುಸ್ಲಿಮರ ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ನಾನು ಅಂತಹ ಕೂಟಗಳನ್ನು ಆಯೋಜಿಸುವುದಿಲ್ಲ ಮತ್ತು ಭಾಗವಹಿಸುವುದೂ ಇಲ್ಲ’ ಎಂದು ಗೋಶಾಮಹಲ್ ಕ್ಷೇತ್ರದ ಶಾಸಕರಾಗಿರುವ ರಾಜಾ ಹೇಳಿದ್ದಾರೆ.

ವಿವಾದಿತ ಹೇಳಿಕೆಗಳಿಗೆ ಹೆಸರಾಗಿರುವ ರಾಜಾ, ರಂಜಾನ್‌ ಮಾಸದಲ್ಲಿ ಹಲವು ಶಾಸಕರು ಮಾಡುವಂತೆ ಇಫ್ತಾರ್‌ ಕೂಟವನ್ನು ಆಯೋಜಿಸಲು ಸ್ನೇಹಿತರೊಬ್ಬರು ತಮಗೆ ಸಲಹೆ ನೀಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

‘ಮತಗಟ್ಟೆ ರಾಜಕಾರಣ ಮಾಡಿದರೆ, ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ ಸಾಧ್ಯ ಎನ್ನುವುದು ಇಫ್ತಾರ್‌ಕೂಟದಲ್ಲಿ ಭಾಗವಹಿಸುತ್ತಿರುವವರ ಯೋಚನೆ. ಆದರೆ, ನನ್ನ ಯೋಚನೆ ವಿಭಿನ್ನವಾದುದು’ ಎಂದಿದ್ದಾರೆ.

‘ಪ್ರತಿಯೊಬ್ಬರಿಗೂ ಗೌರವ ನೀಡುವುದನ್ನು ಹಿಂದೂ ಧರ್ಮ ನನಗೆ ಕಲಿಸಿದೆ. ಆದರೆ ಕೆಲವು ಧರ್ಮಗಳು ಹಾಗೂ ಅವರ ಧಾರ್ಮಿಕ ಗ್ರಂಥಗಳು ಕಾಫಿರ್‌ಗಳಾದ ಹಿಂದೂಗಳನ್ನು (ನಿಜವಾದ ಅರ್ಥ ನಾಸ್ತಿಕ ಎಂದು, ಆದರೆ ರೂಢಿಯಲ್ಲಿ ಇದನ್ನು ಇತರ ಧರ್ಮಗಳನ್ನು ಅವಮಾನಿಸುವವರು ಎಂದು ಪರಿಗಣಿಸಲಾಗುತ್ತದೆ)  ಕೊಲ್ಲಬೇಕು ಎಂದು ಬೋಧಿಸುತ್ತವೆ. ಹಿಂದೂಗಳನ್ನು ಕೊಲ್ಲಬೇಕು ಎನ್ನುವವರಿಗಾಗಿ ನಾನು ಹೇಗೆ ಇಫ್ತಾರ್ ಆಯೋಜಿಸಲಿ ಅಥವಾ ಅದರಲ್ಲಿ ಭಾಗವಹಿಸಲಿ’ ಎಂದು ಅವರು ಪ್ರಶ್ನಿಸಿದ್ದಾರೆ. 

‘50ಕ್ಕೂ ಹೆಚ್ಚು ಮುಸ್ಲಿಂ ರಾಷ್ಟ್ರಗಳು ಹಾಗೂ 100ಕ್ಕೂ ಹೆಚ್ಚು ಕ್ರೈಸ್ತ ರಾಷ್ಟ್ರಗಳು ಇರುವಾಗ, ಒಂದು ಹಿಂದೂ ರಾಷ್ಟ್ರ ಇರಬಾರದೇಕೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳಿಗಾಗಿ ಹೈದರಾಬಾದ್‌ ಪೊಲೀಸರು ಈ ಮೊದಲು ರಾಜಾ ಅವರ ವಿರುದ್ಧ ಸಾಕಷ್ಟು ಬಾರಿ ಪ್ರಕರಣ ದಾಖಲಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿರೋಧಿಸುವವರ ತಲೆ ಕತ್ತರಿಸಬೇಕು ಎಂದು ಅವರು ಹಿಂದೊಮ್ಮೆ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry