ಶಿಕ್ಷಣ ಮಾನದಂಡವೇ?

7

ಶಿಕ್ಷಣ ಮಾನದಂಡವೇ?

Published:
Updated:

ಎಂಟನೇ ತರಗತಿವರೆಗಷ್ಟೇ ಓದಿರುವ ಜಿ.ಟಿ‌. ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ಕೊಟ್ಟ ಬಗ್ಗೆ ವಿದ್ಯಾವಂತರು ಎನಿಸಿಕೊಂಡ ಹಲವರು ಕುಹಕವಾಡಿದ್ದಾರೆ. ಇದು ಇಂದಿನ ವಿದ್ಯಾವಂತಿಕೆಯನ್ನು ನಾಜೂಕಾಗಿ ವಿಡಂಬನೆ ಮಾಡುತ್ತಿದೆ.

ಜನಪ್ರತಿನಿಧಿ, ಮಂತ್ರಿಗಳು ಈ ದೇಶದ ಆಡಳಿತವನ್ನು ಪೂರ್ತಿ ನಡೆಸುವವರಲ್ಲ. ಅದನ್ನು ಮಾಡಲು ಬೃಹತ್ ಆಡಳಿತ ಯಂತ್ರವಿದೆ. ಮಂತ್ರಿಯಾದವ ಆ ಯಂತ್ರದ ಒಂದು ಸಣ್ಣ ಭಾಗ, ಆಡಳಿತ ಎಂಬುದು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕಾದ್ದು ಅವನ ಜವಾಬ್ದಾರಿ. ಆದರೆ ನಮ್ಮಲ್ಲಿ ಅದನ್ನು ಅರ್ಥೈಸಿಕೊಳ್ಳದೆಯೂ ವಿದ್ಯಾವಂತರಾಗಬಹುದು!

ರಕ್ಷಣಾ ಮಂತ್ರಿಯಾಗುವಾತ ಮಿಲಿಟರಿ‌ ಕಮಾಂಡರ್ ಆಗಿರಬೇಕಿಲ್ಲ, ಗೃಹ ಮಂತ್ರಿ ಪೊಲೀಸ್ ಕಮಿಷನರ್ ಅಲ್ಲ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹೋಟೆಲಿನವರ ಬಳಿ‌ ಇರುವುದಿಲ್ಲ, ಇರಬಾರದು ಕೂಡ. ಹಾಗೆ ನೋಡಿದರೆ ಒಬ್ಬ ಕಮಾಂಡರ್, ಒಬ್ಬ ಕಮಿಷನರ್, ಓರ್ವ ಹೋಟೆಲ್ ಉದ್ಯಮಿ ಮಂತ್ರಿಯಾಗುವ ಅರ್ಹತೆ ಹೊಂದಿರುವುದಿಲ್ಲ. ಆತ ತನ್ನ ಹುದ್ದೆ ಬಿಟ್ಟು ಬಂದು ಚುನಾವಣೆಯಲ್ಲಿ ಗೆದ್ದಾಗ ಆ ಅರ್ಹತೆ ಪಡೆಯುತ್ತಾನೆ.

ಮುಜರಾಯಿ ಇಲಾಖೆಗೆ ಬ್ರಾಹ್ಮಣರನ್ನೇ ನೇಮಿಸಬೇಕು‌ ಎಂಬುದು ಎಷ್ಟು ಅಪಸವ್ಯವೋ ಉನ್ನತ ಶಿಕ್ಷಣ ಖಾತೆಯ ಹೊಣೆಯನ್ನು ಉನ್ನತ ಶಿಕ್ಷಣ ಪಡೆದಾತನೇ ವಹಿಸಬೇಕು ಎಂಬುದೂ ಅಷ್ಟೇ ಮೂರ್ಖತನ. ವಿದ್ಯಾವಂತರು ಎನಿಸಿಕೊಂಡವರಿಗೆ ಇದು ಗೊತ್ತಿಲ್ಲದೆ ವಿಡಂಬನೆ ಮಾಡುತ್ತಿದ್ದಾರೆ. ಆದರೆ ಆ ವಿಡಂಬನೆಗಳು ಮೂಲತಃ ಅವರೆಡೆಗೇ ಬೊಟ್ಟು ಮಾಡುತ್ತಿರುವಂತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry