ವಾಚ್ ಪ್ರಕರಣ ಸಿಬಿಐಗೆ: ಅರ್ಜಿ ವಜಾ

7

ವಾಚ್ ಪ್ರಕರಣ ಸಿಬಿಐಗೆ: ಅರ್ಜಿ ವಜಾ

Published:
Updated:

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಡಾ. ಗಿರೀಶ್ ಚಂದ್ರ ವರ್ಮಾರಿಂದ ದುಬಾರಿ ಮೌಲ್ಯದ ಹ್ಯೂಬ್ಲೊ ವಾಚು ಪಡೆದಿದ್ದಾರೆ ಎಂಬ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಈ ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಅರ್ಜಿ ಹಿಂಪಡೆಯಬಹುದು. ಅಗತ್ಯವಿದ್ದರೆ ಅರ್ಜಿದಾರರು ಬೇರೊಂದು ವೇದಿಕೆಯಲ್ಲಿ ಪ್ರಕರಣದ ಸಂಬಂಧ ಕಾನೂನಿನ ಪ್ರಕಾರ ಮುಂದುವರಿಸಬಹುದು ಎಂದು ‌ಸೂಚಿಸಿತು. ಅದಕ್ಕೆ ಒಪ್ಪಿದ ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್, ಅರ್ಜಿ ಹಿಂಪಡೆದರು.

ಕೆಪಿಎಸ್‌ಸಿ ನೇಮಕಾತಿ ವಿಚಾರಣೆ ಆರಂಭ: ಸುಪ್ರೀಂ ಕೋರ್ಟ್ ಆದೇಶದಂತೆ 2011ನೇ ಸಾಲಿನ 362 ಎ ಮತ್ತು ಬಿ ಶ್ರೇಣಿಯ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಆರಂಭಿಸಿತು.

ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಶೇಷ ವಿಭಾಗೀಯ ಪೀಠ, ಸೋಮವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಕೆಲ ಹೊತ್ತು ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಸುಳ್ಳು ಪ್ರಕರಣ: ಪೊಲೀಸರ ವಿರುದ್ಧ ಅರ್ಜಿಗೆ ಹೈಕೋರ್ಟ್‌ ಸಲಹೆ

ಬೆಂಗಳೂರು: ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದಡಿ ಮಹೇಂದ್ರ ಕುಮಾರ್ ಪಾಲ್ ಎಂಬುವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ, ಮಂಗಳೂರಿನ ಬರ್ಕೆ ಠಾಣಾ ಪೊಲೀಸರ ವಿರುದ್ಧ ಪರಿಹಾರ ಕೋರಿ ಅರ್ಜಿ ದಾಖಲಿಸಲು ಹೈಕೋರ್ಟ್ ಸಲಹೆ ನೀಡಿದೆ.

ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕದಸ್ಯ ಪೀಠವು ಈ ಸಲಹೆ ನೀಡಿತು.

ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ, ‘ಅರ್ಜಿದಾರರ ಮಹೇಂದ್ರ ಕುಮಾರ್ ಪಾಲ್ ವಿರುದ್ಧ ಬರ್ಕೆ ಠಾಣಾ ಪೊಲೀಸರು ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಅವರು  ಮೂರು ದಿನ ಜೈಲು ವಾಸ ಅನುಭವಿಸಿ, ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅರ್ಜಿದಾರರರನ್ನು ಆರೋಪಿಗಳ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ’ ಎಂದರು.

‘ಪೊಲೀಸರು ಸುಳ್ಳು ಪ್ರಕರಣದಲ್ಲಿ ಅಮಾಯಕರಾದ ಅರ್ಜಿದಾರರರನ್ನು ಸಿಲುಕಿಸಿದ್ದಾರೆ. ಪ್ರಕರಣದಿಂದ ಅರ್ಜಿದಾರರು ಕಿರುಕುಳ, ಅವಮಾನ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಪುರಾವೆಗಳು ಇಲ್ಲವಾದ್ದರಿಂದ ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿದರು.

ಆಗ ನ್ಯಾಯಮೂರ್ತಿಗಳು, ‘ದೋಷಾರೋಪ ಪಟ್ಟಿಯಿಂದ ಅರ್ಜಿದಾರರ ಹೆಸರು ಕೈ ಬಿಟ್ಟಿರುವಾಗ, ಎಫ್‌ಐಆರ್ ರದ್ದುಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಕಾರಣ, ಎಫ್‌ಐಆರ್ ಅನ್ನು ದೋಷಾರೋಪಪಟ್ಟಿಯಲ್ಲಿ ವಿಲೀನ ಮಾಡಲಾಗಿರುತ್ತದೆ. ಆದರೆ, ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧ ಸಂತ್ರಸ್ತನು ಪರಿಹಾರ ಧನ ಕೋರಿ ತಕರಾರು ಅರ್ಜಿ ಸಲ್ಲಿಸಬಹುದು. ಹೈಕೋರ್ಟ್ ಸಹ ಈ ಹಿಂದೆ ಸುಳ್ಳು ಪ್ರಕರಣವೊಂದನ್ನು ದಾಖಲಿಸಿದ್ದ ಪೊಲೀಸರಿಗೆ ಮೂರು ಲಕ್ಷ ದಂಡ ವಿಧಿಸಿ, ಸಂತ್ರಸ್ತನಿಗೆ ಆ ಹಣವನ್ನು ಪರಿಹಾರವಾಗಿ ನೀಡಲು ಸೂಚಿಸಿತ್ತು. ಅಲ್ಲದೆ, ಪರಿಹಾರವು ಸಂತ್ರಸ್ತನಿಗೆ ತೃಪ್ತಿಯಾಗದಿದ್ದರೆ, ತನಗೆ ಉಂಟಾದ ಹಾನಿಯ ಪರಿಹಾರಕ್ಕಾಗಿ ಸಿವಿಲ್ ಅರ್ಜಿಯನ್ನೂ ದಾಖಲಿಸಬಹುದು ಎಂದು ಅನುಮತಿಯನ್ನೂ ನೀಡಿತ್ತು. ಅದರಂತೆ ಅರ್ಜಿದಾರರನು ಸಹ ತನಗಾದ ಹಾನಿಗೆ ಪರಿಹಾರ ಕೋರಿ ಪೊಲೀಸರ ವಿರುದ್ಧ ತಕರಾರು ಅರ್ಜಿ ಸಲ್ಲಿಸಬಹುದು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry