ಕಾಶ್ಮೀರ ಸಮಸ್ಯೆ ಮಾತುಕತೆಯೇ ಮದ್ದು

7

ಕಾಶ್ಮೀರ ಸಮಸ್ಯೆ ಮಾತುಕತೆಯೇ ಮದ್ದು

Published:
Updated:
ಕಾಶ್ಮೀರ ಸಮಸ್ಯೆ ಮಾತುಕತೆಯೇ ಮದ್ದು

‘ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಡಿ.ಪಿ. ವತ್ಸ್‌ ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಗಳಿಂದ ಈಗ ಕಾಶ್ಮೀರದಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎನ್ನುವುದಂತೂ ನಿಜ.

ಕಳೆದ ಮೂರು ದಶಕಗಳ ಕಾಶ್ಮೀರದ ರಕ್ತಸಿಕ್ತ ನಾಗರಿಕ ಇತಿಹಾಸವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಸತ್ತಿನಲ್ಲಿ ನೀಡಿರುವ ಗೃಹ ಸಚಿವರ ಹೇಳಿಕೆಯ ಪ್ರಕಾರವೇ, 1990ರಿಂದ 2011ರವರೆಗೆ ಕಾಶ್ಮೀರದಲ್ಲಿ 39,918 ಜನರು ಘರ್ಷಣೆಗಳಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲಿನ ಪ್ರತ್ಯೇಕತಾವಾದಿ ನಾಯಕರ ಪ್ರಕಾರ ಈ ಸಂಖ್ಯೆ ಎರಡು ಪಟ್ಟು ಹೆಚ್ಚಿದೆ. ಈ ಅವಧಿಯಲ್ಲಿ ಉಗ್ರಗಾಮಿಗಳ ದಾಳಿಗಳಲ್ಲಿ 13,226 ನಾಗರಿಕರು ಮತ್ತು 5,369 ಮಂದಿ ಭದ್ರತಾ ಸಿಬ್ಬಂದಿ ಮೃತರಾಗಿದ್ದಾರೆ ಎಂದು ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಕಾಶ್ಮೀರದ ಘರ್ಷಣೆಯನ್ನು ಪೂರ್ಣವಾಗಿ ತಹಬಂದಿಗೆ ತರಲು ಇದುವರೆಗೆ ಸಾಧ್ಯವಾಗಿಲ್ಲ. ಪ್ರತಿವರ್ಷವೂ ಒಂದಲ್ಲ ಒಂದು ಕಾರಣಕ್ಕೆ ಅಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ನಡುವೆ ಘರ್ಷಣೆ ಭುಗಿಲೇಳುತ್ತಲೇ ಇದೆ. ನಾಗರಿಕರೆಲ್ಲರನ್ನೂ ಉಗ್ರಗಾಮಿಗಳೆಂದು ಪರಿಗಣಿಸುವುದಾಗಲೀ, ಕಲ್ಲು ತೂರುವವರೆಲ್ಲರನ್ನೂ ಮುಗ್ಧರು ಎಂದು ಭಾವಿಸುವುದಾಗಲೀ, ಎರಡೂ ತಪ್ಪೇ. ಪ್ರತ್ಯೇಕತಾವಾದಿ ನಾಯಕರು ಅಲ್ಲಿನ ಜನಮಾನಸದ ಮೇಲೆ ಬೀರಿರುವ ಪ್ರಭಾವವನ್ನು ತಗ್ಗಿಸುವ ರಾಜತಾಂತ್ರಿಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಸತತವಾಗಿ ಕೈಗೊಳ್ಳುವಲ್ಲಿ ಸರ್ಕಾರ ಸೋಲುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ತಹಬಂದಿಗೆ ತರಲು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಕಳೆದ ವಾರ ಕೆಲವು ಸದಾಶಯದ ಕ್ರಮಗಳನ್ನು ಪ್ರಕಟಿಸಿದ್ದರು. ರಂಜಾನ್‌ ಉಪವಾಸದ ತಿಂಗಳಲ್ಲಿ ಗಡಿಯಲ್ಲಿ ಕದನ ವಿರಾಮವನ್ನು ಏಕಪಕ್ಷೀಯವಾಗಿ ಘೋಷಿಸಿರುವುದು ಅದರಲ್ಲಿ ಮಹತ್ವದ ಕ್ರಮವಾಗಿತ್ತು. ಅದರ ಬೆನ್ನಲ್ಲೇ ಜಮ್ಮು– ಕಾಶ್ಮೀರಕ್ಕೆ ಭೇಟಿ ನೀಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದ ಅವರು, ಕಲ್ಲು ತೂರಾಟದ ಆರೋಪದಡಿ ಬಂಧಿಸಲಾಗಿದ್ದ ಅಪ್ರಾಪ್ತ ವಯಸ್ಕರ ಮೇಲಿನ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ಸೂಚಿಸಿದ್ದರು.

ಕಾಶ್ಮೀರದ ವಿವಿಧೆಡೆ ಕಲ್ಲು ತೂರಾಟದಲ್ಲಿ ತೊಡಗಿದ್ದ 14,208 ಜನರ ಮೇಲೆ ಮೊಕದ್ದಮೆ ಹೂಡಲಾಗಿದ್ದು, 4,066 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಸಚಿವರ ನೇತೃತ್ವದ ಸಮಿತಿಯ ಪರಿಶೀಲನೆಯ ಬಳಿಕ 530 ಎಳೆಯರ ವಿರುದ್ಧದ 61 ಎಫ್‌ಐಆರ್‌ಗಳನ್ನು ರದ್ದು ಮಾಡಿರುವುದಾಗಿ ಅಧಿಕಾರಿಗಳು ಪ್ರಕಟಿಸಿದ್ದರು. ಹೀಗೆ ಒಂದು ಕಡೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಜಾಣ್ಮೆಯ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ಆಡಳಿತ ಪಕ್ಷಕ್ಕೆ ಸೇರಿದ ಸಂಸದರೊಬ್ಬರು ಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದಿಸುವುದು ಎಳ್ಳಷ್ಟೂ ಸರಿಯಲ್ಲ.

ಕಾಶ್ಮೀರದ ವಿಷಯದಲ್ಲಿ ಸರ್ಕಾರ ದ್ವಂದ್ವನೀತಿ ಅನುಸರಿಸುತ್ತಿದೆ ಎನ್ನುವ ಭಾವನೆಯನ್ನೂ ಸಂಸದರ ಈ ಹೇಳಿಕೆ ಹುಟ್ಟುಹಾಕಿದೆ. ಮಾತುಕತೆಯ ಮೂಲಕ ಮಾತ್ರವೇ ಕಾಶ್ಮೀರದ ಪ್ರತ್ಯೇಕತಾವಾದಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹಲವು ಸಲ ಹೇಳಿದೆ. ಅಂತಹ ಜಾಣ್ಮೆಯ ಮತ್ತು ಮುತ್ಸದ್ದಿತನದ ಕ್ರಮಗಳಿಗೆ ಅಡ್ಡಿಪಡಿಸಲು ಸ್ವಪಕ್ಷೀಯರೇ ಮುಂದಾಗುವುದನ್ನು ಕೇಂದ್ರ ಗೃಹಸಚಿವರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಉಗ್ರಕ್ರಮಗಳು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ಇನ್ನಷ್ಟು ಬಲಶಾಲಿಗಳನ್ನಾಗಿಸುವ ಅಪಾಯವಿದೆ. ಅದಕ್ಕೆ ಖಂಡಿತಾ ಅವಕಾಶ ಕೊಡಕೂಡದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry