7
ಸರ್ಕಾರಿ ಕಚೇರಿಗಳನ್ನು ತರುತ್ತೇನೆ l ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಘೋಷಣೆ

‘ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವಾಗಿಸುವೆ’

Published:
Updated:
‘ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವಾಗಿಸುವೆ’

ಬೆಳಗಾವಿ: ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಬಿಜೆಪಿಯ ಮಹಾಂತೇಶ ದೊಡ್ಡಗೌಡರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯಾಗಿದ್ದ ಡಿ.ಬಿ.ಇನಾಮದಾರ ಅವರನ್ನು ಸೋಲಿಸಿದ್ದಾರೆ. ಇದರಿಂದ ಜನರ ನಿರೀಕ್ಷೆ ಹೆಚ್ಚಾಗಿವೆ. ಸ್ಥಳೀಯ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕ್ರಮಗಳ ಕುರಿತು ಅವರು ‘ಪ್ರಜಾವಾಣಿ’  ಸಂದರ್ಶನದಲ್ಲಿ ಹಂಚಿಕೊಂಡರು. ಸಂದರ್ಶನದ ಪೂರ್ಣಪಾಠ ಇಲ್ಲಿದೆ;

ನೀವು ನೋಡಿದಂತೆ ಕ್ಷೇತ್ರದಲ್ಲಿ ಯಾವೆಲ್ಲ ಸಮಸ್ಯೆಗಳಿವೆ?

ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸುಧಾರಣೆಯಾಗಬೇಕಿದೆ. ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮೀಣ ಭಾಗದಲ್ಲಿ ಬಸ್‌ ನಿಲ್ದಾಣಗಳಿಲ್ಲ. ಇದರ ಜೊತೆಗೆ ಬಸ್‌ ಸಂಪರ್ಕ ಕೂಡ ಸಮರ್ಪಕವಾಗಿಲ್ಲ. ಎಂ.ಕೆ. ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆ ಇಲ್ಲ, ಪಿ.ಯು ಕಾಲೇಜು ಇಲ್ಲ. ಇವುಗಳನ್ನು ತರಲು ಪ್ರಯತ್ನಿಸುವೆ. ಇವುಗಳ ಜೊತೆಗೆ ಕೆರೆ ತುಂಬಿಸುವ ಯೋಜನೆಗಳು ಹಾಗೂ ಮಾರ್ಕಂಡೇಯ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸವಾಲು ಇದೆ. ನೀರಾವರಿಗೆ ಮೊದಲ ಆದ್ಯತೆ ನೀಡುತ್ತೇನೆ.

ಕಿತ್ತೂರು ಕೋಟೆ ಸಂರಕ್ಷಣೆಗೆ ಏನು ಕ್ರಮಕೈಗೊಳ್ಳುತ್ತಿದ್ದೀರಿ?

ನಮ್ಮಲ್ಲಿರುವ ಇತಿಹಾಸ ಪ್ರಸಿದ್ಧ ರಾಣಿ ಚನ್ನಮ್ಮ ಕೋಟೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಪ್ರಯತ್ನ ಮಾಡುವೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಚ್ಯವಸ್ತು ಇಲಾಖೆ ಹಾಗೂ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಿ, ಕ್ರಮಕೈಗೊಳ್ಳುವೆ. ಕೋಟೆ ಸುತ್ತಲೂ ಕಂದಕ

ವಿದ್ದು, ಇಲ್ಲಿ ನೀರು ತುಂಬಿಸಿ, ಬೋಟಿಂಗ್‌ ವ್ಯವಸ್ಥೆ ಮಾಡಬೇಕು. ಇತಿಹಾಸ ಸಾರುವ ಕೋಟೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅನುದಾನ ಸಾಕಷ್ಟು ಇದೆ. ಇದನ್ನು ಬಳಸಿಕೊಂಡು ಕೋಟೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ಬೈಲಹೊಂಗಲದ ಉಪವಿಭಾಗಾಧಿಕಾರಿ ಅವರ ಜೊತೆ ಚರ್ಚಿಸಿ, ಮುಂದಿನ ಯೋಜನೆ ರೂಪಿಸಲಾಗುವುದು.

ಕಿತ್ತೂರು ತಾಲ್ಲೂಕಾಗಿ ಹಲವು ವರ್ಷಗಳು ಕಳೆದಿದ್ದರೂ ಬಹುತೇಕ ಇಲಾಖೆಯ ಕಚೇರಿಗಳು ಇನ್ನೂ ಬಂದಿಲ್ಲವಲ್ಲ?

ಹೌದು, ತಹಶೀಲ್ದಾರ್‌ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇನ್ನುಳಿದ ಇಲಾಖೆಗಳ ಕಚೇರಿಗಳನ್ನು ತರಲು ಪ್ರಯತ್ನಿಸುವೆ. ಇದಕ್ಕಿಂತ ಮೊದಲು ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಬೇಕಾಗಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಆದಷ್ಟು ಬೇಗ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಇತರ ಇಲಾಖೆಗಳನ್ನು ಇಲ್ಲಿಗೆ ತರುತ್ತೇನೆ. ಕ್ಷೇತ್ರದ ಜನರು ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಬೈಲಹೊಂಗಲ, ಬೆಳಗಾವಿಗೆ ಅಲೆದಾಡುವುದನ್ನು ತಪ್ಪಿಸುತ್ತೇನೆ.

ಕೆಲವು ಪ್ರದೇಶಗಳಲ್ಲಿ ಹಕ್ಕು ಪತ್ರ ಸಮಸ್ಯೆ ಇದೆಯಲ್ಲ. ಇದನ್ನು ಬಗೆಹರಿಸಲು ಯಾವ ಕ್ರಮಕೈಗೊಳ್ಳುತ್ತೀರಿ?

ಕುಲವಳ್ಳಿ ಗ್ರಾಮದಲ್ಲಿ ಈ ಸಮಸ್ಯೆ ಇದೆ. ರೈತರು ಸಾಗುವಳಿ ಮಾಡುತ್ತಿರುವ ಕೆಲವು ಜಮೀನು ಅರಣ್ಯ ಇಲಾಖೆಗೆ ಸೇರಿದ್ದರೆ ಇನ್ನು ಕೆಲವು ಕಡೆ ಇನಾಮ ಭೂಮಿಯದ್ದಾಗಿದೆ. ಈ ಸಮಸ್ಯೆಯು ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪು ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ. ಹೊಸಕೋಟೆ, ಹಣಬರಟ್ಟಿಯಲ್ಲಿ ಕೆಲವು ರೈತರಿಗೆ ಹಕ್ಕು ಪತ್ರ ನೀಡಲಾಗಿದೆ. ಇನ್ನುಳಿದವರಿಗೂ ನೀಡಲು ಕ್ರಮಕೈಗೊಳ್ಳುತ್ತೇನೆ.

ನಿಗದಿತ ಕಾರ್ಯಕ್ರಮಗಳಲ್ಲದೇ ಬೇರೆ ಏನಾದರೂ ವಿಶೇಷವಾಗಿ ಯೋಚಿಸಿದ್ದೀರಾ?

ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇನೆ.

ಕಿತ್ತೂರು ಪಟ್ಟಣದಲ್ಲಿ ಮಾಸ್ಟರ್‌ಪ್ಲಾನ್‌ ಜಾರಿಗೊಳಿಸುವುದರ ಬಗ್ಗೆ ಏನು ಯೋಚಿಸಿದ್ದೀರಾ?

ಕಿತ್ತೂರು ಪಟ್ಟಣ ಈಗ ವೇಗವಾಗಿ ಬೆಳೆಯುತ್ತಿದೆ. ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಎಸ್‌.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಟ್ಟಣದಲ್ಲಿ ಮಾಸ್ಟರ್‌ಪ್ಲಾನ್‌ ಜಾರಿಗೊಳಿಸಲು ₹ 6 ಕೋಟಿ ಘೋಷಣೆ ಮಾಡಿದ್ದರು. ಇದರಲ್ಲಿ ₹ 2 ಕೋಟಿ ಬಿಡುಗಡೆಯೂ ಆಗಿತ್ತು. ಅಧಿಕಾರ ಬದಲಾದ ನಂತರ ಯೋಜನೆ ಅರ್ಧಕ್ಕೆ ನಿಂತುಬಿಟ್ಟಿದೆ. ಈಗ ಇಷ್ಟು ಹಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯ

ವಾಗುವುದಿಲ್ಲ. ಇನ್ನಷ್ಟು ಅನುದಾನ ಬಂದ ನಂತರ ಇದರ ಬಗ್ಗೆ ಯೋಚಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry