ಕೋಡಿಂಗ್‌ ಕೂಲಿ, ಹೈಟೆಕ್‌ ಗುಮಾಸ್ತ ಆಗದಿರಿ

7
ಬಿಐಇಟಿ ಪದವಿ ಪ್ರದಾನ ಸಮಾರಂಭದಲ್ಲಿ ಗ್ಯಾಲಕ್ಸಿ ಮಷಿನರಿ ಲಿ.ನ ವ್ಯವಸ್ಥಾಪಕ ಎಸ್‌. ಎಳಂಗೊ

ಕೋಡಿಂಗ್‌ ಕೂಲಿ, ಹೈಟೆಕ್‌ ಗುಮಾಸ್ತ ಆಗದಿರಿ

Published:
Updated:

ದಾವಣಗೆರೆ: ‘ಬ್ರಿಟಿಷರ ಕಾಲದಲ್ಲಿ ಕೂಲಿಕಾರ, ಗುಮಾಸ್ತರ ಕೆಲಸಗಳನ್ನು ಭಾರತೀಯರಿಂದ ಮಾಡಿಸುತ್ತಿದ್ದರು. ಸಾಫ್ಟ್‌ವೇರ್‌ ಯುಗದಲ್ಲಿ ಅಮೆರಿಕದ ಕಂಪನಿಗಳು ನಮ್ಮ ಎಂಜಿನಿಯರ್‌ಗಳಿಂದ ಕೋಡಿಂಗ್‌, ಡೇಟಾ ಆಪರೇಟಿಂಗ್‌, ಡೊಮೈನ್‌ ಮತ್ತು ಸಾಫ್ಟ್‌ವೇರ್‌ ರೈಟಿಂಗ್‌ನಂಥ ಕೆಲಸಗಳನ್ನು ಮಾಡಿಸುತ್ತಿವೆ’ ಎಂದು ಗ್ಯಾಲಕ್ಸಿ ಮಷಿನರಿ ಕಂಪನಿಯ ವ್ಯವಸ್ಥಾಪಕ ಎಸ್‌. ಎಳಂಗೊ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಬಾಪೂಜಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬ್ರಿಟಿಷರ ಆಳ್ವಿಕೆಯಲ್ಲಿ ಹತ್ತಿ ಬಿಡಿಸುವ, ಗಣಿ ಅಗೆಯುವ ಕೆಲಸಗಳನ್ನು ಭಾರತೀಯರು ಮಾಡಬೇಕಿತ್ತು. ಹತ್ತಿ ಗಿರಣಿ, ಕಬ್ಬಿಣದ ಕಾರ್ಖಾನೆಗಳು ಇಂಗ್ಲೆಂಡಿನಲ್ಲಷ್ಟೇ ಇದ್ದವು. ಈ ಕಾಲದಲ್ಲಿ ಸಾಫ್ಟ್‌ವೇರ್‌ ಹಾಗೂ ಆಟೊಮೊಬೈಲ್‌ ಕಂಪನಿಗಳು ಅಮೆರಿಕ ಮತ್ತು ಯೂರೋಪ್‌ನಲ್ಲೇ ಕೇಂದ್ರಿಕೃತವಾಗಿವೆ. ಹೆಚ್ಚಿನ ಉನ್ನತ ಹುದ್ದೆಗಳು ಅಲ್ಲಿಯವರ ಪಾಲಾಗಿವೆ. ಭಾರತೀಯ ಎಂಜಿನಿಯರ್‌ಗಳು ‘ಕೋಡಿಂಗ್‌ ಕೂಲಿ, ಗ್ಲೋರಿಫೈಯಿಂಗ್‌ ಗುಮಾಸ್ತ’ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ಅಮೆರಿಕದ ಕಂಪನಿಗಳ ಕೆಲಸವನ್ನು ಮಾಡುತ್ತಿರುವ ಭಾರತೀಯ ಎಂಜಿನಿಯರ್‌ಗಳಿಗೆ ತಾವು ಯಾವ ಕೋಡಿಂಗ್‌ ಮಾಡುತ್ತಿದ್ದೇವೆ. ಇದರಿಂದ ಏನು ಪ್ರಯೋಜನ ಎಂಬ ಮಾಹಿತಿಯೂ ಇರುವುದಿಲ್ಲ. ನಮ್ಮ ಎಂಜಿನಿಯರ್‌ಗಳು ಕೂಲಿಗಳಂತೆ ದುಡಿದೂ ದುಡಿದು ಸುಸ್ತಾಗುತ್ತಾರೆ. ಇವರ ಶ್ರಮದ ಫಲ ಇನ್ನಾರಿಗೊ ಸಿಗುತ್ತದೆ. ಹೀಗಾಗಿ, ಭಾರತೀಯ ಎಂಜಿನಿಯರ್‌ಗಳು ಸ್ವತಂತ್ರವಾಗಿ ಚಿಂತಿಸಬೇಕು. ಕೌಶಲ, ಬುದ್ಧಿಶಕ್ತಿ ಅನುಭವಗಳನ್ನು ಬೆಳೆಸಿಕೊಂಡು ಸ್ವಂತ ಉದ್ದಿಮೆ ಆರಂಭಿಸಲು ಶ್ರಮಿಸಬೇಕು. ಯಾವುದೋ ಕಂಪನಿಗೆ ಕೆಲಸ ಮಾಡುವ ಬದಲು ನಮ್ಮ ಪ್ರಗತಿಗೆ ನಾವೇ ದುಡಿಯುವುದು ಉತ್ತಮ’ ಎಂದು ಹೇಳಿದರು.

ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ‘ಬಿಐಇಟಿ ಕಾಲೇಜಿನ 35ನೇ ಪದವಿ ಪ್ರದಾನ ಸಮಾರಂಭವಿದು. 39 ವರ್ಷಗಳಲ್ಲಿ 25 ಸಾವಿರ ಎಂಜಿನಿಯರ್‌ಗಳನ್ನು ಸಮಾಜಕ್ಕೆ ಕಾಲೇಜು ಕೊಟ್ಟಿದೆ. ಇದು ಪೋಷಕರಿಂದಲೇ ಬೆಳೆದ ಕಾಲೇಜು. ಇದುವರೆಗೂ ₹ 700 ಕೋಟಿಯನ್ನು ಪೋಷಕರು ಕಾಲೇಜಿಗೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಓದಿಗಾಗಿ ಪ್ರತಿ ವರ್ಷ ಕಾಲೇಜಿನಿಂದ ₹ 30 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದರು.

ಕಾಲೇಜಿನಲ್ಲಿ ಇದುವರೆಗೂ 600 ಹೊಸ ಆವಿಷ್ಕಾರಗಳಾಗಿವೆ. 50 ಆವಿಷ್ಕಾರಗಳು ಉತ್ಪನ್ನಗಳಾಗಿ ತಯಾರಾಗುತ್ತಿವೆ. ಈ ವರ್ಷ 11 ವಿಭಾಗಗಳಿಂದ 700 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷವೂ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ಐದು ಆವಿಷ್ಕಾರಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ಅನುದಾನಕ್ಕೆ ಆಯ್ಕೆಯಾಗಿವೆ. ಹಣ್ಣು ಮತ್ತು ತರಕಾರಿ ಹೆಚ್ಚು ದಿನ ಕೊಳೆಯದಂತೆ ಸಂಸ್ಕರಿಸುವ ತಂತ್ರಜ್ಞಾನ, ತ್ಯಾಜ್ಯವಸ್ತು ಸಂಸ್ಕರಣೆ, ಅಡಿಕೆ ಸಿಪ್ಪೆಯಿಂದ ನೈಸರ್ಗಿಕ ನೂಲು ತಯಾರಿಕೆ, ಕಡಿಮೆ ಅವಧಿಯಲ್ಲಿ ರಕ್ತಪರೀಕ್ಷೆ ವಿಜ್ಞಾನ ಮಾದರಿಗಳನ್ನು ಆವಿಷ್ಕರಿಸಲಾಗಿದೆ ಎಂದರು.

ವಿದ್ಯಾರ್ಥಿಗಳ ಆವಿಷ್ಕಾರಗಳು ಸಮಾಜಕ್ಕೆ ಉಪಯೋಗವಾಗಬೇಕು. ಇದಕ್ಕಾಗಿ ಸರ್ಕಾರ ಅನುದಾನ ನೀಡಬೇಕು. ಕೈಗಾರಿಕೆಗಳೂ ಇಂಥ ಆವಿಷ್ಕಾರಗಳನ್ನು ಉತ್ಪಾದನಾ ಹಂತಕ್ಕೆ ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿಗಳೂ ತಮ್ಮ ಆವಿಷ್ಕಾರಗಳನ್ನು ಇನ್ನಷ್ಟು ನಿಖರಗೊಳಿಸಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ, ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಮುರುಗೇಂದ್ರಪ್ಪ, ಅಧ್ಯಯನ ಮತ್ತು ಸಂಶೋಧನಾ ಡೀನ್‌ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿದರು.

ಬಾಪೂಜಿ ಶಿಕ್ಷಣ ಸಂಸ್ಥೆ ಖಜಾಂಚಿ ಎ.ಸಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ.ಎಸ್‌. ನಾಗರಾಜ್, ಎಚ್‌.ಬಿ. ಅರವಿಂದ್‌, ಡಾ. ಎಸ್. ಕುಮಾರಪ್ಪ ಅವರೂ ಇದ್ದರು.

ಟ್ರಂಪ್‌ಗೆ ಥ್ಯಾಂಕ್ಸ್; ಭಾರತೀಯರಿಗೆ ಅಮೆರಿಕದಲ್ಲಿ ಉದ್ಯೋಗ ಕೊಡಲು ಕಡಿವಾಣ ಹಾಕುತ್ತಿದ್ದಾರೆ. ನಮ್ಮ ಎಂಜಿನಿಯರ್‌ಗಳು ಇಲ್ಲೇ ಸಾಧನೆ ಮಾಡಲಿ. ದೇಶಕ್ಕೆ ಕೊಡುಗೆ ನೀಡಲಿ

ಎಸ್‌. ಎಳಂಗೊ, ಗ್ಯಾಲಕ್ಸಿ ಮಷಿನರಿ ಲಿ.ನ ವ್ಯವಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry