ಬೀಜ, ಗೊಬ್ಬರ ಉಚಿತ ವಿತರಣೆಗೆ ಒತ್ತಾಯ

7
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ಕುರಿತು ಸಮಗ್ರ ಚರ್ಚೆ

ಬೀಜ, ಗೊಬ್ಬರ ಉಚಿತ ವಿತರಣೆಗೆ ಒತ್ತಾಯ

Published:
Updated:

ಧಾರವಾಡ: ‘ಈ ಬಾರಿಯ ಮುಂಗಾರು ಹಂಗಾಮಿಗೆ ಬೀಜ ಹಾಗೂ ಗೊಬ್ಬರವನ್ನು ರೈತರಿಗೆ ಉಚಿತವಾಗಿ ಹಂಚಬೇಕು. ರಾಜ್ಯ ಸರ್ಕಾರಕ್ಕೆ ಕೂಡಲೇ ಪತ್ರ ಬರೆದು ಚುನಾಯಿತ ಜನಪ್ರತಿನಿಧಿಗಳ ಬೇಡಿಕೆಯನ್ನು ತಿಳಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಒಕ್ಕೊರಲಿನ ಒತ್ತಾಯ ಮಾಡಿದರು.

ಜಿಲ್ಲಾ ಪಂಚಾಯ್ತಿಯಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಪೂರ್ವದಲ್ಲಿ ವಾಗ್ದಾನ ಮಾಡಿದಂತೆ ಹಾಗೂ ಅವರ ಪಕ್ಷದ ಪ್ರಣಾಳಿಕೆಯಂತೆ ಬಿತ್ತನೆ ಬೀಜ

ಹಾಗೂ ಗೊಬ್ಬರವನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷ ಚೈತ್ರಾ ಶಿರೂರ ಹಾಗೂ ಇತರ ಸದಸ್ಯರೂ ಇದಕ್ಕೆ ಧನಿಗೂಡಿಸಿದರು.

ತಾಡಪತ್ರಿ ತಾಪತ್ರಯ: ಪ್ರತಿ ತಾಲ್ಲೂಕಿಗೆ 500ರಂತೆ ತಾಡಪತ್ರಿ ಬಂದು ಮೂರು ತಿಂಗಳು ಕಳೆದರೂ ಹಂಚಿಲ್ಲ. ಮಾಹಿತಿಯನ್ನೂ

ನೀಡುತ್ತಿಲ್ಲ. ಇಷ್ಟು ಮಾತ್ರವಲ್ಲ, 2016–17ನೇ ಸಾಲಿನಲ್ಲಿ ತಾಡಪತ್ರಿ ಹಂಚಿಕೆ ಕುರಿತು ಕೇಳಿದ ಮಾಹಿತಿಗೂ ಉತ್ತರ ನೀಡಲ್ಲ. ಕೂಡಲೇ ಸಭೆಗೆ ಮಾಹಿತಿ ನೀಡಬೇಕು’ ಎಂದು ಕಾಂಗ್ರೆಸ್‌ನ ಕಲ್ಲಪ್ಪ ಪುಡಕಲಕಟ್ಟಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ಸಭೆ ಮುಗಿಯುವುದರೊಳಗಾಗಿ ಮಾಹಿತಿ ಕೊಡುತ್ತೇನೆ ಹೇಳಿದರು.

ಕಡಲೆ ಹಣ ಬಾಕಿ: ‘ಬೆಂಬಲ ಬೆಲೆಯಲ್ಲಿ ಖರೀದಿಸಿದ ಕಡಲೆಯ ಬೆಲೆ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. ಬಿತ್ತನೆಗೆ ಹಣವಿಲ್ಲದೆ ರೈತರು ತೊಂದರೆಗೆ ಸಿಲುಕಿದ್ದಾರೆ’ ಎಂದು ಚೈತ್ರಾ ಶಿರೂರ ಹೇಳಿದರು.

ಇದಕ್ಕೆ ಉತ್ತರಿಸಿದ ರುದ್ರೇಶಪ್ಪ, ‘ಜಿಲ್ಲೆಯಲ್ಲಿ ಒಟ್ಟು 20,315 ರೈತರಿಂದ ₹111 ಕೋಟಿ ಮೊತ್ತದ 2.54 ಲಕ್ಷ ಕ್ವಿಂಟಲ್‌ ಕಡಲೆ ಖರೀದಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ ₹4, 400ರಂತೆ ದರ ನಿಗದಿಪಡಿಸಲಾಗಿದೆ. ಈವರೆಗೂ ₹36 ಕೋಟಿ ಬಿಡುಗಡೆ ಆಗಿದೆ. ಬಾಕಿ ಉಳಿದ ₹75 ಕೋಟಿ ಒಂದು ವಾರದಲ್ಲಿ ಬಿಡುಗಡೆ ಆಗಲಿದೆ’ ಎಂದರು.

ಹತ್ತಿ ಬೆಳೆಗಾರರಿಗೆ ಮಾಹಿತಿ: ‘ಬಿಟಿ ಹತ್ತಿಗೆ ವಿಶೇಷ ಬಗೆಯ ಹುಳು ಕಾಟ ಶುರುವಾಗಿದ್ದು, ಔಷಧ ಸಿಂಪಡಿಸಬೇಕು. ಬಿಟಿ ಹತ್ತಿ ಬೆಳೆದರೆ ಔಷಧ ಸಿಂಪಡಿಸುವ ಅಗತ್ಯವಿಲ್ಲ ಎಂದು ರೈತರು ತಿಳಿದುಕೊಂಡಿದ್ದಾರೆ. ಆದರೆ, ಗುಜರಾತ್, ತೆಲಂಗಾಣದಲ್ಲಿ ಈಗಾಗಲೇ ಈ ಕೀಟ ಸಾಕಷ್ಟು ಹಾನಿ ಮಾಡಿದೆ. ಆದ್ದರಿಂದ ಕೀಟನಾಶಕ ಸಿಂಪಡಿಸುವುದು ಅಗತ್ಯ’ ಎಂದು ಮಾಹಿತಿ ನೀಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ‘ಈವರೆಗೂ ಎಷ್ಟು ರೈತರ ಬಳಿ ಹೋಗಿ ಮಾಹಿತಿ ಮುಟ್ಟಿಸಿದ್ದೀರಿ? ಸಭೆಗೆ ಬಂದರೆ ಮಾತ್ರ ಇಂಥ ವಿಷಯ ತಿಳಿಯುತ್ತದೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಹತ್ತಿ ಬೆಳೆಗಾರರಿಗೆ ಮಾಹಿತಿ ನೀಡಿಲ್ಲ. ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಹೀಗಾಗಿ, ಸಮರೋಪಾದಿಯಲ್ಲಿ ರೈತರಿಗೆ ವಿಷಯ ಮುಟ್ಟಿಸುವುದು ತೀರಾ ಅಗತ್ಯವಾಗಿದೆ’ ಎಂದರು.

ತೋಟಗಾರಿಕೆ ಇಲಾಖೆಯ ‘ಪಾಲಿಹೌಸ್‌’ ಸೌಲಭ್ಯ ರೈತರಿಗೆ ತಲುಪಿಲ್ಲ. ಅಡುಗೆಮನೆ, ಕೈತೋಟ ಎಂಬ ಯೋಜನೆಗಳನ್ನು ಜನರಿಗೆ

ಮುಟ್ಟಿಸುತ್ತಿಲ್ಲ. ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದು’ ಎಂದು ಸದಸ್ಯ ಚನ್ನಬಸಪ್ಪ ಮಟ್ಟಿ ಸಲಹೆ ನೀಡಿದರು.

ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ ಪ್ರತಿಕ್ರಿಯಿಸಿ, ಶೀಘ್ರದಲ್ಲಿ ಅನುಷ್ಠಾನಗೊಳಿಸಿ ಖುದ್ದು ಪರಿಶೀಲನೆ ನಡೆಸುವುದಾಗಿ ಸಭೆಗೆ ಹೇಳಿದರು.

‘ಅಮಾನತು ಮಾಡಿ ತನಿಖೆ ನಡೆಸಿ’

‘ನವಲಗುಂದ ತಾಲ್ಲೂಕಿನ ಕೊಂಡಿಕೊಪ್ಪದ ಪಶು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಸದಾನಂದ ಪಾಟೀಲ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಗೆ ಬಾರದೆ ಸಹಿ ಹಾಕುತ್ತಾರೆ. ಸಕಾಲಕ್ಕೆ ಚಿಕಿತ್ಸೆ ನೀಡದ ಕಾರಣ ಎತ್ತುಗಳು ಮೃತಪಟ್ಟಿವೆ’ ಎಂದು ನವಲಗುಂದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ, ‘ಸದಾನಂದ ಪಾಟೀಲ ಅವರನ್ನು ತಕ್ಷಣವೇ ಅಮಾನತು ಮಾಡಿ, ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸಿ’ ಎಂದು ಉಪನಿರ್ದೇಶಕರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry