ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಮತ್ತೆ ಕೊಚ್ಚಿಹೋದ ಸೇತುವೆ!

ರೈತರ ಹೊಲಗಳಿಗೆ ಸಂಪರ್ಕ ಕಡಿತ, ಬಿತ್ತನೆಗೆ ಹಿನ್ನಡೆ, ಸಾರಿಗೆ ಸಂಚಾರವೂ ಬಂದ್‌
Last Updated 12 ಜೂನ್ 2018, 4:45 IST
ಅಕ್ಷರ ಗಾತ್ರ

ಸೇಡಂ: ಪಟ್ಟಣದ ದೊಡ್ಡ ಅಗಸಿ ಬಳಿ ಕಮಲಾವತಿ ನದಿಗೆ ಕಟ್ಟಿದ ಸೇತುವೆಯು ಈಚೆಗೆ ಸುರಿದ ಮಳೆಯಿಂದ ಪುನಃ ಕೊಚ್ಚಿಕೊಂಡು ಹೋಗಿದೆ.

ಸೇತುವೆಯನ್ನು ಪುರಸಭೆಯ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ಸುಮಾರು ₹ 20 ಲಕ್ಷ ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ, ನಿರ್ಮಿಸಿದ 8 ತಿಂಗಳಲ್ಲಿ ಅಂದರೆ; ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರಿ ಮಳೆಗೆ ಕೊಚ್ಚಿ ಹೋಗಿತ್ತು. ಬಳಿಕ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆಯು ಈಗ ಮಳೆಗೆ ಕೊಚ್ಚಿಕೊಂಡು ಹೋಗಿದೆ. ರೈತರು, ಸಾರ್ವಜನಿಕರು ಹೊಲಗಳಿಗೆ ತೆರಳಲು ಪರದಾಡುವಂತಾಗಿದೆ.

ಈಗ ಮುಂಗಾರು ಬಿತ್ತನೆ ಆರಂಭ ಆಗಿರುವುದರಿಂದ ರೈತರು ಬೀಜ, ಗೊಬ್ಬರ ಸೇರಿದಂತೆ ಕೃಷಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನದಿ ಆಚೆಗಿನ ಹೊಲಗಳಲ್ಲಿ ಕೆಲವರು ಇನ್ನೂ ಬಿತ್ತನೆ ಕಾರ್ಯ ಆರಂಭಿಸಿಲ್ಲ. ಜನರು ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

‘ಸೇಡಂ ಪಟ್ಟಣದಿಂದ ಕುರಕುಂಟಾ, ಮದಕಲ್ ರಸ್ತೆಗೆ ಸಂಪರ್ಕಿಸುವ ಸೇತುವೆ ಇದಾಗಿದೆ, ರೈತರ ಹೊಲಗಳು ಹೆಚ್ಚು ಆ ಕಡೆ ಇವೆ. ಕಳಪೆ  ಕಾಮಗಾರಿ ಕಾರಣ ಸೇತುವೆ ಬಾಳಿಕೆ ಬರುತ್ತಿಲ್ಲ’ ಎಂದು ನಿವಾಸಿ ಸಂಗಮೇಶ ನೀಲಂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕಮಲಾವತಿ ಸೇತುವೆ ಒಡೆದು ಹೋಗಿದೆ. ಹೊಲಗಳಿಗೆ ಬೀಜಗಳನ್ನು ತೆಗೆದುಕೊಂಡು ಹೋಗಲು ಮತ್ತು ನದಿ ದಾಟಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು’ ಎಂದು ರೈತ ಅಕ್ಬರ್ ಪಟೇಲ್ ಒತ್ತಾಯಿಸುತ್ತಾರೆ.

ಅಕ್ಟೋಬರ್ 2017ರಲ್ಲಿ ಸೇತುವೆ ಕೊಚ್ಚಿ ಹೋದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇತುವೆಯನ್ನು ತಾತ್ಕಾಲಿಕ ನಿರ್ಮಿಸಿ, ಜನರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೆ ಸೇತುವೆಯ ಸಂಪೂರ್ಣ ಮಾಹಿತಿ ಪಡೆದು ಕ್ರಿಯಾ ಯೋಜನೆ ರಚಿಸಿಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದರು.

ಮತ್ತೆ ₹ 20 ಲಕ್ಷ ಅನುದಾನ

ಸೇಡಂ ಪಟ್ಟಣದ ಕಮಲಾವತಿ ನದಿ ಸೇತುವೆ ದುರಸ್ತಿ ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗಳಿಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ನಿಧಿಯಿಂದ ₹ 20 ಲಕ್ಷ ಬಿಡುಗಡೆಯಾಗಿದೆ. ಅಲ್ಲದೆ, ಸೇತುವೆಯಿಂದ ಅರ್ಧ ಕಿಲೊಮೀಟರ್‌ ಕುರಕುಂಟಾ, ಮದಕಲ್ ಗ್ರಾಮದ ರಸ್ತೆಯ ದುರಸ್ತಿಗೆ ₹ 30 ಲಕ್ಷ ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರಿಗೆ ಕೆಲಸ ಆರಂಭಿಸಲು ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ‍‍ಪಾಲಕ ಎಂಜಿನಿಯರ್‌ ಗುರುರಾಜ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಮಲಾವತಿ ನದಿಗೆ ಸೇತುವೆಯನ್ನು ಕಲಂ ಹಾಕಿ ಭದ್ರವಾಗಿ ಕಟ್ಟಬೇಕಾಗಿತ್ತು. ಕಳಪೆ ಕಾಮಗಾರಿ ಕಾರಣ ಸೇತುವೆಯ ಬಹುಪಾಲು ಭಾಗ ನದಿ ನೀರಿನ ರಭಸಕ್ಕೆಕೊಚ್ಚಿ ಹೋಗಿದೆ
ಸಂಗಮೇಶ ನೀಲಂಗಿ, ಪಟ್ಟಣ ನಿವಾಸಿ

-ಅವಿನಾಶ ಎಸ್. ಬೋರಂಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT