ಮೋದಿಯಿಂದ ಭ್ರಷ್ಟಾಚಾರ ರಹಿತ ಆಡಳಿತ

7
ನಾಲ್ಕು ವರ್ಷಗಳ ಬಿಜೆಪಿ ಸರ್ಕಾರದ ಸಾಧನೆ ತೆರೆದಿಟ್ಟ ಸಂಸದ ನಳಿನ್ ಕುಮಾರ್

ಮೋದಿಯಿಂದ ಭ್ರಷ್ಟಾಚಾರ ರಹಿತ ಆಡಳಿತ

Published:
Updated:

ಉಡುಪಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸೋಮವಾರ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿ

ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

150ಕ್ಕೂ ಹೆಚ್ಚು ದೇಶಗಳು ಯೋಗ ದಿನವನ್ನು ಆಚರಿಸುವ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದಿವೆ. ಜಿಡಿಪಿ ಪ್ರಮಾಣ ಹೆಚ್ಚಳವಾಗಿದೆ. ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಜನರು ಮೋದಿ ಅವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ ಎಂದರು.

ವಿದ್ಯುತ್ ರಹಿತ ಗ್ರಾಮಗಳಿಗೆ ವಿದ್ಯುತ್, ಸ್ವಚ್ಛ ಭಾರತ ಯೋಜನೆಯಡಿ ಏಳೂವರೆ ಕೋಟಿ ಶೌಚಾಲಯಗಳ ನಿರ್ಮಾಣ, 3.80 ಕೋಟಿ ಜನರಿಗೆ ಸಿಲಿಂಡರ್ ಭಾಗ್ಯ, 31.60 ಕೋಟಿ ಜನರಿಗೆ ಜನಧನ್ ಬ್ಯಾಂಕ್‌ ಖಾತೆ, ಉದ್ಯಮ ಶೀಲತೆ ತರಬೇತಿ, ಜನರಿಕ್ ಔಷಧ ಮಳಿಗೆಗಳ ನಿರ್ಮಾಣ, ಕಡಿಮೆ ದರದಲ್ಲಿ ಹೃದಯಕ್ಕೆ ಅಳವಡಿಸುವ ಸ್ಟಂಟ್‌ಗಳ ಪೂರೈಕೆ, ಆಯುಷ್ಮಾನ್ ಆರೋಗ್ಯ ಯೋಜನೆ, ಗ್ರಾಮೀಣ ಭಾಗಗಳ ಡಿಜಿಟಲೀಕರಣ, ಹೀಗೆ, ಹಲವು ಜನೋಪಯೋಗಿ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದರು.‌

ಕೇಂದ್ರದಲ್ಲಿ ಸದೃಢ ಹಾಗೂ ಸ್ಥಿರ ಸರ್ಕಾರ ರಚನೆಯಾಗಿರುವುದರಿಂದ, ನೋಟು ಅಮಾನ್ಯೀಕರಣ, ಜಿಎಸ್‌ಟಿ, ಸರ್ಜಿಕಲ್‌ ಸ್ಟ್ರೈಕ್‌ನಂತಹ ದಿಟ್ಟ ನಿರ್ಧಾರಗಳನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಲು ಸಾದ್ಯವಾಯಿತು. ಉಗ್ರರ ನುಸುಳಿವಿಕೆಗೆ ಕಡಿವಾಣ ಬಿದ್ದಂತಾಯಿತು. ನಾಲ್ಕು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಕಪ್ಪುಚುಕ್ಕೆ ಇಲ್ಲದ ಆಡಳಿತ ನೀಡಲು ಸಾಧ್ಯವಾಯಿತು. ಚುನಾವಣೆಗೂ ಮುನ್ನ ದೇಶದ ಜನರಿಗೆ ನೀಡಿದ್ದ ಭರವಸೆಗಳನ್ನು ಮೋದಿ ಈಡೇರಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಉದಯ ಕುಮಾರ್ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್ ಕುಯಿಲಾಡಿ ಸುರೇಶ್ ನಾಯಕ್, ನವೀನ್ ಶೆಟ್ಟಿ ಅವರು ಇದ್ದರು.

ಮೌನಕ್ಕೆ ಶರಣಾದ ಸಂಸದ

ಬಿಜೆಪಿಯ ನಾಲ್ಕು ವರ್ಷಗಳ ಸಾಧನೆಗಳ ಪಟ್ಟಿಯನ್ನು ತಿಳಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಪತ್ರಕರ್ತರು ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದರು.‌ ಪ್ರತಿದಿನ ತೈಲ ಬೆಲೆ ಗಗನಕ್ಕೇರುತ್ತಲೇ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ, ತೈಲ ಬೆಲೆ ಶೀಘ್ರವೇ ಇಳಿಕೆಯಾಗಲಿದೆ ಎಂದಷ್ಟೇ ಉತ್ತರ ನೀಡಿ, ಮೌನಕ್ಕೆ ಶರಣಾದರು.

ವಿದೇಶಗಳ ಜತೆಗಿನ ಭಾರತ ಬಾಂಧವ್ಯ ವೃದ್ಧಿಯಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳು ದೇಶದ ಬೆಳವಣಿಗೆಯನ್ನು ಬೆರಗುಗಣ್ಣಿನಿಂದ ನೋಡುತ್ತಿವೆ

- ನಳಿನ್‌ ಕುಮಾರ್‌ ಕಟೀಲ್‌, ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry