ವಿಜಯಪುರ ಮಾರುಕಟ್ಟೆಯಲ್ಲಿ ವಿದೇಶಿ ಖರ್ಜೂರ

7
ರಮ್ಜಾನ್‌ ಅಂಗವಾಗಿ ವಿಜಯಪುರದ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಶಿ; ಖರ್ಜೂರದ್ದೇ ಮೇಲುಗೈ

ವಿಜಯಪುರ ಮಾರುಕಟ್ಟೆಯಲ್ಲಿ ವಿದೇಶಿ ಖರ್ಜೂರ

Published:
Updated:
ವಿಜಯಪುರ ಮಾರುಕಟ್ಟೆಯಲ್ಲಿ ವಿದೇಶಿ ಖರ್ಜೂರ

ವಿಜಯಪುರ: ರಮ್ಜಾನ್‌ ಮಾಸಾಚರಣೆಯ ಅಂತಿಮ ಪರ್ವ ಆರಂಭವಾಗಿದೆ. ನಗರದಲ್ಲಿ ಹೊರ ರಾಜ್ಯದ ಹಣ್ಣುಗಳು ಸೇರಿದಂತೆ ದೇಶ–ವಿದೇಶಗಳ ಹಣ್ಣು, ದುಬಾರಿ ಬೆಲೆಯ ಖರ್ಜೂರದ ಬಿಕರಿ ಬಿರುಸಿನಿಂದ ನಡೆದಿದೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಇರಾನ್‌, ಇರಾಕ್‌, ಟ್ಯುನೇಷಿಯಾ, ಕೀನ್ಯಾದ ಉತ್ಕೃಷ್ಟ ದರ್ಜೆಯ ಖರ್ಜೂರ ನಗರದ ಮಾರುಕಟ್ಟೆಗಳಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರ ಜತೆಗೆ ಚಿಲಿಯ ಸೇಬು, ನ್ಯೂಜಿಲೆಂಡ್‌ನ ಕಿವಿ ಫ್ರೂಟ್, ಚೀನಾದ ಡ್ರ್ಯಾಗನ್ ಫ್ರೂಟ್ ಸಹ ವಿಜಯಪುರದ ಹಣ್ಣಿನ ಬಜಾರ್‌ನಲ್ಲಿ ಲಭ್ಯವಿವೆ.

ಇನ್ನೂ ಕಾಶ್ಮೀರದ ಸೇಬು, ಬೇರ್, ಪ್ಲಮ್ಸ್, ಸಂತ್ರ ಸೇರಿದಂತೆ ಇನ್ನಿತರೆ ಹಣ್ಣುಗಳು ಮಾರುಕಟ್ಟೆಯಲ್ಲಿವೆ. ಗುಜರಾತ್‌ನ ಖರ್ಜೂರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಬಡವರು ಸೇರಿದಂತೆ, ಮಧ್ಯಮ ವರ್ಗದ ಜನತೆ ಖರೀದಿಗೆ ಮುಗಿ ಬಿದ್ದಿದ್ದಾರೆ.

ರಮ್ಜಾನ್‌ ಮಾಸದ ಆರಂಭದಿಂದಲೂ ಕಟ್ಟುನಿಟ್ಟಾಗಿ ರೋಜಾ ಆಚರಿಸುತ್ತಿರುವ ಮುಸ್ಲಿಮರು ಈ ಹಣ್ಣುಗಳ ಖರೀದಿಗಾಗಿ ಮುಸ್ಸಂಜೆ, ರಾತ್ರಿ ವೇಳೆ ನಗರದ ಪ್ರಮುಖ ಮಾರುಕಟ್ಟೆಗಳಿಗೆ ದಾಂಗುಡಿಯಿಡುವುದು ನಿತ್ಯದ ದೃಶ್ಯವಾಗಿದೆ.

ನಗರದ ಬಡವರ ಮಾರುಕಟ್ಟೆ ಎಂದೇ ಹೆಸರಾದ ಕಿತ್ತೂರ ರಾಣಿ ಚೆನ್ನಮ್ಮ ಮಾರುಕಟ್ಟೆ (ಕೆ.ಸಿ.ಮಾರ್ಕೆಟ್‌) ಸೇರಿದಂತೆ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಮಾರುಕಟ್ಟೆ, ಪ್ರಮುಖ ರಸ್ತೆಗಳ ಬದಿ, ಮಸೀದಿಗಳ ಬಳಿ ಹಣ್ಣುಗಳ ವ್ಯಾಪಾರ ಬಿರುಸಾಗಿ ನಡೆದಿದೆ. ಬಹುತೇಕ ಹಣ್ಣುಗಳ ಬೆಲೆಯೂ ತುಟ್ಟಿಯಾಗಿದೆ. ಇದರ ಜತೆಗೆ ಬಾಳೆಹಣ್ಣು ಸೇರಿದೆ.

ದುಬಾರಿ ಬೆಲೆಯ ಖರ್ಜೂರ:

ಉತ್ಕೃಷ್ಟ ದರ್ಜೆಯ ವಿದೇಶಿ ಖರ್ಜೂರದ ವ್ಯಾಪಾರವೂ ನಗರದ ವಿವಿಧ ಮಳಿಗೆಗಳಲ್ಲಿ ನಡೆದಿದೆ. ಸ್ಥಳೀಯ ಗುಜರಾತ್‌ನ ಖರ್ಜೂರದ ಧಾರಣೆ 1 ಕೆ.ಜಿ.ಗೆ₹ 80–90ರ ಆಸುಪಾಸಿನಲ್ಲಿದೆ. ವಿದೇಶಿಯ ಆಜ್ವಾ ಖರ್ಜೂರದ ಬೆಲೆ ಕೆ.ಜಿ.ಯೊಂದಕ್ಕೆ ₹ 1200. ಇದು ಸಾಧಾರಣ ಗುಣಮಟ್ಟದ್ದು. ಉತ್ಕೃಷ್ಟ ದರ್ಜೆಯ ಖರ್ಜೂರದ ಬೆಲೆ ₹ 8000ದಿಂದ ₹12,000 ವರೆಗಿದೆ. ಮುಂಬೈ, ಹೈದರಾಬಾದ್‌ ಮಾರುಕಟ್ಟೆಗಳಲ್ಲಿ ಇದಕ್ಕೆ ಬೇಡಿಕೆ ಎನ್ನುತ್ತಾರೆ ಮುಸ್ಲಿಂ ಸಮಾಜದ ಮುಖಂಡ ರಫಿ.

ಕಿಮಿಯಾ ಖರ್ಜೂರ ಮಧ್ಯಮ ವರ್ಗದವರ ಅಚ್ಚುಮೆಚ್ಚು. ಒಂದು ಕೆ.ಜಿ.ಗೆ ವಿಜಯಪುರದ ಮಾರುಕಟ್ಟೆಗಳಲ್ಲಿ ₹300ಕ್ಕೆ ಮಾರಾಟವಾಗುತ್ತಿದೆ. ಸುಲ್ತಾನ್‌ ₹280, ಕೋಬ್ರಾ ₹360, ಕಿಂಗ್‌ ₹110, ರಿಹಾನಾ ₹320ರಂತೆ ವಿಜಯಪುರದಲ್ಲಿ ಹೆಚ್ಚಿಗೆ ಮಾರಾಟವಾಗುತ್ತಿರುವ ವಿದೇಶಿ ಖರ್ಜೂರ.

‘ಸೌದಿ ರಾಷ್ಟ್ರಗಳಲ್ಲಿ ಬೆಳೆಯುವ ಖರ್ಜೂರ ಹೆಚ್ಚು ಪೌಷ್ಟಿಕಾಂಶ ಹೊಂದಿರುತ್ತದೆ. ಇದರಿಂದ ಇದರ ಬೆಲೆಯೂ ಹೆಚ್ಚು. ಮೈಕ್ಡಾಲ್, ಅಬುವಾ, ಇರಾನ್, ಜವ್ಡಾನ್, ಬರಾರಿ, ಡಾಲಿವಾಲಾ, ಕಮಿಯಾ, ಟೆರೆಹೆ... ಹೀಗೆ ನಾನಾ ನಮೂನೆಯ ಹೆಸರಿನಲ್ಲಿ ಖರ್ಜೂರದ ಮಾರಾಟ ನಗರದಲ್ಲಿ ಬಿರುಸಿನಿಂದ ನಡೆದಿದೆ’ ಎನ್ನುತ್ತಾರೆ ಖರ್ಜೂರದ ವ್ಯಾಪಾರಿ ತೌಫೀಕ್‌ ಸೌದಾಗಾರ.

‘ವ್ಯಾಪಾರ ಚೆನ್ನಾಗಿದೆ. ರಮ್ಜಾನ್‌ಗಾಗಿಯೇ ವಿಶೇಷವಾಗಿ ಹೆಚ್ಚಿನ ಖರ್ಜೂರ ತರಿಸಿದ್ದೇವೆ. ಗುಜರಾತ್‌ನ ಖರ್ಜೂರ ಸೇರಿದಂತೆ ವಿದೇಶದ ಖರ್ಜೂರವೂ ಲಭ್ಯ. ಮುಸ್ಸಂಜೆ ವೇಳೆ ಒಳ್ಳೆಯ ವ್ಯಾಪಾರವಾಗುತ್ತಿದೆ. ಹಿಂದಿನ ವರ್ಷದ ಧಾರಣೆಗಿಂತ ಈ ಬಾರಿ ಕೊಂಚ ಕಡಿಮೆಯಿದೆ’ ಎಂದು ಸೌದಾಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ರಮ್ಜಾನ್‌ ಮಾಸಾಚರಣೆಯ ಸಂದರ್ಭ ಉಪವಾಸ ಕೈಗೊಳ್ಳುವ ಎಲ್ಲ ಮುಸ್ಲಿಮರು ಸಹಜವಾಗಿಯೇ ಖರ್ಜೂರ ತಿನ್ನುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಸೇರ್ಪಡೆಗೊಂಡಿದೆ

ಅಬೀದ್‌ ಗುಡಗುಂಟಿ, ಗ್ರಾಹಕ

ಖರ್ಜೂರ ಪೌಷ್ಟಿಕಾಂಶಗಳ ಆಗರ. ಉಪವಾಸ ಕೈ ಬಿಡುವ ಮುನ್ನ ಅಪಾರ ಸಂಖ್ಯೆಯ ಜನರು ಮೊದಲು ಖರ್ಜೂರ ತಿನ್ನುತ್ತಾರೆ. ನಂತರ ಇತರ ಹಣ್ಣುಗಳನ್ನು ತಿನ್ನುತ್ತಾರೆ.

ರೆಹಮತುನ್ನೀಸಾ, ವಿಜಯಪುರ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry