4
ಟೈರ್ ಸುಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು

‘ಸತೀಶ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಿ’

Published:
Updated:

ಯಾದಗಿರಿ: ವಾಲ್ಮೀಕಿ ಸಮಾಜ ಪ್ರತಿನಿಧಿಸುವ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಸತೀಶ ಜಾರಕಿಹೊಳಿ ಜಿಲ್ಲಾ ಅಭಿಮಾನಿಗಳ ಬಳಗದ ಮುಖಂಡರು ಸೋಮವಾರ ನಗರದ ಹಿರೇ ಅಗಸಿ ಎದುರು ಪ್ರತಿಭಟನೆ ನಡೆಸಿದರು.

ಅಭಿಮಾನಿಗಳ ಬಳಗದ ಜಿಲ್ಲಾ ಅಧ್ಯಕ್ಷ ನರಸಪ್ಪ ನಾಯಕ ಬುಡಾಯಿನೋರ್ ನೇತೃತ್ವದಲ್ಲಿ ಸೇರಿದ ಅಭಿಮಾನಿಗಳು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

‘ಸಂಪುಟ ರಚನೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಅಪ್ರಬುದ್ಧತೆಯನ್ನು ತೋರಿದ್ದಾರೆ. ಅನನುಭವಿಗಳಿಗೆ ಸಚಿವ ಸ್ಥಾನ ನೀಡಿ ಹಿರಿಯ ರಾಜಕಾರಣಿಗಳನ್ನು ಕಡೆಗಣಿಸಿದ್ದಾರೆ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಹಿರಿಯರಿಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ಸತೀಶ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾಯಕ ಸಮಾಜ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ವೆಂಕಟೇಶ ನಾಟೇಕರ್ ದೊರೆ, ಯಲ್ಲಪ್ಪ ನಾಯಕ, ಬಸ್ಸು ಬುಡಾಯಿನೋರ್, ಸಿದ್ದು ನಾನೆಕ್, ಬಸವರಾಜ ನಾಯಕ, ಮರಿಲಿಂಗನಾಯಕ, ಸಿದ್ದು ಬುಡಾಯಿನೋರ್, ರಾಮು ಬಗಲಿ, ಹಣಮಂತ ದೇವದುರ್ಗ, ರವಿ ಬಗಲಿ, ಅಂಜು ನಾಯಕ, ಶಿವು ಕಪ್ಪನೋರ್, ಕುಮಾರ ನಾಯಕ, ಸಾಬು ಪರಸನಾಯಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಚಿವ ಸ್ಥಾನ ನೀಡಲು ಆಗ್ರಹ

ಶಹಾಪುರ: ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ಮಾನವ ಬಂಧುತ್ವ ವೇದಿಕೆಯ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸತೀಶ ಜಾರಕಿಹೊಳಿ ಅವರು, ಬುದ್ಧ, ಬಸವ, ಅಂಬೇಡ್ಕರ ವಿಚಾರಧಾರೆಯ ಪರಿಚಾರಕನಂತೆ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ವಹಿಸಿದ್ದ ಹಲವು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ. ಇಂತಹ ನಾಯಕನನ್ನು ಪಕ್ಷದ ಹೈಕಮಾಂಡ್‌ ಕಡೆಗಣಿಸಿರುವುದು ಸರಿಯಲ್ಲ ಎಂದು ಮಾನವ ಬಂಧುತ್ವ ವೇದಿಕೆಯಜಿಲ್ಲಾ ಘಟಕದ ಸಂಚಾಲಕ ಅಶೋಕ ಹೊಸ್ಮನಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ನ್ಯಾಯ ಪರಿಕಲ್ಪನೆಯಂತೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಲ್ಲು ಪಟ್ಟೆದಾರ, ಧರ್ಮರಾಜ ಬಾಣತಿಹಾಳ, ಮಾನಪ್ಪ ಬಾಣತಿಹಾಳ, ರಂಗಣ್ಣ ದೇಸಾಯಿ, ಆಂಜನೇಯ ದೊರೆ, ಮಲ್ಲೇಶಿ ಕಟ್ಟಿಮನಿ ಇದ್ದರು.

ರಾಹುಲ್‌ ಗಾಂಧಿಗೆ ಪಕ್ಷದ ಮೇಲೆ ಹಿಡಿತ ಇಲ್ಲ. ನಾಯಕರ ಆಡಳಿತ ಸಾಮರ್ಥ್ಯ ಕೂಡ ತಿಳಿದುಕೊಂಡಿಲ್ಲ. ಪರಿಣಾಮವಾಗಿ ರಾಜಕೀಯ ಅರಾಜಕತೆ ಉಂಟಾಗಿದೆ

- ನರಸಪ್ಪ ನಾಯಕ ಬುಡಾಯಿನೋರ್, ಅಭಿಮಾನಿಗಳ ಬಳಗದ ಜಿಲ್ಲಾ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry