‘ಕ್ಷಯ ನಿಯಂತ್ರಣಕ್ಕೆ ಖಾಸಗಿ ವೈದ್ಯರ ಸಹಕಾರ ಅಗತ್ಯ’

7
ಖಾಸಗಿ ವಲಯದ ಪಾಲುದಾರಿಕೆಯ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ ಹೇಳಿಕೆ

‘ಕ್ಷಯ ನಿಯಂತ್ರಣಕ್ಕೆ ಖಾಸಗಿ ವೈದ್ಯರ ಸಹಕಾರ ಅಗತ್ಯ’

Published:
Updated:

ಯಾದಗಿರಿ: ‘ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣ ಮಾಡುವಲ್ಲಿ ಖಾಸಗಿ ವೈದ್ಯರ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ಷಯ ರೋಗ ನಿಯಂತ್ರಣದಲ್ಲಿ ಖಾಸಗಿ ವಲಯದ ಪಾಲುದಾರಿಕೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕ್ಷಯ ರೋಗಿಗಳ ಬಗ್ಗೆ ಮತ್ತು ಔಷಧಿ ಅಂಗಡಿಗಳಲ್ಲಿ ಔಷಧಿ ತೆಗೆದುಕೊಳ್ಳುವ ರೋಗಿಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೇ, ಸರ್ಕಾರದಿಂದ ಉಚಿತವಾಗಿ ದೊರೆಯುವ ಗುಳಿಗೆಗಳನ್ನು ಖಾಸಗಿ ಔಷಧಿ ಅಂಗಡಿಗಳಲ್ಲಿ ಉಚಿತವಾಗಿ ನೀಡಿದರೆ ಔಷಧಿ ಅಂಗಡಿ ಮಾಲೀಕರಿಗೆ ಗೌರವಧನ ನೀಡಲಾಗುವುದು’ ಎಂದು ಹೇಳಿದರು.

‘ಕ್ಷಯ ರೋಗಿಗಳು ಆರು ತಿಂಗಳವರೆಗೆ ಔಷಧಿ ತೆಗೆದುಕೊಳ್ಳುವಂತೆ ನೋಡಿಕೊಳ್ಳುವ ಆಶಾ ಕಾರ್ಯಕರ್ತೆಯರಿಗೆ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಒಂದು ಸಾವಿರ ಗೌರವಧನ ಕೊಡಲಾಗುತ್ತದೆ. ಅದೇ ರೀತಿ ಎಂಟು ತಿಂಗಳ ಕೋರ್ಸ್‌ಗೆ ₹ 1,500, ಎರಡು ವರ್ಷದ ಕೋರ್ಸ್‌ಗೆ ₹ 5,000 ಗೌರವಧನ ನೀಡಲಾಗುವುದು’ ಎಂದು ತಿಳಿಸಿದರು.

‘ಕ್ಷಯ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಚಿಕಿತ್ಸೆ ಮತ್ತು ಔಷಧಿಯ ಬಗ್ಗೆ ತಿಳಿಸಬೇಕು. ಆರೋಗ್ಯ ಪರೀಕ್ಷೆಗಳಿಂದ ದೂರ ಉಳಿದ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗವಂತ ಅನವಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗುರುರಾಜ ಹಿರೇಗೌಡರ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಿವೇಕಾನಂದ ಟೆಂಗೆ, ತಾಲ್ಲೂಕು ಆರೋಗ್ಯ ಅಧಿಕಾರಿ ಮಲ್ಲಪ್ಪ, ಖಾಸಗಿ ವೈದ್ಯರು ಹಾಗೂ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಸಭೆಯಲ್ಲಿ ಇದ್ದರು.

ಕ್ಷಯ ರೋಗಳಿಂದ ಸಂಪೂರ್ಣ ಗುಣಮುಖರಾಗಬಹುದು. ಆದರೆ, ಕೆಲ ರೋಗಿಗಳು ಭೀತಿಯಿಂದಲೇ ಸೂಕ್ತವಾಗಿ ಚಿಕಿತ್ಸೆಗೆ ಒಳಗಾಗುವುದಿಲ್ಲ. ಹಾಗಾಗಿ, ಸಾವು ಸಂಭವಿಸುತ್ತದೆ.

- ಡಾ.ಭಗವಾನ ಅನವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry