ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾವಿದ ಉನ್ನತ ಮಟ್ಟಕ್ಕೆ ಏರಬೇಕು’

ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಜಾನಪದ ಕಲಾಮೇಳ ಉದ್ಘಾಟನೆ
Last Updated 12 ಜೂನ್ 2018, 8:44 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕಲೆಯ ಅಂತಃಕರಣವನ್ನು ಮೈಗೊಡಿಸಿಕೊಂಡಾಗ ಮಾತ್ರ ಕಲಾವಿದ ಉನ್ನತ ಮಟ್ಟಕ್ಕೆ ಸಾಗುತ್ತಾನೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಸನ್ಮಾರ್ಗ ಟ್ರಸ್ಟ್, ಕೂಡ್ಲೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸೋಮವಾರ ಆಯೋಜಿಸಿದ್ದ ಐದನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳ ಉದ್ಘಾಟಿಸಿ ಮಾತನಾಡಿದರು.

ಕಲೆ ಮತ್ತು ಕಲಾವಿದ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಕಲೆ ಉಳಿಯುವಲ್ಲಿ ಕಲಾವಿದನ ಪಾತ್ರ ಮಹತ್ವವಾಗಿದ್ದು, ಕಲಾವಿದನ ಬೆಳವಣೆಗೆಗೆ ಪೂರಕವಾದ ಪರಿಸರ ನಿರ್ಮಾಣವಾಗಬೇಕು. ಆದಿಮ ಪರಂಪರೆಯಲ್ಲಿ ಸಂದರ್ಭಕ್ಕ ತಕ್ಕಂತೆ ರೂಪುಗೊಂಡ ಕಲೆಗಳಾದ ಡೊಳ್ಳುಕುಣಿತ, ಅರೆವಾದನ, ಕಂಸಾಳೆ, ಪೂಜಾಕುಣಿತ, ವೀರಗಾಸೆ ಮುಂತಾದ ನೂರಾರು ಕಲೆಗಳು ಮಾನವೀಯ ಮೌಲ್ಯಗಳ ಆಗರವಾಗಿದ್ದು, ಮನರಂಜನೆಯ ಜೊತೆಗೆ ಸತ್ವ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀತ ವಿಮೋಚನಾ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಪಿ.ಜೆ.ಗೋವಿಂದರಾಜು ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸತತ ಪ್ರಯತ್ನದಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಪ್ರತಿಫಲ ದೊರೆಯುತ್ತದೆ. ಆ ನಿಟ್ಟಿನಲ್ಲಿ ಕಲಾವಿದರು ತಮ್ಮ ಕಲಾ ಪ್ರಕಾರಗಳಲ್ಲಿ ಮಗ್ನರಾಗಬೇಕು. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ಸಂಘ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರವು ಮೀಸಲಿಡುವ ಅನುದಾನ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿ, ‘ಸಮಾನತೆ, ಸಹೋದರತೆ, ಭ್ರಾತೃತ್ವ ಚಿಂತನೆಗಳನ್ನು ಪ್ರತಿಪಾದಿಸುವ ತತ್ವಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ನೀವು ಮಗ್ನರಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ವಿದ್ಯಾರ್ಥಿಯ ಘಟಕದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಗೋವಿಂದಯ್ಯ, ಉಪನ್ಯಾಸಕ ಡಾ.ರವಿಕುಮಾರ್, ಮುಖಂಡರಾದ ವೆಂಕಟೇಶ್, ವಾಣಿಜ್ಯ ಇಲಾಖೆಯ ನೌಕರ ಗೋಪಾಲ್, ಮುಖಂಡರಾದ ಸುರೇಶ್ ಗೌತಮ್, ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಕುಂತೂರು ಕುಮಾರ್ ಮತ್ತು ತಂಡ ತಮಟೆ ಪ್ರದರ್ಶನ, ನಾಗರಾಜು ಮತ್ತು ತಂಡ ಪೂಜಾಕುಣಿತ, ಪುನೀತ್ ಕುಮಾರ್ ಮತ್ತು ತಂಡ ವೀರಗಾಸೆ ಪ್ರದರ್ಶಿಸಿದರು. ಕೂಡ್ಲೂರಿನ ವೆಂಕಟಪ್ಪ ಮತ್ತು ತಂಡ ಮಂಗಳವಾದ್ಯ, ಪ್ರಮೋದ ಮತ್ತು ತಂಡ ಚರ್ಮವಾದನ ನುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT