ತೆರೆದ ಚರಂಡಿಗಳ ನಡುವೆ ಆನೆಕೆರೆ ಬೀದಿ

7
ವ್ಯಾಪಾರ ವಹಿವಾಟು ಪ್ರದೇಶದಲ್ಲಿ ಸ್ವಚ್ಛತೆ ಮರೀಚಿಕೆ, ಕೊಳೆಗೇರಿ ನಿವಾಸಿಗಳ ನರಕ ಸದೃಶ ಜೀವನ

ತೆರೆದ ಚರಂಡಿಗಳ ನಡುವೆ ಆನೆಕೆರೆ ಬೀದಿ

Published:
Updated:
ತೆರೆದ ಚರಂಡಿಗಳ ನಡುವೆ ಆನೆಕೆರೆ ಬೀದಿ

ಮಂಡ್ಯ: ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ವರ್ಕ್‌ಶಾಪ್‌, ಗೋದಾಮುಗಳಿಂದ ತುಂಬಿರುವ ಆನೆಕೆರೆ ಬೀದಿ ಸದಾ ಜನರಿಂದ ಗಿಜಿಗುಡುತ್ತದೆ. ಆದರೆ ಇಲ್ಲಿರುವ ತೆರೆದ ಚರಂಡಿಗಳು ಜನರಿಗೆ ‘ರೋಗ ಭಾಗ್ಯ’ ನೀಡಿದ್ದು ದುರ್ವಾಸನೆಯ ನಡುವೆ ಜೀವನ ನಡೆಸುವಂತಾಗಿದೆ.

ವಾರ್ಡ್‌ ಸಂಖ್ಯೆ 1ಕ್ಕೆ ಆನೆಕೆರೆ ಬೀದಿಯ ಬಹುಪಾಲು ಸೇರುತ್ತದೆ. ಸೇಂಟ್‌ ಜೋಸೆಫ್‌ ಶಾಲೆಯಿಂದ ಹಳೇ ರೈಲ್ವೆನಿಲ್ದಾಣ ರಸ್ತೆಯವರೆಗೂ 1ನೇ ವಾರ್ಡ್‌ ವ್ಯಾಪ್ತಿ ಇದೆ. ಖಾಸಗಿ ಬಸ್‌ ನಿಲ್ದಾಣ, ಕಾಳಿಕಾಂಬ ದೇವಾಲಯ, ದೇವಾಲಯದ ಹಿಂಭಾಗದ ಕೊಳೆಗೇರಿ, ಡಿಎಚ್‌ಒ ಕಚೇರಿ, ಗಜೇಂದ್ರ ಮೋಕ್ಷ ಕೊಳ, ಡವರಿ ಸಮಾಜ ಕಾಲೊನಿ, ನಾಲಾಬಂದ್‌ವಾಡೆ ಭಾಗ ಸೇರಿ ನಾಗಮಂಗಲ ರಸ್ತೆವರೆಗೂ ವಾರ್ಡ್‌ ಚಾಚಿಕೊಂಡಿದೆ. ಪೇಟೆ ಬೀದಿಯ ಬಲಭಾಗದ ಅಂಗಡಿ ಸಾಲುಗಳು ಆನೆಕೆರೆ ಬೀದಿಯ ಭಾಗವಾಗಿವೆ. ಮೂಲ ಮಂಡ್ಯ ನಿವಾಸಿಗಳ ಜೊತೆಗೆ ಹೊರರಾಜ್ಯಗಳಿಂದ ಬಂದಿರುವ ವ್ಯಾಪಾರಿಗಳೂ ಇಲ್ಲಿ ಜೀವನ ಕಂಡುಕೊಂಡಿದ್ದಾರೆ.

1ನೇ ವಾರ್ಡ್‌ ಕೆಳಭಾಗದಲ್ಲಿ ಇರುವ ಕಾರಣ ಮೇಲ್ಭಾಗದ ಬಡಾವಣೆಗಳ ಚರಂಡಿ ನೀರು 1ನೇ ವಾರ್ಡ್‌ ಮೂಲಕ ಹರಿದು ಹೆಬ್ಬಾಳ ಸೇರುತ್ತದೆ. ನಗರಸಭೆ ಇಲ್ಲಿಯ ಒಳಚರಂಡಿಯನ್ನು ಸದೃಢಗೊಳಿಸಲು ಒತ್ತು ನೀಡದ ಕಾರಣ ಜನರು ಸೊಳ್ಳೆಗಳ ನಡುವೆ ಬದುಕುವಂತಾಗಿದೆ.

ಹಳೇ ರೈಲು ನಿಲ್ದಾಣ ರಸ್ತೆಯಲ್ಲಿ ಸ್ವಚ್ಛತೆಯ ಕೊರತೆ ಇದ್ದು ಮಳೆ ಬಂದಾಗ ಇಲ್ಲಿಯ ಜನರು, ವ್ಯಾಪಾರಿಗಳು ರಾಡಿ ನೀರಿನೊಳಗೆ ಓಡಾಡುವುದು ಅನಿವಾರ್ಯವಾಗಿದೆ. ಆನೆಕೆರೆ ಬೀದಿಯ ಮುಖ್ಯ ರಸ್ತೆಯಲ್ಲಿ ನೂರಾರು ಗೋದಾಮುಗಳಿದ್ದು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಸುಸಜ್ಜಿತ ರಸ್ತೆಯೂ ಇಲ್ಲದ ಕಾರಣ ಜನರು ದೂಳಿನ ನಡುವೆ ಜೀವನ ನಡೆಸುತ್ತಿದ್ದಾರೆ.

‘ಹಳೇ ರೈಲು ನಿಲ್ದಾಣ ರಸ್ತೆಯ ವ್ಯಾಪಾರಿಗಳಿಗೆ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇಲ್ಲಿರುವ ತೆರೆದ ಚರಂಡಿಗೆ ಬಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಚರಂಡಿ ಮುಚ್ಚಿಸುವಂತೆ ನಗರಸಭೆ ಅಧಿಕಾರಿಗಳಿಗೆ ನೂರಾರು ಬಾರಿ ತಿಳಿಸಿದ್ದೇವೆ. ಆದರೆ ನಮ್ಮ ಒತ್ತಾಯವನ್ನು ಅಧಿಕಾರಿಗಳು ಪರಿಗಣನೆ ಮಾಡಿಲ್ಲ’ ಎಂದು ವ್ಯಾಪಾರಿ ಲಕ್ಷ್ಮಿದಾಸ್‌ ಹೇಳಿದರು.

ನಾಲಾಬಂದ್‌ವಾಡೆಯ ನರಕ : 80ಕ್ಕೂ ಹೆಚ್ಚು ಬಡ ಕುಟುಂಬಗಳು 1ನೇ ವಾರ್ಡ್‌ ವ್ಯಾಪ್ತಿಯ ನಾಲಾಬಂದ್‌ವಾಡೆ ಕೊಳೆಗೇರಿಯಲ್ಲಿ ಜೀವನ ಮಾಡುತ್ತಿವೆ. ಬೃಹತ್‌ ತೆರೆದ ಚರಂಡಿ ಈ ಜನರ ಬದುಕನ್ನು ರೋಗಗ್ರಸ್ತಗೊಳಿಸಿದೆ. ದೊಡ್ಡ ಹಳ್ಳದಂತೆ ಹರಿಯುವ ಚರಂಡಿ ಪಕ್ಕದಲ್ಲೇ ಕೊಳೆಗೇರಿ ನಿವಾಸಿಗಳು ಬದುಕುತ್ತಿದ್ದಾರೆ. ಮಕ್ಕಳು ಚರಂಡಿ ನೀರಿನಲ್ಲೇ ಬಿದ್ದು ಏಳುತ್ತವೆ. ಕೆಲವೆಡೆ ಚರಂಡಿ ಮುಚ್ಚಲಾಗಿದೆ. ಆದರೆ ಕೊಳೆಗೇರಿಯ ಭಾಗದಲ್ಲಿ ಚರಂಡಿ ತೆರೆದುಕೊಂಡಿದ್ದು ಜನರು ಸೊಳ್ಳೆಗಳ ಜೊತೆ ಜೀವನ ದೂಡುತ್ತಿದ್ದಾರೆ.

‘ನಮ್ಮ ಮಕ್ಕಳು ತಿಂಗಳಿಗೆ ಏಳೆಂಟು ಬಾರಿ ಜ್ವರದಿಂದ ನರಳುತ್ತವೆ. ಇಲ್ಲಿರುವ ಪ್ರತಿಯೊಬ್ಬರೂ ಡೆಂಗಿ, ಮಲೇರಿಯಾ ಚಿಕಿತ್ಸೆ ಪಡೆದಿದ್ದಾರೆ. ಒಳಚರಂಡಿಯ ಪೈಪ್‌ಲೈನ್‌ ಒಡೆದು ಆರು ತಿಂಗಳುಗಳಾಗಿವೆ. ಇದನ್ನು ದುರಸ್ತಿ ಮಾಡುವಂತೆ  ತಿಳಿಸಿ ಐದು ತಿಂಗಳುಗಳಾಗಿವೆ. ಈ ಬಗ್ಗೆ  ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಹೊಸ ಮನೆ ಕಟ್ಟಿಸಿಕೊಟ್ಟಿದ್ದಾರೆ, ಆದರೆ ಅಲ್ಲಿ ವಿದ್ಯುತ್‌ ಸಂಪರ್ಕ್‌ ಕೊಟ್ಟಿಲ್ಲ, ಕುಡಿಯುವ ನೀರಿನ ಸಂಪರ್ಕವೂ ಇಲ್ಲ. ನೀರು ತರಲು ಒಂದು ಕಿ.ಮೀ ದೂರ ಹೋಗಬೇಕು. ನಮ್ಮ ಕಷ್ಟವನ್ನು ಕೇಳುವವರು ಯಾರೂ ಇಲ್ಲ’ ಎಂದು ನಾಲಾಬಂದ್‌ವಾಡಿ ನಿವಾಸಿ ರಾಜಮ್ಮ ನೋವು ತೋಡಿಕೊಂಡರು.

ಡವರಿ ಸಮಾಜ ಕಾಲೊನಿಯ ಗೋಳು : ಮೈಷುಗರ್‌ ಕಾರ್ಖಾನೆ ಸಮೀಪದಲ್ಲೇ ಇರುವ ಡವರಿ ಕಾಲೊನಿಯಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಇವೆ. ಕಾರ್ಖಾನೆ ನಡೆಯುತ್ತಿದ್ದಾಗ ಕಬ್ಬು ತುಂಬಿದ ನೂರಾರು ಲಾರಿಗಳು ಓಡಾಡಿ ರಸ್ತೆಗಳು ಗುಂಡಿ ಬಿದ್ದಿವೆ. ಸಮೀಪದಲ್ಲೇ ಕಾರ್ಖಾನೆಗೆ ಸೇರಿದ ಖಾಲಿ ಜಾಗವಿದೆ. ಅಲ್ಲಿ ಜನರು ಕಸ ತಂದು ಹಾಕುತ್ತಾರೆ. ಆ ಜಾಗವನ್ನು ಸ್ವಚ್ಛಗೊಳಿಸುವಂತೆ ನಿವಾಸಿಗಳು ಹಲವು ಬಾರಿ ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಆದರೆ ಅವರು, ‘ಆ ಜಾಗ ಮೈಷುಗರ್‌ ಕಾರ್ಖಾನೆಗೆ ಸೇರಿದೆ. ಸ್ವಚ್ಛಗೊಳಿಸುವಂತೆ ಅವರನ್ನೇ ಕೇಳಿ’ ಎಂದು ಹೇಳುತ್ತಾರೆ. ಕಾರ್ಖಾನೆ ಸಿಬ್ಬಂದಿ ನಗರಸಭೆ ಕಡೆಗೆ ಕೈ ತೋರಿಸುತ್ತಾರೆ’ ಎಂದು ನಿವಾಸಿಗಳು ದೂರುತ್ತಾರೆ.

ಹಳ್ಳಿ ಜೀವನ, ಹೆಂಚಿನ ಮನೆಗಳು

1ನೇ ವಾರ್ಡ್‌ನ ಕೆಲವು ಭಾಗದಲ್ಲಿ ಹಳ್ಳಿ ಜೀವನ ಜೀವಂತವಾಗಿದೆ. ಮಂಗಳೂರು ಹೆಂಚು, ನಾಡ ಹೆಂಚಿನ ಮನೆಗಳು ಇಲ್ಲಿ ಕಾಣ ಸಿಗುತ್ತವೆ. ಹಸು ಸಾಕಣೆ, ಕೋಳಿ ಸಾಕಣೆ ಮಾಡುವ ಜನ ಇದ್ದಾರೆ. ತಳ್ಳುವ ಗಾಡಿ ನಡೆಸುವ ಕಾರ್ಮಿಕರೂ ಇದ್ದಾರೆ. ಅಕ್ಕಪಕ್ಕದ ಹಳ್ಳಿಗಳ ರೈತರ ಹೊಲಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ವಾಸಿಸುತ್ತಿದ್ದಾರೆ.

‘ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ನಗರಸಭಾ ಸದಸ್ಯರು ಕುಡಿಯುವ ನೀರಿಗಾಗಿ ಉತ್ತಮ ಟ್ಯಾಂಕ್‌ ಕಟ್ಟಿಸಿಕೊಟ್ಟಿದ್ದಾರೆ. ರಸ್ತೆ ಸಮಸ್ಯೆಯೂ ಇಲ್ಲ. ಸಿಮೆಂಟ್‌ ರಸ್ತೆ ಮಾಡಿಸಿದ್ದಾರೆ. ಆದರೆ ತೆರೆದ ಚರಂಡಿಯನ್ನು ಮುಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೊಳಚೆ ನೀರಿನಿಂದ ದುರ್ವಾಸನೆಯಲ್ಲಿ ಬದುಕಬೇಕಾಗಿದೆ’ ಎಂದು ಆನೆಕೆರೆ ಬೀದಿ ಮುಖ್ಯರಸ್ತೆಯ ಬಿ.ಲಕ್ಷ್ಮಿ ಹೇಳಿದರು.

ಹೂವು, ಹಣ್ಣು ಮಾರಾಟ

ಕಾಳಿಕಾಂಬ ದೇವಾಲಯದ ಹಿಂಭಾಗದಲ್ಲಿರುವ ಕೊಳೆಗೇರಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಿನಲ್ಲಿ ವಾಸ ಮಾಡುತ್ತಿವೆ. ಈ ಕುಟುಂಬಗಳ ಒಕ್ಕಲೆಬ್ಬಿಸುವ ಪ್ರಯತ್ನ ಬಹುಕಾಲದಿಂದ ನಡೆಯುತ್ತಿತ್ತು. ಆದರೆ ಕೋರ್ಟ್‌ನಲ್ಲಿ ನಿವಾಸಿಗಳ ಪರವಾಗಿ ತೀರ್ಮಾನ ಬಂದ ಕಾರಣ ಅವರ ಜೀವನ ನಡೆಯುತ್ತಿದೆ. ಇಲ್ಲಿ ವಾಸಿಸುತ್ತಿರುವ ಬಹುತೇಕ ಕುಟುಂಬಗಳು ಕಾಳಿಕಾಂಬ ದೇವಾಲಯದಲ್ಲಿ ಹೂವು, ಹಣ್ಣು, ಊದುಬತ್ತಿ, ಕರ್ಪೂರ ಮಾರಾಟ ಮಾಡಿ ಜೀವನ ಮಾಡುತ್ತಿವೆ. ಪೂಜೆಗೆ ಬರುವ ಭಕ್ತರಿಂದ ಈ ಕುಟುಂಬಗಳ ಜೀವನ ನಡೆಯುತ್ತಿದೆ.

ಚರಂಡಿ ಮುಚ್ಚಿ ಆರೋಗ್ಯ ಕಾಪಾಡಿ

ನಮ್ಮ ಮನೆಯ ಮುಂದೆಯೇ ದೊಡ್ಡ ಚರಂಡಿ ಇದೆ. ಸೊಳ್ಳೆಕಾಟದಿಂದ ನಾವು ನೂರಾರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ಮಕ್ಕಳಿಗೆ ಮಲೇರಿಯಾ, ಡೆಂಗಿ ಕಾಣಿಸಿಕೊಂಡಿದೆ. ರೋಗಗಳ ಕಾಟದಿಂದ ನಮ್ಮ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಚರಂಡಿಯನ್ನು ಮುಚ್ಚಿದರೆ ನಾವು ನೆಮ್ಮದಿಯಿಂದ ಜೀವನ ಮಾಡಬಹುದು

– ಅನೂಷಾ, ನಾಲಾಬಂದ್‌ವಾಡೆ ನಿವಾಸಿ

ರಸ್ತೆಗಳು ಚೆನ್ನಾಗಿವೆ

ನಮ್ಮ ವಾರ್ಡ್‌ನಲ್ಲಿ ರಸ್ತೆಗಳು ಚೆನ್ನಾಗಿವೆ. ಆದರೆ ಚರಂಡಿ ಇಲ್ಲ. ಇಲ್ಲಿಯ ಮಕ್ಕಳು ಸದಾ ಆಸ್ಪತ್ರೆಯಲ್ಲೇ ಇರುತ್ತವೆ. ಸೊಳ್ಳೆಗಳಿಂದಾಗಿ ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ. ಕುಡಿಯುವ ನೀರಿಗೆ ನಮಗೆ ಕೊರತೆ ಇಲ್ಲ. ಮನೆಯ ಪಕ್ಕದಲ್ಲೇ ಕೊಳವೆ ಬಾವಿ ಇದೆ. ಜೊತೆಗೆ ಟ್ಯಾಂಕ್‌ ಕೂಡ ಕಟ್ಟಿಸಿಕೊಟ್ಟಿದ್ದಾರೆ

– ಲಕ್ಷ್ಮಿ, ಆನೆಕೆರೆ ಬೀದಿ

ಸ್ಮಶಾನಕ್ಕೆ ಸೌಲಭ್ಯವಿಲ್ಲ

1ನೇ ವಾರ್ಡ್‌ನಲ್ಲಿರುವ ಸ್ಮಶಾನಕ್ಕೆ ಮೂಲಸೌಲಭ್ಯಗಳಿಲ್ಲ. ಅಲ್ಲಿ ಗಿಡ ನೆಡುವಂತೆ ನಗರಸಭಾ ಸದಸ್ಯರಿಗೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ. ಆದರೂ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ ಸ್ಮಶಾನದಲ್ಲಿ ಗಿಡಗಂಟಿಗಳು ಬೆಳೆದಿದ್ದು ಅದನ್ನು ಸ್ವಚ್ಛಗೊಳಿಸುವಂತೆಯೂ ಹಲವು ಮನವಿ ಸಲ್ಲಿಸಿದ್ದೇವೆ. ಆದರೂ ಬೇಡಿಕೆ ಈಡೇರಿಲ್ಲ

– ಎಂ.ಶಂಕರ್‌, ಸ್ಮಶಾನದ ನೌಕರ

ಕೆರೆಯಂತಾದ ರಸ್ತೆಗಳು

ಮೈಷುಗರ್‌ ಸಕ್ಕರೆ ಕಾರ್ಖಾನೆಯ ಲಾರಿಗಳು ಓಡಾಡುತ್ತಿದ್ದ ಕಾರಣ ನಮ್ಮ ಬಡಾವಣೆ ಸಮೀಪ ರಸ್ತೆಗಳು ಕಿತ್ತು ಹೋಗಿವೆ. ಅಲ್ಲಿ ನೀರು ನಿಲ್ಲುವ ಕಾರಣ ಸೊಳ್ಳೆಗಳು ಹೆಚ್ಚುತ್ತಿವೆ. ಅಲ್ಲಿಗೆ ಮಣ್ಣುಹಾಕಿಸಿ ಗುಂಡಿ ಮುಚ್ಚಿ ಎಂದು ತಿಂಗಳಿಂದಲೂ ಕೇಳಿಕೊಳ್ಳುತ್ತಿದ್ದೇವೆ

– ಮುನಿಯಮ್ಮ, ಡವರಿ ಸಮಾಜ ಕಾಲೊನಿ ನಿವಾಸಿ

ದುರ್ವಾಸನೆಯೊಳಗೆ ವ್ಯಾಪಾರ

ನಮ್ಮ ಅಂಗಡಿ ಪಕ್ಕದಲ್ಲೇ ತೆರೆದ ಚರಂಡಿ ಇದೆ. ಚರಂಡಿ ನೀರಿನ ದುರ್ವಾಸನೆ ಇಲ್ಲಿಯವರೆಗೂ ಬರುತ್ತದೆ. ಇದರ ನಡುವೆಯೇ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸಂಜೆಯಾಗುತ್ತಲೇ ಇಲ್ಲಿ ಕುಡುಕರ ಹಾವಳಿ ಇದೆ. ಕುಡಿದು ಬಂದು ಚರಂಡಿಯೊಳಗೆ ಬಿದ್ದು ಹಲವರು ಗಾಯಗೊಂಡಿದ್ದಾರೆ

– ಎಸ್‌.ಆರ್‌.ಪಾಟೀಲ, ಹಳೇ ರೈಲು ನಿಲ್ದಾಣ ರಸ್ತೆ

ಸ್ವಚ್ಛತೆಯ ಕೊರತೆ

ಪೌರಕಾರ್ಮಿಕರು ನಮ್ಮ ಬೀದಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ

– ಮಲ್ಲೇಶ್‌, ಆನೆಕೆರೆ ಬೀದಿ ರಸ್ತೆ

ಮೂಲಸೌಲಭ್ಯಗಳಿಲ್ಲ

ಕಾಳಿಕಾಂಬ ದೇವಾಲಯದ ಹಿಂಭಾಗದಲ್ಲಿರುವ ಕೊಳೆಗೇರಿಗೆ ಮೂಲ ಸೌಲಭ್ಯ ಒದಗಿಸಿಲ್ಲ. ಜೋರಾಗಿ ಮಳೆ ಬಂದರೆ ನಮ್ಮ ಮನೆಯೊಳಗೆ ಚರಂಡಿ ನೀರು ನುಗ್ಗುತ್ತದೆ. ಗುಡಿಸಲುಗಳ ಸುತ್ತಲೂ ಇರುವ ಮುಳ್ಳುಗಿಡಗಳಲ್ಲಿ ಹಾವು, ಹಲ್ಲಿಗಳು ವಾಸ ಮಾಡುತ್ತಿವೆ. ಅದನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಯಾರೂ ಕೈಹಾಕಿಲ್ಲ

– ಶಶಿಕಲಾ, ಕೊಳೆಗೇರಿ ನಿವಾಸಿ

ಕುಡಿಯುವ ನೀರು ಇಲ್ಲ

ಕುಡಿಯುವ ನೀರಿಗಾಗಿ ಒಂದು ಕಿ.ಮೀ ದೂರ ಹೋಗಬೇಕಾದ ಸ್ಥಿತಿ ಇದೆ. ಎರಡು ಬಿಂದಿಗೆ ನೀರು ತಂದರೆ ಅದನ್ನು ದಿನಪೂರ್ತಿ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೇಸಿಗೆ ಕಾಲ ಬಂದಿದೆ. ನಲ್ಲಿಯಲ್ಲೂ ನೀರು ಬರುತ್ತಿಲ್ಲ. ನಗರಸಭೆಯವರು ನಮಗೆ ಕುಡಿಯುವ ನೀರು ಪೂರೈಸಬೇಕು

– ಗುಣಶೀಲಾ, ನಾಲಾಬಂದ್‌ವಾಡೆ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry