ಶಿಕ್ಷಕ ಅಪ್ಪನ ಜೊತೆಗೆ ಸರ್ಕಾರಿ ಶಾಲೆಗೆ!

7
ತಾಳೂರು ಸರ್ಕಾರಿ ಶಾಲೆಯ ಮಾದರಿ ಶಿಕ್ಷಕ ಕೆ.ಮಲ್ಲಿಕಾರ್ಜುನ

ಶಿಕ್ಷಕ ಅಪ್ಪನ ಜೊತೆಗೆ ಸರ್ಕಾರಿ ಶಾಲೆಗೆ!

Published:
Updated:
ಶಿಕ್ಷಕ ಅಪ್ಪನ ಜೊತೆಗೆ ಸರ್ಕಾರಿ ಶಾಲೆಗೆ!

ಬಳ್ಳಾರಿ: ಇವರು ಕೆ.ಮಲ್ಲಿಕಾರ್ಜುನ. ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತಾಳೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮ ಶಾಲೆಯ ಸಹಶಿಕ್ಷಕ. ಇದೇ ಶಾಲೆಯ ಹಳೇ ವಿದ್ಯಾರ್ಥಿ. ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ! ಅವರ ಅವಿಭಕ್ತ ಕುಟುಂಬದ ಇನ್ನಿತರ ಮಕ್ಕಳು ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲೇ ಓದುತ್ತಿರುವುದು ಮತ್ತೊಂದು ವಿಶೇಷ.

ಸರ್ಕಾರಿ ಶಾಲೆಗಳ ಬಹುತೇಕ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಇತರ ಮಕ್ಕಳನ್ನು ಸರ್ಕಾರಿ ಶಾಲೆಗೆ ಬನ್ನಿ ಎಂದು ಕರೆಯುವ ಕಾಲದಲ್ಲಿ ಮಲ್ಲಿಕಾರ್ಜುನ ಮಾದರಿಯಾಗಿ ಕಾಣುತ್ತಿದ್ದಾರೆ.

ಅವರ ದೊಡ್ಡ ಮಗಳು ವೈ.ಎಂ.ಮೇಘನ 5ನೇ ತರಗತಿಯಲ್ಲಿದ್ದರೆ, ಎರಡನೇ ಮಗಳು ವೈ.ಎಂ.ಸಿಂಚನ ಮೂರನೇ ತರಗತಿಯಲ್ಲಿದ್ದಾಳೆ. ಈ ಶಾಲೆಯಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಊಳೂರು ಮಲ್ಲಿಕಾರ್ಜುನ ಅವರ ಹುಟ್ಟೂರು. ಅಲ್ಲಿಂದ ಅವರು ಈ ಶಾಲೆಗೆ ಬೈಕಿನಲ್ಲಿ ಬರುವಾಗ ತಮ್ಮ ಇಬ್ಬರೂ ಮಕ್ಕಳನ್ನು ಕರೆತರುತ್ತಾರೆ. ಇಬ್ಬರೂ ಮಕ್ಕಳು ಒಂದನೇ ತರಗತಿಯಿಂದಲೇ ಈ ಶಾಲೆಯಲ್ಲಿ ಓದುತ್ತಿದ್ದಾರೆ.

ಅವಿಭಕ್ತ ಕುಟುಂಬ: ಮಲ್ಲಿಕಾರ್ಜುನ ಅವರದು ಆರು ಸಹೋದರರುಳ್ಳ ಅವಿಭಕ್ತ ಕುಟುಂಬ. ಊಳೂರು ಸಮೀಪದ ಸರ್ಕಾರಿ ಪ್ರೌಢಶಾಲೆ ಮತ್ತು ತಾಳೂರಿನಲ್ಲಿರುವ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಕುಟುಂಬದ ಒಟ್ಟು ಎಂಟು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳೂ ಓದುತ್ತಿದ್ದಾರೆ.

ಪತ್ನಿಯ ಸಹಕಾರ: ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಪ್ರಸ್ತಾಪ ಬಂದಾಗ ಯಾವ ವಿರೋಧವೂ ಇಲ್ಲದೆ ಪತ್ನಿ ಕೆ.ಶಾಂತಮ್ಮ ಒಪ್ಪಿಕೊಂಡರು. ನಾನೂ ಅದೇ ಶಾಲೆಯಲ್ಲಿ ಶಿಕ್ಷಕನಾಗಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ಕಣ್ಗಾವಲು ಇಡಬಹುದು ಎಂಬ ಆಶಯವೂ ಅವರಲ್ಲಿ ಇತ್ತು’ ಎಂದು ಮಲ್ಲಿಕಾರ್ಜುನ ಶಾಲೆಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳು ಮನೆ ಹತ್ತಿರದ ಶಾಲೆಯಲ್ಲೇ ಓದಬೇಕು. ಚಿಕ್ಕ ವಯಸ್ಸಿಗೆ ದೂರದ ಖಾಸಗಿ ಶಾಲೆಗೆ ಬಸ್‌ ಹತ್ತಿ ಹೋಗುವ ಅನಿವಾರ್ಯವೇನೂ ಇರುವುದಿಲ್ಲ. ಆದರೆ ಅದು ಅನಿವಾರ್ಯ ಎಂಬ ಸನ್ನಿವೇಶವನ್ನು ನಿರ್ಮಿಸಲಾಗಿದೆ ಅಷ್ಟೇ’ ಎಂದು ಅಭಿಪ್ರಾಯಪಟ್ಟರು.

‘ಅಪ್ಪನೊಂದಿಗೆ ಶಾಲೆಗೆ ಬರಲು, ಅವರ ಪಾಠ ಕೇಳಲು ಖುಷಿಯಾಗುತ್ತದೆ’ ಎಂದು ಮೇಘನ ಹೇಳಿದಳು.

ಸಂತತಿ ಹೆಚ್ಚಲಿ: ‘ಸರ್ಕಾರದ ಸಂಬಳ ಪಡೆದು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸದ ಶಿಕ್ಷಕರ ನಡುವೆ ಮಲ್ಲಿಕಾರ್ಜುನ ಭಿನ್ನವಾಗಿ ನಿಲ್ಲುತ್ತಾರೆ. ಇಂಥವರ ಸಂತತಿ ಹೆಚ್ಚಬೇಕು’ ಎಂದು ಮುಖ್ಯಶಿಕ್ಷಕಿ ಆರ್‌.ರಾಘಮ್ಮ ಹೇಳಿದರು.

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ದಾಖಲಾತಿ ಆಂದೋಲನ ಮಾಡುವ ನಾವೇ ನಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸದೇ ಇರುವುದು ಸರಿಯಲ್ಲ

– ಕೆ.ಮಲ್ಲಿಕಾರ್ಜುನ, ಸಹಶಿಕ್ಷಕ         


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry