ಐ.ಟಿ ರಿಟರ್ನ್‌ ಐಟಿಆರ್‌–1 ಫಾರಂ ಬಳಕೆ

7

ಐ.ಟಿ ರಿಟರ್ನ್‌ ಐಟಿಆರ್‌–1 ಫಾರಂ ಬಳಕೆ

Published:
Updated:
ಐ.ಟಿ ರಿಟರ್ನ್‌ ಐಟಿಆರ್‌–1 ಫಾರಂ ಬಳಕೆ

ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವಾಗ ತಪ್ಪು ಐಟಿಆರ್‌ ಫಾರಂ ಬಳಸಿದರೆ ಆದಾಯ ತೆರಿಗೆ ಇಲಾಖೆ ಅದನ್ನು ಪರಿಗಣಿಸದೆ ತಿರಸ್ಕರಿಸಬಹುದು. ಹೀಗಾಗಿ, ಫಾರಂ ಅನ್ನು ಆಯ್ಕೆ ಮಾಡುವಾಗ ಎಚ್ಚರವಹಿಸಬೇಕು.

ವಿವಿಧ ರೀತಿಯ ಐಟಿಆರ್‌ ಫಾರಂಗಳಿವೆ. ಐಟಿಆರ್‌–1ರಿಂದ ಐಟಿಆರ್‌–7ವರೆಗೆ ಆದಾಯ ತೆರಿಗೆ ಪಾವತಿಸುವವರಿಗಾಗಿ ಫಾರಂಗಳನ್ನು ನಿಗದಿಪಡಿಸಲಾಗಿದೆ. ಆದಾಯದ ಮೊತ್ತ, ಆದಾಯದ ಮೂಲ, ಆಸ್ತಿಯ ಮಾಲೀಕತ್ವ ಮುಂತಾದ ವಿಷಯಗಳ ಆಧಾರದ ಮೇಲೆ ಈ ಫಾರಂಗಳನ್ನು ಸಲ್ಲಿಸಬೇಕು.

ಎಲ್ಲ ಐಟಿಆರ್‌ ಫಾರಂಗಳು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಲಭ್ಯ ಇರುತ್ತವೆ. ಸರಿಯಾದ ಐಟಿಆರ್‌ ಫಾರಂ ಅನ್ನು ಪಡೆದು ಭರ್ತಿ ಮಾಡಿ ಸಲ್ಲಿಸುವುದು ಅತಿ ಮುಖ್ಯ. 2017–18ನೇ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಂದಿ ಐಟಿಆರ್‌ 1 ಅನ್ನು ಸಲ್ಲಿಸಿದ್ದಾರೆ. ವಿವಿಧ ರೀತಿಯ ಫಾರಂಗಳನ್ನು ಬಳಸಿಕೊಂಡು ಆದಾಯ ತೆರಿಗೆ ವಿವರ ಸಲ್ಲಿಸಿದ 6.7 ಕೋಟಿ ಮಂದಿಯಲ್ಲಿ 2.9 ಕೋಟಿ ಮಂದಿ ಐಟಿಆರ್‌–1 ಅನ್ನು ಸಲ್ಲಿಸಿದ್ದಾರೆ.

ಐಟಿಆರ್‌–1 ಅನ್ನು ಯಾರು ಉಪಯೋಗಿಸಬಹುದು?

ಯಾವುದೇ ವ್ಯಕ್ತಿಯ ಆದಾಯದ ಪ್ರಾಥಮಿಕ ಮೂಲವು ವೇತನ ಅಥವಾ ಅಥವಾ ಪಿಂಚಣಿಯಾಗಿದ್ದರೆ ಐಟಿಆರ್‌–1 ಅನ್ನು ಆದಾಯ ತೆರಿಗೆ ವಿವರ ಸಲ್ಲಿಸಲು ಬಳಸಬಹುದು.

ಮನೆ ಆಸ್ತಿಯಿಂದ ಮತ್ತು ಇತರೆ ಮೂಲಗಳಿಂದಲೂ (ಲಾಟರಿ, ಕುದುರೆ ರೇಸ್‌ ಅಥವಾ ವಿವರಿಸಲಾಗದ ಆದಾಯ ಇತ್ಯಾದಿ ಇರುವುದನ್ನು ಹೊರತುಪಡಿಸಿ) ಆದಾಯ ಇದ್ದರೂ ಐಟಿಆರ್‌–1 ಉಪಯೋಗಿಸಬಹುದು. ಆದರೆ, ಎಲ್ಲ ಆದಾಯವನ್ನು ಸೇರಿಸಿದರೆ ₹ 40 ಲಕ್ಷ ಮೀರಬಾರದು. ಒಂದು ವೇಳೆ ಮೀರಿದ್ದರೆ ಐಟಿಆರ್‌–1 ಅನ್ನು ಉಪಯೋಗಿಸಬಾರದು.

ಯಾವುದೇ ವ್ಯಕ್ತಿ ಐಟಿಆರ್‌–1 ಫಾರಂ ಬಳಸುವಾಗ, ಪತ್ನಿ ಅಥವಾ ಮಕ್ಕಳ ಆದಾಯವನ್ನು ಸೇರಿಸಿದಾಗಲೂ ಮೇಲೆ ವಿವರಿಸಿರುವ ಮಾನದಂಡಗಳನ್ನು ಪೂರೈಸಬೇಕು.

ಯಾರು ಐಟಿಆರ್‌–1 ಫಾರಂ ಬಳಸಬಾರದು?

ಈ ಹಿಂದೆ ತೆರಿಗೆ ವಿವರಗಳನ್ನು ಸಲ್ಲಿಸಲು ಅನಿವಾಸಿಗಳಿಗೂ ಅಥವಾ ಸಾಮಾನ್ಯ ನಿವಾಸಿಗಳಿಗೂ ಐಟಿಆರ್‌–1 ಉಪಯೋಗಿಸಲು ಅವಕಾಶವಿತ್ತು. ಆದರೆ, ಪ್ರಸಕ್ತ ವರ್ಷ 2018–19ರಲ್ಲಿ ಇದಕ್ಕೆ ಅವಕಾಶವಿಲ್ಲ. ಜತೆಗೆ ಲಾಭಾಂಶದ ಆದಾಯ ₹ 10 ಲಕ್ಷ ಮೀರಿದ್ದರೆ ಅಥವಾ ಬಂಡವಾಳದ ಲಾಭದ ಆದಾಯವಿದ್ದರೆ ಇತರ ಐಟಿಆರ್‌ ಫಾರಂಗಳನ್ನು ಬಳಸಬೇಕು.

ಜತೆಗೆ ವ್ಯಾಪಾರ ಅಥವಾ ಇತರ ವೃತ್ತಿಯಲ್ಲಿದ್ದರೆ ಪ್ರತ್ಯೇಕ ಐಟಿಆರ್‌ ಫಾರಂಗಳಿವೆ. ಯಾವುದೇ ನಿವಾಸಿಗೆ ಭಾರತದ ಹೊರಗೆ ಆದಾಯವಿದ್ದರೆ ಅಥವಾ ಯಾವುದೇ ಆಸ್ತಿ ಇದ್ದರೆ ಐಟಿಆರ್‌–1 ಅನ್ನು ಬಳಸಬಾರದು.

ಒಂದು ವೇಳೆ ಆದಾಯ ತೆರಿಗೆ ವಿವರ ಸಲ್ಲಿಸುವಾಗ ತಪ್ಪು ಐಟಿಆರ್ ಫಾರಂ ಬಳಸಿದ್ದರೆ ಆದಾಯ ತೆರಿಗೆ ಇಲಾಖೆ ಅದನ್ನು ತಿರಸ್ಕರಿಸುತ್ತದೆ. ಹೀಗಾಗಿ, ಹೆಚ್ಚು ಎಚ್ಚರಿಕೆಯಿಂದ ಐಟಿಆರ್‌ ಫಾರಂ ಆಯ್ಕೆ ಮಾಡಿಕೊಂಡು ಉಪಯೋಗಿಸಬೇಕು. ಒಂದು ವೇಳೆ ಈ ವಿಷಯ ಕಠಿಣವೆನಿಸಿದರೆ ಲೆಕ್ಕಪರಿಶೋಧಕರು, ತೆರಿಗೆ ತಜ್ಞರ ಸಲಹೆ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry