ತುಕ್ಕು ಹಿಡಿಯುತ್ತಿರುವ ಬೇಲಿಂಗ್ ಯಂತ್ರ

7
₹1.50 ಲಕ್ಷ ಮೌಲ್ಯದ ಯಂತ್ರ ಖರೀದಿಗೆ ₹6.50 ಲಕ್ಷ ಅನುಮೋದನೆ, ಟೆಂಡರ್‌ನಲ್ಲಿ ಅಕ್ರಮದ ಶಂಕೆ

ತುಕ್ಕು ಹಿಡಿಯುತ್ತಿರುವ ಬೇಲಿಂಗ್ ಯಂತ್ರ

Published:
Updated:
ತುಕ್ಕು ಹಿಡಿಯುತ್ತಿರುವ ಬೇಲಿಂಗ್ ಯಂತ್ರ

ಬಾಗೇಪಲ್ಲಿ: ಪುರಸಭೆ ವತಿಯಿಂದ ಆರು ತಿಂಗಳ ಹಿಂದೆ ಖರೀದಿಸಿದ ಬೇಲಿಂಗ್ ಯಂತ್ರ ಒಂದೇ ಒಂದು ದಿನ ಬಳಕೆಯಾಗದೆ ಪುರಸಭೆ ಕಚೇರಿ ಆವರಣದಲ್ಲಿಯೇ ಮುಸುಕು ಹೊದ್ದು ತುಕ್ಕು ಹಿಡಿಯುತ್ತಿರುವ ನಡುವೆಯೇ ಯಂತ್ರ ಖರೀದಿಯಲ್ಲಿ ಪುರಸಭೆ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

‍ಪ್ಲಾಸ್ಟಿಕ್ ತ್ಯಾಜ್ಯವನ್ನು ಪುಡಿಗಟ್ಟಿ ಇಟ್ಟಿಗೆ ರೂಪಕ್ಕೆ ಮಾರ್ಪಡಿಸುವ ಈ ಯಂತ್ರವನ್ನು ಪಟ್ಟಣದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ ಪುನರ್ ಬಳಕೆಗೆ ಸಿದ್ಧಗೊಳಿಸುವ ಉದ್ದೇಶಕ್ಕಾಗಿ ಪುರಸಭೆ ಖರೀದಿಸಿದೆ. ಆದರೆ ಈವರೆಗೆ ಆ ಉದ್ದೇಶಕ್ಕೆ ಯಂತ್ರದ ಬಳಕೆ ಮಾಡಿಲ್ಲ.

ವಿಶೇಷವೆಂದರೆ ಈ ಯಂತ್ರ ಖರೀದಿಗಾಗಿ ಪುರಸಭೆ ಅಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯದಿಂದ (ಡಿಎಂಎ) ₹ 6.50 ಲಕ್ಷಕ್ಕೆ ಅನುಮೋದನೆ ಪಡೆದಿದೆ. ಆದರೆ ಟೆಂಡರ್‌ನಲ್ಲಿ ಗುತ್ತಿಗೆದಾರರೊಬ್ಬರು ಈ ಯಂತ್ರವನ್ನು ₹1.50 ಲಕ್ಷಕ್ಕೆ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಾರ್ವಜನಿಕರು ಯಂತ್ರ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.

‘ಬೇಲಿಂಗ್ ಯಂತ್ರದ ಬೆಲೆ ₹1.5 ಲಕ್ಷ ಇದ್ದಾಗ ಅಧಿಕಾರಿಗಳು ಏಕೆ ಡಿಎಂಎದಿಂದ ₹ 6.5 ಲಕ್ಷಕ್ಕೆ ಅನುಮೋದನೆ ಪಡೆದರು ಎನ್ನುವುದು ಸಂಶಯ ಹುಟ್ಟಿಸುತ್ತಿದೆ. ಯಂತ್ರ ಖರೀದಿಸಿ ಆರು ತಿಂಗಳಾದರೂ ಅದರ ಬಳಕೆ ಮಾಡಿಲ್ಲ. ಹಾಗಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಅದನ್ನು ಖರೀದಿಸಬೇಕಿತ್ತು. ಇದೊಂದು ಅನಗತ್ಯ ಯೋಜನೆ’ ಎಂದು ಪಟ್ಟಣದ ನಿವಾಸಿ ಮಂಜುನಾಥರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ನಗರ ಪ್ರದೇಶಗಳ ಸ್ವಚ್ಛತೆಗಾಗಿ ಕೋಟಿಗಟ್ಟಲೇ ಖರ್ಚು ಮಾಡುತ್ತವೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದೆ ಸರ್ಕಾರದ ಉದ್ದೇಶಗಳನ್ನು ಹಾಳು ಮಾಡುತ್ತಾರೆ. ಬೇಲಿಂಗ್ ಯಂತ್ರದ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಮೇಲಾಗಿ ಅದನ್ನು ಬಳಸದೆ ತುಕ್ಕು ಹಿಡಿಯಲು ಬಿಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ’ ಎಂದು ಪಟ್ಟಣದ ನಿವಾಸಿ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ವಿ.ಲಕ್ಷ್ಮೀನರಸಿಂಹಪ್ಪ ಆರೋಪಿಸಿದರು.

ಈ ಆರೋಪಗಳ ಕುರಿತು ಪುರಸಭೆ ಮುಖ್ಯಾಧಿಕಾರಿ ಸಿ.ಎ.ಹನುಮಂತೇಗೌಡ ಅವರನ್ನು ವಿಚಾರಿಸಿದರೆ, ‘ಡಿಎಂಎ ದಿಂದ ₹ 6.50ಕ್ಕೆ ಅನುಮೋದನೆ ಪಡೆದಿರುವುದು ನಿಜ. ಆದರೆ ಟೆಂಡರ್‌ನಲ್ಲಿ ಗುತ್ತಿಗೆದಾರನೊಬ್ಬ ಆ ಯಂತ್ರವನ್ನು ₹ 1.50 ಲಕ್ಷಕ್ಕೆ ಸರಬರಾಜು ಮಾಡುತ್ತೇನೆ ಎಂದು ಮುಂದೆ ಬಂದ ಕಾರಣಕ್ಕೆ ಅವರಿಗೆ ಟೆಂಡರ್ ನೀಡಲಾಗಿದೆ. ಉಳಿದ ಮೊತ್ತಕ್ಕೆ ಪ್ರತ್ಯೇಕ ಕಾರ್ಯ ಯೋಜನೆ ಸಿದ್ಧಪಡಿಸಿ ಆ ಹಣ ಬಳಕೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ಹೇಳಿದರು.

‘ನನಗಿಂತಲೂ ಮೊದಲು ಬಂದಿದ್ದ ಹೊಸ ಮುಖ್ಯಾಧಿಕಾರಿ ಲಾಗಿನ್ ಕೋಡ್ ನೀಡುವುದು ವಿಳಂಬವಾಗಿತ್ತು. ಆದ್ದರಿಂದ ಈ ಯಂತ್ರ ಪೂರೈಸಿದ ಗುತ್ತಿಗೆದಾರನಿಗೆ ಬಿಲ್ ಕೂಡ ಪಾವತಿಸಿಲ್ಲ. ಅಷ್ಟರಲ್ಲಿ ನಾನು ಅಧಿಕಾರ ಸ್ವೀಕರಿಸಿದೆ. ಶೀಘ್ರದಲ್ಲಿಯೇ ಗುತ್ತಿಗೆದಾರನಿಗೆ ಬಿಲ್ ಪಾವತಿಸುತ್ತೇವೆ. ಚುನಾವಣೆ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಗಳಿಂದ ಯಂತ್ರ ಬಳಸಿರಲಿಲ್ಲ. ಶೀಘ್ರದಲ್ಲಿಯೇ ಯಂತ್ರ ಕಾರ್ಯಾರಂಭ ಮಾಡಲಿದೆ’ ಎಂದು ತಿಳಿಸಿದರು.

ಡಿಎಂಎಗೆ ಸುಳ್ಳು ಮಾಹಿತಿ ನೀಡಿ ಯಂತ್ರ ಖರೀದಿಗೆ ಹೆಚ್ಚಿನ ಅನುದಾನಕ್ಕೆ ಅನುಮೋದನೆ ಪಡೆದಿರುವ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು

- ಎಂ.ವಿ.ಲಕ್ಷ್ಮೀನರಸಿಂಹಪ್ಪ, ಬಾಗೇಪಲ್ಲಿ ನಿವಾಸಿ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry