ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಅಭಿವೃದ್ಧಿಗೆ ಐದು ವರ್ಷಗಳ ಯೋಜನೆ

ಸಚಿವರಾದ ಬಳಿಕ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಎನ್.ಎಚ್.ಶಿವಶಂಕರರೆಡ್ಡಿ; ರೈತರು, ಜಿಲ್ಲಾಡಳಿತದಿಂದ ಸನ್ಮಾನ
Last Updated 12 ಜೂನ್ 2018, 11:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸದ್ಯದಲ್ಲಿಯೇ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಐದು ವರ್ಷಗಳ ಯೋಜನೆ ರೂಪಿಸಲಾಗುತ್ತದೆ. ಪ್ರತಿ ವರ್ಷ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಏನೆಲ್ಲ ಪ್ರಗತಿಯಾಗಿದೆ ಎಂದು ಪರಾಮರ್ಶೆ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈತ ಸಂಘಟನೆಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುತ್ತೇನೆ. ಕೈಗಾರಿಕೆಗಳನ್ನು ಸ್ಥಾಪಿಸಲು ಒತ್ತು ನೀಡುತ್ತೇನೆ. ಎಲ್ಲೆಲ್ಲಿ ಸರ್ಕಾರಿ ಜಮೀನು ಲಭ್ಯವಿದೆಯೋ ಅಲ್ಲಿ ಆದ್ಯತೆ ಮೆರೆಗೆ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ. ಒಂದೆಡೆ ಕೃಷಿ ಅಭಿವೃದ್ಧಿ ಇನ್ನೊದೆಡೆ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ನನೆಗುದಿಗೆ ಬಿದ್ದಿರುವ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಯೋಜನೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಜಮೀನು ಸ್ವಾಧೀನಪಡಿಸಿಕೊಂಡು, ಕಟ್ಟಡಗಳನ್ನು ಕಟ್ಟುವ ಕೆಲಸಕ್ಕೆ ಗಮನ ಹರಿಸಲಾಗುತ್ತದೆ. ಮುದ್ದೇನಹಳ್ಳಿಯಲ್ಲಿರುವ ವಿಟಿಯು ಕಟ್ಟಡವನ್ನು ಯಾವ ರೀತಿ ಬಳಸಬೇಕು ಎಂದು ಚಿಂತನೆ ಮಾಡುತ್ತೇವೆ’ ಎಂದರು.

‘ಜಿಲ್ಲೆಯಲ್ಲಿರುವ ತೋಟಗಾರಿಕೆ, ದ್ರಾಕ್ಷಿ, ರೇಷ್ಮೆ ಕ್ಷೇತ್ರದ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮುಂಬರುವ ದಿನಗಳಲ್ಲಿ ಸಭೆ ನಡೆಸಿ ಬಗೆಹರಿಸಲು ಪ್ರಯತ್ನಿಸುವೆ. ಸಂವಾದವೊಂದನ್ನು ನಡೆಸಿ ತಳಮಟ್ಟದಲ್ಲಿ, ಹಳ್ಳಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ರೈತ ಮುಖಂಡರಿಂದ ಸಲಹೆ ಪಡೆಯುತ್ತೇನೆ. ಅಧಿಕಾರಿಗಳು ಕೂಡ ಜಿಲ್ಲೆಯ ಆಡಳಿತದಲ್ಲಿ ಚುರುಕು ಮೂಡಿಸಬೇಕಾಗಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಸಚಿವರು ವಿವಿಧ ರೈತ ಸಂಘಟನೆಗಳ ಮುಖಂಡರಿಂದ ಸನ್ಮಾನದ ಜತೆಗೆ ಮನವಿ ಸ್ವೀಕರಿಸಿದರು. ಮಾಜಿ ಶಾಸಕರಾದ ಎನ್.ಸಂಪಂಗಿ, ಕೆ.ಪಿ.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಸದಸ್ಯರಾದ ಎಂ.ಬಿ. ಚಿಕ್ಕನರಸಿಂಹಯ್ಯ, ಬಿ. ಸುಬ್ಬಿರೆಡ್ಡಿ, ಶಿವಣ್ಣ, ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಎನ್.ಶ್ರೀನಿವಾಸ್, ಬಿ.ಆರ್.ಗಾಯತ್ರಿ ನಂಜುಂಡಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಎಸ್ಪಿ ಕಾರ್ತಿಕ್ ರೆಡ್ಡಿ, ವಿವಿಧ ರೈತ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಇದ್ದರು.

ಮಾರುಕಟ್ಟೆ ಜಾಲ ನಿರ್ಮಾಣವಾಗಬೇಕು

‘ಕೃಷಿ ಸಂಕೀರ್ಣವಾದ ಕ್ಷೇತ್ರ. ನಾನು ಕೃಷಿ ಪದವೀಧರ, ಹಳ್ಳಿಯಲ್ಲಿ ಹುಟ್ಟಿ, ಕೃಷಿಯಲ್ಲಿ ತೊಡಗಿಸಿಕೊಂಡವನು. ಕೃಷಿ ಕ್ಷೇತ್ರದ ಅನೇಕ ಸಮಸ್ಯೆಗಳ ಬಗ್ಗೆ ನನಗೂ ಅರಿವಿದೆ. ರಾಜ್ಯ ರಾಜಸ್ತಾನ ಬಿಟ್ಟರೆ ಅತಿ ಹೆಚ್ಚು ಒಣ ಬೇಸಾಯ, ಬರಪೀಡಿತ ಪ್ರದೇಶದಲ್ಲಿ ಕರ್ನಾಟಕದಲ್ಲಿದೆ. ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗಿ ರೈತರು ಕಷ್ಟಪಡುತ್ತಿದ್ದಾರೆ’ ಎಂದು ಸಚಿವ ಶಿವಶಂಕರರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಹಸಿರು ಕ್ರಾಂತಿಯಿಂದಾಗಿ ದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗಿದೆ. ಹಾಗೆಂದು ಕೃಷಿ ಸಮಸ್ಯೆಗಳೆಲ್ಲ ಪರಿಹಾರವಾಗಿದೆಯೇ ಎಂದು ನೋಡಿದರೆ ಇನ್ನು ಅನೇಕ ಸಮಸ್ಯೆಗಳಿವೆ. ಇವತ್ತಿಗೂ ರೈತರಿಗೆ ಸರಿಯಾಗಿ ನೀರು, ವಿದ್ಯುತ್ ಒದಗಿಸಿದರೆ ಚೆನ್ನಾಗಿ ಬೆಳೆ ಬೆಳೆಯುತ್ತಾರೆ. ಇವತ್ತು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾದ ನಿಗದಿತ ಬೆಲೆ ಸಿಗುತ್ತಿಲ್ಲ. ಇದು ಸಂಕೀರ್ಣ ವಿಚಾರ.

ಒಂದು ಬೆಂಕಿಪೊಟ್ಟಣಕ್ಕೆ ಕೂಡ ಬೆಲೆ ನಿಗದಿಯಾಗಿರುತ್ತದೆ. ಆದರೆ ಬೆಳೆ ಬೆಳೆದ ರೈತನಿಗೆ ಬೆಲೆ ನಿಗದಿಗೆ ಅವಕಾಶವಿಲ್ಲ. ಆ ಶಕ್ತಿ ಇಲ್ಲ ಎನ್ನುವ ಕೊರಗು ಎಲ್ಲ ರೈತರಲ್ಲಿದೆ.

ವ್ಯವಸ್ಥಿತ ಮಾರುಕಟ್ಟೆ ಜಾಲ ನಿರ್ಮಾಣವಾಗಬೇಕು. ಕೃಷಿಗೆ ದೇಶದಲ್ಲಿ ರಾಜ್ಯಕ್ಕೊಂದು ಪ್ರತ್ಯೇಕ ಕೃಷಿ ನೀತಿ ಇದೆ. ಆದರೆ ಇಡೀ ದೇಶಕ್ಕೆ ಅನ್ವಯಿಸುವಂತಹ ಸಮಗ್ರ ಕೃಷಿ ನೀತಿ ಇಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ರೈತರು ಹತಾಶರಾಗುತ್ತಾರೆ. ಸಾಲ ಹಿಂತಿರುಗಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶೋಚನೀಯ.

ಈ ಸಮಸ್ಯೆ ಪರಿಹಾರಕ್ಕೆ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಯೋಚನೆ ಮಾಡಿದೆ. ಅದನ್ನು ಯಾವ ರೀತಿ ಮಾಡಬೇಕೆಂಬ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ರೈತರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಶಿವಶಂಕರರೆಡ್ಡಿ ಹೇಳಿದರು.

ವಿವಿಧೆಡೆ ಸಚಿವರ ಭೇಟಿ

ಶಿವಶಂಕರರೆಡ್ಡಿ ಅವರು ಜಿಲ್ಲಾಡಳಿತ ಭವನಕ್ಕೂ ಭೇಟಿ ನೀಡುವ ಮುನ್ನ ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಮುದ್ದೇನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಸಮಾಧಿಗೆ ಭೇಟಿ ನೀಡಿ ನಮಿಸಿದರು. ನಂತರ ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕಾಂಗ್ರೆಸ್‌ನಲ್ಲಿ ಕಾಣದ ಸಡಗರ

ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾದ ಬಳಿಕ ಮೊದಲ ಸಚಿವರಾದ ಶಿವಶಂಕರರೆಡ್ಡಿ ಅವರು ಸೋಮವಾರ ವಿಧಾನಸೌಧದಲ್ಲಿ ತಮ್ಮ ಕಚೇರಿ ಪ್ರವೇಶಕ್ಕೂ ಮುನ್ನ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಹೋಗುವ ಇಚ್ಛೆ ವ್ಯಕ್ತಪಡಿಸಿ ನಗರಕ್ಕೆ ಬಂದಿದ್ದರು. ಆದರೆ ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ನೂತನ ಸಚಿವರನ್ನು ಎದುರುಗೊಳ್ಳುವ ಸಂಭ್ರಮ ಸ್ಥಳೀಯ ಕಾಂಗ್ರೆಸ್ ಪಾಳೆಯದಲ್ಲಿ ಕಂಡು ಬರಲಿಲ್ಲ.

ಸೋಜಿಗವೆಂದರೆ ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನಿಂದ ಚುನಾವಣೆ ಎದುರಿಸಿದ್ದ ಜೆಡಿಎಸ್ ಮುಖಂಡರು ಸಚಿವರನ್ನು ಸ್ವಾಗತಿಸಿ ಅವರೊಂದಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಈ ಕುರಿತು ಪ್ರಶ್ನಿಸಿದರೆ, ‘ನಾನು ಯಾವುದೇ ಪಕ್ಷದ ಸಚಿವನಲ್ಲ. ಕಾಂಗ್ರೆಸ್ ಪಕ್ಷದಿಂದ ಗೆದ್ದರೂ ಈಗ ಸರ್ಕಾರದ ಪ್ರತಿನಿಧಿ. ಸರ್ಕಾರ ಎಲ್ಲ ಪಕ್ಷಗಳದು, ಮತ್ತು ಸಾರ್ವಜನಿಕರದು. ನನಗೆ ಇಲ್ಲಿಯಾವ ಪಕ್ಷವೂ ಇಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ’ ಎಂದು ಶಿವಶಂಕರರೆಡ್ಡಿ ತಿಳಿಸಿದರು.

ಎತ್ತಿನಹೊಳೆ ಯೋಜನೆ ಜಾರಿಗೆ ಆದ್ಯತೆ

‘ಜಿಲ್ಲೆಗೆ ಅಗತ್ಯವಾದ ನೀರು ತರಲು ಎತ್ತಿನಹೊಳೆ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ, ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತದೆ. ಹೆಬ್ಬಾಳ ನಾಗವಾರ ಕಣಿವೆ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬುವುದರಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ ಎಂದು ಅನೇಕ ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ಆ ನೀರನ್ನು ಮೂರನೇ ಹಂತಗಳಲ್ಲಿ ಶುದ್ಧೀಕರಣ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಮೂರನೇ ಹಂತದ ಶುದ್ಧೀಕರಣಕ್ಕಾಗಿ ಸರ್ಕಾರ ₹ 600 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಸಂಪೂರ್ಣ ಶುದ್ಧೀಕರಿಸಿದ ನೀರನ್ನೇ ನಮ್ಮ ಕೆರೆಗಳಿಗೆ ತರುವ ಕೆಲಸ ಮಾಡೋಣ. ಯಾವುದೇ ಕಾರಣಕ್ಕೆ ಕಲುಷಿತ ನೀರಿನಿಂದ ಕೆರೆ ತುಂಬುವ ಕೆಲಸ ಮಾಡುವುದಿಲ್ಲ. ಆ ಬಗ್ಗೆ ಯಾರು ಸಂಶಯ ಇಟ್ಟುಕೊಳ್ಳಬಾರದು’ ಎಂದರು.

‘ಎತ್ತಿನಹೊಳೆ ನೀರು ಬರುವುದರೊಳಗಾಗಿ ಜಿಲ್ಲೆಯ ಎಲ್ಲ ಕೆರೆಗಳನ್ನು ಪುನಶ್ಚೇತನ ಮಾಡಬೇಕಾಗುತ್ತದೆ. ಯಾವುದೇ ಕೆರೆ ಒತ್ತುವರಿಯಾಗಿದ್ದರೆ. ಸರ್ವೇ ಮಾಡಿಸಿ ಗಡಿ ಗುರುತಿಸಿ ಬೇಲಿ ಹಾಕುವ ಕೆಲಸ ಆದ್ಯತೆ ಮೇಲೆ ಈ ಸರ್ಕಾರ ಮಾಡುತ್ತದೆ. ಈ ಬಗ್ಗೆ ಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಿ ಸಮಗ್ರ ಯೋಜನೆ ರೂಪಿಸುತ್ತೇವೆ’ ಎಂದು ಹೇಳಿದರು.

ಜನಪ್ರತಿನಿಧಿ, ಅಧಿಕಾರಿಗಳು ಗಾಡಿಗೆ ಎರಡು ಚಕ್ರಗಳಿದ್ದಂತೆ. ಅವರಿಬ್ಬರು ಸರ್ಕಾರದ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಟಾನ ಮಾಡಿದಾಗ, ಯೋಜನೆಗಳು ಸಾರ್ಥಕವಾಗುತ್ತವೆ
- ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT