ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ವಾಸಕ್ಕೆ ಮಂಗಳ ಗ್ರಹ ಪರ್ಯಾಯ ತಾಣವೇ?

Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಸುಗಂಧಯುಕ್ತ ಭೂಮಿಯಲ್ಲಿ ತೇಜಸ್ಸಿನಿಂದ ಕೂಡಿದ ಬೆಂಕಿ, ಶಬ್ದದಿಂದ ಕೂಡಿದ ಆಕಾಶ, ಮೈಮನ ಸ್ಪರ್ಶಿಸುವ ಗಾಳಿ, ರುಚಿಯಾದ ನೀರು, ವೈವಿಧ್ಯಮಯ ಜೀವಿಗಳಿಂದ ಕೂಡಿದ ಪ್ರಕೃತಿ ಸೊಬಗು ರಾರಾಜಿಸುತ್ತಿದೆ. ಇಂತಹ ಸೊಬಗು ನಮ್ಮ ಸೌರವ್ಯೂಹದಲ್ಲಿ ಭೂಮಿಯನ್ನು ಬಿಟ್ಟರೆ ಬೇರೆ ಯಾವ ಗ್ರಹಗಳಲ್ಲಿ ಸಿಕ್ಕೀತು? ಇಂತಹ ಭೂಮಿ ಸಕಲ ಜೀವರಾಶಿಗಳಿಗೆ ಬದುಕು ಸಾಗಿಸಲು ಅನುವು ಮಾಡಿಕೊಟ್ಟಿದೆ. ಈಚೆಗೆ ಮಂಗಳಗ್ರಹದಲ್ಲಿಯೂ ಜೀವಿಗಳು ವಾಸಿಸಲು ನೆರವಾಗುವಂತಹ ಸೌಲಭ್ಯಗಳು ಅಲ್ಲಲ್ಲಿ ದೊರೆಯುತ್ತಿವೆ ಎಂದು ತಿಳಿದುಬಂದಿದೆ. ಅಂದರೆ ಮಂಗಳಗ್ರಹವು ಮುಂದೊಂದು ದಿನ ಭೂಮಿಗೆ ಪರ್ಯಾಯ ಆಗಬಹುದೇನೋ ಎಂಬ ನಂಬಿಕೆ ದೃಢವಾಗುತ್ತಿದೆ.

ಈ ನಿಟ್ಟಿನಲ್ಲಿ ಚಿಂತನೆ ನಡೆಸಲು ಶಕ್ತಿ ಹೊಂದಿರುವ ಏಕೈಕ ಜೀವಿಯಾದ ಮಾನವ ಭೂಮಿಯ ಮೇಲಿರುವಂತೆಯೇ ಅನ್ಯಗ್ರಹಗಳಲ್ಲೂ ಜೀವಿಗಳಿವೆಯೇ ಎಂಬುದರ ಬಗ್ಗೆ ಆಸಕ್ತಿ ಹೊಂದಿದ್ದಾನೆ. ಇದು ಸಹಜ ಗುಣ. ಇದಕ್ಕೆ ಕಾರಣ ಬಾಹ್ಯಾಕಾಶ ಕ್ಷೇತ್ರದಲ್ಲಾಗುತ್ತಿರುವ ಹೊಸ ಹೊಸ ಸಂಶೋಧನೆಗಳು. ಅದರಲ್ಲಿಯೂ ಮಂಗಳಗ್ರಹಕ್ಕೆ ಭೂಮಿಯಿಂದ ಕಳುಹಿಸಿರುವ ಗಗನನೌಕೆಗಳು ರವಾನಿಸುತ್ತಿರುವ ಮಾಹಿತಿಗಳು.

ಮಂಗಳ ಗ್ರಹದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸ್ಪಿರಿಟ್’ ನೌಕೆ ಕಳುಹಿಸಿರುವ ಛಾಯಾಚಿತ್ರಗಳು ವಿಜ್ಞಾನಿಗಳ ‘ಸ್ಪಿರಿಟ್’ ಹೆಚ್ಚಿಸಿವೆ. ಮುಂದೆ ವಿಜ್ಞಾನ ಜಗತ್ತು ದೊಡ್ಡದಾದಂತೆ ಜಗತ್ತು ಕಿರಿದಾಗುತ್ತದೆ. ಆಗ ಮಂಗಳ ಗ್ರಹದಲ್ಲಿ ಮಾನವ ಯೋಜಿತ ಮನೆಗಳೂ ತಲೆ ಎತ್ತಬಹುದು. ಅದೊಂದು ಮಾತ್ರವಲ್ಲ, ಮಂಗಳನಲ್ಲಿರುವ ಕೆಂಪುಬಣ್ಣದ ಕಬ್ಬಿಣದ ಅದಿರು ‘ಲಿಮೋನೈಟ್’ ಭಾರೀ ಪ್ರಮಾಣದಲ್ಲಿರುವುದು ಮಾನವನ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದೆ. ಇವೆಲ್ಲಾ ಕಾರಣಗಳಿಂದ ಮಂಗಳನಲ್ಲಿ ಜೀವಿಗಳಿರುವ ನಂಬಿಕೆ ಈಗ ಬಲವಾಗಿದೆ.

ಎಲ್ಲಾ ರೀತಿಯ ಸಂಶೋಧನೆಗಳಿಂದ ಪ್ರಚೋದನೆಗೊಂಡ ಮಾನವ ಮಂಗಳನಲ್ಲಿಗೆ ರೋವರ್, ಆಪರ್ಚುನಿಟಿ, ಬೀಗಲ್,ಮಾಮ್ ಮುಂತಾದ ನೌಕೆಗಳನ್ನು ಕಳುಹಿಸಿ ಸ್ವಾಭಾವಿಕ ಲಕ್ಷಣಗಳನ್ನು ತಿಳಿದುಕೊಂಡಿದ್ದಾನೆ. ಭೂಮಿಯ ತರಹ ಸ್ವಾಭಾವಿಕ ಲಕ್ಷಣಗಳು ಮಂಗಳನಲ್ಲಿಯೂ ಇರುವುದರಿಂದ ಭೂಮಿ ಮತ್ತು ಮಂಗಳಗ್ರಹ ಒಂದೇ ರೀತಿಯ ಸಾಮ್ಯತೆಯನ್ನು ಹೊಂದಿವೆ ಎಂದು ಗೊತ್ತಾಗಿದೆ. ‘ಆಪರ್ಚುನಿಟಿ’ ನೌಕೆಯು ಕಳಿಸಿದ ಚಿತ್ರಗಳು ವಿಜ್ಞಾನಿಗಳನ್ನು ದಿಗ್ಮೂಢರನ್ನಾಗಿಸಿವೆ. ಮಂಗಳನಲ್ಲಿರುವ ಹಿಮಗಡ್ಡೆಗಳು, ದೂಳಿನಿಂದ ಕೂಡಿದ ಗಾಳಿ, ಬದಲಾಗುವ ಋತುಮಾನಗಳು, ಅಗತ್ಯವಿರುವ ಉಷ್ಣತೆ ಮತ್ತು ಕಾರ್ಬನ್‌ ಡೈಆಕ್ಸೈಡ್ ಇವೆ ಎಂಬುದು ನಿಖರವಾಗಿ
ತಿಳಿದಿದೆ.

ಸೂರ್ಯನಿಂದ ಸುಮಾರು 22 ಕೋಟಿ ಕಿ. ಮೀ. ದೂರದಲ್ಲಿರುವ ಮಂಗಳಗ್ರಹ ನಾವಂದುಕೊಂಡಂತೆ ಸುಂದರವಾಗಿಲ್ಲ. ಕಿತ್ತಳೆ ಬಣ್ಣದ ಮಣ್ಣು, ಭಾರೀ ಕಂದಕಗಳು, ಪ್ರಪಾತಗಳು, ಜ್ವಾಲಾಮುಖಿಗಳಿಂದ ಕೂಡಿದ ಮಂಗಳನ ಸುತ್ತ ಎರಡು ನೈಸರ್ಗಿಕ ಉಪಗ್ರಹಗಳು ಸುತ್ತುತ್ತಿವೆ. ಭೂಮಿಯ ಮೇಲಿರುವಂತೆ ಮಂಗಳನ ಮೇಲೂ ಕಾರ್ಬನ್ ಡೈಆಕ್ಸೈಡ್, ಆರ್ಗಾನ್ ಮತ್ತು ಸಾರಜನಕಗಳಂತಹ ವಿಷಕಾರಕ ಅನಿಲಗಳಿವೆ. ಮಾನವ ಬದುಕಲು ಯೋಗ್ಯ ವಾತಾವರಣ ಅಲ್ಲಿ ಇಲ್ಲದಿರುವುದರಿಂದ ಸೂಕ್ಷ್ಮಾಣುಜೀವಿಗಳು ಇರಬಹುದೆಂದು ವಿಜ್ಞಾನಿಗಳು ಚಿಂತಿಸುತ್ತಿದ್ದಾರೆ.

ಮಂಗಳ ಗ್ರಹದಲ್ಲಿರುವ ಸೂಕ್ಷ್ಮಾಣುಜೀವಿಗಳು ಬದುಕಲು ಅಲ್ಲಿನ ವಾತಾವರಣ ಸಹಕರಿಸಿದರೆ ಭವಿಷ್ಯದಲ್ಲಿ ಮಂಗಳನ ಅಂಗಳದಲ್ಲಿ ಜೀವಿಗಳ ಉಗಮವಾಗಬಹುದು. ಆಗ ಮಾತ್ರ ಮಂಗಳ ಭೂಮಿಗೆ ಪರ್ಯಾಯವಾಗಬಲ್ಲದು.

ಈಗ ಭೂಮಿ ಹಲವು ಬಗೆಯ ಮಾಲಿನ್ಯಗಳಿಂದ ತಳಮಳಿಸುವುದನ್ನು ನೋಡಿದರೆ, ನಮ್ಮಭೂಮಿಯನ್ನು ಮೊದಲು ರಕ್ಷಿಸಿ ನಂತರ ಮಂಗಳ ಗ್ರಹದ ಪರ್ಯಾಯ ಅವಶ್ಯಕತೆಗೆ ವಿಜ್ಞಾನಿಗಳು ಚಿಂತಿಸಬಹುದೇನೋ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT